ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ಅನುಕೂಲ ಆಗುವಂತೆ ಸುಪ್ರೀಂಕೋರ್ಟ್ ಇಬ್ಬರು ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದೆ.
ಅತ್ಯಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ತ್ವರಿತವಾಗಿ ಶಿಕ್ಷೆ ಆಗುತ್ತಿಲ್ಲ ಎಂಬ ಆಕ್ರೋಶಗಳು ಪದೇ ಪದೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ನಿರ್ಧಾರ ತೆಗೆದುಕೊಂಡಿದೆ.
ಸುಪ್ರೀಂಕೋರ್ಟಿನ ಇಬ್ಬರು ನ್ಯಾಯಾಧೀಶರಾದ ಆರ್.ಸುಭಾಷ್ ರೆಡ್ಡಿ ಮತ್ತು ನ್ಯಾ.ಎಂ.ಆರ್.ಶಾ ಅವರನ್ನು ಒಳಗೊಂಡ ಈ ಸಮಿತಿಯನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ ಅವರು ರಚಿಸಿದ್ದಾರೆ.
ಇತ್ತೀಚೆಗೆ ದೇಶವನ್ನು ಬೆಚ್ಚಿ ಬೀಳಿಸಿದ ಹೈದ್ರಾಬಾದ್ ನಲ್ಲಿ ಪಶುವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ, ಉನ್ನಾವೋ ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ನಿರ್ಧಾರಕ್ಕೆ ಬಂದಿದೆ.
ಈ ಸಮಿತಿಯು ಹೈಕೋರ್ಟ್ ಮೂಲಕ ಪ್ರಕರಣಗಳ ಮೇಲ್ವಿಚಾರಣೆ ಮಾಡಲಿದ್ದು, ನಿಗದಿತ ಸಮಯದಲ್ಲಿ ಇತ್ಯರ್ಥ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ.