ಭಾರತದ ವಿಶಿಷ್ಟ ಗುರುತು ಚೀಟಿ ನೀಡಿಕೆ ಪ್ರಾಧಿಕಾರ (UIDAI)ಯು ಹೈದರಾಬಾದ್‌ನ ಮೂವರಿಗೆ ತಮ್ಮ ಪೌರತ್ವವನ್ನು ಸಾಬೀತು ಪಡಿಸುವಂತೆ ನೋಟಿಸ್ ಜಾರಿ ಮಾಡಿದೆ. ಹೈದರಾಬಾದ್‌ನ ಮೂವರು ಮುಸ್ಲಿಂ ವ್ಯಕ್ತಿಗಳಿಗೆ ನೋಟಿಸ್ ನೀಡಿ ತಾವು ಮೋಸದಿಂದ ಆಧಾರ್ ಕಾರ್ಡ್‌ನ್ನು ಪಡೆದುಕೊಂಡಿದ್ದೀರ. ಆ ಕಾರಣಕ್ಕಾಗಿ ತಮ್ಮ ಪೌರತ್ವವನ್ನು ಸಾಬೀತು ಪಡಿಸಿ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಆ ಮೂವರು ವ್ಯಕ್ತಿಗಳನ್ನು ಸ್ಥಳಿಯ UIDAI ಕಚೇರಿಗೆ ಬರುವಂತೆ ಸಮನ್ಸ್ ಜಾರಿ ಮಾಡಿ, ಮೂವರು ಸುಳ್ಳು ಮಾಹಿತಿ ಹಾಗೂ ಸುಳ್ಳು ದಾಖಲೆಗಳನ್ನು ನೀಡಿ ಆಧಾರ್ ಕಾರ್ಡ್‌ನ್ನು ಪಡೆದುಕೊಂಡಿದ್ದೀರೆಂದು ದೂರು ದಾಖಲಾಗಿರುವುದರಿಂದ ಈ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಲಾಗಿದೆ. ವಿಚಾರಣೆಗೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳೊಂದಿಗೆ ಹಾಜರುಪಡಿಸಬೇಕೆಂದು ಹೇಳಿದೆ. ಒಂದು ವೇಳೆ ಮೂಲ ದಾಖಲೆಗಳನ್ನು ಹಾಜರು ಪಡಿಸದಿದ್ದಲ್ಲಿ ಅಥವಾ ಆಧಾರ್ ವಿಚಾರಣಾಧಿಕಾರಿಯೆದುರು ಹಾಜರಾಗದಿದ್ದಲ್ಲಿ ಅವರ ಆಧಾರ್ ಸಂಖ್ಯೆಗಳನ್ನು deactivate ಮಾಡಲಾಗುವುದು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಆದರೆ, ಪೌರತ್ವವನ್ನು ಸಾಬೀತು ಪಡಿಸಲು ಯಾವ ದಾಖಲೆಗಳನ್ನು ನೀಡಬೇಕೆಂದು ನೋಟಿಸ್‌ನಲ್ಲಿ ತಿಳಿಸಲಾಗಿಲ್ಲ.
ಮೊದಲಿಗೆ ಫ್ರಬ್ರುವರಿ 20ರಂದು ವಿಚಾರಣೆಗೆ ವಿಚಾರಣಾಧಿಕಾರಿ ಅಮಿತಾ ಬಿಂದ್ರೋ ಎದುರು ಹಾಜರಾಗಲು ತಿಳಿಸಿದ್ದು, ನಂತರ ದಾಖಲೆಗಳನ್ನು ಸಂಗ್ರಹಿಸಲು ಕಷ್ಟವಾಗಬಹುದೆಂಬ ಕಾರಣಕ್ಕೆ ವಿಚಾರಣೆಯನ್ನು ಮೇ ತಿಂಗಳಿಗೆ ಮುಂದೂಡಲಾಗಿದೆ.
UIDAIಗೆ ಪೌರತ್ವವನ್ನು ಪ್ರಶ್ನಿಸುವ ಅಧಿಕಾರವಿದೆಯೇ?
2016ರ ಆಧಾರ್ ಕಾಯ್ದೆಯ ಪ್ರಕಾರ ಆಧಾರ್ ಕಾರ್ಡ್ ನೀಡಲು ಬೇಕಾಗಿರುವುದು ವಾಸ್ತವ್ಯ ಧೃಢೀಕರಣವೇ ಹೊರತು ಪೌರತ್ವವಲ್ಲ. ವಿದೇಶಿಗರನ್ನೂ ಸೇರಿಸಿ, ಭಾರತದಲ್ಲಿ ವಾಸವಿರುವ ಎಲ್ಲರೂ ಆಧಾರ್ ಕಾರ್ಡ್ ಪಡೆಯಲು ಅರ್ಹರು. ಆಧಾರ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವ ಮೊದಲು 182 ದಿನಗಳ ಕಾಲ ಅವರು ಭಾರತದಲ್ಲಿ ವಾಸವಿರಬೇಕಾಗುತ್ತದೆ. ಈ ನಿಮಯಗಳು ಆಧಾರ್ ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿವಾಗಿವೆ.
ಇನ್ನು ಒಂದು ವೇಳೆ ಯಾರಾದರೂ ಮೋಸದಿಂದ ಸುಳ್ಳು ಹೇಳಿ ಆಧಾರ್ ಕಾರ್ಡ್‌ನ್ನು ಪಡೆದುಕೊಂಡದ್ದು UIDAIಗೆ ತಿಳಿದು ಬಂದಲ್ಲಿ ಅಂಥಹವರ ಆಧಾರ್ ಸಂಖ್ಯೆಯನ್ನು ರದ್ದುಗೊಳಿಸಿ ವಾಸ್ತವ್ಯದ ಮೂಲ ದಾಖಲೆಗಳನ್ನು ಸಲ್ಲಿಸಲು ಹೇಳಬೇಕೇ ವಿನಃ, ಪೌರತ್ವದ ದಾಖಲೆಗಳನ್ನು ಕೇಳುವ ಹಾಗಿಲ್ಲ.
ಈ ಕುರಿತು ಪ್ರತಿಕ್ರಿಯೆ ನೀಡಿರುವಂತಹ UIDAI ನೋಟಿಸ್ ನೀಡಿರುವುದು UIDAIಯ ಗುಣಮಟ್ಟ ಉತ್ತಮ ಪಡಿಸುವ ಕಾರ್ಯ ಯೋಜನೆಗಳಲ್ಲಿ ಒಂದಾಗಿದೆ. ಇದಕ್ಕೂ ಪೌರತ್ವವನ್ನು ಸಾಬೀತು ಪಡಿಸುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತೇಪೆ ಹಚ್ಚುವ ಕಾರ್ಯ ಮಾಡಿದೆ. ಇನ್ನು ಆಧಾರ್ ಕಾರ್ಡ್ ಪೌರತ್ವವನ್ನು ಧೃಢೀಕರಿಸುವ ಆಧಾರವಲ್ಲ ಎಂದು UIDAI ಸ್ಪಷ್ಟಪಡಿಸಿದೆ.
ಆದರೂ, ಸಿಎಎ ಹಾಗೂ ಎನ್‌ಆರ್‌ಸಿಯ ವಿರುದ್ದ ದೇಶದಾದ್ಯಂತ ಕಾವೇರಿದ ಸಂದರ್ಭದಲ್ಲಿ UIDAI ನೀಡಿರುವ ನೋಟಿಸ್ ಸಾಕಷ್ಟು ಸದ್ದು ಮಾಡುತ್ತಿದೆ. ತನ್ನ ಅಧಿಕಾರದ ವ್ಯಾಪ್ತಿಗೆ ಬರದಿದ್ದರೂ, ಪೌರತ್ವವನ್ನು ಸಾಬೀತು ಪಡಿಸಲು ನೋಟಿಸ್ ನೀಡಿರುವುದು ನಿಜಕ್ಕೂ ಆಶ್ಚರ್ಯವೇ ಸರಿ.
ಕೃಪೆ: ಸ್ಕ್ರಾಲ್.ಇನ್