ಇಸ್ರೇಲ್ ಹಮಾಸ್ ನಡುವಿನ ಸಂಘರ್ಷ ಗಲ್ಫ್ ರಾಜ್ಯಗಳಿಗೂ ವಿಸ್ತರಣೆಯಾಗುತ್ತದಾ ಎಂಬ ಆತಂಕ ಎದುರಾಗಿದೆ. ಸೌದಿ, ಇರಾನ್, ಯಮೆನ್, ಲೆಬನಾನ್‌ಗಳು ಪ್ಯಾಲೆಸ್ತೀನ್‌ಗೆ ಬೆಂಬಲ ಘೋಷಣೆ ಮಾಡಿರುವುದು ಮಾತ್ರವಲ್ಲದೆ ನೇರವಾಗಿ ಯುದ್ಧದ ಭಾಗವಾಗಬಹುದಾ ಎಂಬ ಚರ್ಚೆಗಳು ಆರಂಭವಾಗಿದೆ.
ಈಗಾಗಲೇ ಲೆಬನಾನ್, ಹಿಝ್ಬುಲ್ಲಾ ಸಂಘಟನೆ ಇಸ್ರೇಲ್ ವಿರುದ್ಧ ದಾಳಿಗೆ ಸಜ್ಜಾಗಿದ್ದರೆ, ಇನ್ನೊಂದೆಡೆ ಯೆಮನ್ ನ ಹೌಥಿ ಬಂಡುಕೋರ ಪಡೆಯು ಫೆಲೆಸ್ತೀನ್ ಪರವಾಗಿ ರಾಕೆಟ್ ದಾಳಿಯನ್ನು ನಡೆಸಿದ್ದು, ಇಸ್ರೇಲ್ ಮೇಲೆ ದಾಳಿ ನಡೆಸಿದೆ ಎಂದು ಹೇಳಿದೆ.
ಯುದ್ಧ ನಡೆಯುತ್ತಿರುವ ಸ್ಥಳದಿಂಧ 1000 ಮೈಲಿಗಳಾಚೆಗೆ ತಮ್ಮ ಅಧಿಕಾರ ಕೇಂದ್ರ ಇದ್ದರೂ ಹೌಥಿಗಳು ಈ ಯುದ್ಧದಲ್ಲಿ ಭಾಗಿಯಾಗಲು ನಿರ್ಧರಿಸಿದ್ದೇ ಅಲ್ಲದೆ ತಾವು ಇಸ್ರೇಲ್‌ನತ್ತ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ.
ತಮ್ಮ ಸಂಘಟನೆಯು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾಗೂ ಡ್ರೋನ್‌ಗಳನ್ನು ಇಸ್ರೇಲ್‌ನತ್ತ ಉಡಾಯಿಸಿರುವುದಾಗಿ ಹೌಥಿ ಮಿಲಿಟರಿ ವಕ್ತಾರ ಯಹ್ಯಾ ಸರೀ ಹೇಳಿದ್ದಾರೆ.
ಅಲ್ಲದೆ, ಫೆಲೆಸ್ತೀನೀಯರ ವಿಜಯಕ್ಕೆ ಸಹಾಯ ಮಾಡಲು ಇಂತಹ ಇನ್ನಷ್ಟು ದಾಳಿಗಳು ನಡೆಯಲಿವೆ ಎಂದಿದ್ದಾರೆ.
ಸಂಘರ್ಷ ಆರಂಭವಾದಂದಿನಿಂದ ಇಸ್ರೇಲ್ ಮೇಲೆ ನಮ್ಮ ಮೂರನೇ ದಾಳಿ ಎಂದು ಅವರು ಹೇಳಿದ್ದಾರೆ.
ಇಸ್ರೇಲ್‌ನ ಆಕ್ರಮಣ ನಿಲ್ಲುವ ತನಕ ಹೌಥಿಗಳ ದಾಳಿ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ಹೌಥಿಗಳ ದಾಳಿಯನ್ನು ಸಹಿಸುವುದು ಅಸಾಧ್ಯ ಎಂದು ಇಸ್ರೇಲ್‌ನ ರಾಷ್ಟ್ರೀಯ ಸುರಕ್ಷತಾ ಸಲಹೆಗಾರ ಝಾಚಿ ಹನೆಗ್ಬಿ ಹೇಳಿದ್ದಾರೆ. ಆದರೆ ಇಸ್ರೇಲ್ ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂದು ಅವರು ತಿಳಿಸಲು ನಿರಾಕರಿಸಿದ್ದಾರೆ.
ಹೌಥಿಗಳ ಕ್ಷಿಪಣಿ ದಾಳಿಗಳು ಸೌದಿ ಅರೇಬಿಯಾ, ಜೋರ್ಡಾನ್ ಆತಂಕಕ್ಕೂ ಕಾರಣವಾಗಿದ್ದು, ಹೌಥಿಗಳ ಕ್ಷಿಪಣಿಗಳು ಯೆಮನ್‌ನಿಂದ ಸೌದಿ ಅರೇಬಿಯಾದ ಆಗಸದಲ್ಲಿ ರೆಡ್ ಸೀ ಸಮೀಪದಿಂದ ಸಾಗಿ ಜೋರ್ಡಾನ್ ದಾಟಿ ಇಸ್ರೇಲ್ ತಲುಪುತ್ತವೆ.
ಹೌಥಿಗಳೊಂದಿಗೆ ಸೌದಿ ಅರೇಬಿಯಾಗೂ ಸಂಘರ್ಷ ಇರುವುದರಿಂದ ಹೌಥಿಗಳ ದಾಳಿಯ ಬಗ್ಗೆ ಸೌದಿ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ










