ಸಮಾಜವಾದಿ ಪಕ್ಷದ ಕೆಂಪು ಟೋಪಿಗಳು ಮುಜಾಫರ್‌ನಗರ ಗಲಭೆಯ ಸಂತ್ರಸ್ತರ ರಕ್ತದಲ್ಲಿ ಹಾಗೂ ಅಯೋಧ್ಯೆಯಲ್ಲಿ ಗುಂಡಿಕ್ಕಿ ಕೊಂದ ಕರಸೇವಕರ ರಕ್ತದಲ್ಲಿ ಚಿತ್ರಿಸಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಾರವಾಗಿ ಹೇಳಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವ ಉತ್ತರಪ್ರದೇಶದಲ್ಲಿ ಎಸ್‌ಪಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಆದಿತ್ಯನಾಥ್ ಸೇರಿದಂತೆ ಬಿಜೆಪಿ ನಾಯಕರು ಸಮಾಜವಾದಿ ಪಕ್ಷದ ಕೆಂಪು ಟೋಪಿಯನ್ನು ಪದೇ ಪದೇ ಗುರಿಯಾಗಿಸಿಕೊಂಡು ಹೇಳಿಕೆ ನೀಡುತ್ತಿರುವುದನ್ನು ಗಮನಿಸಬಹುದು.
ಖಾಸಗಿ ವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಮಾತನಾಡುತ್ತ, “ಸಮಾಜವಾದಿ ಪಕ್ಷದ ಕೆಂಪು ಟೋಪಿ ಮುಜಫರ್‌ನಗರ ಗಲಭೆಯ ಸಂತ್ರಸ್ತರು ಮತ್ತು ಅಯೋಧ್ಯೆಯಲ್ಲಿ ಗುಂಡು ಹಾರಿಸಿದ ಕರಸೇವಕರ ರಕ್ತದಲ್ಲಿ ಚಿತ್ರಿಸಲಾಗಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಗೋರಖ್‌ಪುರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಎಸ್‌ಪಿಯನ್ನು ಗುರಿಯಾಗಿಸಿಕೊಂಡು ರೆಡ್ ಕ್ಯಾಪ್‌ನಲ್ಲಿರುವವರು ರಾಜ್ಯಕ್ಕೆ “ರೆಡ್ ಅಲರ್ಟ್” ಹಾಗೂ “ಅಪಾಯದ ಸಂಕೇತ” ಎಂದು ಹೇಳಿದ್ದರು. ಈ ಬೆನ್ನಲ್ಲೇ ಈಗ ಯೋಗಿ ಮತ್ತೆ ಕೆಂಪುಟೋಪಿ ಗುರಿಯಾಗಿಸಿಕೊಡು ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ಕೆಂಪು ಟೋಪಿಗಳನ್ನು ಎಂದು ಧರಿಸುವವರು “ಗೂಂಡಾಗಳು” ಎಂದು ಈ ಹಿಂದೆ ಆದಿತ್ಯನಾಥ್ ಕೂಡ ಹೇಳಿದ್ದರು.
ತಮ್ಮ ಸರ್ಕಾರವು ಜನಸಾಮಾನ್ಯರನ್ನು ರಕ್ಷಿಸಲು ಮತ್ತು ಅವರಲ್ಲಿ ಸುರಕ್ಷತಾ ಭಾವವನ್ನು ಮೂಡಿಸಲು ಕೆಲಸ ಮಾಡುತ್ತಿದೆ. ಅಪರಾಧಿಗಳು ಭಯಭೀತರಾಗುತ್ತಿದ್ದು, ಕೈ ಕಟ್ಟಿ ಪೊಲೀಸರ ಮುಂದೆ ಶರಣಾಗುತ್ತಿದ್ದಾರೆ. ಹಿಂದಿನ ಎಸ್‌ಪಿ ಸರ್ಕಾರವು ರಾಜ್ಯದ ಬಡ ಜನರನ್ನು ನಿರ್ಲಕ್ಷಿಸಿದೆ. ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರವು ಸುಗಂಧ ದ್ರವ್ಯ ವ್ಯಾಪಾರದಲ್ಲಿ ತೊಡಗಿರುವ ತನ್ನ ಸ್ನೇಹಿತರಿಗಾಗಿ ಮಾತ್ರ ಕೆಲಸ ಮಾಡಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
ಎಸ್‌ಪಿ ಪಕ್ಷ ಎಂದಿಗೂ ಉತ್ತರ ಪ್ರದೇಶ ಮತ್ತು ಅದರ ಜನರನ್ನು ತಮ್ಮವರೆಂದು ಪರಿಗಣಿಸಲಿಲ್ಲ. ಅವರ ಅಭಿಪ್ರಾಯಗಳು ಕುಟುಂಬ ಕೇಂದ್ರಿತ ಮತ್ತು ಪಾಕಿಸ್ತಾನ ಕೇಂದ್ರಿತವಾಗಿವೆ. 2017 ರ ಮೊದಲು ರಾಜ್ಯದಲ್ಲಿ ಪ್ರತಿ ಮೂರುದಿನಕ್ಕೊಮ್ಮೆ ಗಲಭೆಗಳು ನಡೆಯುತ್ತಿದ್ದವು. ಹುಡುಗಿಯರು ತಮ್ಮ ಸುರಕ್ಷತೆಯ ಬಗ್ಗೆ ಭಯಪಡುತ್ತಿದ್ದರು. ಬಿಜೆಪಿ ಆಡಳಿತದಲ್ಲಿ ಇದು ಬದಲಾಗಿದೆ ಎಂದು ಆದಿತ್ಯನಾಥ್ ವಿವರಿಸಿದ್ದಾರೆ.
ತಮ್ಮ ಸರ್ಕಾರ ಉತ್ತರ ಪ್ರದೇಶಕ್ಕೆ ಹೊಸ ಗುರುತನ್ನು ಒದಗಿಸಿದೆ ಎಂದು ಪ್ರತಿಪಾದಿಸಿದ ಅವರು, “ಈಗ ಉದ್ಯಮಿಗಳು ಮತ್ತು ಜನರು ರಾಜ್ಯದಿಂದ ವಲಸೆ ಹೋಗುತ್ತಿಲ್ಲ. ಉದ್ಯಮಿಗಳು ಈಗ ರಾಜ್ಯಕ್ಕೆ ಮರಳುತ್ತಿದ್ದಾರೆ ಮತ್ತು ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರವು ನಿರ್ದಿಷ್ಟ ಧರ್ಮದ ಜನರನ್ನು ಗುರಿಯಾಗಿಸಿಕೊಂಡಿದೆ ಮತ್ತು ಎಸ್‌ಪಿ ನಾಯಕ ಅಜಂ ಖಾನ್ ವಿರುದ್ಧ 80 ಕ್ಕೂ ಹೆಚ್ಚು ಪ್ರಕರಣಗಳನ್ನು ಏಕೆ ದಾಖಲಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಆದಿತ್ಯನಾಥ್, ನಮ್ಮ ಸರ್ಕಾರ ಯಾರ ವಿರುದ್ಧವೂ ರಾಜಕೀಯ ಪ್ರೇರಿತ ಎಫ್‌ಐಆರ್ ದಾಖಲಿಸಿಲ್ಲ. ಆಜಂ ಖಾನ್ ವಿರುದ್ಧದ ಪ್ರಕರಣಗಳು ಅವರ ತಪ್ಪುಗಳ ಪರಿಣಾಮವಾಗಿದೆ. ಬಡವರಿಗೆ ಸೇರಿದ ಭೂಮಿಯನ್ನು ಅತಿಕ್ರಮಿಸಿ ಅಲ್ಲಿ ಸಂಸ್ಥೆಯನ್ನು ನಿರ್ಮಿಸಲು ಯಾರಾದರೂ ಪ್ರಯತ್ನಿಸಿದರೆ, ಅಂತಹ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ನಮ್ಮ ಸರ್ಕಾರವು ಎಲ್ಲಾ ಜಾತಿ ಮತ್ತು ಹಿನ್ನೆಲೆಯ ಜನರಿಗೆ ಪ್ರಯೋಜನಗಳನ್ನು ನೀಡಿದೆ. ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್ ಸರ್ಕಾರಗಳಲ್ಲಿ ನಾಯಕರು ಮೊದಲು ತಮ್ಮ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ನಮ್ಮ ಸರ್ಕಾರದಲ್ಲಿ ಇದು ಬದಲಾಗಿದೆ. ರಾಜ್ಯದ ಪ್ರತಿ ಕುಟುಂಬಕ್ಕೂ ಮನೆ ನೀಡುವ ಕೆಲಸ ಮಾಡಿದ್ದೇವೆ ಎಂದಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದ ಕಬ್ಬು ರೈತರ ಬಗ್ಗೆ ಮಾತನಾಡಿದ ಯೋಗಿ, “ಸಮಾಜವಾದಿ ಪಕ್ಷವು ಹಲವಾರು ಸಕ್ಕರೆ ಕಾರ್ಖಾನೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದೆ. ನಮ್ಮ ಸರ್ಕಾರವು ಸಕ್ಕರೆ ಕಾರ್ಖಾನೆಗಳ ಕಾರ್ಯನಿರ್ವಹಣೆಯನ್ನು ಮರು ಸ್ಥಾಪಿಸಿದೆ. ಎಸ್‌ಪಿಗೆ ರಾಜ್ಯದ ಅಭಿವೃದ್ಧಿಯ ದೂರದೃಷ್ಟಿ ಇರಲಿಲ್ಲ. “ಡಬಲ್ ಇಂಜಿನ್” ಸರ್ಕಾರವು ಕಳೆದ ಐದು ವರ್ಷಗಳಲ್ಲಿ ರಾಜ್ಯವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ನಾವು ಮಾಡಿದ ಕೆಲಸವು ದೇಶಕ್ಕೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ರಾಜ್ಯಕ್ಕೆ ಮನ್ನಣೆ ನೀಡಿದೆ ಎಂದು ಹೇಳಿದ್ದಾರೆ.