ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ದಿನಕ್ಕೊಂದು ರಗಳೆ ಶುರುವಾಗುತ್ತಿದೆ. ನವಜೋತ್ ಸಿಂಗ್ ಸಿಧು ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್‌ನಿಂದ ಉಂಟಾದ ಪಂಜಾಬ್ ಬಿಕ್ಕಟ್ಟು ನಡುವೆ ಈಗ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಸ್ವಪಕ್ಷದ ವಿರುದ್ಧ ತಿರುಗಿಬಿದ್ದಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಬಲ್ ಮನೆ ಮೇಲೆ ಯುವ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
ಪಂಜಾಬ್‌ನಲ್ಲಿನ ಸದ್ಯದ ರಾಜಕೀಯ ಬೆಳವಣಿಗೆ ಬಳಿಕ ಈಗ ‘ಜಿ-23’ ಬಂಡಾಯ ಬಣದ ಕಪಿಲ್ ಸಿಬಲ್ ಸರದಿ. ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿರುವ ಹಿರಿಯ ನಾಯಕ ಕಪಿಲ್ ಸಿಬಲ್, ಹೈಕಮಾಂಡ್ ಬಗ್ಗೆ ವಾಗ್ದಾಳಿ ನಡೆಸಿದ್ದರು. ‘ಕಾಂಗ್ರೆಸ್ಸಿನಲ್ಲಿ ಚುನಾವಣೆಯಿಂದ ಆಯ್ಕೆಯಾದ ಅಧ್ಯಕ್ಷರೇ ಇಲ್ಲ,’ ಎಂದು ಅವರು ಆಕ್ರೋಶ ಹೊರಹಾಕಿದ್ರು. ಈ ಮೂಲಕ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು. ಕಪಿಲ್ ಸಿಬಲ್ ಅವರ ಈ ನಡೆ ಯುವ ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಕಾಂಗ್ರೆಸ್ಸಿನಲ್ಲಿ ಚುನಾವಣೆ ಮೂಲಕ ಆಯ್ಕೆಯಾದ ಅಧ್ಯಕ್ಷರೇ ಇಲ್ಲ. ಬಿಕ್ಕಟ್ಟುಗಳ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವವರು ಯಾರು? ಪಕ್ಷದಲ್ಲಿ ಯಾರು ನಿರ್ಣಾಯಕ ಸ್ಥಾನದಲ್ಲಿ ಇದ್ದಾರೆ ಎಂಬುದೇ ನಮಗೆ ಗೊತ್ತಾಗುತ್ತಿಲ್ಲ,” ಎಂದು ಕಪಿಲ್ ಸಿಬಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ಸಿಬಲ್ ಯುವ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಸಿಬಲ್ ಹೇಳಿಕೆ ಖಂಡಿಸಿ ಪ್ರತಿಭಟಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಸಿಬಲ್ ಮನೆ ಮೇಲೆ ಟೊಮೆಟೋ ತೂರಿದರು. ಯುವ ಕಾಂಗ್ರೆಸ್ ನಡೆಸಿದ ದಾಳಿಯಲ್ಲಿ ಸಿಬಲ್ ಕಾರು ಜಖಂಗೊಂಡಿದೆ.
ಇನ್ನು, ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಕಾಂಗ್ರೆಸ್ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದರು. ಕಪಿಲ್ ಸಿಬಲ್ ಮನೆ ಮೇಲೆ ಯುವ ಕಾಂಗ್ರೆಸ್ ದಾಳಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆದಷ್ಟು ಬೇಗ ಉನ್ನತ ಮಟ್ಟದ ಸಭೆ ಕರೆದು ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದ್ದರು. ಅಲ್ಲದೇ ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ಶಶಿ ತರೂರ್ ಖಂಡಿಸಿದರು.
ಕಾಂಗ್ರೆಸ್ ಪಕ್ಷದ ಬೇಗುದಿ ದಿನದಿಂದ ದಿನಕ್ಕೆ ಅತಿರೇಕಕ್ಕೆ ಹೋಗುತ್ತಿದೆ. ಹಿರಿಯ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ನಾವು ಜಿ-23 ಇರಬಹುದು, ಜೀ ಹುಜೂರ್ ಅಲ್ಲ ಎಂದು ಕಪಿಲ್ ಸಿಬಲ್ ಹೇಳಿಕೆ ನೀಡಿದ್ದಾರೆ. ಇದರ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಹೀಗಾಗಿ ಹಿರಿಯ ನಾಯಕರು ಯೂತ್ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದರು.
ಪಕ್ಷವನ್ನ ಉಳಿಸಬೇಕು, ನಾಯಕರನ್ನ ಉಳಿಸಬೇಕು ಎಂಬುದು ನಮ್ಮ ಆಗ್ರಹ. ಪಕ್ಷದ ವಿಚಾರವಾಗಿ ಆದಷ್ಟು ಬೇಗ ಉನ್ನತ ಮಟ್ಟದ ಸಭೆ ಕರೆಯಿರಿ. ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಹಿಂಸೆಗೆ ಅವಕಾಶ ನೀಡಬಾರದು. ಕಪಿಲ್ ಸಿಬಲ್ ಮನೆ ಮೇಲೆ ದಾಳಿ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಆಗ್ರಹಿಸಲಾಗಿತ್ತು.
ಒಟ್ಟಾರೆ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಒಳ ಬೇಗುದಿಯಿಂದ ಹಿರಿಯ ನಾಯಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿರೋ ಸೋನಿಯಾಗೆ ಹಲವು ಟಾಸ್ಕ್ ಗಳು ಎದುರಾಗಿವೆ. ಇದೆಲ್ಲವನ್ನು ಕೈ ಹೈಕಮಾಂಡ್ ಅದ್ಹೇಗೆ ತಿಳಿಗೊಳಿಸುತ್ತೋ ಎನ್ನೋದೆ ಪ್ರಶ್ನೆಯಾಗಿದೆ.