ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾ ಬೆನ್ನಲ್ಲೇ ಜನಪ್ರತಿನಿಧಿಗಳ ನ್ಯಾಯಾಲಯದ ಲೋಕಾಯುಕ್ತ ಪೊಲೀಸ್ರ ತನಿಖೆಗೆ ಸೂಚನೆ ಕೊಟ್ಟಿತ್ತು.ಈ ವಿಚಾರವಾಗಿ ಮಾತನಾಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಮುಡಾ ಪ್ರಕರಣದಲ್ಲಿ ಹೈಕೋರ್ಟ್ ಆದೇಶವನ್ನು ಜಮೀರ್ ಆಹ್ಮದ್ ಪೊಲಿಟಿಕಲ್ ಆದೇಶ ಎಂದಿರುವ ವಿಚಾರಕ್ಕೆ ಆಕ್ರೋಶ ವ್ಯಕ್ತವಾಗಿದೆ. ಮಂಡ್ಯದ ಮದ್ದೂರಿನಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖುಬಾ ಮಾತನಾಡಿ, ಜಮೀರ್ ಅಹ್ಮದ್‌ಗೆ ಬುದ್ದಿ ಇಲ್ಲ, ಕೋರ್ಟ್‌ನಾ ಪ್ರಶ್ನೆ ಮಾಡ್ತಾರಾ? ಕಾನೂನಿನ ಅರಿವಿಲ್ಲ, ಕೋರ್ಟ್ ಮೇಲೆ ನಂಬಿಕೆ ಇಲ್ಲ. ಆಗಾದ್ರೆ ಈ ದೇಶದಲ್ಲಿ ಬದುಕೋದಕ್ಕೆ ಅರ್ಹನಿಲ್ಲ ಎಂದಿದ್ದಾರೆ.
ಉಡುಪಿಯಲ್ಲಿ ಟಿ.ಜೆ.ಅಬ್ರಹಾಂ ಮಾತನಾಡಿ, ಜಮೀರ್ ನಾಲಿಗೆ ಹರಿಯ ಬಿಟ್ಟಿದ್ದಾರೆ. ಟ್ರಾನ್ಸ್‌ಪೋರ್ಟ್ ಸಿಬ್ಬಂದಿ ಹತ್ರ ಮಾತನಾಡಿದ ಹಾಗೆ ಮಾತನಾಡಿದ್ದಾರೆ. ಹೈಕೋರ್ಟ್ ತೀರ್ಪು ಬಗ್ಗೆ ಮಾತನಾಡುವುದು ಅಂದರೆ ಹುಡುಗಾಟನಾ? ಎಂದು ಪ್ರಶ್ನಿಸಿದ್ದಾರೆ. ರಾಜಕಾರಣದಲ್ಲಿ ಭಾಷಣ ಬಿಗಿದ ಹಾಗೆ ಮಾತನಾಡಿದರೆ ಆಗುತ್ತಾ..? ನಾಲಿಗೆ ಬಿಗಿಯಿಲ್ಲದೆ ಮಾತನಾಡಿದ್ದು ಸರಿಯಲ್ಲ. ಪೊಲಿಟಿಕಲ್ ಆದೇಶ ಎಂದು ಹೇಳಿದ್ದಾರೆ. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇನೆ ಎಂದಿದ್ದಾರೆ.
ಜಮೀರ್ ಅಹಮದ್ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದು, ನಾನು ನಿನ್ನೆ ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ್ದೇನೆ. ಆಗ ಬಿಜೆಪಿಯವ್ರು ಪೊಲಿಟಿಕಲ್ ಬೆನಿಫಿಟ್ ಪಡೆಯುತ್ತಿದ್ದಾರೆ ಅಂತ ಹೇಳಿದ್ದೆ. ಆದರೆ ಪೊಲಿಟಿಕಲ್ ಜಡ್ಜ್‌ಮೆಂಟ್ ಅಂತ ವರದಿಯಾಗಿದೆ. ತೀರ್ಪನ್ನ ಪೊಲಿಟಿಕಲ್ ಮಾಡ್ತಿದ್ದಾರೆ ಅನ್ನೋ ಅರ್ಥದಲ್ಲಿ ಮಾತನಾಡಿದ್ದೇನೆ. ಬಾಯ್ತಪ್ಪಿನಿಂದ ನಾನು ಮಾತನಾಡಿದ್ರೆ ಕ್ಷಮೆಯಾಚಿಸುತ್ತೇನೆ. ನನಗೆ ನ್ಯಾಯಾಲಯದ ಬಗ್ಗೆ ಗೌರವ ಇದೆ. ಕಂಟೆಮ್ಟ್ ಆಫ್ ಕೋರ್ಟ್ ಆದ್ರೆ ಆಮೇಲೆ ನೋಡೋಣ. ಪ್ರಾಸಿಕ್ಯೂಷನ್ ಕೊಡಬೇಡಿ ಅಂತ ಹೇಳಿದ್ವಿ, ಅದನ್ನ ಕೋರ್ಟ್ ರದ್ದು ಮಾಡಿದೆ, ಎಂದು ತುರ್ತು ಸುದ್ದಿಗೋಷ್ಟಿ ಮೂಲಕ ಸ್ಪಷ್ಟನೆ ನೀಡಿದ್ದಾರೆ.