ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿರುವ ಕೋಟ್ಯಂತರ ಜನರ ನೆರವಿಗೆ ಕೇಂದ್ರ ಸರ್ಕಾರ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. 20 ಲಕ್ಷ ಕೋಟಿ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದರು. ಆದರೆ ನೊಂದ ಕಾರ್ಮಿಕರು, ಮಧ್ಯಮ ವರ್ಗದ ಜನರು, ಹಮಾಲಿಗಳು, ದಿನದ ತುತ್ತನ್ನೂ ಅಂದಿನ ಸಂಪಾದನೆಯಿಂದಲೇ ಸಾಗಿಸುತ್ತಿದ್ದ ಕೋಟಿ ಕೋಟಿ ಜನರ ನೆರವಿಗೆ ನಿಲ್ಲಲಿಲ್ಲ. ಬದಲಿಗೆ ಕೇವಲ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳ ಚೇತರಿಕೆಗೆ ಸಾಲದ ನೆರವು ಸೇರಿದಂತೆ ಸಾಕಷ್ಟು ಯೋಜನೆಗಳ ಮೂಲಕ ಜನರಿಗೆ ಸಹಾಯವಾಗಲಿದೆ ಎಂದು ಹೇಳಿದ್ದಾರೆ. ಅದು ಯಾವಾಗ ನೊಂದವರ ಸಹಾಯಕ್ಕೆ ಬರುತ್ತದೆಯೋ ಗೊತ್ತಿಲ್ಲ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಒಂದು ಘೋಷಣೆ ಮಾಡಿತ್ತು. ಲಾಕ್‌ಡೌನ್ ವೇಳೆ ಆಟೋ ಮತ್ತು ಟ್ಯಾಕ್ಸಿ ಚಾಲಕರು ಸಾಕಷ್ಟು ಸಮಸ್ಯೆಗೆ ತುತ್ತಾಗಿದ್ದಾರೆ, ಹಾಗಾಗಿ ನೊಂದ ಚಾಲಕರಿಗೆ ಒಂದು ಪರಿಹಾರದ ಮೊತ್ತವೆಂದು 5 ಸಾವಿರ ಕೊಡುತ್ತೇವೆ ಎಂದಿದ್ದರು. ಇದೀಗ ಆ ಸಮಯ ಬಂದಿದೆ.
ಕರ್ನಾಟಕದಲ್ಲಿ ಅಂದಾಜು ಮೂರೂವರೆ ಲಕ್ಷ ಆಟೋ ಚಾಲಕರು ಇದ್ದು, ಟ್ಯಾಕ್ಸಿ ಚಾಲಕರು ಸೇರಿದಂತೆ ಒಟ್ಟಿಗೆ 7 ಲಕ್ಷದ 75 ಸಾವಿರ ಜನರು ಚಾಲನಾ ವೃತ್ತಿಯಲ್ಲಿದ್ದಾರೆ ಎನ್ನುವುದು ಸರ್ಕಾರದ ಅಂದಾಜು. ಪ್ರತಿದಿನ ಆಟೋ, ಟ್ಯಾಕ್ಸಿ ಓಡಿಸಿದರೆ ಮಾತ್ರ ಆದಾಯದ ಮೂಲ ನೋಡುತ್ತಿದ್ದ ಆಟೋ, ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಒಳಗಾಗಿದ್ದು, ರಾಜ್ಯ ಸರ್ಕಾರ ಒಂದು ಬಾರಿಗೆ 5 ಸಾವಿರ ಧನಸಹಾಯವನ್ನು ಘೋಷಣೆ ಮಾಡಿತ್ತು. 15 ದಿನಗಳು ಆಗುತ್ತಾ ಬಂದರೂ ಸರ್ಕಾರ ಮಾತ್ರ ಅರ್ಜಿ ಸಲ್ಲಿಸಲು ಸೇವಾ ಸಿಂಧು ಪೋರ್ಟಲ್ನಲ್ಲಿ ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ಸಣ್ಣದಾದ ಆಕ್ರೋಶವೂ ಶುರುವಾಗಿತ್ತು. ಇದೀಗ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಧಾರ್ ಕಾರ್ಡ್, ಚಾಲನ ಪರಾವನಗಿ (DL) ವಾಹನ ನೋಂದಣಿ (RC), ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ನಮೂದಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟಾರೆ ಸಂಕಷ್ಟದಲ್ಲಿ ಸಿಲುಕಿದ್ದವರಿಗೆ ಸಹಾಯದ ಹಸ್ತ ಚಾಚಿದಂತಾಗಿದೆ.
ಸರ್ಕಾರದ ನೆರವಿನ ಬಗ್ಗೆ ಆಸೆಗಣ್ಣುಗಳಿಂದ ಕಾಯುತ್ತಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಪರದಾಡುವಂತಾಗಿದೆ. ಎಲ್ಲಾ ಮಾಹಿತಿಯನ್ನೂ ಇಂಗ್ಲಿಷ್‌ನಲ್ಲಿಯೇ ನೀಡಬೇಕು. ಜೊತೆಗೆ ಆಧಾರ್, ಚಾಲನಾ ಪರವಾನಗಿ ನಂಬರ್, ವಾಹನ ನೋಂದಣಿ ಸಂಖ್ಯೆ, ಚಾಸ್ಸಿಸ್ ನಂಬರ್ ಎನ್ನವನ್ನೂ ನಮೂದು ಮಾಡುವುದು ಕಷ್ಟದಾಯಕವಾಗಿದೆ. ಒಮ್ಮೆ ಮೊಬೈಲ್ ಸಂಖ್ಯೆ ನಮೂದು ಮಾಡಿದಾಗ ಒಟಿಪಿ ಸಂಖ್ಯೆ ಬರುತ್ತದೆ. ಮತ್ತೆ ಅರ್ಜಿ ಸಲ್ಲಿಸುವುದು ತಡವಾದರೆ ಸೆಷನ್ ಕ್ಲೋಸ್ ಆಗುತ್ತಿದೆ. ಆಟೋ ಮತ್ತು ಟ್ಯಾಕ್ಸಿ ಚಾಲಕರು ಅಷ್ಟೊಂದು ಆಂಗ್ಲ ಭಾಷಾ ನೈಪುಣ್ಯರೇ..? ಒಂದು ವೇಳೆ ಸೈಬರ್ ಸೆಂಟರ್ ಬಳಿಗೆ ಹೋಗಿ ಸಾಲುಗಟ್ಟಿ ಅರ್ಜಿ ಹಾಕಿಸಬಹುದು. ಆದರೆ ಸಾಮಾಜಿಕ ಅಂತರ ಎನ್ನುವುದು ಮರಿಚಿಕೆ ಆಗುವುದಿಲ್ಲವೇ..? ಅದೇ ಕಾರಣಕ್ಕಾಗಿ ಅಲ್ಲವೇ ಆನ್ಲೈನ್ನಲ್ಲಿ ಅವಕಾಶ ಕಲ್ಪಿಸಿರುವುದು.

ದಯಮಾಡಿ ಬಡ ಚಾಲಕ ವೃತ್ತಿಯಲ್ಲಿರುವ ಚಾಲಕರ ನೆರವಿಗೆ ಅವಕಾಶ ಕೊಟ್ಟಿದ್ದೀರಿ. ಆದರೆ ಅರ್ಜಿ ಸಲ್ಲಿಸಲು ಸುಲಭ ಮಾರ್ಗವನ್ನೂ ಕಲ್ಪಿಸಿ. ಒಂದು ವೇಳೆ ಅರ್ಜಿಯನ್ನೂ ಸಂಪೂರ್ಣ ಭರ್ತಿ ಮಾಡಿ ಸಲ್ಲಿಕೆ ಮಾಡಿದಾಗ ನಿಮ್ಮ ಹೆಸರು ಅದಲು ಬದಲಾಗಿದೆ. ಆಧಾರ್ ಕಾರ್ಡ್ ಅಪ್ಲೋಡ್ ಮಾಡಿ ಎಂದು ಕೇಳುತ್ತದೆ. ಆದರೆ ಅಪ್ಲೋಡ್ ಮಾಡುವುದು ಎಲ್ಲಿ ಎಂದು ತೋಚದಂತಾಗಿದೆ. ಇಲ್ಲದಿದ್ದರೆ, ಒಮ್ಮೆಗೆ ಎಲ್ಲಾ ಡಾಕ್ಯುಮೆಂಟ್ಸ್ ಅಪ್ಲೋಡ್ ಮಾಡಿ ಎಂದರೂ ಪರವಾಗಿಲ್ಲ. ಆದರೆ ಜನರಿಗೆ ಸುಲಭವಾಗಿ ಆಗುವಂತಿದ್ದರೆ ಚೆನ್ನ.



ರಾಜ್ಯ ಸರ್ಕಾರ 1610 ಕೋಟಿ ವಿಶೇಷ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಣೆ ಮಾಡಿದೆ. ಇದರಲ್ಲಿ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಸಲೂನ್ ಕೆಲಸ ಮಾಡುವವರು, ದೋಬಿ ಕೆಲಸ ಮಾಡುವವರು, ನೇಕಾರಿಕೆ ಮಾಡುವವರು, ಹೂವು ಬೆಳೆಗಾರರು, ಕೆಲವು ವಿಭಾಗವಾರು ಕೃಷಿಕರು ಸೇರಿದಂತೆ ಸಾಕಷ್ಟು ಜನರಿಗೆ ಆಸೆ ತೋರಿಸಲಾಗಿದೆ. ಆದರೆ ಇಷ್ಟು ಸಣ್ಣ ಪ್ಯಾಕೇಜ್ನಲ್ಲಿ ಯಾರಿಗೆಲ್ಲಾ ಪರಿಹಾರದ ಹಣ ಸಿಗುತ್ತದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ವಿಶೇಷ ಕೋವಿಡ್ 19 ಪ್ಯಾಕೇಜ್ನಲ್ಲಿ ಸಣ್ಣ ಪ್ರಮಾಣದಲ್ಲಿ ಆದರೂ ಬಡವರಿಗೆ ನೇರ ಧನ ಸಹಾಯ ಮಾಡಿದ್ದರೆ ರಾಜ್ಯಗಳ ಮೇಲಿನ ಒತ್ತಡ ಕಡಿಮೆ ಆಗುತ್ತಿತ್ತು. ಆದರೆ ಜನಧನ್ ಖಾತೆ ಹೊಂದಿದ್ದ ಮಹಿಳಾ ಖಾತೆದಾರರಿಗೆ 500 ರೂಪಾಯಿ ಹಾಕಿದ್ದು ಬಿಟ್ಟರೆ ಬೇರೆ ಯಾವುದೇ ಸಹಾಯ ಹಸ್ತ ನೀಡಲಿಲ್ಲ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರವೇ ಹಣ ಹೊಂದಿಸಬೇಕಾಗಿರುವುದು ಬಿ.ಎಸ್ ಯಡಿಯೂರಪ್ಪ ಮುಂದಿರುವ ದೊಡ್ಡ ಸವಾಲು.
ಕೇಂದ್ರದ ವಿಶೇಷ ಪ್ಯಾಕೇಜ್ ಬಗ್ಗೆ ಸೋನಿಯಾ ಗಾಂಧಿ ಇದೊಂದು ಹಾಸ್ಯಾಸ್ಪದ ಎಂದು ಜರಿದಿದ್ದಾರೆ. ರಾಹುಲ್ ಗಾಂಧಿ ಬಡವರಿಗೆ ನೇರವಾಗಿ ಹಣ ಕೊಡಬೇಕಿತ್ತು ಸಂಕಷ್ಟದಲ್ಲಿದ್ದಾರೆ ಎಂದಿದ್ದಾರೆ. ನಿವೃತ್ತ RBI ಗವರ್ನರ್ ರಘುರಾಮ್ ರಾಜನ್ ಕೂಡ ಅಕ್ಕಿ ಧಾನ್ಯ ಕೊಟ್ಟರೆ ಸಾಲದು. ತರಕಾರಿ, ಹಾಲು, ಎಣ್ಣೆ ಪದಾರ್ಥಗಳ ಖರೀದಿಗೆ ಹಣದ ನೆರವು ಬೇಕಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಕೇಂದ್ರ ಸರ್ಕಾರ ಹೇಳುತ್ತಿರುವುದು ಬಡವರಿಗೆ ಹಣ ಕೊಟ್ಟಿಲ್ಲದೆ ಇರಬಹುದು. ಆದರೆ ನಾವು ಘೋಷಿಸಿರುವ ಈ ಪ್ಯಾಕೇಜ್ನಿಂದ ಉದ್ಯೋಗ ಸೃಷ್ಟಿಯಾಗಲಿದೆ. ನೇರವಾಗಿ ಬಡವರು, ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಅನುಕೂಲ ಆಗಿದೆ ಎನ್ನುತ್ತಿದೆ. ಯಾವಾಗ..? ಹೇಗೆ..? ಸಹಾಯಕ್ಕೆ ಬರಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಆದರೆ ಇದೀಗ ರಾಜ್ಯ ಸರ್ಕಾರ ಘೋಷಣೆ ಮಾಡಿರುವ 5 ಸಾವಿರ ಧನಸಹಾಯ ಬಡವರ ಕೈ ಸೇರಬೇಕಿದ್ದು, ಅರ್ಜಿ ಸಲ್ಲಿಕೆ ವಿಧಾನವನ್ನು ಇನ್ನಷ್ಟು ಸರಳಿಕರಿಸಿದರೆ ಉತ್ತಮ.