ದೇಶದಲ್ಲಿ ಮೊದಲ ಕರೋನಾ ಸೋಂಕು ಪೀಡಿತ ಪ್ರಕರಣ ಕಂಡುಬಂದಿದ್ದು ಜನವರಿ 30ರಂದು. ಅಷ್ಟೊತ್ತಿಗಾಗಲೇ ಕರೋನಾ ಚೀನಾ ದೇಶವನ್ನು ನಡುಗಿಸಿತ್ತು. ಪ್ರಪಂಚದ ಇತರೆ ದೇಶಗಳೂ ಕಂಗಾಲಾಗಿದ್ದವು. ಕರೋನಾ ಕಂಡುಬಂದಿದ್ದು ಕೇರಳದಲ್ಲಾದುದರಿಂದ ಅಲ್ಲಿನ ಸರ್ಕಾರ ಚುರುಕಾಗಿ ಕಾರ್ಯಪ್ರವೃತ್ತವಾಯಿತಾದರೂ ಕೇಂದ್ರ ಸರ್ಕಾರ ಮಾತ್ರ ನಿರ್ಲಕ್ಷ್ಯ ಮಾಡಿತು. ಇದಾದ ಬಳಿಕ ಕೇಂದ್ರ ಸರ್ಕಾರವನ್ನು ಮೊದಲು ಎಚ್ಚರಿಸಿದ್ದವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಇದೇ ಫೆಬ್ರವರಿ 12ರಂದು. ಅಂದು ರಾಹುಲ್ ಗಾಂಧಿ ‘ಕರೋನಾ ಎಂಬ ಕಡುಕ್ರೂರಿ ತಂದೊಡ್ಡುವ ಕಷ್ಟವನ್ನು ಅಂದಾಜು ಮಾಡುವುದಕ್ಕೂ ಸಾಧ್ಯವಿಲ್ಲ. ಆದುದರಿಂದ ಕೇಂದ್ರ ಸರ್ಕಾರ ಕೂಡಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂಬ ಸಲಹೆ ನೀಡಿದ್ದರು.
ಆದರೆ ಭಾರತ ಸರ್ಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಆಳುವ ಪಕ್ಷವಾದ ಬಿಜೆಪಿ ನಾಯಕರು ಎಂದಿನಂತೆ ರಾಹುಲ್ ಗಾಂಧಿಯವರ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಿಗೆ ರಾಹುಲ್ ಗಾಂಧಿ ಅವರ ಮೇಲೆಯೇ ಪ್ರತ್ಯಾರೋಪ ಮಾಡಿದರು. ಮೂದಲಿಸಿದರು. ಸಕಾಲದಲ್ಲಿ ಎಚ್ಚರಿಸಿದ ಪ್ರತಿಪಕ್ಷದ ನಾಯಕನೊಬ್ಬನನ್ನು ಹೀಗೆಳೆದವರ ಪೈಕಿ ‘ಸಜ್ಜನ’ ಎಂದು ಕರೆಯಲ್ಪಡುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಕೂಡ ಇದ್ದರು. ರಾಹುಲ್ ಗಾಂಧಿ ಅವರ ವಿಷಯದಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಯಾವ ಧೋರಣೆ ಹೊಂದಿದ್ದಾರೆ ಎಂಬುದನ್ನು ವಿವರಿಸುವ ಅಗತ್ಯ ಇಲ್ಲ. ಅಂದು ರಾಹುಲ್ ಗಾಂಧಿ ಅವರ ಮಾತುಗಳನ್ನು ಕಡೆಗಣಿಸಿದ ಪರಿಣಾಮ ದೇಶ ಯಾವ ಪರಿಸ್ಥಿತಿಯನ್ನು ಎದುರಿಸಿತು? ಈಗ ಯಾವ ಪರಿಸ್ಥಿತಿಯಲ್ಲಿದೆ ಎಂಬುದೂ ಗೊತ್ತಿರುವ ಸತ್ಯ.

ಈಗ ರಾಹುಲ್ ಗಾಂಧಿಯವರು ಮತ್ತೊಮ್ಮೆ ಎಚ್ಚರಿಸಿದ್ದಾರೆ. ಮತ್ತೆ ಬೆಚ್ಚಿ ಬೀಳುವಂತಹ ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ಶರವೇಗದಲ್ಲಿ ಸಾಗುತ್ತಿರುವ ದೇಶದ ಕರೋನಾ ಪೀಡಿತರ ಸಂಖ್ಯೆ ಮುಂದಿನ ತಿಂಗಳು ಮತ್ತೂ ಹೆಚ್ಚಾಗಲಿದೆ ಎಂದಿದ್ದಾರೆ. ಆಗಸ್ಟ್ 10ರ ವೇಳೆಗೆ ದೇಶದ ಕರೋನಾ ಪೀಡಿತರ ಸಂಖ್ಯೆ 20 ಲಕ್ಷ ದಾಟಲಿದೆ ಎಂದಿದ್ದಾರೆ. ಜನವರಿ 30ರಿಂದ ಈವರೆಗೆ ಐದೂವರೆ ತಿಂಗಳ ಅವಧಿಯಲ್ಲಿ ಈಗಾಗಲೇ ದೇಶದ ಕರೋನಾ ಪೀಡಿತರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ. ಈಗ ಕೇವಲ 25ದಿನಗಳ ಒಳಗಾಗಿ ಇನ್ನು 10 ಲಕ್ಷ ಪ್ರಕರಣಗಳು ವರದಿಯಾಗುತ್ತವೆ ಎಂದು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಕರೋನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಅದು ಹೇಗೆಂದರೆ, ಭಾರತದಲ್ಲಿ ಜುಲೈ 1ರಂದು ಪ್ರತಿದಿನ 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಮಾತ್ರವೇ ವರದಿಯಾಗಿದ್ದವು. ಆನಂತರ ಜುಲೈ 2ರಂದು 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 3ರಂದು 22 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 4ರಿಂದ 24 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿದ್ದವು. ನಂತರ ಜುಲೈ 9ರಂದು 26 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 10ರಂದು 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 11ರಿಂದ 28 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹಾಗೂ ಜುಲೈ 14ರಂದು 29 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಜುಲೈ 15ರಂದು ದಿಢೀರನೆ ಒಂದೇ ದಿನ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಎಂದರೆ 32 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾದವು. ಇದಾದ ಮೇಲೆ ಜುಲೈ 16ರಂದು ಮತ್ತೆ ಒಂದೇ ದಿನದ ಅಂತರದಲ್ಲಿ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಅಂದರೆ 34 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸಿವೆ.
The Corona Virus is an extremely serious threat to our people and our economy. My sense is the government is not taking this threat seriously.
Timely action is critical.#coronavirus https://t.co/bspz4l1tFM
— Rahul Gandhi (@RahulGandhi) February 12, 2020
ಹೀಗೆ ಕರೋನಾ ಪೀಡಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದಾರೆ. ಕರೋನಾ ಸೋಂಕು ಹರಡುವಿಕೆ ತಡೆಯಲು ಕೇಂದ್ರ ಸರ್ಕಾರ ತಕ್ಷಣವೇ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಸಲಹ ನೀಡಿದ್ದಾರೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಬಂದೊದಗುವುದು ಕಟ್ಟಿಟ್ಟ ಬುತ್ತಿ ಅಂತಾ ಖಡಕ್ ಆಗಿ ಎಚ್ಚರಿಸಿದ್ದಾರೆ.
ಫೆಬ್ರವರಿ 12ರಂದು ಮಾತ್ರವಲ್ಲ, ಅದಾದ ಬಳಿಕವೂ ರಾಹುಲ್ ಗಾಂಧಿ ಹಲವು ಬಾರಿ ಕರೋನಾ ನಿಯಂತ್ರಣ ಮಾಡುವ ಬಗ್ಗೆ, ಆರೋಗ್ಯ ಸೇವೆಯ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ, ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ, ಅತಂತ್ರವಾಗಿರುವ ವಲಸೆ ಕಾರ್ಮಿಕರ ಬಗ್ಗೆ, ಕೈಯಲ್ಲಿ ಕಾಸು ಮತ್ತು ಕೆಲಸ ಎರಡೂ ಇಲ್ಲದ ಬಡವರ ಬಗ್ಗೆ ಕೂಡ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದರು. ಕೆಲವೊಮ್ಮೆ ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನೇ ಎಚ್ಚರಿಸಿದ್ದರು. ಮೋದಿ ಮೌನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಒಂದು ಮಾತನ್ನು ಹೇಳಿದ್ದರು. ‘ನಾನು ವಿಷಯ ತಜ್ಞ ಅಲ್ಲ, ಆದರೆ ಹೀಗಾಗಬಹುದು ಎಂಬ ಅಂದಾಜು ಮಾಡುತ್ತಿದ್ದೇನೆ’ ಅಂತಾ. ‘ಕೆಲವೊಮ್ಮೆ ವಿಷಯ ಪರಿಣಿತಿಯೇ ಬೇಕಿಲ್ಲ, ಕಾಮನ್ ಸೆನ್ಸ್ ಮೂಲಕ ಅಪರಿಮಿತವಾದುದನ್ನು ಸಾಧಿಸಬಹುದು’ ಎಂಬ ಕಾಮನ್ ಸೆನ್ಸ್ ಆಳುವವರಿಗೆ ಇರಬೇಕಷ್ಟೇ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಹುಲ್ ಗಾಂಧಿ ಅವರು ಹೀಗೆ ಆಗಸ್ಟ್ 10ರವೇಳೆಗೆ ದೇಶದ ಕರೋನಾ ಪೀಡಿತರ ಸಂಖ್ಯೆ 20 ಲಕ್ಷ ದಾಟಲಿದೆ ಎಂದು ಹೇಳುತ್ತಿದ್ದಾರೆ ಎಂದರೆ ಕರೋನಾ ಸಮುದಾಯಕ್ಕೆ ಹರಡಿದೆ ಎಂಬುದಂತೂ ಸತ್ಯವಾದ ಸಂಗತಿ. ಕೇಂದ್ರ ಸರ್ಕಾರ ಕರೋನಾ ಸಮುದಾಯಕ್ಕೆ ಹರಡಿರುವ ವಿಷಯವನ್ನಾದರೂ ಅಧಿಕೃತವಾಗಿ ಘೋಷಿಸಿ ಪೂರಕವಾದ ಕ್ರಮ ಕೈಗೊಳ್ಳಬೇಕು. ಆದರೆ ಕೇಂದ್ರ ಸರ್ಕಾರ ಕರೋನಾ ವ್ಯಾಪಕವಾಗಿ ಹರಡುತ್ತಿದ್ದರೂ ಸಾವಿನ ಪ್ರಮಾಣ ಕಮ್ಮಿ ಇದೆ ಎಂಬುದನ್ನು ಒತ್ತಿ ಹೇಳಲು ಪ್ರಯತ್ನಿಸುತ್ತಿದೆ. ಪ್ರಕರಣಗಳು ದ್ವಿಗುಣ ಆಗುವ ದಿನಗಳ ಅಂತರ ಕಡಿಮೆ ಆಗುತ್ತಿದೆ ಎಂಬ ಒಣ ತರ್ಕವನ್ನು ಮುಂದಿಡುತ್ತಿದೆ. ಒಂದು ಎರಡಾಗುವುದು ಸುಲಭ. ಇಂದು ದೇಶದಲ್ಲಿ 34,956 ಪ್ರಕರಣಗಳು ಪತ್ತೆಯಾಗಿವೆ. ಇವು ದ್ವಿಗುಣ ಆಗಬೇಕೆಂದರೆ 69,912 ಪ್ರಕರಣಗಳಾಗಬೇಕು. ಹಾಗಾಗಲು ಸಹಜವಾಗಿ ಸಮಯಬೇಕಾಗುತ್ತದೆ. ಇದನ್ನೇ ಕೇಂದ್ರ ಆರೋಗ್ಯ ಇಲಾಖೆ ತನ್ನ ಸಾಧನೆ ಎಂದು ಬಣ್ಣಿಸಿಕೊಳ್ಳುತ್ತಿದೆ.
10,00,000 का आँकड़ा पार हो गया।
इसी तेज़ी से #COVID19 फैला तो 10 अगस्त तक देश में 20,00,000 से ज़्यादा संक्रमित होंगे।
सरकार को महामारी रोकने के लिए ठोस, नियोजित कदम उठाने चाहिए। https://t.co/fMxijUM28r
— Rahul Gandhi (@RahulGandhi) July 17, 2020
ಕೇಂದ್ರ ಸರ್ಕಾರ ಈ ರೀತಿಯ ಅಂಕಿ ಸಂಖ್ಯೆಗಳ ತರ್ಕವನ್ನು ಪ್ರತಿಪಾದಿಸುವ ಬದಲು ವಾಸ್ತವವಾಗಿ ಮತ್ತು ವೈಜ್ಞಾನಿಕವಾಗಿ ಕಾರ್ಯಪ್ರವೃತ್ತರಾಗಬೇಕಿದೆ. ಮೊದಲ ಬಾರಿಗೆ ರಾಹುಲ್ ಗಾಂಧಿಯವರು ಎಚ್ಚರಿಸಿದಾಗ ಎಚ್ಚೆತ್ತುಕೊಂಡಿದ್ದರೆ ಖಂಡಿತಕ್ಕೂ ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿ ಇರುತ್ತಿರಲಿಲ್ಲ. ಎಚ್ಚರಿಸಿದ ಹೆಚ್ಚುಗಾರಿಕೆ ಅವರಿಗೆ ಸಲ್ಲುತ್ತದೆ ಎಂದು ಸಣ್ಣತನ ಮಾಡಲಾಯಿತು. ಈಗಲಾದರೂ ದೊಡ್ಡ ಮನಸ್ಸಿನಿಂದ ರಾಹುಲ್ ಗಾಂಧಿಯವರ ಎಚ್ಚರಿಕೆಗೆ ಕೇಂದ್ರ ಸರ್ಕಾರ ಕಿವಿಗೊಡುವುದೇ?





