ಅಷ್ಟಾಂಗ ಯೋಗ ಗುರು ಶರತ್ ಜೋಯಿಸ್ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ. ಮೈಸೂರಿನ ಕೆ.ಪಟ್ಟಾಭಿ ಜೋಯಿಸ್ ಅವರ ಮೊಮ್ಮಗ ಶರತ್ ಜೋಯಿಸ್ ಅವರು ಅಮೇರಿಕಾದ ವರ್ಜೀನಿಯಾದಲ್ಲಿ ಯೋಗ ಗುರುವಾಗಿ ನೆಲೆಸಿದ್ದರು. ಮೈಸೂರಿನಲ್ಲಿ ಇವರದ್ದೇಯಾದ ಯೋಗ ಕೇಂದ್ರವಿದೆ.
ಶರತ್ ಜೋಯಿಸ್ ಅವರು ಮೈಸೂರಿನ ಗೋಕುಲಂನಲ್ಲಿ ವಾಸವಾಗಿದ್ದರು. ಶರತ್ ಜೋಯಿಸ್ ಅವರು ದೇಶ ಹಾಗೂ ವಿದೇಶಗಳಲ್ಲೂ ಯೋಗ ತರಗತಿಗಳನ್ನು ನಡೆಸುತ್ತಿದ್ದರು. ಶರತ್ ಜೋಯಿಸ್ ಅವರು ಅಷ್ಟಾಂಗ ಯೋಗದ ಅಭ್ಯಾಸವನ್ನು ಜಗತ್ತಿನಾದ್ಯಂತ ಕಲಿಸಲು ಮತ್ತು ಹರಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.
ಶರತ್ ಅವರು ಸೆಪ್ಟೆಂಬರ್ 29, 1971 ರಂದು ಮೈಸೂರಿನಲ್ಲಿ ಸರಸ್ವತಿ ಮತ್ತು ರಂಗಸ್ವಾಮಿ ದಂಪತಿಯ ಮಗನಾಗಿ ಜನಿಸಿದರು. ಶರತ್ ಅವರು ಚಿಕ್ಕ ವಯಸ್ಸಿನಿಂದಲೂ ಯೋಗದಲ್ಲಿ ಆಸಕ್ತಿ ಬೆಳಸಿಕೊಂಡಿದ್ದರು.
ತಮ್ಮ ಏಳನೇ ವಯಸ್ಸಿನಲ್ಲೇ ಯೋಗ ಕಲಿಯಲು ಆರಂಭಿಸಿದರು. ತಮ್ಮ ಅಜ್ಜನ ಮಾರ್ಗದರ್ಶನದಲ್ಲಿ ಪ್ರಾಥಮಿಕ ಮತ್ತು ಮಧ್ಯಂತರ ಯೋಗಾಸನಗಳನ್ನು ಕಲಿತರು. ಶರತ್ ಅವರು ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದರು.