ಮೂಲ್ಕಿ ಸೇರಿದಂತೆ ಮಂಗಳೂರು, ಶಿವಮೊಗ್ಗ ನಗರಗಳಲ್ಲಿ ಆಸ್ತಿ ನೋಂದಣಿ ಸಂದರ್ಭದಲ್ಲಿ ಪ್ರಾಪರ್ಟಿ ಕಾರ್ಡ್ ಕಡ್ಡಾಯ ನಿಯಮಕ್ಕೆ ರಾಜ್ಯ ಸರಕಾರ ವಿನಾಯತಿ ನೀಡಿದೆ. ಇಂತಹದೊಂದು ಸುದ್ದಿ ಶಿವಮೊಗ್ಗ ಮತ್ತು ಮಂಗಳೂರು ಮಹಾನಗರಪಾಲಿಕೆಗಳ ವ್ಯಾಪ್ತಿಯ ಆಸ್ತಿದಾರರ ಸಂಕಟವನ್ನು ದೂರ ಮಾಡಿದೆ.
ಶಿವಮೊಗ್ಗ, ಮೈಸೂರು, ಮಂಗಳೂರು ನಗರದಲ್ಲಿ ಯು.ಪಿ.ಓ.ಆರ್. (Urban Property Ownership Record) ಯೋಜನೆಯಡಿಯಲ್ಲಿ ಆಸ್ತಿಗಳ ನೋಂದಣಿ ಸಮಯದಲ್ಲಿ ಪ್ರಾಪರ್ಟಿ ಕಾರ್ಡ್ ಹೊಂದಿರುವುದನ್ನು ಕಡ್ಡಾಯ ಮಾಡಲಾಗಿತ್ತು. ಈ ಆದೇಶವನ್ನು ಮೇ 2019ರಂದು ಹೊರಡಿಸಲಾಗಿತ್ತು.
ಪ್ರಾಪರ್ಟಿ ಕಾರ್ಡ್ ಕಡ್ಡಾಯ ಬಗ್ಗೆ ಸಾರ್ವಜನಿಕರ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ದೂರುಗಳು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಅಂದಿನ ಸರಕಾರ ಕ್ಯಾರೇ ಅಂದಿರಲಿಲ್ಲ. ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಸಿಂಗಲ್ ಸೈಟ್ ನಿಯಮದ ಸಮಸ್ಯೆಯಿಂದಾಗಿ ಜನರ ಬೆಂಬಲ ಕಳೆದುಕೊಂಡಿರುವುದನ್ನು ಮನಗಂಡ ಬಿಜೆಪಿ ಮುಖಂಡರು ಈ ಬಾರಿ ಎಚ್ಚೆತ್ತುಕೊಂಡಿದ್ದಾರೆ. ಈ ಕಡ್ಡಾಯ ಆದೇಶವನ್ನು ಮುಂದಿನ ಆದೇಶದ ತನಕ ಮುಂದೂಡಿಸುವಲ್ಲಿ ಸ್ಥಳೀಯ ಶಾಸಕರು ಯಶಸ್ವಿಯಾಗಿದ್ದಾರೆ.
ದೇಶದಾದ್ಯಂತ ನಗರಗಳ ಆಸ್ತಿ ದಾಖಲೆಗಳನ್ನು ಡಿಜಿಟಲ್ ಮಾಡುವ ಯೋಜನೆ ಜಾರಿಗೆ ಬಂದು ಹತ್ತು ವರ್ಷಗಳು ಕಳೆದಿವೆ. ರಾಜ್ಯದಲ್ಲಿ ಮಂಗಳೂರು ಹಾಗೂ ಶಿವಮೊಗ್ಗ ನಗರಗಳಲ್ಲಿ ಮಾತ್ರ ಅರ್ಬನ್ ಪ್ರಾಪರ್ಟಿ ಕಾರ್ಡ್ ಯೋಜನೆ ಜಾರಿಯಲ್ಲಿದೆ. ಅರ್ಬನ್ ಪ್ರಾಪರ್ಟಿ ಕಾರ್ಡ್ ವಿತರಿಸಲು ಪ್ರತಿ ನಗರಗಳಲ್ಲಿ Urban Property Ownership Record ಸರ್ವೇ ಮತ್ತು ಮೋಜಣಿ ಕಚೇರಿಗಳನ್ನು ತೆರೆಯಲಾಗಿದೆ. ಈ ಸರ್ವೆ ಅಧಿಕಾರಿಗಳು ನಗರ ಪ್ರದೇಶದ ಆಸ್ತಿಗಳ ದಾಖಲೆ ಪಡೆದುಕೊಂಡು ಸರ್ವೆ ಮಾಡಿ ಪ್ರಾಪರ್ಟಿ ಕಾರ್ಡ್ ತಯಾರಿಸಿ ಆಸ್ತಿಯ ಮಾಲಿಕರಿಗೆ ವಿತರಿಸಬೇಕು. ಪ್ರಾಪರ್ಟಿ ಕಾರ್ಡ್ ಮಾಡಿಸುವುದು ಆಸ್ತಿ ಹೊಂದಿದವನ ಕೆಲಸವಲ್ಲ. ಅದು ಸರಕಾರ ಮಾಡಬೇಕಾದ ಕೆಲಸ. ಇದಕ್ಕಾಗಿ ಸರ್ಕಾರ ಖಾಸಗಿ ಸಂಸ್ಥೆಯೊಂದರ ಸಹಭಾಗಿತ್ವವನ್ನು ಕೂಡ ಪಡೆದುಕೊಂಡಿತ್ತು.
2013ರಿಂದ ಇಂತಹ ಯೋಜನೆಯೊಂದು ಜಾರಿಯಲ್ಲಿದ್ದರೂ ಇದುವರೆಗೆ ಶೇಕಡ 90ರಷ್ಟೂ ಪ್ರಾಪರ್ಟಿ ಕಾರ್ಡ್ ವಿತರಿಸುವಲ್ಲಿ `ಸೋಮಾರಿ’ ಸರ್ಕಾರಿ ವ್ಯವಸ್ಥೆಗೆ ಸಾಧ್ಯವಾಗಿರಲಿಲ್ಲ. ಪ್ರಾಪರ್ಟಿ ಕಾರ್ಡ್ ಗಾಗಿ ಕಚೇರಿಯಲ್ಲಿ ಕ್ಯೂ ನಿಂತರೂ ಕಾರ್ಡ್ ಸಿಗದ ಪರಿಸ್ಥಿತಿ ಉಂಟಾಗಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಅನಂತರದ ಮೈತ್ರಿ ಸರಕಾರದ ಸಚಿವರು ಮತ್ತು ಜವಾಬ್ದಾರಿ ಹೊಂದಿದವರು ಪ್ರಾಪರ್ಟಿ ಕಾರ್ಡ್ ಯೋಜನೆ ಅನುಷ್ಠಾನ ತ್ವರಿತ ಮಾಡುವ ಕೆಲಸ ಮಾಡಲಿಲ್ಲ. ಕಾಂಗ್ರೆಸ್ ಮುಖಂಡರು ಜನರ ಸಮಸ್ಯೆಗೆ ಸ್ಪಂದಿಸಲಿಲ್ಲ. ಅದರ ಬದಲು ಸರಕಾರಿ ಅಧಿಕಾರಿಗಳಿಗೆ ಮತ್ತು ಮಧ್ಯವರ್ತಿಗಳಿಗೆ ಆದಾಯ ಗಳಿಸುವ ವ್ಯವಸ್ಥೆ ಮಾಡಿಕೊಟ್ಟರು.
ಯಾವಾಗ ಪ್ರಾಪರ್ಟಿ ಕಾರ್ಡ್ ಮಾಡಿಸಲು ಜನರು ಕಚೇರಿಗೆ ಬರುವಂತಾಯಿತೋ ಆಗ ಮಧ್ಯವರ್ತಿಗಳ ಹಾವಳಿ ಆರಂಭವಾಯಿತು. ಮಧ್ಯವರ್ತಿಗಳು ಒಂದಷ್ಟು ಕಡತಗಳನ್ನು ಹಿಡಿದುಕೊಂಡು ನೇರವಾಗಿ ಬಂದು ಸಿಬ್ಬಂದಿ ಜತೆ ಶಾಮೀಲಾಗಿ ವ್ಯವಹರಿಸುವುದು ಸಾಮಾನ್ಯವಾಗಿತ್ತು. ಜನರು ಕಡತ ನೀಡಿ ಒಂದು ವರ್ಷವಾದರೂ ಪ್ರಾಪರ್ಟಿ ಕಾರ್ಡ್ ಆಗುತ್ತಿರಲಿಲ್ಲ. ಇಂತಹ ಸಮಸ್ಯೆ ಶಿವಮೊಗ್ಗ ಮತ್ತು ಮಂಗಳೂರು ಮಹಾನಗರಗಳಲ್ಲಿ ಹೆಚ್ಚಾಗಿದೆ. ಬೇರೆ ನಗರಗಳಲ್ಲಿ ಇಲ್ಲದ ನಿಯಮ ಮಂಗಳೂರಿನಲ್ಲಿ ಮಾತ್ರ ಯಾಕೆ ಎಂದು ಜನರು ಇತ್ತೀಚೆಗೆ ಸೋಶಿಯಲ್ ಮಿಡಿಯಾಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಾಪರ್ಟಿ ಕಾರ್ಡ್ ವಿತರಿಸಲು ಇನ್ನೊಂದು ವರ್ಷ ಸಮಯ ಬೇಕು ಎನ್ನುತ್ತಾರೆ ಐ ಎ ಎಸ್ ಅಧಿಕಾರಿ ಪೊನ್ನುರಾಜ್. ಇವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆಗಿದ್ದಾಗಲೇ ಪ್ರಾಪರ್ಟಿ ಕಾರ್ಡ್ ಅನುಷ್ಠಾನಕ್ಕೆ ವಿಶೇಷ ಆಸಕ್ತಿ ವಹಿಸಿದ್ದರು.
ಯೋಜನೆಯ ಉದ್ದೇಶ ಏನಿದೆ?
ಪ್ರಾಪರ್ಟಿ ಕಾರ್ಡ್ ಉತ್ತಮ ಯೋಜನೆಯೇ ಆಗಿದ್ದು, ಹಲವಾರು ಉಪಯೋಗಗಳನ್ನು ಪಡೆಯುವ ಉದ್ದೇಶ ಹೊಂದಿತ್ತು. ಯೋಜನೆಯಿಂದ ಆಸ್ತಿ ಮಾಲಿಕರಿಗೆ, ಸರಕಾರದ ಏಜೆನ್ಸಿಗಳಿಗೆ, ಒಂದು ಕಾರ್ಡ್ ನಲ್ಲಿ ಬಹು ಉಪಯೋಗ ಮಾಹಿತಿ ದೊರೆಯುತ್ತದೆ. ಇದರಿಂದ ಆಸ್ತಿ ತೆರಿಗೆ ಸಂಗ್ರಹದಲ್ಲಿ ಏರಿಕೆ ಆಗುತ್ತದೆ, ಬ್ಯಾಂಕುಗಳಿಗೂ ಪ್ರಾಪರ್ಟಿ ಕಾರ್ಡ್ ಉತ್ತಮ ದಾಖಲೆ ಆಗಿರುತ್ತದೆ. ಇದಲ್ಲದೇ, ಪ್ರಾಪರ್ಟಿ ಕಾರ್ಡ್ ನಿಂದ ಭೂಸ್ವಾಧೀನ ಸಂದರ್ಭದಲ್ಲಿ ಪರಿಹಾರ ವಿತರಣೆ ಕೂಡ ಸುಗಮವಾಗಿ ಆಗುತ್ತದೆ.
ರಾಜ್ಯದಲ್ಲಿ ಮೊದಲಿಗೆ ಮೈಸೂರು, ಮಂಗಳೂರು ಮತ್ತು ಶಿವಮೊಗ್ಗ ನಗರಗಳಲ್ಲಿ ಪೈಲಟ್ ಯೋಜನೆಯಾಗಿ ಜಾರಿ ಮಾಡಲಾಗಿತ್ತು. ಮೈಸೂರು ನಗರದಲ್ಲಿ ಆರಂಭದಲ್ಲಿ 2 ಲಕ್ಷ ಆಸ್ತಿ ಇವೆ ಎಂದು ಅಂದಾಜಿಸಲಾಗಿತ್ತು. UPOR ಯೋಜನೆಯಡಿ ಸರ್ವೇ ಮಾಡಿದಾಗ 75,000 ಹೆಚ್ಚು ಆಸ್ತಿಗಳು ಪತ್ತೆ ಆಗಿವೆ. ಇದರಿಂದ ತಿಳಿದು ಬಂದಿದ್ದೇನೆಂದರೆ, ಒಟ್ಟು 2.75 ಲಕ್ಷ ಆಸ್ತಿಗಳಲ್ಲಿ ಕೇವಲ 2 ಲಕ್ಷ ಆಸ್ತಿಗಳ ತೆರಿಗೆ ಮಾತ್ರ ಪಾವತಿ ಆಗುತ್ತಿತ್ತು. ಸರ್ವೆ ಕಾರ್ಯ ಪೂರ್ಣಗೊಂಡಾಗ ಮೈಸೂರಿನಲ್ಲಿ ಒಟ್ಟು 3.19 ಲಕ್ಷ ಪ್ರಾಪರ್ಟಿಗಳು ಇರುವುದು ಬೆಳಕಿಗೆ ಬಂದಿತ್ತು.
ಮಂಗಳೂರು ಮಹಾನಗರದ 32 ಕಂದಾಯ ಗ್ರಾಮಗಳಲ್ಲಿ 1,53,466 ಪ್ರಾಪರ್ಟಿಗಳ ಸರ್ವೇ ಮಾಡಲಾಗಿದೆ. ಮಂಗಳೂರಿನಲ್ಲಿ 2019ರ ಆಗಸ್ಟ್ 31ರ ವರೆಗೆ 1,53,500 ಆಸ್ತಿಯಲ್ಲಿ 93,727 ಆಸ್ತಿಗಳ ದಾಖಲೆ ಪತ್ರಗಳನ್ನು ಸಂಗ್ರಹಿಸಲಾಗಿದೆ. ಇದರಲ್ಲಿ 48,583 ಕರಡು ಕಾರ್ಡಿಗೆ ಅನುಮೋದನೆ ನೀಡಲಾಗಿದ್ದು, 33,912 ಅಂತಿಮ ಕಾರ್ಡ್ ಗಳನ್ನು ವಿತರಿಸಲಾಗಿದೆ.
ಕಾರ್ಡ್ ಕಡ್ಡಾಯ ಎಂಬ ಆದೇಶವನ್ನು ಹಿಂಪಡೆಯುವ ನಡವಳಿಯಲ್ಲಿ ಸರ್ಕಾರ ಈ ಯೋಜನೆಯನ್ನು ಮುಂದುವರಿಸುವ ಪ್ರಸ್ತಾಪ ಮಾಡಿದೆ. “ಈ ಯೋಜನೆಯನ್ನು ಇನ್ನಷ್ಟು ತಾಂತ್ರಿಕವಾಗಿ ಬಲಿಷ್ಟಗೊಳಿಸಿದ ಹಾಗೂ ಎಲ್ಲಾ ಆಸ್ತಿ ಮಾಲಿಕರಿಗೆ ಪ್ರಾಪರ್ಟಿ ಕಾರ್ಡ್ ವಿತರಣೆ ಮಾಡಿದ ನಂತರದಲ್ಲಿ ಈ ಯೋಜನೆಗೆ (ಕಡ್ಡಾಯಗೊಳಿಸುವ ಯೋಜನೆ) ಆದ್ಯತೆ ನೀಡಬಹುದಾಗಿರುತ್ತದೆ..’’ ಆಯ್ದ ಎರಡು ನಗರಗಳಲ್ಲಿನ ಯೋಜನೆಯೇ ಇಷ್ಟು ವಿಳಂಬವಾಗಿರುವಾಗ, ಯೋಜನೆ ಮುಂದುವರಿಯಬೇಕಾದಲ್ಲಿ ತ್ವರಿತ ಅನುಷ್ಟಾನಕ್ಕೆ ಬೇಕಾದ ರೂಪುರೇಶೆ ಬಗ್ಗೆಯೇ ಯೋಜನೆಯೊಂದನ್ನು ರೂಪಿಸಬೇಕಿದೆ.