ಶಿವಮೊಗ್ಗ: ಮಂಡ್ಯದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಸಿದ್ದರಾಮಯ್ಯ ಕುರಿತು ನೀಡಿರುವ ಹೇಳಿಕೆ ಕಾಂಗ್ರೆಸ್ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯಾದ್ಯಂತ ಯುವ ಕಾಂಗ್ರೆಸ್ ಪ್ರತಿಭನೆ ನಡೆಸಿ ಅಶ್ವತ್ಥ ನಾರಾಯಣ್ ಹೇಳಿಕೆಯನ್ನು ಖಂಡಿಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಟಿಪ್ಪು ಹೊಡೆದಂತೆ ಹೊಡೆಯಬೇಕು ಎಂಬ ಸಚಿವ ಅಶ್ವತ್ಥ ನಾರಾಯಣ್ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ.
ಇಂದು ಶಿವಮೊಗ್ಗ ಶಿವಪ್ಪ ನಾಯಕ ವೃತ್ತದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿ, ಅಶ್ವತ್ಥ ನಾರಾಯಣ್ ಪ್ರತಿಕೃತಿ ದಹನ ಮಾಡಿದರು.
ಈ ಸಂದರ್ಭ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ.ಗಿರೀಶ್ ಮಾತನಾಡಿ, ರಾಜ್ಯದ ಆಶಾಕಿರಣ ಹಿಂದುಳಿದ ವರ್ಗಗಳ ಹರಿಕಾರ ಇಡೀ ದೇಶವೇ ತಿರುಗಿ ನೋಡುವಂತಹ ಆಡಳಿತ ನೀಡಿದ ಕಾಂಗ್ರೆಸ್ ಮುಖಂಡ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಹೇಳಿಕೆ ಖಂಡನೀಯ. ಈ ಕಾರಣಕ್ಕಾಗಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಆಪರೇಷನ್ ಕಮಲದ ಮೂಲಕ ಅನ್ಯ ಪಕ್ಷದ ಶಾಸಕರನ್ನು ಬಾಂಬೆಗೆ ಕರೆದೊಯ್ದ ನೀಚ ಸಂಸ್ಕೃತಿ, ಕೊಳಕು ಮನಸ್ಥಿತಿಯ ಬಿಜೆಪಿ ನಾಯಕರು ನಾಲಗೆ ಹರಿಬಿಟ್ಟಿದ್ದಾರೆ. ಮಹಾತ್ಮ ಗಾಂಧೀಜಿ ಕೊಂದಂತಹ, ಉಗ್ರರನ್ನು ಆರಾಧಿಸುವಂಥ ನೀಚ ಪಕ್ಷ ಬಿಜೆಪಿ ಎಂದು ಕಿಡಿಕಾರಿದರು.
ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಪ್ರಚೋದನಕಾರಿ ಹೇಳಿಕೆ ಖಂಡಿಸಿ ಇವತ್ತು ಪ್ರತಿಭಟನೆ ನಡೆಸಿದ್ದೇವೆ. ಅವಿವೇಕಿ ಅಶ್ವತ್ಥ ನಾರಾಯಣ್ ಪ್ರತಿಕೃತಿ ದಹನ ಮಾಡಿ ಅವರಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡುತ್ತಿದ್ದೇವೆ. ಈ ಮೂಲಕ ಸರ್ಕಾರಕ್ಕೆ ಸಂದೇಶ ಕಳಿಸುತ್ತಿದ್ದೇವೆ. ಏಕೆಂದರೆ ಇವರ ಗಂಡಸ್ತನದ ಮಾತುಗಳು, ದಮ್ಮಿದ್ರೆ, ತಾಕತ್ತಿದ್ದರೆ ಎಂಬ ಹೇಳಿಕೆಗಳು ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಕಾಪಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ನಿದರ್ಶನ ಆಗಿವೆ. ನಿಜವಾಗಿಯೂ ಧಮ್ಮಿದ್ರೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಬೇಕು ಎಂದು ಅಗ್ರಹ ಪಡಿಸುತ್ತಿದ್ದೇವೆ ಎಂದರು.
ಸಚಿವ ಸಂಪುಟದಿಂದ ವಜಾಗೊಳಿಸಿ
ಅಶ್ವತ್ ನಾರಾಯಣ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಅವರ ವಿರುದ್ಧ ಹಲ್ಲೆ ಆರೋಪದ ಮೇಲೆ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯಪಾಲರಲ್ಲಿ ಯುವ ಕಾಂಗ್ರೆಸ್ ಮನವಿ ಮಾಡುತ್ತಿದೆ. ಇಲ್ಲವಾದರೆ ಅಶ್ವತ್ಥ ನಾರಾಯಣ್ ಭಾಗವಹಿಸುವ ಸಭೆಗಳಲ್ಲಿ ಎಲ್ಲಾ ಕಡೆ ಕಪ್ಪುಮಸಿ ಬಳಿಯುವ ಅಭಿಯಾನಕ್ಕೆ ನಾವು ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.