ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ (IPS Annamalai) ಬಿಜೆಪಿ ಸೇರಿದ ಬಳಿಕ ತನ್ನ ನಿಲುವಿನಲ್ಲಿಯೂ ಅದನ್ನು ಪ್ರದರ್ಶಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿದ್ದಾಗ ಟಿಪ್ಪು ಸುಲ್ತಾನನನ್ನು ಹೊಗಳಿ ಭಾಷಣ ಮಾಡಿದ್ದ ಅಣ್ಣಾಮಲೈ ಇದೀಗ ಅಕ್ಬರ್ ಹೆಸರು ಉಲ್ಲೇಖಿಸಲೂ ಹಿಂಜರಿದಿದ್ದಾರೆ. ಇದು, ಇತಿಹಾಸವನ್ನು ಇತಿಹಾಸವನ್ನಾಗಿ ನೋಡಬೇಕು ಎಂದು ಭಾಷಣ ಮಾಡಿದ್ದ ಅವರದ್ದೇ ಮಾತುಗಳಿಗೆ ವಿರುದ್ಧವಾಗಿದೆ ಎಂದು ನೆಟ್ಟಿಗರು ಅಣ್ಣಾಮಲೈ ಅವರನ್ನು ಕಾಲೆಳೆಯುತ್ತಿದ್ದಾರೆ.
ಘಟನೆ ವಿವರ:
ತಮಿಳುನಾಡಿನಲ್ಲಿ ಶೂನ್ಯ ಸ್ಥಾನ ಇರುವ ಬಿಜೆಪಿಗೆ ಅಲ್ಲಿ ಕಮಲ ಅರಳಿಸಬೇಕೆಂಬ ಆಕಾಂಕ್ಷೆಯೊಂದಿಗೆ ಅಣ್ಣಾಮಲೈ, ವೀರಪ್ಪನ್ ಪುತ್ರಿ ವಿದ್ಯಾರಾಣಿ ಮುಂತಾದವರನ್ನು ಹೊಸದಾಗಿ ಬಿಜೆಪಿಗೆ ಸೇರಿಸಿಕೊಂಡಿತ್ತು. ಅಣ್ಣಾಮಲೈ ತಮಿಳುನಾಡಿನಲ್ಲಿ ಬಿಜೆಪಿಯನ್ನು ಕಟ್ಟುವುದು ತನ್ನ ಕರ್ತವ್ಯ ಎಂದು ಹೇಳಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತಮಿಳುನಾಡು ಸಕ್ರಿಯ ರಾಜಕಾರಣಕ್ಕೆ ಅಣ್ಣಾಮಲೈ ಪ್ರವೇಶವನ್ನು ಅಲ್ಲಿನ ಸುದ್ದಿಗಾರರು ʼನಾಮ್ ತಮಿಳರ್ ಕಚ್ಚಿʼ ಮುಖ್ಯಸ್ಥ ಸೀಮನ್ ಅವರನ್ನು ಕೇಳಿದ್ದಾರೆ. ಅಣ್ಣಾಮಲೈ ಅವರನ್ನು ಗಂಭೀರವಾಗಿ ಪರಿಗಣಿಸದ ಸೀಮನ್, ಅಣ್ಣಾಮಲೈರನ್ನು ಆಸ್ಥಾನ ವಿಭೂಷಕ ಎಂದು ವಿಡಂಬಣಾತ್ಮಕವಾಗಿ ಉತ್ತರಿಸಿದ್ದಾರೆ. ತೆನಾಲಿ ರಾಮ, ಬೀರಬಲ್ ರೀತಿಯ ಓರ್ವ ವಿಧೂಷಕ ಅಷ್ಟೇ, ಅವರನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಉತ್ತರಿಸಿದ್ದರು.
ಅಣ್ಣಾಮಲೈರ ಅಸಲು ರಾಜಕಾರಣಿ ಮುಖ ಅನಾವರಣ ಆಗುವುದು ಇಲ್ಲಿ. ಸೀಮನ್ ಅವರ ವ್ಯಂಗ್ಯಕ್ಕೆ ಉತ್ತರಿಸುವ ಭರದಲ್ಲಿ ಅಣ್ಣಾಮಲೈ ಎಡವಟ್ಟು ಮಾಡಿಕೊಂಡಿದ್ದಾರೆ. ಸೀಮನ್ ಮಾತಿಗೆ ಟ್ವೀಟ್ ಮೂಲಕ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಅಣ್ಣಾಮಲೈ,”ವಿಕಟಕವಿ ತೆನಾಲಿ ರಾಮನ್ ಓರ್ವ ತತ್ವಜ್ಞಾನಿ, ಶ್ರೇಷ್ಟ ಕೃಷ್ಣದೇವರಾಯನ ಸಲಹೆಗಾರ, ಅವನ ಬುದ್ಧಿ, ಕುಶಾಗ್ರಮತಿ ಮತ್ತು ಜ್ಞಾನಕ್ಕೆ ಯಾರೂ ಸಾಟಿಯಿಲ್ಲ. ಹಾಗೆಯೇ ಬೀರಬಲ್ ಕೂಡಾ ಓರ್ವ ಶ್ರೇಷ್ಟ ಅರಸನ ಶ್ರೇಷ್ಟ ಸಲಹೆಗಾರ. ವಿಧೂಷಕರು ಅವರನ್ನು ವಿಧೂಷಕರನ್ನಾಗಿ ನೋಡುವುದನ್ನು ಆಯ್ಕೆ ಮಾಡುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.

ಅಣ್ಣಾಮಲೈ ತಗಲಾಕಿಕೊಂಡದ್ದು ಇಲ್ಲಿ. ಬೀರಬಲ್ ಅಕ್ಬರ್ ಆಸ್ಥಾನದಲ್ಲಿದ್ದ ವಿಧೂಷಕ, ಮಂತ್ರಿ. ಹೆಸರು ಹೇಳದೆಯೇ ಅಕ್ಬರನನ್ನು ಶ್ರೇಷ್ಟ ಅರಸ ಎಂದು ಅಣ್ಣಾಮಲೈ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಕೃಷ್ಣದೇವರಾಯನ ಹೆಸರು ಉಲ್ಲೇಖಿಸಿರುವ ಅಣ್ಣಾಮಲೈ, ಅಕ್ಬರನ ಹೆಸರು ಉಲ್ಲೇಖಿಸಲು ಹಿಂಜರಿದಿದ್ದೇಕೆ ಎಂದು ಟ್ವಿಟರ್ ಬಳಕೆದಾರರು ಅಣ್ಣಾಮಲೈರನ್ನು ಪ್ರಶ್ನಿಸಿದ್ದಾರೆ.
Vikatakavi Tenali Raman can be seen as the philosopher – advisor to the great Krishnadevaraya. His wit, acumen and knowledge are unparalleled.
Birbal @ Mahesh Das was the greatest advisor to one of the greatest kings.
Jokers choose to see them as jokers. #just_see_man.
— K.Annamalai (@annamalai_k) August 28, 2020
ಒಟ್ಟಿನಲ್ಲಿ, ಸರ್ಕಾರಿ ಹುದ್ದೆಯಲ್ಲಿದ್ದಾಗ ಇತಿಹಾಸ ಪುರುಷರನ್ನು ಧರ್ಮಾತೀತವಾಗಿ ಕಾಣಲು ಸಾಧ್ಯವಾಗುತ್ತಿದ್ದ ಅಣ್ಣಾಮಲೈಗೆ ಬಿಜೆಪಿ ಸೇರಿದ ಬಳಿಕ, ಧರ್ಮದ ಕನ್ನಡಕವಿಲ್ಲದೆ ಇತಿಹಾಸವನ್ನು ನೋಡಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಇನ್ನೇನು ಅಣ್ಣಾಮಲೈ ವರ್ತಮಾನವನ್ನು ನೋಡುವ ದೃಷ್ಟಿಯಿಂದ ಅದು ಇನ್ನಷ್ಟು ಸ್ಪಷ್ಟವಾಗಲಿದೆ.













