ಶೂನ್ಯ ನೆರಳು ದಿನಕ್ಕೆ ಕರ್ನಾಟಕ ರಾಜಧಾನಿ ಬೆಂಗಳೂರು ಶುಕ್ರವಾರ (ಆಗಸ್ಟ್ 18) ಸಾಕ್ಷಿಯಾಗಲಿದೆ. ಸಾಮಾನ್ಯವಾಗಿ ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ ಇರುವ ಪ್ರದೇಶಗಳ ನಡುವೆ ಇದು ಸಂಭವಿಸುತ್ತದೆ.
ಈ ದಿನ ನಿಮ್ಮ ನೆರಳೇ ನಿಮಗೆ ಕಾಣದಂತಾಗುತ್ತದೆ. ಈ ವರ್ಷ ಏಪ್ರಿಲ್ 25 ರಂದು ಕೂಡ ಬೆಂಗಳೂರಿನಲ್ಲಿ ಶೂನ್ಯ ನೆರಳಿನ ದಿನ ಉಂಟಾಗಿತ್ತು.
ಏನಿದು ಶೂನ್ಯ ನೆರಳಿನ ದಿನ?
ಶೂನ್ಯ ನೆರಳಿನ ದಿನವು +23.5 ಮತ್ತು -23.5 ಡಿಗ್ರಿ ಅಕ್ಷಾಂಶದ ನಡುವಿನ ಸ್ಥಳಗಳಲ್ಲಿ ವರ್ಷಕ್ಕೆ ಎರಡು ಬಾರಿ ಸಂಭವಿಸುವ ಖಗೋಳ ವಿದ್ಯಮಾನವಾಗಿದೆ. ಈ ದಿನ ನಮ್ಮ ನೆರಳೇ ನಮಗೆ ಕಾಣಿಸುವುದಿಲ್ಲ. ಈ ದಿನ ಸೂರ್ಯ ನಮ್ಮ ತಲೆಯ ಮೇಲೆ ಇರುತ್ತಾನೆ. ಹೀಗಾಗಿ, ನಮ್ಮ ನೆರಳು ನಿರ್ದಿಷ್ಟ ಸಮಯದಲ್ಲಿ ನಮಗೆ ಕಾಣಿಸುವುದಿಲ್ಲ.
ಸೂರ್ಯನು ಆಕಾಶದಲ್ಲಿ ತನ್ನ ಅತ್ಯಧಿಕ ಎತ್ತರಕ್ಕೆ ತಲುಪುತ್ತಾನೆ. ಈ ವೇಳೆ ಯಾವುದೇ ವಸ್ತು ಮತ್ತು ವ್ಯಕ್ತಿಯ ತಲೆಯ ಮೇಲೆ ನೇರವಾಗಿ ಸೂರ್ಯನ ಬೆಳಕು ಬೀಳುವುದರಿಂದ ನೆರಳು ಗೋಚರಿಸುವುದಿಲ್ಲ.
ಶೂನ್ಯ ನೆರಳನ್ನು ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು?
ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯಾಹ್ನ ಶೂನ್ಯ ನೆರಳಿನ ದಿನ ಸಂಭವಿಸಲಿದೆ ಎಂದು ಭಾರತೀಯ ಭೌತಶಾಸ್ತ್ರ ಸಂಸ್ಥೆ ಮಾಹಿತಿ ನೀಡಿದೆ. ಬೆಂಗಳೂರಿನ ವಿಜ್ಞಾನ, ಖಗೋಳ ಕೇಂದ್ರಗಳಲ್ಲಿ ಈ ರೀತಿಯ ವಿದ್ಯಮಾನ ನೋಡಲು ವಿಶೇಷ ವ್ಯವಸ್ಥೆ ಮಾಡಲಾಗಿರುತ್ತದೆ.
ಈ ಸುದ್ದಿ ಓದಿದ್ದೀರಾ? ರಾಜ್ಯದ ಹಲವು ಕಡೆಗಳಲ್ಲಿ ಲೋಕಾಯುಕ್ತ ದಾಳಿ, ಅಧಿಕಾರಿಗಳಿಗೆ ನಡುಕ..!
ಆದರೆ ನೀವು ಸಹ ನಿಗದಿತ ಸಮಯದಂದು ಮನೆಯ ಹೊರಕ್ಕೆ ಬಂದು ಬಿಸಿಲಲ್ಲಿ ನಿಂತು ನೆರಳು ಕಾಣದ ಅಚ್ಚರಿಯನ್ನು ಪರಿಶೀಲಿಸಬಹುದು. ಯಾವುದಾದರೂ ವಸ್ತುವನ್ನು ಇಟ್ಟು ಅದರ ನೆರಳು ಕಾಣಿಸುತ್ತದೆಯೇ ಎಂದು ಪರಿಶೀಲಿಸಬಹುದು.
ಈ ಹಿಂದೆ ಹೈದರಾಬಾದ್, ಮುಂಬೈ ಮತ್ತು ಭುವನೇಶ್ವರದಂತಹ ನಗರಗಳು ಶೂನ್ಯ ನೆರಳು ದಿನಕ್ಕೆ ಸಾಕ್ಷಿಯಾಗಿದ್ದವು. ಇತ್ತೀಚೆಗೆ ಅಂದರೆ ಆಗಸ್ಟ್ 4ರಂದು ಶೂನ್ಯ ನೆರಳಿನ ದಿನಕ್ಕೆ ಹೈದರಾಬಾದ್ ಸಾಕ್ಷಿಯಾಗಿತ್ತು.