ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯ ಖಾಸಗಿ ದರ್ಬಾರ್ ಹಾಲ್ನಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಲಿದ್ದು, ಇದಕ್ಕಾಗಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯವು ಇದೇ ಅಕ್ಟೋಬರ್ 9ರಂದು ಸಂಪ್ರದಾಯದಂತೆ ನಡೆಯಲಿದೆ. ರಾಜ ದರ್ಬಾರ್ಗೆ ಮೈಸೂರು ಅಂಬಾವಿಲಾಸ ಅರಮನೆ ಸಜ್ಜಾಗುತ್ತಿದ್ದು, ಅಕ್ಟೋಬರ್ 9ರಂದು ರತ್ನ ಖಚಿತ ಸಿಂಹಾಸನ ಜೋಡಣಾ ಕಾರ್ಯ ನಡೆಯಲಿದೆ. ಅರಮನೆಯ ಖಾಸಗಿ ದರ್ಬಾರ್ ಹಾಲ್ನಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಸಿಂಹಾಸನ ಜೋಡಣೆ ನಡೆಯಲಿದ್ದು, ಅಂದು ಮುಂಜಾನೆಯಿಂದಲೇ ನವಗ್ರಹ, ಗಣಪತಿ ಹೋಮ-ಹವನ ನೆರವೇರಲಿದೆ.
ಅಕ್ಟೋಬರ್ 15ರಿಂದ ಅರಮನೆಯಲ್ಲಿ ನವರಾತ್ರಿ ಸಂಭ್ರಮ ಆರಂಭವಾಗಲಿದ್ದು, ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಿಸಿ ಬ್ರಾಹ್ಮಿ ಮುಹೂರ್ತದಲ್ಲಿ ರತ್ನ ಖಚಿತ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುವುದು. ಅರಮನೆಯಲ್ಲಿ ಅಕ್ಟೋಬರ್ 20ರಂದು ಸರಸ್ವತಿ ಪೂಜೆ, 21ರಂದು ಕಾಳರಾತ್ರಿ ಪೂಜೆ, 23ರಂದು ಆಯುಧ ಪೂಜೆ, 24ರಂದು ವಿಜಯದಶಮಿ ಪೂಜೆ ನಡೆಯಲಿದೆ. ಇನ್ನ ನವೆಂಬರ್ 8ರಂದು ರತ್ನ ಖಚಿತ ಸಿಂಹಾಸನವನ್ನ ವಿಂಗಡಣೆ ಮಾಡಿ ಭದ್ರತಾ ಕೊಠಡಿಗೆ ರವಾನೆ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ಸಂಪ್ರದಾಯದಂತೆ ಮೈಸೂರು ತಾಲೂಕಿನ ಗೆಜ್ಜಗಳ್ಳಿ ಗ್ರಾಮದ ವೀರಶೈವರು ಮಡಿ ಬಟ್ಟೆತೊಟ್ಟು ದೇವರಿಗೆ ಕೈಮುಗಿದು, ಸಿಂಹಾಸನದ 6 ಭಾಗಗಳನ್ನು ತಂದು ಅಂಬಾವಿಲಾಸ ರತ್ನಗಂಬಳಿಯ ಮೇಲೆ 15 ಅಡಿ ಅಗಲ ಮತ್ತು ಉದ್ದವಿರುವ ಜಾಗದಲ್ಲಿ ಕೂರ್ಮಾವತಾರ ಆಸನವನ್ನು ಜೋಡಿಸಿ, ಕಾಲುಗಳನ್ನು ಅಳವಡಿಸುವರು. ನಂತರ ಪುರೋಹಿತರು ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಬಿಳಿ ಬಟ್ಟೆಯಿಂದ ಮುಚ್ಚುತ್ತಾರೆ. ಈ ವೇಳೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರ ಖುದ್ದು ಮಾರ್ಗದರ್ಶನದಲ್ಲಿ ಸಿಂಹಾಸನದ ಜೋಡಣೆ ಕಾರ್ಯವು ಜರುಗಲಿದೆ. ಹಿಂದಿನ ಕಾಲದಲ್ಲಿ ಪ್ರತಿನಿತ್ಯವೂ ಮಹಾರಾಜರು ಸಿಂಹಾಸನವೇರಿ ದರ್ಬಾರ್ ನಡೆಸುತ್ತಿದ್ದರಾದರೂ ನವರಾತ್ರಿ ವೇಳೆ ನಡೆಯುತ್ತಿದ್ದ ದರ್ಬಾರ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಸ್ವಾತಂತ್ರ್ಯದ ನಂತರ ನವರಾತ್ರಿ ಸಮಯದಲ್ಲಿ ಖಾಸಗಿಯಾಗಿ ಹಿಂದಿನ ಧಾರ್ಮಿಕ ಕೈಂಕರ್ಯದೊಂದಿಗೆ ದರ್ಬಾರ್ ನಡೆಸಲಾಗುತ್ತಿದ್ದು, ಇದು ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿದೆ.