ಮಂಡ್ಯ: ಎಚ್.ಡಿ.ಕುಮಾರಸ್ವಾಮಿಗೆ ಅಧಿಕಾರ ಕೊಟ್ಟಿದ್ದೀರಿ, ನಾನೂ ನಿಮ್ಮ ಮನೆಯ ಮಗ. ನನಗೊಂದು ಅವಕಾಶ ನೀಡಿ ಎಂದು ಹೇಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಮುಖ್ಯಮಂತ್ರಿಯಾಗುವ ಅಭಿಲಾಷೆ ವ್ಯಕ್ತಪಡಿಸಿದರು.
ಮದ್ದೂರು ಪಟ್ಟಣದಲ್ಲಿ ಶನಿವಾರ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ನಡೆಸುತ್ತೇವೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ನನ್ನ ನಾಯಕತ್ವಕ್ಕೆ ಜನರು ಆಶೀರ್ವಾದ ಮಾಡಬೇಕು ಎಂದರು.
ನಮ್ಮ ಮನೆಯಲ್ಲಿ ನನ್ನೊಬ್ಬನನ್ನು ಬಿಟ್ಟರೆ ಬೇರೆ ಯಾರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಸಂಸದರನ್ನು ವಿಧಾನಸಭೆಗೆ ನಿಲ್ಲಿಸುವ ತೀರ್ಮಾನ ಮಾಡಿಲ್ಲ. ಬೇರೆ ಪಕ್ಷಗಳಲ್ಲಿ ಏನೇ ತೀರ್ಮಾನ ಕೈಗೊಂಡರೂ ಅದು ನಮಗೆ ಸಂಬಂಧವಿಲ್ಲ ಎಂದರು.

ಬಿಜೆಪಿಯವರು ಪ್ರಚಾರಕ್ಕೆ ಪ್ರಧಾನಿಯನ್ನು ಕರೆದು ತಂದು ಪ್ರಚಾರ ಮಾಡಿಸಲಿ, ನಾವು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವೇ ಅಂತಿಮ. ರಾಜಕೀಯ ಮಾಡಬೇಕು ಅಷ್ಟೇ, ಬೇರೆ ಯಾರನ್ನೂ ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದರು.
ಸುಮಲತಾ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಬೇರೆಯವರನ್ನು ಮಾರ್ಕೆಟ್ ಮಾಡೋಕೆ ನಾನು ಹೋಗಲ್ಲ. ನಮ್ಮ ಪಕ್ಷಕ್ಕೆ ಯಾರಾದರೂ ಬರಬೇಕು ಅಂದರೆ ಒಂದು ನಿಯಮವಿದೆ. ಆ ನಿಯಮದ ಪ್ರಕಾರ ಯಾರು ಬೇಕಾದರೂ ಬರಲಿ ನಮ್ಮ ಅಭ್ಯಂತರವಿಲ್ಲ. ನಾವು ಯಾರನ್ನು ಬನ್ನಿ ಬರಬೇಡಿ ಎನ್ನಲ್ಲ. ಸೇರುವುದು ಬಿಡುವುದು ಅವರಿಗೆ ಬಿಟ್ಟದ್ದು ಎಂದರು.
37 ಶಾಸಕರಿದ್ದ ಜೆಡಿಎಸ್’ಗೆ ನಾವು ಬೇಷರತ್ ಬೆಂಬಲ ನೀಡಿದ್ದೆವು. ಲೋಕಸಭಾ ಚುನಾವಣೆ ಬಂದಾಗ ನಿಖಿಲ್’ಗೆ ಬೆಂಬಲ ನೀಡಿದ್ದೆವು. ಕೆಲವರಿಂದ ಅಸಮಾಧಾನ ಇದ್ದರೂ ನಾವು ಜೆಡಿಎಸ್’ಗೆ ಬೆಂಬಲ ನೀಡಿದ್ದೆವು. ಸುಮಲತಾ ಅವರು ಕಾಂಗ್ರೆಸ್ ಟಿಕೆಟ್ ಕೇಳಿದಾಗ, ಕಾಂಗ್ರೆಸ್‌ನಿಂದ ಅಭ್ಯರ್ಥಿ ಹಾಕುವುದಿಲ್ಲ ಎಂದಿದ್ದೆವು. ಮಂಡ್ಯ ಬಿಟ್ಟು ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎಂದು ತಿಳಿಸಿದ್ದೆವು ಎಂದರು.