ಕರೋನಾ ವೈರಸ್ ವಿಶ್ವಕ್ಕೆ ಮಾರಿಯಾಗಿರುವುದು ಸರಿ. ಪ್ರಪಂಚದಾದ್ಯಂತ 12,77,962 ಜನರನ್ನು ಹೆಮ್ಮಾರಿ ವೈರಸ್ ಕಾಡುತ್ತಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದಲ್ಲಿ ಬರೋಬ್ಬರಿ 3,36,830 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಸ್ಪೇನ್ ದಾಪುಗಾಲು ಇಟ್ಟಿದ್ದು 1,31,646 ಜನರಲ್ಲಿ ವೈರಸ್ ಕಾಣಿಸಿಕೊಂಡಿದೆ. ಮೂರನೇ ಸ್ಥಾನದಲ್ಲಿರುವ ಇಟೆಲಿ 1,28,948 ರೋಗಿಗಳನ್ನು ಹೊಂದಿದೆ. ಜರ್ಮನಿ ಕೂಡ 1,00,123 ಜನರ ಕರೋನಾ ಪೀಡಿತರನ್ನು ಹೊಂದುವ ಮೂಲಕ ಈ ನಾಲ್ಕು ರಾಷ್ಟ್ರಗಳು ಸೋಂಕಿತರ ಸಂಖ್ಯೆಯಲ್ಲಿ ಲಕ್ಷದ ಗಡಿಯನ್ನು ದಾಟಿ ಹೋಗಿವೆ. ಫ್ರಾನ್ಸ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದು, 92,839 ಜನ ಸೋಂಕು ಹೊಂದುವ ಮೂಲಕ ಟಾಪ್ 5 ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಆದರೆ ನಮ್ಮ ಭಾರತದಲ್ಲಿ ಕರೋನಾ ವೈರಸ್ ಎಂಬ ಮಹಾಮಾರಿ ನಮ್ಮ ಸಂಸ್ಕೃತಿ, ಸಂಪ್ರದಾಯ ಆಚರಣೆಗೆ ಸಹಕಾರಿ ಆದಂತಾಗಿದೆ.
ಭಾರತ ಹಳ್ಳಿಗಳ ರಾಷ್ಟ್ರ. ಹಳ್ಳಿಗಳೇ ಪ್ರಮುಖವಾಗಿರುವ ಈ ದೇಶದಲ್ಲಿ ಅವಿಭಕ್ತ ಕುಟುಂಬ ಎಂಬುದು ಅನಾದಿ ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯ. ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದು . ಯಥೇಚ್ಛವಾದ ಹಣದ ಹರಿವು ಹೊಂದಿರುವ ಈ ನಗರ, ಪಟ್ಟಣಗಳ ಆಸೆಗೆ ಒಳಗಾದ ಯುವ ಜನಾಂಗ ಹಳ್ಳಿಗಳನ್ನು ತೊರೆದು ಪಟ್ಟಣ ಸೇರಿದ್ದಾಗಿದೆ. ಆ ಬಳಿಕ ಕ್ರಮೇಣ ತನ್ನ ಸಂಸಾರವನ್ನೂ ನಗರ, ಪಟ್ಟಣಗಳಿಗೆ ಕರೆದೊಯ್ದ ಪರಿಣಾಮ ಹಳ್ಳಿಗಳಲ್ಲಿ ಅವಿಭಕ್ತ ಕುಟುಂಬ ಎನ್ನುವ ಕಲ್ಪನೆ ಕಾಲ ಕ್ರಮೇಣ ಮಾಯವಾಗಿತ್ತು. ನಗರಗಳಲ್ಲೂ ಚಿಕ್ಕ ಕುಟುಂಬ, ಹಳ್ಳಿಗಳಲ್ಲೂ ಚಿಕ್ಕ ಕುಟುಂಬಗಳು ಎನ್ನುವಂತಾಗಿತ್ತು. ಆದರೆ ಇದೀಗ ನಗರವನ್ನು ತೊರೆದು ಜನರು ಹಳ್ಳಿಗಳತ್ತ ಹೆಜ್ಜೆ ಹಾಕಿದ್ದಾರೆ. ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲೂ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಜನರು ಕೆಲಸ ಇಲ್ಲದ ಪರಿಣಾಮ ಊರುಗಳಲ್ಲಿ ತಮ್ಮ ಹಿರಿಯರ ಜೊತೆ ಕಾಲ ಕಳೆಯುತ್ತಿದ್ದಾರೆ. ಇದು ಅವಿಭಕ್ತ ಕುಟುಂಬದ ಪರಿಕಲ್ಪನೆಯನ್ನು ಮರು ಸೃಷ್ಟಿಸುವಂತೆ ಮಾಡಿದೆ.
ನೊಂದಿದ್ದ ಹಿರಿಯ ಮನಸ್ಸುಗಳಿಗೆ ಸತ್ತರೂ ನೆಮ್ಮದಿ!
ಮಕ್ಕಳ ಜೊತೆ ಕೊನೆಗಾಲದ ಜೀವನ ಕಳೆಯಲಾಗದ ಹಿರಿಯ ಜೀವಗಳು ಮನಸ್ಸಿನಲ್ಲೇ ನೋವು ಅನುಭವಿಸುತ್ತಿದ್ದರು. ಮಕ್ಕಳು ಒಳ್ಳೆಯವರಾಗಿದ್ದರೂ ನಗರ, ಪಟ್ಟಣಗಳ ಜೀವನಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗದೆ, ಹಳ್ಳಿಗಳಲ್ಲೇ ವಾಸ ಮಾಡಬೇಕಾದರ ಪರಿಸ್ಥಿತಿ ಎದುರಾಗಿತ್ತು. ವರ್ಷಕ್ಕೊಮ್ಮೆ ಹಬ್ಬ ಹರಿದಿನಕ್ಕೆ ಬರುತ್ತಿದ್ದ ಮಕ್ಕಳು, ಮೊಮ್ಮಕ್ಕಳನ್ನು ಕಂಡು ಸಂತಸಪಡುತ್ತಿದ್ದರು. ಆದರೆ ಕರೋನಾ ಸೋಂಕಿನ ಭೀತಿ ನಗರ, ಪಟ್ಟಣ ಜನರು ಹಳ್ಳಿ ಸೇರುವಂತಾಗಿದೆ. ಹಬ್ಬಕ್ಕೆ ಎಂದು ಊರುಗಳಿಗೆ ಬರುತ್ತಿದ್ದವರು ಎರಡರಿಂದ ಮೂರು ದಿನ ತಮ್ಮ ಹುಟ್ಟೂರುಗಳಲ್ಲಿ ಇರುತ್ತಿದ್ದದ್ದೇ ಹೆಚ್ಚು. ಒಂದು ವಾರಗಳ ಕಾಲ ಕಳೆಯುವ ವ್ಯವಧಾನ ಯುವ ಜನಾಂಗದಲ್ಲಿ ಕಣ್ಮರೆಯಾಗಿತ್ತು. ಆದರೀಗ 2 ವಾರಗಳಾದರೂ ಬೆಂಗಳೂರು, ಮೈಸೂರು ಸೇರಿದಂತೆ ನಗರ, ಪಟ್ಟಣಗಳಿಂದ ಹುಟ್ಟೂರಿನ ನೆನಪು ಮಾಡಿಕೊಂಡು ಊರುಗಳಿಗೆ ಬಂದಿರುವವರು ವಾಪಾಸ್ ನಗರಗಳಿಗೆ ತೆರಳಲು ಸಾಧ್ಯವಿಲ್ಲದೆ ಊರುಗಳಲ್ಲಿಯೇ ಬೀಡುಬಿಟ್ಟಿದ್ದಾರೆ. ವಯೋವೃದ್ಧರು ಕರೋನಾ ಬಂದರೂ ಪರವಾಗಿಲ್ಲ, ಮಕ್ಕಳು, ಮೊಮ್ಮಕ್ಕಳ ಜೊತೆಯಲ್ಲಿ ಇಷ್ಟೊಂದು ದಿನಗಳ ಕಾಲ ಕಳೆಯುವಂತೆ ಆಯಿತಲ್ಲ ಅಷ್ಟೇ ಸಾಕು ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
ಸದ್ಯಕ್ಕೆ ಹಳ್ಳಿಗಳಲ್ಲೂ ಬೇಸಿಗೆಯಾಗಿದ್ದು, ಇನ್ನೂ ಕೂಡ ಮಳೆ ಬಿದ್ದಿಲ್ಲ. ಹಾಗಾಗಿ ರೈತಾಪಿ ವರ್ಗ ಕೂಡ ವಿಶ್ರಾಂತಿಯಲ್ಲೇ ಇತ್ತು. ಇದೀಗ ಮನೆಗೆ ಮಕ್ಕಳು ಮೊಮ್ಮಕ್ಕಳು ಕೂಡ ಆಗಮಿಸಿರುವ ಕಾರಣ ಮನೆಯ ಮೂಲೆಯಲ್ಲಿದ್ದ ಅಳಿಗುಳಿ ಮನೆ, ಚೌಕಾಬಾರ, ಕಳ್ಳಪೊಲೀಸ್, ಲೂಡೋ, ಹಾವು ಏಣಿ ಆಟ ಸೇರಿದಂತೆ ಹಳ್ಳಿಗರು ಈ ಹಿಂದೆ ಆಡುತ್ತಿದ್ದ ಎಲ್ಲಾ ಆಟಗಳು ಪ್ರಚಲಿತಕ್ಕೆ ಬಂದಿವೆ. ಏಪ್ರಿಲ್ 5 ರಂದು ರಾತ್ರಿ 9 ಗಂಟೆಯಿಂದ 9 ನಿಮಿಷಗಳ ಕಾಲ ಮನೆಯ ದೀಪಗಳನ್ನು ಆರಿಸಿ ದೀಪ ಬೆಳಗಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಕರೆಗೆ ದೇಶದೆಲ್ಲೆಡೆ ದೀಪಾವಳಿ ಹಬ್ಬ ಆಚರಣೆಯೇ ನಡೆದಿದೆ. ಇನ್ನು ಬೆಂಗಳೂರಿನಲ್ಲಿ ಕಳೆದ ಎರಡು ವಾರಗಳಿಂದ ವಾಹನ ಸಂಚಾರವಿಲ್ಲದೆ ವಾಯು ಮಾಲಿನ್ಯ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಮಾಲಿನ್ಯದ ಪ್ರಮಾಣದಲ್ಲಿ ಇಳಿಕೆಯಾಗಿದೆ. ನಗರ, ಪಟ್ಟಣಗಳ ಜನರು ತಮ್ಮ ಮೂಲ ಸ್ಥಾನಕ್ಕೆ ಬಂದಿರುವ ಕಾರಣ ರಸ್ತೆಗಳಿಗೆ ನವಿಲುಗಳು ಬಂದಿವೆ. ಮಾನವನ ಜಂಜಾಟವಿಲ್ಲದೆ ಪ್ರಾಣಿ ಪಕ್ಷಿಗಳು ಭಯಭೀತಿಯೂ ಇಲ್ಲದೆ ಬೆಂಗಳೂರು ನಗರಗಳಲ್ಲಿ ಸುತ್ತಾಡುವಂತಾಗಿದೆ. ಒಟ್ಟಾರೆ ಕರೋನಾ ಕಾಯಿಲೆ ಬಂದು ಬಿಟ್ಟರೆ ಎನ್ನುವ ಭಯ ಇದ್ದೇ ಇದೆ. ಆದರೆ, ನಗರದಲ್ಲಿ ಬೀಡುಬಿಟ್ಟಿದ್ದ ಜನರು ಹಳ್ಳಿಗಳಿಗೆ ತೆರಳಿದ್ದು, ಅವಿಭಕ್ತ ಕುಟುಂಬವನ್ನು ಮರುಸೃಷ್ಟಿಸಿದೆ.