ಕುಂದಾಪುರ: ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಯಕ್ಷಗಾನ ಕಲಾವಿದರೊಬ್ಬರು ಕೂಡ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸೌಡದಲ್ಲಿ ನಡೆದಿದೆ. ಶೃಂಗೇರಿ ಜಿಲ್ಲೆಯ ನೆಮ್ಮಾರು ಗ್ರಾಮದ ಈಶ್ವರ ಗೌಡ ಮೃತ ದುರ್ದೈವಿ.

ಈಶ್ವರ ಗೌಡ ಕಳೆದ ಕೆಲ ವರ್ಷಗಳಿಂದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ 2ನೇ ಮೇಳದಲ್ಲಿ ಮಹಿಷಾಸುರ ಪಾತ್ರವನ್ನು ನಿರ್ವಹಿಸುತ್ತಿದ್ದರು. ಬಯಲಾಟ ಆರಂಭವಾದ ಹಿನ್ನೆಲೆಯಲ್ಲಿ ಬುಧವಾರವೂ ಕೂಡ ಈಶ್ವರ ಗೌಡ ಮೇಳಕ್ಕೆ ಹೋಗಿದ್ದರು.

ಸೌಡದ ಮಾಲಾಡಿಯಲ್ಲಿ ಆಯೋಜಿಸಲಾಗಿದ್ದ ದೇವಿ ಮಹ್ಮಾತೆ ಯಕ್ಷಗಾನದಲ್ಲಿ ಈಶ್ವರ ಗೌಡ ಮಹಿಷಾಸುರನಾಗಿ ಅಬ್ಬರಿಸಿದ್ದಾರೆ. ಬಳಿಕ ಚೌಕಿಗೆ ಬಂದು ವೇಷ ತೆಗೆಯುವ ಸಮಯದಲ್ಲಿ ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಸಹ ಕಲಾವಿದರು ನೆರವಿಗೆ ಬಂದರೂ ಕೂಡ ಈಶ್ವರ ಗೌಡ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈಶ್ವರ ಗೌಡ ಅವರ ಅಗಲಿಕೆಗೆ ಯಕ್ಷಗಾನ ಪ್ರಿಯರು ಕಂಬನಿ ಮಿಡಿದಿದ್ದಾರೆ.












