ಗದುಗಿನ ಸಾಹಸಪ್ರಿಯರಿಗೊಂದು ಖುಷಿ ಸುದ್ದಿ. ಇನ್ನು ಮೇಲೆ ಜಿಪ್ ಲೈನ್ ಸಾಹಸ ಕ್ರೀಡೆ ಗದುಗಿನ ಹತ್ತಿರವಿರುವ ಬಿಂಕದಕಟ್ಟಿ ಗುಡ್ಡದಲ್ಲಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಬಿಖದಕಟ್ಟಿಯಲ್ಲಿರುವ ಸಾಲು ಮರದ ತಿಮ್ಮಕ್ಕ ಉದ್ಯಾನದ ತುಸು ದೂರದಲ್ಲೆ ಇರುವ ಗುಡ್ಡದ ತುದಿಯಿಂದ ಪಕ್ಕದ ಗುಡ್ಡದ ವರೆಗೂ ಚಾಚಿಕೊಂಡಿರುವ ಈ ಹೊಸ ಜಿಪ್ ಲೈನ್ ಉತ್ತರ ಕರ್ನಾಟಕದಲ್ಲಿ ಇದು ಅತಿ ಉದ್ದದ ಜಿಪ್ ಲೈನ್ ಎಂಬ ಕೀರ್ತಿಗೂ ಪಾತ್ರವಾಗಲಿದೆ.

ಏನಿದು ಜಿಪ್ ಲೈನ್?
ತಂತಿಯ ಮೂಲಕ ೊಂದು ಗುಡ್ಡದಿಂದ ಇನ್ನೊಂದು ಕೆಲವೇ ನಿಮಿಷಗಳಲ್ಲಿ ಪಯಣಿಸುವ ರೋಮಾಂಚಕ ಕ್ರೀಡೆಯೇ ಈ ಜಿಪ್ ಲೈನ್. ಭಾರತದ ಈಶಾನ್ಯ ರಾಜ್ಯಗಳಲ್ಲಿ ಜಿಪ್ ಲೈನ್ ಮೂಲಕ ಸರಕು ಸಾಮಾನುಗಳನ್ನು ಸಾಗಿಸಲಾಗುತ್ತಿತ್ತು. ನಂತರದಲ್ಲಿ ಇದೇ ಸಾಹಸ ಕ್ರೀಡೆಯಾಯಿತು.
ಈ ಕ್ರೀಡೆಗಾಗಿ ಬಿಂಕದಕಟ್ಟಿಯ ಗುಡ್ಡದಲ್ಲಿ 370 ಮೀಟರ್ ಉದ್ದದ ತಂತಿ ಅಳವಡಿಸಲಾಗಿದ್ದು ಇದು 40 ಅಡಿ ಎತ್ತರದಲ್ಲಿದೆ. ಈ ಜಿಪ್ ಲೈನ್ ಗಾಗಿ 2 ಸಾವಿರ ಕೆಜಿ ಭಾರ ಹೊರುವಷ್ಟು ಸಮರ್ಥವಾಗಿದೆ. ಜಿಪ್ ಲೈನ್ ರೈಡ್ ಮಾಡುವವರಿಗೆ ಸುರಕ್ಷತೆ ಕ್ರಮವಾಗಿ ಹೆಲ್ಮೆಟ್ ಹಾಗೂ ಸೊಂಟಕ್ಕೆ ಬೆಲ್ಟ್ ನೀಡಲಾಗುತ್ತದೆ. ಈ ಸೊಂಟದ ಪಟ್ಟಿಯನ್ನು ಕಟ್ಟಿಕೊಂಡು ಜನರು ಹಕ್ಕಿಯಂತೆ ಹಾರುವ ಅನುಭವ ಪಡೆಯಬಹುದು.

ಇದಕ್ಕಾಗಿ ನಾಲ್ಕು ಜನರನ್ನು ನೇಮಿಸಿದ್ದು ಅವರಿಗೆ ಮೈಸೂರಿನಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಒಟ್ಟು 32 ಲಕ್ಷ ಅನುದಾನದಲ್ಲಿ ಜಿಪ್ ಲೈನ್ ನಿರ್ಮಿಸಲಾಗಿದೆ.
ಈ ಗುಡ್ಡ ಸುತ್ತಮುತ್ತಲ ಊರುಗಳ ಜನರಿಗೆ ಹೇಳಿ ಮಾಡಿಸಿದಂತ ವಾರಾಂತ್ಯದ ತಾಣವಾಗಿದೆ. ಇಲ್ಲಿ ಸುಂದರ ಗುಡ್ಡ, ಸಾಲು ಮರದ ತಿಮ್ಮಕ್ಕ ಉದ್ಯಾನವನ. ಈ ಉದ್ಯಾನವನದಲ್ಲಿ ಮಕ್ಕಳ ಆಟಕ್ಕೆ ಪ್ರಶಸ್ತವಾಗಿದೆ.
ಗದಗ್ ಜಿಲ್ಲೆಯ ಅರಣ್ಯ ಸಂರಕ್ಷಾಧಿಕಾರಿಗಳಾದ ಸೂರ್ಯಸೇನದ ಪ್ರತಿಧ್ವನಿ ತಂಡದ ಜೊತೆಗೆ ಮಾತನಾಡಿ, “ಉತ್ತರ ಕರ್ನಾಟಕದ ಜನರಿಗೆ ಸಾಹಸ ಕ್ರೀಡೆಯನ್ನು ಪರಿಚಯಿಸುವ ಉದ್ದೇಶದಿಂದ ಜಿಪ್ ಲೈನ್ ನಿರ್ಮಿಸಲಾಗಿದೆ. ತಲಾ ಒಬ್ಬರಿಗೆ ರೂ. 100 ಹಾಗೂ ಫ್ಯಾಮಿಲಿ ಬಂದರೆ ರೂ.100 ಅನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಪರಿಸರದ ಅನನ್ಯ ಅನುಭವ ಹಾಗೂ ಕಾಳಜಿಯ ಬಗ್ಗೆ ತಿಳಿಸಿಕೊಡುವುದು ನಮ್ಮ ಉದ್ದೇಶವಾಗಿದೆ” ಎಂದರು.

ಸದ್ಯ ಕೋವಿಡಾತಂಕ ವಿರುವುದರಿಂದ ಜಿಪ್ ಲೈನ್ ಉದ್ಘಾಟನೆಯಾಗಿಲ್ಲ. ಆದಷ್ಟು ಬೇಗ ಜನಜೀವನ ಸಾಮಾನ್ಯ ವಾಗುತ್ತಲೇ ಜನರಿಗೆ ಈ ಸೌಲಭ್ಯ ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.