ಗದಗ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ನಾಯಕರ ನಡುವೆ ಆರೋಪ – ಪ್ರತ್ಯಾರೋಪಗಳು ಜೋರಾಗಿದೆ. ಇನ್ನೂ ಚುನಾವಣೆ ದಿನಾಂಕವೇ ಘೋಷಣೆಯಾಗಿಲ್ಲ. ಅಂತದ್ರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಗುದ್ದಾಟ ಶುರುವಾಗಿದೆ. ಗದಗ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಭಾವಚಿತ್ರದ ವಿಚಾರಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು ಪ್ರಧಾನಿ ಮೋದಿ ಭಾವಚಿತ್ರ ಸ್ಟೇಟಸ್ ಇಟ್ಟ ವಿಚಾರಕ್ಕಾಗಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಎದುರಾಗಿದೆ. ಮಲ್ಲರಡ್ಡಿ ಅಗಸನಕೊಪ್ಪ, ಶ್ರೀನಿವಾಸ ಅಗಸನಕೊಪ್ಪ ಸೇರಿದಂತೆ ಹಲವರ ಮೇಲೆ ಹಲ್ಲೆಯ ಆರೋಪ ಎದುರಾಗಿದೆ.

ಹಲ್ಲೆಗೊಳಗಾದ ಯುವಕನನ್ನು 21 ವರ್ಷದ ರಾಘವೇಂದ್ರ ಪೂಜಾರ ಎಂದು ಗುರುತಿಸಲಾಗಿದೆ. ಹಲ್ಲೆ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸ್ ಠಾಣೆಗೆ ದೌಡಾಯಿಸಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜು ಕುರುಡಗಿ ಹಾಗೂ ಕಾರ್ಯಕರ್ತರು ಹಲ್ಲೆಗೊಳಗಾದ ಕುಟುಂಬದ ಪರವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೋದಿ ಭಾವಚಿತ್ರ ಸ್ಟೇಟಸ್ ಇಡ್ತೀಯಾ, ಮೋದಿ ಪೋಸ್ಟ್ಗಳಿಗೆ ಲೈಕ್ ಕೊಡ್ತಿಯಾ ಎಂದು ಬೈದು ಥರ್ಮಾಕೋಲ್ ಕಟರ್, ಕಲ್ಲುಗಳನ್ನು ಬಳಸಿ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಗದಗ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.