ರಾಜ್ಯ ರಾಜಕಾರಣದಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಬಿಜೆಪಿ ನಾಯಕತ್ವ ಬದಲಾವಣೆ ಕುರಿತ ಗೊಂದಲಗಳು ಸಾಕಷ್ಟು ಸದ್ದು ಮಾಡುತ್ತಿವೆ. ಬಿ ಎಲ್ ಸಂತೋಷ್ ಕುಮಾರ್, ಪ್ರಹ್ಲಾದ್ ಜೋಷಿ, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ಅಶ್ವಥ್ ನಾರಾಯಣ, ಆರ್ ಅಶೋಕ್, ಅರವಿಂದ ಬೆಲ್ಲದ್ ಮೊದಲಾದ ನಾಯಕರ ಹೆಸರು ಸಿಎಂ ರೇಸ್‌ನಲ್ಲಿ ಕೇಳಿಬರುತ್ತಿದೆ. ಆದರೆ, ಬಿಜೆಪಿ ಹೈಕಮಾಂಡ್ ಆಗಲಿ, ಈಶ್ವರಪ್ಪರಂತಹ ನಾಯಕರು ಅಥವಾ ಮೊನ್ನೆ ಮೊನ್ನೆ ರಾಜ್ಯಕ್ಕೆ ಭೇಟಿ ಕೊಟ್ಟ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಲಿ, ಯಡಿಯೂರಪ್ಪ ಅವರ ಬದಲಾವಣೆ ಇಲ್ಲ, ಗೊಂದಲ ಬೇಡ ಎನ್ನುತ್ತಲೇ ಬಂದಿದ್ದಾರೆ.
ಹೀಗಿದ್ದ ಮೇಲೂ, ಬಿಜೆಪಿಯ ಶಾಸಕರೇ ನಾಯಕತ್ವ ವಿರುದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸಿಲ್ಲ. ಪಕ್ಷದ ಮೂಲ ನಾಯಕ ಬಸನಗೌಡ ಯತ್ನಾಳ್‌ರಿಂದ ಹಿಡಿದು ಪಕ್ಷಾಂತರಿ ಎ ಹೆಚ್ ವಿಶ್ವನಾಥ್ ವರೆಗೆ ಹಲವು ಶಾಸಕರು ಪರೋಕ್ಷವಾಗಿಯೂ, ಪ್ರತ್ಯಕ್ಷವಾಗಿಯೂ ನಾಯಕತ್ವ ಬದಲಾವಣೆ ವಿಚಾರ ಬಹಿರಂಗವಾಗಿ ಪ್ರಸ್ತಾಪಿಸುತ್ತಿದ್ದಾರೆ. ಬೇರೆ ಯಾವುದೋ ಪಕ್ಷವಾಗಿದ್ದರೆ, ಈ ಒಳ ಜಗಳಗಳನ್ನು ಸಾಮಾನ್ಯವಾಗಿ ಕಾಣಬಹುದಿತ್ತು. ಆದರೆ, ಬಿಜೆಪಿ ಅನ್ನುವುದು, ಅತ್ಯಂತ ಸಂಘಟನಾ ಶಕ್ತಿ ಇರುವ, ದೊಡ್ಡ ಕೇಡರ್ ಬೇಸ್ ಇರುವ, ತನ್ನ ಅಜೆಂಡಾ ಸಾಧಿಸಲು ದೂರದರ್ಶಿ ಯೋಜನೆ ಹೊಂದಿರುವ ಆರ್‌ಎಸ್‌ಎಸ್ ಸಂಘಟನೆಯ ಹತೋಟಿಯಲ್ಲಿರುವ ರಾಜಕೀಯ ಪಕ್ಷ.
ಆರ್‌ಎಸ್‌ಎಸ್ ಹಾಕಿದ ಲಕ್ಷ್ಮಣ ಗೆರೆ ದಾಟಲು ಬಿಜೆಪಿ ನಾಯಕರಿಗೆ ಸಾಧ್ಯವಾಗುವುದಿಲ್ಲ. ಅದು ನರೇಂದ್ರ ಮೋದಿಯೇ ಇರಲಿ, ಮಾಜಿ ಪ್ರಧಾನಿ ವಾಜೇಪಾಯಿಯೇ ಇರಲಿ. ನಾಗಪುರದ ಆದೇಶಗಳ ವಿರುದ್ಧ ಹೋದವರಲ್ಲ. ಹೀಗಿರುವಾಗ, ರಾಜ್ಯದಲ್ಲಿ ಬಿಜೆಪಿ ನಾಯಕರು ಪರಸ್ಪರ ಕಚ್ಚಾಟದಲ್ಲಿ ತೊಡಗಿಕೊಂಡಿದ್ದರೆ, ಆರ್‌ಎಸ್‌ಎಸ್ ಯಾಕೆ ಸುಮ್ಮನಿದೆ ಎನ್ನುವುದು ಸಾಮಾನ್ಯ ಪ್ರಶ್ನೆ.
ರಾಜ್ಯ ಬಿಜೆಪಿಯ ಆಂತರಿಕ ಕಲಹದ ಹಿಂದಿದೆಯೇ ಆರ್‌ಎಸ್‌ಎಸ್?
ಮೇಲೆ ಹೇಳಿದಂತೆ, ಆರ್‌ಎಸ್‌ಎಸ್ ಹಾಕಿದ ಗೆರೆಯನ್ನು ದಾಟಲು ಬಿಜೆಪಿಗೆ ಸಾಧ್ಯವಾಗುವುದಿಲ್ಲ. ಆದರೆ, ಯಡಿಯೂರಪ್ಪರ ವಿಷಯದಲ್ಲಿ ಇದು ಅರ್ಧ ಸತ್ಯ. ಅವರಿಗಿರುವ ಲಿಂಗಾಯತ ನಾಯಕ ಎಂಬ ಸ್ಥಾನವೇ ಆರ್‌ಎಸ್‌ಎಸ್ ಗೆ ಮಗ್ಗುಲ ಮುಳ್ಳಾಗಿದೆ. ಅದೂ ಅಲ್ಲದೆ, ಯಡಿಯೂರಪ್ಪ ಆರ್‌ಎಸ್‌ಎಸ್ ನಿಂದ ಅಥವಾ ಬಿಜೆಪಿಯಿಂದಲೇ ನಾಯಕರಾದವರಲ್ಲ. ಬದಲಾಗಿ, ಬಿಜೆಪಿ ಇವರಿಂದ ಬೆಳೆಯಿತು. ಅದೂ ಕೂಡಾ, ಆರ್‌ಎಸ್‌ಎಸ್ ಪ್ರಭಾವ ಇಲ್ಲದಂತಿರುವ ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಸಮರ್ಥವಾಗಿ ಕಟ್ಟಿದರು. ಹೀಗಾಗಿ, ಬಿಜೆಪಿಗೆ ಆರ್‌ಎಸ್‌ಎಸ್‌ಗಿಂತ ಇವರೇ ಬಾಸ್ ಆಗಿದ್ದವರು.

ಈಗಲೂ ಕೂಡಾ, ಆರ್‌ಎಸ್‌ಎಸ್‌ಗೆ ತನ್ನೆಲ್ಲಾ ಅಜೆಂಡಾಗಳನ್ನು ಕಾರ್ಯರೂಪಕ್ಕೆ ತರಲು ಯಡಿಯೂರಪ್ಪ ತಡೆಯಾಗಿದ್ದಾರೆ. ಗೋ ಹತ್ಯಾ ನಿಷೇಧ ವಿಚಾರದಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಧುರೀಣರು ಯಡಿಯೂರಪ್ಪರನ್ನು ಒಪ್ಪಿಸಲು ಹರಸಾಹಸ ಪಡಬೇಕಾಯಿತು ಎಂದೂ, ನೂತನ ಶಿಕ್ಷಣ ನೀತಿಯ ಕುರಿತಂತೆ ಕೇಂದ್ರದ ನಾಯಕರನ್ನು ಸತಾಯಿಸುತ್ತಾರೆಂಬ ಮಾತುಗಳು ಪಕ್ಷದೊಳಗಿನಿಂದ ಕೇಳಿಬರುತ್ತದೆ.
ಬಿಜೆಪಿಗಿಂತ ಲಿಂಗಾಯತ ನಾಯಕರಾಗಿ ಹೊರಹೊಮ್ಮಿದ್ದೇ ಯಡಿಯೂರಪ್ಪ ಅವರ ಈ ಮಟ್ಟಿನ ಪ್ರಭಾವಕ್ಕೆ ಕಾರಣ. ಆರ್‌ಎಸ್‌ಎಸ್‌ಗೆ ಯಾವತ್ತೂ ಯಡಿಯೂರಪ್ಪರಂತಹ ನಾಯಕರು ಬೇಡ. ಪಕ್ಷದ ವರ್ಚಸ್ಸಿಗಿಂತ ವೈಯಕ್ತಿಕ ವರ್ಚಸ್ಸು, ಜಾತಿ ಪ್ರಭಾವ ಅಧಿಕ ಇರುವ ಯಡಿಯೂರಪ್ಪರನ್ನು ಹತೋಟಿಯಲ್ಲಿಡುವುದು ಅಷ್ಟು ಸುಲಭದ ಮಾತಲ್ಲ.
ಮಾತ್ರವಲ್ಲದೆ, ಬಹಿರಂಗವಾಗಿ ಕೋಮುಧ್ವೇಷ ಹೇಳಿಕೆ ನೀಡುವ ಉಳಿದ ಬಿಜೆಪಿ ನಾಯಕರಿಗಿಂತ ಯಡಿಯೂರಪ್ಪ ಭಿನ್ನವಾಗಿ ನಿಲ್ಲುತ್ತಾರೆ. ಬಿಜೆಪಿಯಂತಹಾ ಕೋಮುವಾದಿ ಪಕ್ಷದಲ್ಲಿದ್ದೂ, ಹಿಂದೂ ಓಲೈಕೆ ಮಾಡುತ್ತಿದ್ದರೂ, ಅಲ್ಪ ಸಂಖ್ಯಾತರ ವಿರುದ್ಧ ಹಗೆತನ ಸಾಧಿಸಿದವರಲ್ಲ. ಅವರು ಮಾತ್ರವಲ್ಲ ಸಕ್ರಿಯ ರಾಜಕಾರಣದಲ್ಲಿ ತೊಡಗಿರುವ ಅವರ ಕುಟುಂಬದ ಸದಸ್ಯರೂ ಮುಸಲ್ಮಾನರ ವಿರುದ್ಧ ಹೇಳಿಕೆಯನ್ನು ನೀಡಿದ್ದಿಲ್ಲ. ಕರೋನಾ ಸಂಧರ್ಭದಲ್ಲಿ ಮಾಧ್ಯಮಗಳೂ ಮುಸಲ್ಮಾನರ ವಿರುದ್ಧ ಅಪಪ್ರಚಾರಗಳನ್ನು ನಡೆಸುತ್ತಿರುವಾಗ, ತೀಕ್ಷ್ಣವಾಗಿಯೇ ಅದರ ವಿರುದ್ಧ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದರು.

ಆಗಾಗ ಇಣುಕುವ ಯಡಿಯೂರಪ್ಪ ಅವರ ಈ ಜಾತ್ಯಾತೀತ ನಿಲುವು ಕೂಡಾ ಆರ್‌ಎಸ್‌ಎಸ್‌ಗೆ ಅಪಥ್ಯವಾಗುವಂತದ್ದು. ಅವರ ಈ ನಿಲುವುಗಳಿಂದಲೇ ಆರ್‌ಎಸ್‌ಎಸ್ ಅಸಮಾಧಾನಕ್ಕೆ ಯಡಿಯೂರಪ್ಪ ಗುರಿಯಾಗಿದ್ದಾರೆ. ಆದರೆ, ಯಡಿಯೂರಪ್ಪ ಬೆನ್ನಿಗಿರುವ ಬಲಾಢ್‌ಯ ಜಾತಿ ಬಲ ಆರ್‌ಎಸ್‌ಎಸ್ ಗೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ, ಯಡಿಯೂರಪ್ಪ ವಿರುದ್ಧದ ಬಂಡಾಯವನ್ನು ಆರ್‌ಎಸ್‌ಎಸ್ ಉತ್ತೇಜಿಸುತ್ತಿದೆ ಎನ್ನಲಾಗಿದೆ. ಇನ್ನೂ ಕೆಲವರ ಪ್ರಕಾರ, ಯಡಿಯೂರಪ್ಪ ಅವರ ಪ್ರಭಾವವನ್ನು ಕುಗ್ಗಿಸಲೆಂದೇ, ಶಕ್ತಿ ಕುಂದಿಸಲೆಂದೇ ಈಗಾಗಲೇ ಎದ್ದಿರುವ ಭಿನ್ನಮತವನ್ನು ಶಮನ ಮಾಡದೆ ಬಿಟ್ಟಿದೆ.
ಆರ್‌ಎಸ್‌ಎಸ್ ಪರಿಕಲ್ಪನೆಯ ನಾಯಕರು..!
ಈಗಾಗಲೇ ಜಾತಿ ಬಲ ಹೊಂದಿರುವ ನಾಯಕರನ್ನು ನಿಯಂತ್ರಿಸಲಾಗುವುದಿಲ್ಲ ಎನ್ನುವುದನ್ನು ಆರ್‌ಎಸ್‌ಎಸ್ ಗುರುತಿಸಿಕೊಂಡಿದೆ. ಹಾಗಾಗಿ, ಮುಂದಿನ ನಾಯಕನನ್ನು ಬಲಾಢ್ಯ ಜಾತಿಯಿಂದಲೇ ಆರಿಸಿದರೂ, ಜಾತಿ ನಿಷ್ಟೆಗಿಂತ ಸಂಘನಿಷ್ಠೆ ಇರುವಂತಹ ನಾಯಕನನ್ನೇ ಬೆಳೆಸುತ್ತದೆ.

ಆರ್ ಅಶೋಕ್, ಅಶ್ವತ್ ನಾರಾಯಣ ಮೊದಲಾದ ನಾಯಕರು ಒಕ್ಕಲಿಗರು ಹೌದು, ಆದರೆ, ಒಕ್ಕಲಿಗ ನಾಯಕರಲ್ಲ. ಅದೇ ವೇಳೆ, ಬೆಲ್ಲದ್, ಸವದಿ ಮೊದಲಾದವರು ಲಿಂಗಾಯತರು ಹೌದು, ಆದರೆ, ಲಿಂಗಾಯತ ನಾಯಕರಲ್ಲ. ಆರ್‌ಎಸ್‌ಎಸ್‌ಗೆ ಬೇಕಿರುವುದೇ ಇಂತಹವರು. ಅದಕ್ಕಾಗಿಯೇ ಇವರನ್ನು ಸಿಎಂ ರೇಸ್‌ನಲ್ಲಿ ಇರುವಂತೆ ನೋಡಿಕೊಳ್ಳುತ್ತಿದೆ.
ಯಡಿಯೂರಪ್ಪ ಸಹನೆಗೆ ಕಾರಣಗಳು..!
ಸುದೀರ್ಘ ವರ್ಷದ ರಾಜಕೀಯ ಅನುಭವ ಇರುವ ಯಡಿಯೂರಪ್ಪರಿಗೆ ಇದರ ಅರಿವು ಇಲ್ಲ ಎಂದಲ್ಲ. ಆದರೆ, ತನ್ನ ರಾಜಕೀಯ ವೈರಿಗಳೊಂದಿಗೆ ಬಳಸುವ ಅದೇ ತಂತ್ರವನ್ನು ಕೇಂದ್ರ ಬಿಜೆಪಿ ಯಡಿಯೂರಪ್ಪ ಅವರೊಂದಿಗೆ ಬಳಸಿಕೊಳ್ಳುತ್ತದೆ ಎಂಬ ಆತಂಕ ಅವರನ್ನು ಕಾಡುತ್ತಿದೆ ಎನ್ನಲಾಗಿದೆ. ಈ ಬಾರಿ ವಿಜಯೇಂದ್ರ ಅವರು ಮಾಡಿರುವ ಹಗರಣಗಳು ಯಡಿಯೂರಪ್ಪ ಅವರನ್ನು ಕಟ್ಟಿಹಾಕಿದೆ ಎನ್ನುವ ಮಾತುಗಳೂ ಕೇಳಿಬರುತ್ತವೆ.

ಒಂದು ಬಾರಿ ಕೆಜೆಪಿ ಕಟ್ಟಿ ಬಿಜೆಪಿಗೆ ಸೆಡ್ಡು ಹೊಡೆದಿದ್ದ ಯಡಿಯೂರಪ್ಪ ಅವರಿಗೆ ಹಿಂದಿನಂತೆ ಪಕ್ಷ ಕಟ್ಟುವ ಛಾತಿಯಿಲ್ಲ. ಹಾಗಾಗಿ, ಪಕ್ಷ ತೊರೆಯುವಂತಹ ಸಾಹಸ ಮಾಡುವುದು ಕೂಡಾ ಅವರಿಂದಾಗುವುದಿಲ್ಲ. ಪಕ್ಷ ಕಟ್ಟಿಯೇ ತೀರುತ್ತೇನೆ ಎಂದರೂ, ಮತ್ತೆ ಜನರ ನಂಬಿಕೆಯನ್ನು ಕಳೆದುಕೊಂಡು , ಆ ಪ್ರಯತ್ನ ಅವರಿಗೆ ನಕರಾತ್ಮಕವಾಗಿ ಪರಿಣಮಿಸುವ ಸಾಧ್ಯತೆಯೇ ಹೆಚ್ಚಾಗಿರುವುದೂ ಕೂಡಾ ಬಿಎಸ್‌ವೈ ಸಹನೆಗೆ ಕಾರಣಗಳಲ್ಲೊಂದು ಎಂದು ವಿಶ್ಲೇಷಿಸಲಾಗುತ್ತಿದೆ.