ಇಡೀ ಪ್ರಪಂಚದಲ್ಲೇ ಪ್ರಭಾವಿ ಎಂದು ಬೀಗುವ ಅಮೇರಿಕಾ, ಕರೋನಾ ಎಂಬ ವೈರಸ್ ಎದುರು ನಡು ಬಗ್ಗಿಸಿ ನಿಂತಿದೆ. ವಿಶ್ವದಲ್ಲೇ ಅತಿಹೆಚ್ಚು ಕರೋನಾ ಪೀಡಿತರು ಮತ್ತು ಅತಿಹೆಚ್ಚು ಕರೋನಾದಿಂದ ಸತ್ತವರು ಅಮೇರಿಕಾದವರೇ. ಅಮೇರಿಕಾ ಈ ದುರ್ದಿನಗಳನ್ನು ಎದುರಿಸಬೇಕಾಗಿ ಬಂದಿರುವುದಕ್ಕೆ ಬಹುಮುಖ್ಯ ಕಾರಣ ಅದರ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಸದ್ಯ ಅಮೇರಿಕಾ ಪಾಲಿಗೆ ಡೊನಾಲ್ಡ್ ಟ್ರಂಪ್ ಕರೋನಾಗಿಂತ ಕ್ರೂರಿಯಾಗಿದ್ದಾರೆ.
ಅಮೇರಿಕಾ ಪಾಲಿಗೆ ಕರೋನಾಗಿಂತಲೂ ಡೊನಾಲ್ಡ್ ಟ್ರಂಪ್ ಅವರೇ ಅಪಾಯಕಾರಿ ಎನ್ನುವುದನ್ನು ಸಾಬೀತುಪಡಿಸಲು ಹತ್ತು ಹಲವು ಕಾರಣಗಳು ಸಿಗುತ್ತವೆ. ಅಮೇರಿಕಾ ಈಗ ಬಹಳ ನಿರ್ಣಾಯಕ ಘಟ್ಟದಲ್ಲಿರುವ ರಾಷ್ಟ್ರಗಳಲ್ಲಿ ಒಂದು. ಹಲವು ರೀತಿಯ ಸಂಕಟಗಳನ್ನು ಎದುರಿಸುತ್ತಿರುವ ರಾಷ್ಟ್ರವೂ ಹೌದು. ಸದ್ಯ ವಕ್ಕರಿಸಿರುವ ಕರೋನಾವನ್ನು ಹೊರತುಪಡಿಸಿಯೂ ಅಮೇರಿಕಾದ ಆರ್ಥಿಕತೆ ಕುಸಿದಿದೆ. ಉದ್ಯೋಗ ನಷ್ಟ ಆಗುತ್ತಿದೆ. ಮೊದಲಿನಷ್ಟು ಅಂತಾರಾಷ್ಟ್ರೀಯ ಮಾನ್ಯತೆ ಇಲ್ಲ. ಜಾಗತಿಕವಾಗಿಯೂ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವುದರಿಂದ ವಿದೇಶಿ ವಿನಮಯವೂ ಅಯೋಮಯವಾಗಿದೆ.
ಕರೋನಾ ರೀತಿಯಲ್ಲಿ ಉಳಿದ ಕಷ್ಟಗಳಿಗೂ ಡೊನಾಲ್ಡ್ ಟ್ರಂಪ್ ಅವರೇ ರೂವಾರಿಗಳು. ಏಕೆಂದರೆ ಉದ್ಯಮದ ಹಿನ್ನೆಲೆಯಿಂದ ಬಂದಿರುವ ಟ್ರಂಪ್ ತೆಗೆದುಕೊಂಡಿರುವ ಆರ್ಥಿಕ ಸುಧಾರಣಾ ಕ್ರಮಗಳು ಫಲ ನೀಡಿಲ್ಲ. ವಿದೇಶಿ ನೀತಿಗಳು ವಿಶ್ವಾಸ ಮೂಡಿಸುವ ರೀತಿಯಲ್ಲಿ ಇಲ್ಲ. ಯಾವುದೇ ವಿಷಯವಿರಲಿ, ಅಳೆದು ತೂಗಿ ನಿರ್ಧರಿಸಿದ್ದಕ್ಕಿಂತ ಹುಂಭತನದಿಂದ ನಿರ್ಣಯ ಕೈಗೊಂಡಿದ್ದೇ ಹೆಚ್ಚು. ಟ್ರಂಪ್ ಕಾರ್ಯವೈಖರಿಗೆ ಕರೋನಾ ಕಂಡುಬಂದಾಗ ಅವರು ತೋರಿದ ಉದಾಸೀನವೇ ಅತ್ಯುತ್ತಮ ಉದಾಹರಣೆ.

ಅಮೇರಿಕಾ ಒಂದು ಕಾಲಕ್ಕೆ ವಿಶ್ವದ ದೊಡ್ಡಣ್ಣ ಎಂಬ ಖ್ಯಾತಿ ಗಳಿಸಿತ್ತು. ಆದರೆ ಇಂದು ಬೃಹತ್ ಅರ್ಥವ್ಯವಸ್ಥೆ, ದೈತ್ಯ ಸೇನೆ, ಅತ್ಯಾದುನಿಕ ತಂತ್ರಜ್ಞಾನಗಳೆಲ್ಲವನ್ನೂ ಒಳಗೊಂಡ ಅಮೇರಿಕಾದ ಎದುರು ಅಂಗೈ ಅಗಲ ಇರುವ ಉತ್ತರ ಕೊರಿಯಾ ಅಬ್ಬರಿಸುತ್ತಿದೆ. ಇತ್ತೀಚೆಗೆ ಇರಾನ್ ಮತ್ತು ಇರಾಕ್ ದೇಶಗಳಲ್ಲೂ ಅಮೇರಿಕಾ ಇರುಸು ಮುರಿಸು ಎದುರಿಸಬೇಕಾಯಿತು. ಚೀನಾ ವಿರುದ್ದ ಸಕಾರಣ ವಿನಾಕಾರಣಗಳೆರಡಕ್ಕೂ ಕಾಲು ಕೆರೆದುಕೊಂಡು ನಿಂತಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಮೇರಿಕಾವನ್ನು ಅಗ್ರಗಣ್ಯ ಎಂದು ಪರಿಗಣಿಸಲು ಯಾವ ರಾಷ್ಟ್ರವೂ ಸಿದ್ದರಿಲ್ಲ. ಇದರಿಂದ ಡೊನಾಲ್ಡ್ ಟ್ರಂಪ್ ಐಡೆಂಟಿಟಿ ಕೃೈಸಿಸ್ಎದುರಿಸುತ್ತಿದ್ದಾರೆ.
ಈ ಐಡೆಂಟಿಟಿ ಕೃೈಸಿಸ್ ಡೊನಾಲ್ಡ್ ಟ್ರಂಪ್ ಅವರಿಗೆ ಮಾತ್ರವೇ ಇಲ್ಲ, ಶ್ರೇಷ್ಟತೆಯ ವ್ಯಸನದಲ್ಲಿ ಸಿಲುಕಿ ಒದ್ದಾಡುತ್ತಿರುವ ಆ ದೇಶದ ಬಿಳಿಚರ್ಮದ ನಾಗರಿಕರನ್ನೂ ಕಾಡುತ್ತಿದೆ. ಇದು ಸಮರ್ಥ ಆಡಳಿತ ನೀಡದೆ ವಿಫಲವಾಗಿರುವ ಟ್ರಂಪ್ ಗೆ ವರದಾನವಾಗಿ ಪರಿಣಮಿಸಿದೆ. ಜನರ ಭಾವನೆಯನ್ನು ಟ್ರಂಪ್ ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಹಾತೊರೆಯುತ್ತಿದ್ದಾರೆ. ಅದರಿಂದಾಗಿ ಅವರು ಕೂಡ ‘ವಿಶ್ವಗುರು’ ಆಗಲು ಬಯಸಿದ್ದಾರೆ. ಅವರು ವಿಶ್ವಗುರು ಆಗಲು, ‘ಹೀರೋ’ ಆಗಲು ಅವರಿಗೊಬ್ಬ ‘ವಿಲನ್’ ಬೇಕಾಗಿದ್ದಾನೆ. ಉತ್ತರ ಕೊರಿಯಾವನ್ನು ಖಳನಾಯಕನನ್ನಾಗಿ ಬಿಂಬಿಸಲು ಯತ್ನಿಸಿದರು, ನಂತರ ಇರಾಕ್ ಅನ್ನು ಬಿಂಬಿಸಲು ಪ್ರಯತ್ನಿಸಿದರು, ಈಗ ಚೀನಾ ಅವರಿಗೆ ಫೆವರೇಟ್ ಖಳನಾಯಕ ರಾಷ್ಟ್ರವಾಗಿದೆ.
ಬಹುಶಃ ಅಮೇರಿಕಾದ ಅಧ್ಯಕ್ಷೀಯ ಚುನಾವಣೆ ಮುಗಿಯುವವರೆಗೂ ಚೀನಾ ಖಳನಾಯಕ ಪಾತ್ರದಲ್ಲಿ ಮುಂದುವರೆಯುವ ಸಾಧ್ಯತೆಗಳು ದಟ್ಟವಾಗಿವೆ. ಈ ನಡುವೆ ಕರೋನಾ ಕಷ್ಟ ಶುರುವಾಗಿರುವುದು ಟ್ರಂಪ್ ಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಚುನಾವಣೆ ಸಂದರ್ಭವಾಗಿರುವುದರಿಂದ ‘ಏನನ್ನಾದರೂ ಮಾಡುತ್ತಿದ್ದೇನೆ’ ಎಂದು ಬಿಂಬಿಸಲು ಟ್ರಂಪ್ ‘ಕರೋನಾಸ್ತ್ರ’ ಬಳಸುತ್ತಿದ್ದಾರೆ. ಕರೋನಾ ಹರಡಲು ಚೀನಾ ಕಾರಣ ಎಂಬುದನ್ನು ಅಮೇರಿಕಾ ಮಾತ್ರ ಹೇಳುತ್ತಿಲ್ಲ. ಬೇರೆ ದೇಶಗಳು ಹೇಳಿವೆ. ವಿಶ್ವ ಆರೋಗ್ಯ ಸಂಸ್ಥೆಯ ವ್ಯವಸ್ಥಾಪಕ ಮಂಡಳಿ ಸಭೆಯಲ್ಲಿ ‘ಪ್ರಪಂಚಾದ್ಯಂತ ಕರೋನಾ ಹರಡುವಿಕೆಯಲ್ಲಿ ಚೀನಾ ಪಾತ್ರದ ಬಗ್ಗೆ ವಿರುದ್ಧ ತನಿಖೆ ಆಗಲೆಂದು 42 ರಾಷ್ಟ್ರಗಳು ಒತ್ತಾಯಿಸಿವೆ.
ಆದರೆ ಈ ಎಲ್ಲಾ ದೇಶಗಳು ಚೀನಾದ ಮೇಲೆ ದೂರುತ್ತಲೇ ತಮ್ಮ ಕೆಲಸದಲ್ಲಿ ನಿರತವಾಗಿವೆ. ಆದರೆ ಅಮೇರಿಕಾಕ್ಕೆ ದೇಶದೊಳಗೆ ವ್ಯಾಪಕವಾಗಿ ಹರಡುತ್ತಿರುವ ಕರೋನಾವನ್ನು ನಿಯಂತ್ರಿಸುವುದಕ್ಕಿಂತ ‘ಚೀನಾ ಕಾರಣ’ ಎಂದು ‘ಇನ್ನೊಬ್ಬರನ್ನು ಹೊಣೆಗಾರರನ್ನಾಗಿ’ ಮಾಡುವುದು ಮುಖ್ಯವಾಗಿದೆ. ಇದಕ್ಕೆ ಶ್ವೇತಭವನದಲ್ಲಿ ನಡೆಯುವ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಟಿಗಳೇ ಸಾಕ್ಷಿ. ಚೀನಾ ವಿರುದ್ಧ ಹೋರಾಡಲೊರಟ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಯನ್ನು ಖಳನಾಯಕನನ್ನಾಗಿ ಚಿತ್ರಿಸುತ್ತಿದ್ದಾರೆ. ಕಡೆಗೀಗ ವಿಶ್ವ ಸಂಸ್ಥೆಯ ಸಂಬಂಧವನ್ನೇ ಕಡಿದುಕೊಳ್ಳುವುದಾಗಿ ಘೋಷಿಸಿದ್ದಾರೆ.

ಈಗ ವಿಶ್ವ ಸಂಸ್ಥೆಯ ಜೊತೆಗೆ ಸಮಸ್ಯೆ ಆಯಿತು, ಸಂಬಂಧ ಕಡಿದುಕೊಂಡಿದ್ದಾರೆ. ನಾಳೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಜೊತೆ ಸಮಸ್ಯೆ ಉಂಟಾದರೆ? ಅದರಿಂದಲೂ ದೂರವಾಗುತ್ತಾರಾ? ಇನ್ನೊಂದು ದಿನ ಅಂತಾರಾಷ್ಟ್ರೀಯ ನ್ಯಾಯಾಲಯವೂ ಇವರಿಗೆ ನ್ಯಾಯ ದೊರಕಿಸಿಕೊಡುವುದಿಲ್ಲ ಎನಿಸಬಹುದು. ಆಗ ಅದರಿಂದಲೂ ವಿಮುಖವಾಗುತ್ತಾರಾ? ಹಿಂದೆ ಭಾರತದ ನಾಗರಿಕರಿಗೆ H1B ವೀಸಾ ನೀಡುವುದಿಲ್ಲ ಎಂದಿದ್ದರು, ಈಗ ಚೀನಾ ಪ್ರಜೆಗಳನ್ನು ದೇಶಕ್ಕೆ ಸೇರಿಸುವುದಿಲ್ಲ ಎನ್ನುತ್ತಿದ್ದಾರೆ. ನಾಳೆ ಮತ್ತೊಂದು ದೇಶದ ಸಹವಾಸ ಬೇಡ ಎನ್ನುತ್ತಾರೆ. ಇದಾ ‘ವಿಶ್ವಗುರು’ ಆಗುವ ರೀತಿ?
ಇದರಿಂದ ಡೊನಾಲ್ಡ್ ಟ್ರಂಪ್ ಅವರಿಗೆ ಮಾತ್ರ ನಷ್ಟವಾಗುವುದಿಲ್ಲ. ಟ್ರಂಪ್ ತಪ್ಪಿಗೆ ವಿದೇಶಿ ವಿನಿಮಯ, ಆಮದು ರಫ್ತುಗಳ ಅಸಮತೋಲನ, ವಿಜ್ಞಾನ, ತಂತ್ರಜ್ಞಾನಗಳ ವಿಷಯಗಳ ಕೊಡುಕೊಳ್ಳುವಿಕೆಗಳೆಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಅದನ್ನು ಭರಿಸಬೇಕಾದುದು ಡೊನಾಲ್ಡ್ ಟ್ರಂಪ್ ಅಲ್ಲ, ಅಮೇರಿಕಾ ಅರ್ಥಾತ್ ಅಮೇರಿಕಾದ ಜನ.
ದೊಡ್ಡಣ್ಣ ಆಗಲು ಸಣ್ಣತನದಿಂದ ಹೊರಟ ಡೊನಾಲ್ಡ್ ಟ್ರಂಪ್ ಮೊದಲು ಭಾರತ-ಪಾಕಿಸ್ತಾನದ ನಡುವಿನ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದರು. ಈಗ ಭಾರತ-ಚೀನಾ ಸಮಸ್ಯೆ ಬಗೆಹರಿಸಲು ಮಧ್ಯಸ್ಥಿಕೆ ವಹಿಸುತ್ತೇನೆ ಎನ್ನುತ್ತಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಜೊತೆ ಮಾತನಾಡಿದ್ದರಂತೆ. ಮೋದಿ ಚೀನಾ ನಡೆ ಬಗ್ಗೆ ತಮ್ಮ ಜೊತೆ ಅಸಮಾಧಾನ ತೋಡಿಕೊಂಡರು ಎಂದಿದ್ದಾರೆ ಟ್ರಂಪ್. ಮೋದಿ ನನ್ನ ಒಳ್ಳೆಯ ಫ್ರೆಂಡ್ ಎಂದಿದ್ದಾರೆ. ಟ್ರಂಪ್ ಗೆ ನಿಜಕ್ಕೂ ಸಮಸ್ಯೆ ಬಗೆಹರಿಸುವ ಮನಸ್ಸಿದ್ದರೆ ಇಬ್ಬರೂ ಪ್ರಧಾನಿಗಳ ಜೊತೆ ಮಾತನಾಡಬೇಕಿತ್ತು. ಮಾತನಾಡಿದ್ದನ್ನು ಬಹಿರಂಗಗೊಳಿಸಬಾರದಿತ್ತು. ಸಮಸ್ಯೆ ಇದ್ದ ಸಂದರ್ಭದಲ್ಲಿ ಯಾರೋ ಒಬ್ಬರನ್ನು ಸ್ನೇಹಿತ ಎಂದ ಬಣ್ಣಿಸಬಾರದಿತ್ತು. ಹಾಗೆ ಮಾಡದ ಟ್ರಂಪ್ ಹುಚ್ಚಾಟಗಳಿಗೆ ಏನನ್ನಬೇಕು?
ನಾಳೆ ಟ್ರಂಪ್ ಅಧಿಕಾರದಲ್ಲಿ ಇರಬಹುದು, ಇಲ್ಲದಿರಬಹುದು. ಇಂಥ ನಡವಳಿಕೆಗಳಿಂದ ಭಾರತ, ಚೀನಾ ಮತ್ತಿತರ ದೇಶಗಳು ಅಮೇರಿಕಾವನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಅಂತಿಮವಾಗಿ ಬದಲಾದ ಪರಿಸ್ಥಿತಿ, ದುಸ್ಥಿತಿಯನ್ನು ಜನ ಭರಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಅಮೇರಿಕಾ ಪಾಲಿಗೆ ಕರೋನಾಕ್ಕಿಂತ ಹುಚ್ಚಾಟದ, ಅತಿರೇಕದ, ಹುಂಭತನದ, ಅವಿವೇಕಿತನದ ನಾಯಕನಾಗಿರುವ ಡೊನಾಲ್ಡ್ ಟ್ರಂಪ್ ಹೆಚ್ಚು ಕ್ರೂರಿ.







