2022ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಹೀಗಿರುವಾಗಲೇ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ವಿರುದ್ಧ ಬ್ರಾಹ್ಮಣರು ಸೇರಿದಂತೆ ಎಲ್ಲಾ ಸಮುದಾಯದವರು ಅಸಮಾಧಾನಗೊಂಡಿದ್ದಾರೆ. ಬಿಜೆಪಿಯ ಕಟ್ಟಾ ಬೆಂಬಲಿಗರಾದ ಬ್ರಾಹ್ಮಣರ ಅಸಮಾಧಾನಕ್ಕೆ ಯೋಗಿ ಆದಿತ್ಯನಾಥ ಸರ್ಕಾರದ ನಿರ್ಧಾರಗಳೇ ಕಾರಣ ಎನ್ನಲಾಗುತ್ತಿದೆ. ಇದೇ ಅವಕಾಶ ಬಳಸಿಕೊಂಡು ಬ್ರಾಹ್ಮಣರು ಸೇರಿದಂತೆ ಎಲ್ಲರನ್ನು ತಮ್ಮತ್ತ ಸೆಳೆಯಲು ಬಿಎಸ್ಪಿ ಹಾಗೂ ಎಸ್ಪಿ ದಾಳ ಉರುಳಿಸಿವೆ.
ಹೌದು, ಬ್ರಾಹ್ಮಣರು ಸೇರಿದಂತೆ ಕಟ್ಟಾ ಬಿಜೆಪಿ ಬೆಂಬಲಿತ ಸಮುದಾಯಗಳು ಅಸಮಾಧಾನಕ್ಕೆ ಯೋಗಿ ಆದಿತ್ಯನಾಥ ಸರ್ಕಾರದ ತೀರ್ಮಾನಗಳೇ ಕಾರಣ. ಯೋಗಿ ಆದಿತ್ಯನಾಥ್ ಸರ್ಕಾರದ ನಿರ್ಧಾರಗಳು ಉತ್ತರ ಪ್ರದೇಶದಲ್ಲಿ ಶೇ 12ರಷ್ಟು ಜನಸಂಖ್ಯೆ ಹೊಂದಿರುವ ಬ್ರಾಹ್ಮಣರನ್ನು ಕೆರಳಿಸಿವೆ. ಉತ್ತರ ಪ್ರದೇಶದಲ್ಲಿ ಈಚೆಗೆ ನಡೆದ ಘಟನೆಗಳಿಂದ ದಲಿತರು ಬೇಸರಗೊಂಡಿದ್ದಾರೆ.
ಇತ್ತೀಚೆಗೆ ನಡೆದ ಪಂಚಾಯತಿ ಚುನಾವಣೆ ವೇಳೆ ಹಲವು ಸಮುದಾಯದ ನಾಯಕರ ಮೇಲೆ ಹಲ್ಲೆ ನಡೆಸಲಾಗಿದೆ. ಇವೆಲ್ಲವೂ ಜಾತಿ ಕಾರಣಕ್ಕೆ ಆದ ದಾಳಿ, ಹಲ್ಲೆಗಳು. ಬ್ರಾಹ್ಮಣ ಸಮುದಾಯದ ಕುಲಸ್ಥರು, ಹಿಂದುಳಿದ ವರ್ಗ, ದಲಿತರ ಜೊತೆಗೆ ಹೊಂದಿಕೊಂಡು ಜೀವನ ನಡೆಸುತ್ತಾರೆ. ಆದರೆ ರಜಪೂತರಿಂದ ಆಗುವ ದೌರ್ಜನ್ಯ, ಅನ್ಯಾಯವನ್ನು ಸಹಿಸಲ್ಲ. ಆದರೆ ಈಗ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ಮೇಲೆ ರಜಪೂತ್ ಠಾಕೂರ್‌ರಿಂದ ದೌರ್ಜನ್ಯ, ಅನ್ಯಾಯ ಆಗುತ್ತಿದೆ. ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ರಜಪೂತ್ ಠಾಕೂರರು ಬ್ರಾಹ್ಮಣರ ಶ್ರೇಷ್ಠತೆಯನ್ನು ಪ್ರಶ್ನಿಸಿದ್ದಾರೆ. ಹೀಗಾಗಿ ರಜಪೂತ್ ಠಾಕೂರ್ ಬೆಂಬಲಕ್ಕೆ ನಿಂತ ಯೋಗಿ ಸರ್ಕಾರದ ವಿರುದ್ಧ ಎಲ್ಲರೂ ಸಿಟ್ಟಿಗೆದ್ದಿದ್ದಾರೆ. ಮುಂದಿನ ಚುನಾವಾಣೆಯಲ್ಲಿ ಬಿಜೆಪಿಯನ್ನು ಬಗ್ಗುಬಡಿಯಲು ಮುಂದಾಗಿದ್ದಾರೆ.
ಯೋಗಿ ಆದಿತ್ಯನಾಥ್ ಸ್ವತಃ ರಜಪೂತ್ ಠಾಕೂರ್ ಸಮುದಾಯಕ್ಕೆ ಸೇರಿದವರು. ಇವರಿಗೆ ರಜಪೂತರ ಬಗ್ಗೆ ಒಲವು ಜಾಸ್ತಿ. ಯೋಗಿ ಆದಿತ್ಯನಾಥ್ ಹಾಗೂ ಅವರ ಸರ್ಕಾರವೇ ನಮ್ಮ ಮೇಲೆ ದೌರ್ಜನ್ಯ ನಡೆಸಿ, ಅನ್ಯಾಯ ಮಾಡುತ್ತಿದೆ ಎಂಬುದು ಬ್ರಾಹ್ಮಣರ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದಲ್ಲಿ ದಲಿತ ಸಮುದಾಯದ ಮತಗಳು ಶೇ 20ರಷ್ಟಿದೆ. ಹೀಗಾಗಿ ದಲಿತರು ಶೇ.12 ರಷ್ಟಿರುವ ಬ್ರಾಹ್ಮಣರ ಜತೆ ಸೇರಿದರೆ ಶೇ 32ರಷ್ಟು ಮತಗಳು ಅವರದಾಗುತ್ತವೆ. ಈ ಎರಡು ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಮತ್ತೆ ಅಧಿಕಾರಕ್ಕೇರಬಹುದು ಎಂಬುದು ಕಾಂಗ್ರೆಸ್, ಬಿಎಸ್ಪಿ, ಎಸ್ಪಿ ಲೆಕ್ಕಚಾರ. ಹೀಗಿರುವಾಗಲೇ ಯೋಗಿ ಆದಿತ್ಯನಾಥ್ ಸರ್ಕಾರ ಅಭಿವೃದ್ದಿ ಹೆಸರಿನಲ್ಲಿ ವೋಟ್ ಕೇಳಲು ಮುಂದಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯಿಂದಲೇ ಬುಧವಾರ ಉತ್ತರ ಪ್ರದೇಶದ ಕುಶಿನಗರ ವಿಮಾನ ನಿಲ್ದಾಣವನ್ನು ಉದ್ಘಾಟಣೆ ಮಾಡಲಾಗಿಸಿದೆ.
ಉದ್ಘಾಟನೆ ಬಳಿಕ ಮಾತಾಡಿದ ಪ್ರಧಾನಿ ಮೋದಿ, ಶ್ರೀಲಂಕಾದಿಂದ ಬಂದ ವಿಮಾನವೂ ಭಾರತಕ್ಕೆ ಬಂದ ಮೊದಲ ವಿಮಾನವಾಗಿದೆ. ದೇಶದ ಮಹಾನ್ ಚೇತನ ಭಗವಾನ್ ಬುದ್ಧನಿಗೆ ಸಂಬಂಧಿಸಿದ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಭಾರತ ವಿಶೇಷ ಗಮನ ನೀಡುತ್ತಿದೆ. ಕುಶಿನಗರದ ಅಭಿವೃದ್ಧಿಗಾಗಿ ಈ ವಿಮಾನ ನಿಲ್ದಾಣ ಉದ್ಘಾಟಿಸಲಾಗಿದೆ. ಇದುವೇ ಕೇಂದ್ರ ಮತ್ತು ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಸರ್ಕಾರದ ಆದ್ಯತೆ ಎಂದರು.
ಇನ್ನು, ನರೇಂದ್ರ ಮೋದಿ ಬಳಿಕ ಮಾತಾಡಿದ ಸಿಎಂ ಯೋಗಿ ಆದಿತ್ಯನಾಥ್, ಕುಶಿನಗರ ವಿಮಾನ ನಿಲ್ದಾಣದಿಂದ ದೇಶದ ಆರ್ಥಿಕತೆ ಅಭಿವೃದ್ದಿಯಾಗಲಿದೆ. ಇದು ಕೇವಲ ಉತ್ತರ ಪ್ರದೇಶಕ್ಕಲ್ಲ ಬದಲಿಗೆ ಇಡೀ ದೇಶಕ್ಕೆ ಆದಾಯವಾಗಲಿದೆ. ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದರು.
1947-2014 ರವರೆಗೂ ಉತ್ತರ ಪ್ರದೇಶದಲ್ಲಿ ಕೇವಲ 2 ಏರ್ಪೋರ್ಟ್‌ಗಳಿದ್ದವು. ಇವು ಕೇವಲ 16 ಸ್ಥಳಗಳಿಗೆ ಸಂಪರ್ಕ ಹೊಂದಿದ್ದವು. ಈಗ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಈ ವಿಮಾನ ನಿಲ್ದಾಣ ಒಳಗೊಂಡಂತೆ 9 ಹೊಸ ವಿಮಾನ ನಿಲ್ದಾಣಗಳು ಮತ್ತು ಟರ್ಮಿನಲ್‌ಗಳನ್ನು ಜನರಿಗೆ ಒದಗಿಸಲಾಗಿದೆ. ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಜೇವರ್ ವಿಮಾನ ನಿಲ್ದಾಣದ ದಾಖಲೆಯ ವೇಗದಲ್ಲಿ ಇದು ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕುಶಿನಗರವು ಪ್ರಪಂಚದ ಬೌದ್ಧ ಧರ್ಮದ ಅನುಯಾಯಿಗಳ ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದು. ಇದು ಗೌತಮ ಬುದ್ಧನ ಅಂತಿಮ ವಿಶ್ರಾಂತಿ ಸ್ಥಳ. ಇದರ ಅಭಿವೃದ್ದಿಯೇ ನಮ್ಮ ಆದ್ಯತೆ ಎಂದು ಹೇಳಿದರು.
ವಿಮಾನ ನಿಲ್ದಾಣ ಅಂದಾಜು ₹260 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಭಗವಾನ್ ಬುದ್ಧನ ಮಹಾಪರಿನಿರ್ವಾಣ ಸ್ಥಳಕ್ಕೆ ತಡೆರಹಿತ ಸಂಪರ್ಕ ಒದಗಿಸುವ ಮೂಲಕ ಎಲ್ಲರಿಗೂ ಅನುಕೂಲವಾಗಿದೆ.
ಜೂನ್ 2020ರಲ್ಲಿ ಉತ್ತರ ಪ್ರದೇಶದ ಕುಶಿನಗರ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಘೋಷಿಸಲು ಪ್ರಧಾನಿ ಅಧ್ಯಕ್ಷತೆಯ ಕೇಂದ್ರ ಸಂಪುಟ ಅನುಮೋದನೆ ನೀಡಿತ್ತು.
ಕುಶಿನಗರ ವಿಮಾನ ನಿಲ್ದಾಣ ಬರೋಬ್ಬರಿ 3.2 ಕಿಮೀ ಉದ್ದ ಮತ್ತು 45 ಮೀಟರ್ ಅಗಲವಿದೆ. ಪ್ರತಿ ಗಂಟೆಗೆ 8 ವಿಮಾನಗಳು ಸಂಚರಿಸಲು ಸಾಧ್ಯವಾಗುತ್ತದೆ. ಹೊಸ ಟರ್ಮಿನಲ್ ಕಟ್ಟಡವು 3600 ಚದರ ಮೀಟರ್ ಪ್ರದೇಶದಲ್ಲಿ ಹರಡಿದೆ. ಇನ್ನು, ಯೋಗಿ ಆದಿತ್ಯನಾಥ್ ಸರ್ಕಾರ ಈ ಏರ್ಪೋರ್ಟ್ ವಿಚಾರವನ್ನೇ ಮುಂದಿಟ್ಟುಕೊಂಡು ಮುಂದಿನ ಚುನಾವಣೆ ಗೆಲ್ಲಲು ತಯಾರಿ ನಡೆಸುತ್ತಿದೆ ಎನ್ನಲಾಗುತ್ತಿದೆ.