ಯಶವಂತಪುರದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತು ಹರಿದಾಡ್ತಿದೆ. ಆದರೆ ಎಸ್.ಟಿ ಸೋಮಶೇಖರ್ ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದಿಲ್ಲ ಎನ್ನುತ್ತಿರುವ ಬಿಜೆಪಿ, ಒಳಗೊಳಗೆ ಎಸ್.ಟಿ ಸೋಮಶೇಖರ್ ಸಮಾಧಾನ ಮಾಡುವ ಪ್ರಯತ್ನ ಆರಂಭ ಮಾಡಿದೆ. ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗು ಬಿ.ಎಲ್ ಸಂತೋಷ್ ಅವರು ಆಗಸ್ಟ್ 29ರಂದು ದೆಹಲಿಗೆ ಬರುವಂತೆ ಎಸ್.ಟಿ ಸೋಮಶೇಖರ್ಗೆ ಬುಲಾವ್ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಆಪರೇಷನ್ ಹಸ್ತಕ್ಕೆ ಅವಕಾಶ ಕೊಡಬಾರದು ಅನ್ನೋ ಹಠಕ್ಕೆ ಬಿದ್ದಿದೆ. ಈ ನಡುವೆ ಕಾಂಗ್ರೆಸ್ ಹಾಗು ಜೆಡಿಎಸ್ ಯಶವಂತಪುರದಲ್ಲಿ ಚುನಾವಣಾಗೆ ಸಿದ್ಧತೆ ನಡೆಸಿವೆ ಅನ್ನೋದು ಕುತೂಹಲದ ಸಂಗತಿ.
ಉಪಚುನಾವಣೆಗೆ ಎನ್ನುವಂತೆ ಯಶವಂತಪುರಕ್ಕೆ ಬಂಪರ್ ಗಿಫ್ಟ್..!
ಕಾಂಗ್ರೆಸ್ ಪಕ್ಷಕ್ಕೆ ಎಸ್.ಟಿ ಸೋಮಶೇಖರ್ ಬರ್ತಾರೆ ಎನ್ನುವ ಮಾತುಗಳ ಬೆನ್ನಲ್ಲೇ ಬಿಬಿಎಂಪಿ ಮೂಲಕ ಭರ್ಜರಿ ಗಿಫ್ಟ್ ನೀಡಲಾಗಿದೆ. ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದ ನಡುವೆ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಬಿಬಿಎಂಪಿಯಿಂದ ಯಶವಂತಪುರಕ್ಕೆ 7 ಕೋಟಿ 63 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಶಾಸಕ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಚರ್ಚೆ ಬೆನ್ನಲ್ಲೇ ಅನುದಾನ ಮಂಜೂರಾತಿ ಆಗಿರುವ ಬಗ್ಗೆ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಆದರೆ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಕುಡಿಯುವ ನೀರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಹೇರೋಹಳ್ಳಿ ಹಾಗೂ ಕೆಂಗೇರಿ ಭಾಗದ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಅನುದಾನ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಹಣಕಾಸು ಸಚಿವರೂ ಆಗಿರುವ ಸಿಎಂ ಭೇಟಿ ಬೆನ್ನಲ್ಲೇ ಹಣ..!
ಸರ್ಕಾರ ಗ್ಯಾರಂಟಿ ಯೋಜನೆಗೆಳಿಗೆ ಹಣ ಹೊಂದಿಸುವ ಹೊಣೆ ಇರುವ ಕಾರಣಕ್ಕೆ ಶಾಸಕರಿಗೆ ಈ ವರ್ಷ ಅನುದಾನ ಕಡಿತ ಆಗಿದೆ ಎನ್ನಲಾಗಿತ್ತು. ಶಾಸಕರು ಅನುದಾನಕ್ಕಾಗಿ ಬಹಿರಂಗ ಪತ್ರ ಬರೆದ ಬಳಿಕ 224 ಶಾಸಕರಿಗೂ 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಮವಾರ ಅಷ್ಟೇ ಭೇಟಿ ಮಾಡಿದ್ದ ಶಾಸಕ ಎಸ್.ಟಿ ಸೋಮಶೇಖರ್ ಭರ್ಜರಿ ಗಿಫ್ಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 1.63 ಕೋಟಿ ರೂಪಾಯಿ ವೆಚ್ಚದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆ ಮಾಡಬೇಕು, ಹೊಸದಾಗಿ ಬೋರ್ವೆಲ್ ಕೊರೆಸಲು 4 ಕೋಟಿ ಅನುದಾನ ಹಾಗು ನಿರ್ವಹಣೆಗೆ 2 ಕೋಟಿ ಅನುದಾನ ಮೀಸಲಿಡಲಾಗಿದೆ. ಹೊರ ವಲಯಗಳಿಗೆ ಸುಮಾರು 10 ಕೋಟಿವರೆಗೆ ಅನುದಾನ ಕೊಡಲಾಗಿದೆ. ವಲಯ ಆಯುಕ್ತರ ವಿವೇಚನೆಗೆ ತಕ್ಕಂತೆ ಹಣ ಖರ್ಚು ಮಾಡಲು ಹೇಳಲಾಗಿದೆ ಎಂದಿದ್ದಾರೆ ಆಯುಕ್ತರು. ಆದರೂ ಎಸ್.ಟಿ ಸೋಮಶೇಖರ್ ಮನವಿಯಂತೆ ಹಣ ಬಿಡುಗಡೆ ಆಗಿದೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿರುವ ಸತ್ಯ ಎನ್ನಬಹುದು.
ಕಾಂಗ್ರೆಸ್ ಆಡಳಿತಾತ್ಮಕ ತಯಾರಿ, ಜೆಡಿಎಸ್ ಕ್ಷೇತ್ರದಲ್ಲೇ ತಯಾರಿ..!
ಎಸ್.ಟಿ ಸೊಮಶೇಖರ್ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆ ಆದರೆ ಯಶವಂತಪುರ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತದೆ. ಹೀಗಾಗಿ ಯಶವಂತಪುರದಲ್ಲಿ ಎಸ್.ಟಿ ಸೋಮಶೇಖರ್ಗೆ ಪ್ರಮುಖ ಎದುರಾಳಿ ಆಗಿರುವ ಜೆಡಿಎಸ್ ಪಕ್ಷ ತಯಾರಿ ಮಾಡಿಕೊಲ್ಳುತ್ತಿದ್ದು, ಮಾಜಿ ಸಿಎಂ ಕುಮಾರಸ್ವಾಮಿ, ಕ್ಷೇತ್ರದಲ್ಲಿ ಪ್ರಮುಖ ನಾಯಕರು ಹಾಗು ಕಾರ್ಯರ್ತರ ಸಭೆ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು ಪಕ್ಷದ ನಾಯಕರನ್ನೂ ಸೆಳೆಯುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕಡೆಗೆ ಹೋಗಬೇಡಿ. ಎಸ್.ಟಿ ಸೋಮಶೇಖರ್ ಈ ಬಾರಿ ರಾಜೀನಾಮೆ ನೀಡಿ, ಮಗನನ್ನು ಅಬ್ಯರ್ಥಿ ಮಾಡುವ ಸಾಧ್ಯತೆಯಿದೆ. ಆ ರೀತಿ ಆದರೆ ಜವರಾಯಿಗೌಡರು ಶಾಸಕರಾಗಿ ಆಯ್ಕೆಯಾಗುವುದು ಖಚಿತ ಎಂದು ಕುಮಾರಸ್ವಾಮಿ ಕಾರ್ಯಕರ್ತರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಸಭೆ ಬಳಿಕ ಮಾತನಾಡಿದ ಕುಮಾರಸ್ವಾಮಿ, ಹಲವಾರು ಪ್ರಮುಖ ಕಾರ್ಯಕರ್ತರನ್ನ ತಮ್ಮ ಕಡೆ ಸೆಳೆಯಲು ಪ್ರಾರಂಭ ಮಾಡಿದ್ದಾರೆ. ಅನುಕೂಲ ಸಿಂಧು ರಾಜಕಾರಣ ಮಾಡಬೇಕಾದರೆ ಆಪರೇಷನ್ ಮಾಡಬೇಕು ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಯಶವಂತಪುರ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ದೇವೇಗೌಡರ ಬೆಂಬಲಿಗರು ಎಂದಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಸಂದೇಶ ನೀಡಲು ಬಂದಿದ್ದೇನೆ. ವಿಧಾನಸಭೆ, ZP, TP ಚುನಾವಣೆ ಸನ್ನದ್ದರಾಗಲು ಕರೆ ನೀಡಲು ಬಂದಿದ್ದೇನೆ ಎಂದು ಬಹಿರಂಗವಾಗಿಯೇ ತಿಳಿಸಿದ್ದಾರೆ.
ಕೃಷ್ಣಮಣಿ