—–ನಾ ದಿವಾಕರ—–
ಪ್ರಾದೇಶಿಕ ಪತ್ರಿಕೆಗಳ ನೈತಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಜನರ ಪತ್ರಿಕೆ ” ಆಂದೋಲನ ”
ಭಾರತದ ಪತ್ರಿಕಾ ವಲಯ ಮತ್ತು ಮುದ್ರಣ ಮಾಧ್ಯಮವು ಕಾರ್ಪೋರೇಟ್ ಮಾರುಕಟ್ಟೆಯ ನಿರಂತರ ದಾಳಿಗೆ ಸಿಲುಕಿ ತನ್ನ ಅಸ್ತಿತ್ವ ಮತ್ತು ಭವಿಷ್ಯವನ್ನು ಸುಸ್ಥಿರವಾಗಿ ಉಳಿಸಿಕೊಳ್ಳಲು ಹರಸಾಹಸ ಮಾಡಬೇಕಾಗಿರುವ ವರ್ತಮಾನ ಸಂದರ್ಭದಲ್ಲಿ ಯಾವುದೇ ಪತ್ರಿಕೆಯಾದರೂ ತನ್ನ ಮೂಲ ವೃತ್ತಿ ಧರ್ಮ ಅಥವಾ ಸಂಪಾದಕತ್ವದ ತಾತ್ವಿಕ ಬದ್ಧತೆಗಳನ್ನು ಯಥಾಸ್ಥಿತಿಯಲ್ಲಿರಿಸಿಕೊಳ್ಳುವುದು ಕಷ್ಟಕರವೇ. ಮುದ್ರಣ ಕಾಗದದ ಮೂಲ ಬೆಲೆಯ ಏರಿಕೆ, ಆಧುನಿಕ ಸಮಾಜಕ್ಕೆ ಪೂರಕವಾಗಿ ಸಿಬ್ಬಂದಿಗಳ ನಿರ್ವಹಣೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ ಮುಂತಾದ ಸಮಸ್ಯೆಗಳು ಪತ್ರಿಕಾ ವಲಯದ ಹಾದಿಯನ್ನು ದುರ್ಗಮಗೊಳಿಸುತ್ತಲೇ ಇವೆ. ಈ ಸಂಕೀರ್ಣ ಪರಿಸ್ಥಿತಿಗಳ ನಡುವೆಯೇ ಒಂದು ಪ್ರಾದೇಶಿಕ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವುದು, ಹಾಗೆ ಹೋಗುವಾಗ ತನ್ನ ಸಂಸ್ಥಾಪಕ ತಾತ್ವಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ.
ವರ್ತಮಾನ ಭಾರತದಲ್ಲಿ ಮುದ್ರಣ ಮಾಧ್ಯಮಗಳ ಸ್ಥಾನವನ್ನು ವಿದ್ಯುನ್ಮಾನ ಮಾಧ್ಯಮಗಳು, ವಿಶೇಷವಾಗಿ ಡಿಜಿಟಲ್ ಬ್ಲಾಗ್ಗಳು ಆಕ್ರಮಿಸಿರುವುದರಿಂದ ಅನೇಕ ಸ್ಥಾಪಿತ ಪತ್ರಿಕಾ ಸಮೂಹಗಳೂ ಮಾರುಕಟ್ಟೆಯಲ್ಲಿ ಉಳಿಯಲು ಹರಸಾಹಸ ಪಡುವಂತಾಗಿದೆ. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ರಾಜ್ಯಮಟ್ಟದ ಮುಖ್ಯವಾಹಿನಿಯ ಪತ್ರಿಕೆಗಳಷ್ಟೇ ಪ್ರಭಾವಶಾಲಿಯಾಗಿ ಪ್ರಾದೇಶಿಕ/ಜಿಲ್ಲಾ/ತಾಲ್ಲೂಕು ಮಟ್ಟದ ಸಣ್ಣ ಪತ್ರಿಕೆಗಳು ತಮ್ಮದೇ ಆದ ಪಾತ್ರ ವಹಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಮುದ್ರಣ ಕಾಗದದ ಬೆಲೆ ಏರಿಕೆ, ಆಧುನಿಕ ಮುದ್ರಣ ಸಲಕರಣೆಗಳ ದುಬಾರಿ ವೆಚ್ಚ ಹಾಗೂ ಸಿಬ್ಬಂದಿಗಳನ್ನು ನಿರ್ವಹಿಸುವ ಹೊರೆಯ ಪರಿಣಾಮವಾಗಿ ಅನೇಕ ಪತ್ರಿಕೆಗಳು ಅಲ್ಪಾಯುಷಿಯಾಗಿ ಕೊನೆಯಾಗುತ್ತವೆ. ಸರ್ಕಾರಿ/ಖಾಸಗಿ ಜಾಹೀರಾತು ಮತ್ತು ಸ್ಥಳೀಯ ಓದುಗರ ಬೌದ್ಧಿಕ ಬೆಂಬಲ ಬಲವಾಗಿಲ್ಲದೆ ಹೋದರೆ ಯಾವುದೇ ಪತ್ರಿಕೆಯೂ ಊರ್ಜಿತವಾಗುವುದು ಕಷ್ಟಕರವಾಗುತ್ತದೆ.
52ರ ಹರೆಯದ ʼ ಆಂದೋಲನ ʼ
ಇಂತಹ ಸಂದಿಗ್ಧ-ಜಟಿಲ ಮಾರುಕಟ್ಟೆ ಸನ್ನಿವೇಶಗಳ ನಡುವೆ ದಿವಂಗತ ರಾಜಶೇಖರ ಕೋಟಿ ಅವರ ಕನಸಿನ ಕೂಸು ಮೈಸೂರಿನ “ಆಂದೋಲನ” ತನ್ನ 52ನೆಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಮೈಸೂರಿನ ಜನತೆಗೆ ಹೆಮ್ಮೆಯ ವಿಚಾರ. ಆರಂಭಿಕ ಸಂಕಷ್ಟದ ದಿನಗಳಲ್ಲಿ ಸಹೃದಯಿಗಳಿಂದ ಚಂದಾ ಸಂಗ್ರಹಿಸಿ ಪ್ರಾರಂಭಿಸಲಾದ ಒಂದು ಪ್ರಾದೇಶಿಕ ಪತ್ರಿಕೆ ಇಂದು ನಾಲ್ಕು ಜಿಲ್ಲೆಗಳ ಸಾವಿರಾರು ಜನರನ್ನು ನಿತ್ಯ ತಲುಪುತ್ತಿರುವುದು ಹೆಮ್ಮೆಯ ವಿಚಾರ. ವಿಶೇಷವಾಗಿ 1970ರ ದಶಕದಲ್ಲಿ ಮೈಸೂರಿನಲ್ಲಿ ರೂಪುಗೊಂಡ ಸಮಾಜವಾದಿ, ಮಾರ್ಕ್ಸ್ವಾದಿ, ಅಂಬೇಡ್ಕರ್ವಾದಿ, ಮಹಿಳಾ ಹೋರಾಟಗಳಿಗೆ ಅಕ್ಷರ ಸಂಗಾತಿಯಾಗಿ ಹೊರಹೊಮ್ಮಿದ ಆಂದೋಲನ ಇಂದಿಗೂ ಸಹ ಮೈಸೂರು ಸುತ್ತಮುತ್ತಲಿನ ಜನಪರ ಹೋರಾಟಗಳಿಗೆ ದನಿಯಾಗಿ ನಿಂತಿರುವುದು ಇನ್ನೂ ಹೆಮ್ಮೆಯ ವಿಚಾರ. ಈ ನಿಟ್ಟಿನಲ್ಲಿ ಮಾರುಕಟ್ಟೆ ಒತ್ತಡ ಮತ್ತು ಸಾಂಸ್ಥಿಕ ನಿರ್ವಹಣೆಯ ಅನಿವಾರ್ಯತೆಗಳಿಂದ ಕೊಂಚ ಭಿನ್ನ ಹಾದಿಯಲ್ಲಿ ಸಾಗುತ್ತಿದ್ದರೂ , ಮೈಸೂರಿನ ಮಟ್ಟಿಗೆ ಇಂದಿಗೂ ಸಹ ʼ ಆಂದೋಲನ ʼ ತನ್ನ ಜನಪರ ಚಹರೆಯನ್ನು ಉಳಿಸಿಕೊಂಡಿರುವುದು ಸತ್ಯ.
ಹಿರಿಯ ಬರಹಗಾರರನ್ನು ಸಮ್ಮಾನಿಸುತ್ತಾ ಹೊಸ ಬರಹಗಾರರನ್ನು ಪ್ರೋತ್ಸಾಹಿಸುತ್ತಾ ನಡೆದಿರುವ ಆಂದೋಲನ ಮಂಡ್ಯ, ಕೊಡಗು, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯಲ್ಲಿ ಸಂಭವಿಸುವ ನೈಸರ್ಗಿಕ ವಿಪತ್ತುಗಳು, ಮಾನವ ನಿರ್ಮಿತ ಅನಾಹುತಗಳು, ಆಳ್ವಿಕೆಯ ನೀತಿಗಳಿಂದುಂಟಾಗುವ ಅಪಾಯಗಳು ಹಾಗೂ ಸರ್ಕಾರಗಳ ನಿರ್ಲಕ್ಷ್ಯ-ನಿಷ್ಕ್ರಿಯತೆಯಿಂದ ಸಾಮಾನ್ಯ ಜನರ ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು, ಈ ಎಲ್ಲ ವಿಚಾರಗಳಲ್ಲೂ ವಸ್ತುನಿಷ್ಠ ವರದಿ ಮಾಡುವ ಮೂಲಕ ಓದುಗರಲ್ಲಿ/ವಿಶಾಲ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಲೇ ಬಂದಿದೆ. ಕೆಲವು ವರ್ಷಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಭೂಕುಸಿತದ ದುರಂತ, ಕೋವಿದ್ ಸಮಯದಲ್ಲಿ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಸಂಭವಿಸಿದ ಸಾವುಗಳು, ಇತ್ತೀಚಿನ ಮಂಡ್ಯದ ಭ್ರೂಣ ಹತ್ಯೆ ಹಾಗೂ ಮಲೆ ಮಹದೇಶ್ವರ ಬೆಟ್ಟದ ಕಾಲಬುಡದಲ್ಲೇ ನಡುವೆ ಇರುವ ಇಂಡಿಗನತ್ತ ಹಾಗೂ ಮೆಂದಾರೆ ಗ್ರಾಮದ ಸಾಮಾಜಿಕ-ಆರ್ಥಿಕ ಹಿಂದುಳಿಯುವಿಕೆ, ಇಂತಹ ವಿಚಾರಗಳನ್ನು ಜನತೆಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ಮೂಲಕ ಆಂದೋಲನ ತನ್ನ ಜನಪರತೆಯ ವೃತ್ತಿಧರ್ಮವನ್ನು ಕಾಪಾಡಿಕೊಂಡುಬಂದಿದೆ.
ಅಕ್ಷರ ಸಾಂಗತ್ಯದ ಪಯಣ
ಇಂತಹ ಒಂದು ಜನಪರ ದನಿಗೆ ಅಕ್ಷರ ಸಂಗಾತಿಯಾಗಿರುವುದೇ ಒಂದು ಹೆಮ್ಮೆಯ ವಿಚಾರ. ʼಆಂದೋಲನʼ ನನಗೆ ಈ ಅವಕಾಶವನ್ನು ನೀಡುತ್ತಲೇ ಬಂದಿರುವುದು ವೈಯುಕ್ತಿಕ ಸಮ್ಮಾನ ಎಂದೇ ಭಾವಿಸುತ್ತೇನೆ. ವೈಯುಕ್ತಿಕವಾಗಿ ನನ್ನ ಪಾಲಿಗೆ ಆಂದೋಲನ ಬರಹ ಲೋಕದ ಮಾಧ್ಯಮಿಕ ಶಾಲೆಗೆ ಸಮನಾದುದು. ಏಕೆಂದರೆ ಪತ್ರಿಕಾ ಬರಹದ (Journalistic) ನನ್ನ ಪಯಣ ಆರಂಭವಾದದ್ದು ಕೋಲಾರದ “ಸಂಚಿಕೆ” ಪತ್ರಿಕೆಯಿಂದ. ದಲಿತ ಸಂಘರ್ಷ ಸಮಿತಿಯ ಹೋರಾಟಗಳಲ್ಲಿ ಆರಂಭದಿಂದಲೂ ತೊಡಗಿರುವ, ಕೋಲಾರದ ಸಿ ಮುನಿಯಪ್ಪ (ಸಿಎಂ) ಅವರ ಸಂಪಾದಕತ್ವದ ʼ ಸಂಚಿಕೆ ʼ ದಿನಪತ್ರಿಕೆ ನನ್ನ ಪ್ರಾಥಮಿಕ ಶಾಲೆ ಎನ್ನಬಹುದು. ಅಲ್ಲಿಂದ 1989-90ರಲ್ಲಿ ಆರಂಭವಾದ ನನ್ನ ಬರಹ ಲೋಕದ ಪಯಣಕ್ಕೆ ಮತ್ತಷ್ಟು ಪುಷ್ಟಿ-ಪ್ರೋತ್ಸಾಹ-ಸ್ಫೂರ್ತಿ ನೀಡಿದ ಪತ್ರಿಕೆ ರಾಜಶೇಖರ ಕೋಟಿ ಅವರ ʼ ಆಂದೋಲನ ʼ. ಮಾಸ ಪತ್ರಿಕೆಗಳ ಪೈಕಿ ಸಂವಾದ ಮತ್ತು ಹೊಸತು ಪತ್ರಿಕೆಗಳು ನನ್ನ ಮೊದಲ ಹೆಜ್ಜೆಗಳಿಗೆ ಹೆಗಲು ನೀಡಿರುವುದನ್ನು ಸ್ಮರಿಸದಿರಲಾರೆ.
1998ರಲ್ಲಿ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಶಾಖೆಗೆ ಬಂದಾಗ ಸಂಪರ್ಕಕ್ಕೆ ಬಂದ ಮೊದಲ ಪ್ರಾದೇಶಿಕ ಪತ್ರಿಕೆಯೇ ಆಂದೋಲನ. ಅದರಲ್ಲಿ ತೂಬಿನಕೆರೆ ಲಿಂಗರಾಜು ಅವರು ಸಾರ್ವಜನಿಕ ಗಣಪತಿ ಉತ್ಸವದ ಬಗ್ಗೆ ಒಂದು ಪತ್ರ ಬರೆದಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ನಾನೂ ಬರೆಯಬೇಕಾಯಿತು ( ಖಚಿತವಾಗಿ ಏನು ಬರೆದಿದ್ದೆ ಎಂದು ಸ್ಪಷ್ಟವಾಗಿ ನೆನಪಾಗುತ್ತಿಲ್ಲ). ಆಂದೋಲನದ ಓದುಗರ ಪತ್ರ ಕಾಲಂಗೆ ಬರೆದ ಈ ಪತ್ರದ ಮೂಲಕ ಸಂಪರ್ಕಕ್ಕೆ ಬಂದಿದ್ದು ಆಂದೋಲನ ಮಂಡ್ಯ ಆವೃತ್ತಿಯ ಸಂಪಾದಕರಾಗಿದ್ದ ಕೆ. ಪಿ. ಮೃತ್ಯುಂಜಯ (ಕವಿ, ಸಾಹಿತಿ, ಪ್ರಸ್ತುತ ಅಧ್ಯಾಪಕ ವೃತ್ತಿಯಲ್ಲಿದ್ದಾರೆ). ಮೂಲತಃ ಅವರ ಉತ್ತೇಜನದಿಂದಲೇ ಆರಂಭವಾದ ನನ್ನ ಬರಹದ ಪಯಣದಲ್ಲಿ ಕೊಂಚ ಕಾಲದ ನಂತರ ಕೋಟಿಯವರನ್ನು ಕಚೇರಿಯಲ್ಲಿ ಮೊಟ್ಟಮೊದಲ ಸಲ ಭೇಟಿ ಮಾಡಿದಾಗ ಅವರು ತೋರಿದ ಆಪ್ತತೆ, ವಿಶ್ವಾಸ, ಆತ್ಮೀಯತೆ ನಿಜಕ್ಕೂ ಅವಿಸ್ಮರಣೀಯ. ಆಂದೋಲನದ ಓದುಗರ ಪತ್ರ ಕಾಲಂಗೆ ನಿರಂತರವಾಗಿ ಬರೆಯಲಾರಂಭಿಸಿ ಕೆಲ ಕಾಲ ಕಳೆದಮೇಲೆ ಲೇಖನಗಳನ್ನೂ ಬರೆಯಲಾರಂಭಿಸಿದೆ. ( ನನ್ನ “ಸಂಪಾದಕರಿಗೊಂದು ಪತ್ರ “ ಪುಸ್ತಕದಲ್ಲಿ ಈ ಬರಹಗಳೆಲ್ಲವೂ ಸಂಗ್ರಹರೂಪದಲ್ಲಿವೆ. ರೂಪ ಪ್ರಕಾಶನ ಮೈಸೂರು)
ನಾನು ಬರೆಯುತ್ತಿದ್ದ ಎಲ್ಲ ಲೇಖನಗಳನ್ನೂ ತಪ್ಪದೆ ಪ್ರಕಟಿಸುತ್ತಿದ್ದ ಗೆಳೆಯ ಮೃತ್ಯುಂಜಯ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸಲೇಬೇಕು. 1998ರ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ನರಸಿಂಹನ್ ಸಮಿತಿಯ ಶಿಫಾರಸುಗಳನ್ನು ಅಧರಿಸಿ ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣಕ್ಕೆ ನಾಂದಿ ಹಾಡಿದಾಗ, ಮೃತ್ಯುಂಜಯ ಅವರು ಈ ವಿಚಾರ ಕುರಿತು ಲೇಖನ ಬರೆಯಲು ಕೇಳಿದ್ದರು. “ ಬ್ಯಾಂಕ್ ಖಾಸಗೀಕರಣದ ಮೊದಲ ಇಟ್ಟಿಗೆ ” ಶೀರ್ಷಿಕೆಯಡಿ ನಾನು ಬರೆದ ಸುದೀರ್ಘ ಲೇಖನವನ್ನು ಆಂದೋಲನ ಪತ್ರಿಕೆಯು ಧಾರಾವಾಹಿಯಂತೆ ಹತ್ತು-ಹದಿನೈದು ದಿನಗಳ ಕಾಲ ಪ್ರಕಟಿಸಿತ್ತು. ಇದನ್ನು ಓದಿದ ವಿಜಯಾಬ್ಯಾಂಕ್ ನೌಕರ ಸಂಘದವರು ತಮ್ಮ ವಾರ್ಷಿಕ ಸಮಾವೇಶಕ್ಕೆ ನನ್ನನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ರೈತ ಸಂಘದ ಧುರೀಣ ದಿವಂಗತ ಪುಟ್ಟಣ್ಣಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡ ಆ ದಿನವೂ ಸ್ಮರಣೀಯ. ಇದಕ್ಕೆ ಕಾರಣವಾದದ್ದು ನಮ್ಮ ಆಂದೋಲನ ಪತ್ರಿಕೆ.
ಒಂದು ವಿಷಯಾಧಾರಿತ ಲೇಖನವನ್ನು ಅಷ್ಟು ದಿನ ಸರಣಿಯಾಗಿ ಧಾರಾವಾಹಿಯಂತೆ ಪ್ರಕಟಿಸುವುದು ಇಂದಿನ ದಿನಗಳಲ್ಲಿ ಊಹಿಸಲೂ ಅಸಾಧ್ಯ. ಆ ದಿನಗಳಲ್ಲೂ ಅದು ಬಹಳ ಅಪರೂಪವಾಗಿತ್ತು ಎನ್ನಬಹುದು. ಆದರೂ ನನಗೆ ಒಬ್ಬ ಬರಹಗಾರನಾಗಿ Baptise ಮಾಡಿದ ಶ್ರೇಯ ಆಂದೋಲನ ಪತ್ರಿಕೆಗೇ ಸಲ್ಲಬೇಕು. ನಂತರದ ದಿನಗಳಲ್ಲಿ ಆಂದೋಲನ ನನ್ನ ಹೆಸರಿನೊಂದಿಗೆ ಸಮ್ಮಿಳಿತವಾಗುವಷ್ಟು ಮಟ್ಟಿಗೆ ನನ್ನ ಲೇಖನಗಳು ಈ ಪತ್ರಿಕೆಯಲ್ಲಿ ಬರಲಾರಂಭಿಸಿದವು. ಒಬ್ಬ ಅಂಕಣಕಾರನಾಗಿ ನನ್ನನ್ನು ಗುರುತಿಸಿದ ʼ ಆಂದೋಲನ ʼ ನನ್ನಲ್ಲಿ ಮೂಡಿಸಿದ ಆತ್ಮವಿಶ್ವಾಸವೇ ನನಗೆ ಪ್ರಜಾವಾಣಿ ಮತ್ತಿತರ ರಾಜ್ಯ ಪತ್ರಿಕೆಗಳಿಗೆ ಬರೆಯಲೂ ಪ್ರೇರಣೆ ನೀಡಿದ್ದು ಸತ್ಯ. ಇದೇ ಸಮಯದಲ್ಲೇ ಆರಂಭವಾದ ʼಸಂವಾದʼ ಮತ್ತು ʼಹೊಸತುʼ ಪತ್ರಿಕೆಗಳಿಗೆ ಬರೆಯಲಾರಂಭಿಸಿದೆ. ರಾಜ್ಯ ಮಟ್ಟದಲ್ಲಿ ನನಗೆ ಒಂದು ಬರಹಗಾರನ ಅಸ್ಮಿತೆಯನ್ನು ನೀಡುವಲ್ಲಿ ʼ ಸಂವಾದ ʼ ಪತ್ರಿಕೆಯ ಪಾಲೂ ಇದೆ. ಸಂವಾದದೊಡನೆ ಅಕ್ಷರ ಸಂವಾದ ಇಂದಿಗೂ ನಿರಂತರವಾಗಿ ಮುಂದುವರೆದಿದೆ.
ಆನಂತರದ ಅಕ್ಷರ ಪಯಣ
ನನ್ನ ಅಂಕಣ ಬರಹಗಳಿಗೆ ಈ ರೀತಿಯಲ್ಲಿ ಸುಭದ್ರ ಬೌದ್ಧಿಕ ಸಂವಹನ ಅಡಿಪಾಯ ಹಾಕಿದ ಸಂಚಿಕೆ ಮತ್ತು ಆಂದೋಲನ ಪತ್ರಿಕೆಗಳು ನನಗೆ ನೀಡಿದ ʼಬರಹಗಾರನ ಅಸ್ಮಿತೆʼ ನನ್ನನ್ನು ರಾಜ್ಯ ಮಟ್ಟದ ಪತ್ರಿಕೆಗಳಿಗೂ ಪರಿಚಯಿಸಿದವು. ಈ ನಡುವೆ ಮತ್ತೊಂದು ಪ್ರಾದೇಶಿಕ ಪತ್ರಿಕೆ ಬಿ.ವಿ. ಸೀತಾರಾಮ್ ಸಂಪಾದಕತ್ವದ ʼ ಕರಾವಳಿ ಅಲೆ ʼ ಪತ್ರಿಕೆಯ ಕೊಡುಗೆಯನ್ನೂ ನಾನು ಸ್ಮರಿಸದಿರಲಾರೆ. ಬಹುಶಃ 2011ರಲ್ಲಿ ಆರಂಭವಾದ ಈ ಪತ್ರಿಕೆಯೊಡಗಿನ ಅಕ್ಷರ ಸಾಂಗತ್ಯ ಇಂದಿಗೂ ಮುಂದುವರೆದಿದೆ. ಹಾಗೆಯೇ ದಿವಂಗತ ಮಹದೇವ ಪ್ರಕಾಶ್ ಸಂಪಾದಕತ್ವದ ʼ ಈ ಭಾನುವಾರ ʼ ಪತ್ರಿಕೆಯೂ ನನ್ನ ಬರಹದ ಪಯಣಕ್ಕೆ ಒಂದು ಹೊಸ ದಿಕ್ಕು ನೀಡಿತ್ತು. ವಾರಕ್ಕೊಂದು ಲೇಖನ ಬರೆಯುವ ಕ್ಷಮತೆಯನ್ನು ನನಗೆ ನೀಡಿದ್ದು ಈ ಭಾನುವಾರ ಪತ್ರಿಕೆ. ಆನಂತರ ಅದು ಮಾಸಪತ್ರಿಕೆಯಾದ ಮೇಲೂ ನನ್ನ ಬರಹ ಮುಂದುವರೆದು, ಮಹದೇವ ಪ್ರಕಾಶ್ ಅವರ ಅಕಾಲಿಕ ಮರಣದ ಕಾರಣ ಪತ್ರಿಕೆಯೂ ನಿಂತು ನನ್ನ ಸಾಂಗತ್ಯವೂ ಕೊನೆಯಾಯಿತು.
ಈ ನಡುವೆಯೇ ಕನ್ನಡದ ಹಲವು ಬ್ಲಾಗ್ಗಳಲ್ಲಿ ನನ್ನ ಬರಹಗಳಿಗೆ ಅವಕಾಶ ದೊರೆತವು. ಅವಧಿ, ಕೆಂಡಸಂಪಿಕೆ, ರಂಗನಾಥ್ ಕಂಟನಕುಂಟೆ ಮತ್ತು ಟಿ.ಕೆ. ತ್ಯಾಗರಾಜ್ ಅವರ ಬ್ಲಾಗ್ಗಳು ನನ್ನ ಬರಹದ ವಿಸ್ತಾರಕ್ಕೆ ಹೆದ್ದಾರಿಯನ್ನು ನಿರ್ಮಿಸಿದ್ದು ಸತ್ಯ. ತದನಂತರ ನನ್ನ ಅಂಕಣಗಳಿಗೆ ಜಾಗ ಕಲ್ಪಿಸಿದ್ದು ವಾರ್ತಾಭಾರತಿ ದಿನಪತ್ರಿಕೆ, ಪ್ರಜಾವಾಣಿ ಮತ್ತು ಕನ್ನಡದ ಡಿಜಿಟಲ್ ಪತ್ರಿಕೆ ʼ ಪ್ರತಿಧ್ವನಿ ʼ . ಹಾಗೆಯೇ ತುಮಕೂರಿನ ಕುಚ್ಚಂಗಿ ಪ್ರಸನ್ನ ಸಾರಥ್ಯದ ದಿನಪತ್ರಿಕೆ ʼಬೆವರಹನಿʼ, ಬೆಂಗಳೂರಿನ ಪ್ರಾಕ್ಷಿಕ ʼ ಕೆಂಧೂಳಿ ʼ ಪತ್ರಿಕೆಗಳೂ ಸಹ ನನ್ನ ಅಕ್ಷರ ಪಯಣಕ್ಕೆ ಹೆಗಲು ನೀಡಿರುವುದನ್ನು ನೆನೆಯಲೇಬೇಕು. ಕಳೆದ ಐದಾರು ವರ್ಷಗಳಿಂದ ʼಪ್ರತಿಧ್ವನಿʼ ನನ್ನ ಎಲ್ಲ ಬರಹಗಳಿಗೆ ಧ್ವನಿಯಾಗುವ ಮೂಲಕ ಬರಹಲೋಕದಲ್ಲಿ ನನಗೊಂದು ಸ್ಥಾನ ಕಲ್ಪಿಸಿರುವುದನ್ನು ಸ್ಮರಿಸಲೇಬೇಕು. ವಿಷಯ ಚೌಕಟ್ಟುಗಳನ್ನು ಮೀರಿ ನನ್ನ ಬರಹಗಳಿಗೆ ಸ್ಪಂದಿಸುತ್ತಿರುವ ಶಿವಕುಮಾರ್ ಸಂಪಾದಕತ್ವದ ʼಪ್ರತಿಧ್ವನಿʼ ಬಳಗಕ್ಕೂ ನಾನು ಸದಾ ಅಭಾರಿ. ಈಗಲೂ ʼ ಪ್ರತಿಧ್ವನಿ ʼಯಲ್ಲಿ ನನ್ನ ಲೇಖನಗಳು ನಿರಂತರವಾಗಿ ಧ್ವನಿಸುತ್ತಲೇ ಇವೆ.
ಇಷ್ಟಾದರೂ ಮೈಸೂರಿನ ಮಟ್ಟಿಗೆ ಹೇಳುವುದಾದರೆ ಸಾಮಾಜಿಕ ಚಳುವಳಿಗಳಲ್ಲಿ, ಹೋರಾಟಗಳಲ್ಲಿ, ಬ್ಯಾಂಕಿಂಗ್ ವಲಯದಲ್ಲೂ ನನ್ನನ್ನು ಗುರುತಿಸುವವರು ಕೇಳುತ್ತಿದ್ದುದೇ “ ನೀವು ಆಂದೋಲನದಲ್ಲಿ ಬರೆಯುತ್ತೀರ ಅಲ್ಲವೇ ? ” ಎಂದು. ಇತ್ತೀಚಿನ ವರ್ಷಗಳಲ್ಲಿ ಆಂದೋಲನದಲ್ಲಿ ನಾನು ಅಪರೂಪಕ್ಕೊಮ್ಮೆ ಕಾಣಿಸಿಕೊಂಡರೂ , ಈಗಲೂ ನನ್ನನ್ನು ಆಂದೋಲನದೊಂದಿಗೇ ಗುರುತಿಸುವುದನ್ನು ನೋಡಿದಾಗ, ಒಂದು ಪತ್ರಿಕೆ ಬರಹಗಾರನೊಬ್ಬನಿಗೆ ಹೇಗೆ ಅಸ್ಮಿತೆಯನ್ನು ಸೃಷ್ಟಿಸಬಲ್ಲದು ಎಂಬ ಹೆಮ್ಮೆಯಾಗುತ್ತದೆ. ವರ್ತಮಾನದ ಸಂದರ್ಭ-ಸವಾಲುಗಳ ಕಾರಣದಿಂದ ಅಲ್ಪಸ್ವಲ್ಪ ವ್ಯತ್ಯಯಗಳನ್ನು ಗುರುತಿಸಬಹುದಾದರೂ, ತನ್ನ ಮೂಲ ತಾತ್ವಿಕ ನೆಲೆಯನ್ನು ಸಡಿಲಗೊಳಿಸದೆ ಜನಪರ ಕಾಳಜಿ, ಸಾಮಾಜಿಕ ಕಳಕಳಿ ಮತ್ತು ಪತ್ರಿಕಾ ಧರ್ಮದ ಬದ್ಧತೆಯೊಂದಿಗೆ ದಾಪುಗಾಲು ಹಾಕುತ್ತಿರುವ “ ಆಂದೋಲನ ”ದೊಂದಿಗೆ ಗುರುತಿಸಿಕೊಳ್ಳುವುದು ನಿಜಕ್ಕೂ ಹೆಮ್ಮೆಯ ವಿಚಾರ.
ಅಂತಿಮವಾಗಿ
ನನ್ನ ಬರಹಲೋಕದ ಪಯಣಕ್ಕೆ ಹೆಗಲು ನೀಡಿದ ಹಲವಾರು ಪತ್ರಿಕೆಗಳು, ಬ್ಲಾಗ್ಗಳು, ಸಂಪಾದಕರು ಹಾಗೂ ಆತ್ಮೀಯ ಗೆಳೆಯರು ನನ್ನ ʼ ಅಸ್ಮಿತೆ ʼಗೆ ಅಡಿಪಾಯ ಹಾಕಿದವರು ಎಂದರೆ ಅತಿಶಯೋಕ್ತಿಯೇನಲ್ಲ. ಆದರೆ ಯಾವುದೇ ವ್ಯಕ್ತಿಯ ಬೌದ್ಧಿಕ ವಿಕಸನ ಪ್ರಕ್ರಿಯೆಯಲ್ಲಿ ಪ್ರಾಥಮಿಕ ಹಂತದಲ್ಲಿ ಬೀಜನೆಟ್ಟು ನೀರೆರೆಯುವುದು, ಮಾಧ್ಯಮಿಕ ಹಂತದಲ್ಲಿ ಪೋಷಿಸಿ ಬೆಳೆಯುವುದು ಮುಖ್ಯ ಹಂತವಾಗಿರುತ್ತದೆ. ಈ ದೃಷ್ಟಿಯಿಂದ ʼ ಸಂಚಿಕೆ ʼ ಪತ್ರಿಕೆಯ ಪ್ರಾಥಮಿಕ ಹೆಜ್ಜೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಅವಕಾಶ ಕಲ್ಪಿಸಿಕೊಟ್ಟ ʼ ಆಂದೋಲನ ʼ ಪತ್ರಿಕೆಯ ಮಾಧ್ಯಮಿಕ ಹೆಜ್ಜೆಗಳು ನನ್ನನ್ನು ಒಬ್ಬ ಬರಹಗಾರನನ್ನಾಗಿ ರೂಪಿಸಿ ಸಮಾಜದ ನಡುವೆ ನಿಲ್ಲಿಸಿವೆ. ಅಷ್ಟೇ ಅಲ್ಲ ನನ್ನ ಮೊದಲ ಅಂಕಣ ಬರಹಗಳ ಸಂಕಲನ ʼ ಒಳದನಿ ʼ ಗೆ (ರೂಪಾ ಪ್ರಕಾಶನ ಮೈಸೂರು) ಬಹಳ ಆಪ್ತತೆಯಿಂದ ಮುನ್ನುಡಿ ಬರೆಯುವ ಮೂಲಕ ಉತ್ಸಾಹ ಇಮ್ಮಡಿಗೊಳಿಸಿದ ರಾಜಶೇಖರ ಕೋಟಿಯವರು ಪುಸ್ತಕ ಬಿಡುಗಡೆಯ ಸಭೆಯಲ್ಲಿ ಉಪಸ್ಥಿತರಿದ್ದರೂ ವೇದಿಕೆಯನ್ನು ಅಲಂಕರಿಸಲು ಒಪ್ಪಲಿಲ್ಲ. ಅದು ಅವರ ಸೌಜನ್ಯಯುತ ಹಿರಿಮೆಗೆ ಸಾಕ್ಷಿ.
ನನ್ನ ಬರಹ ಪಯಣಕ್ಕೆ ಹೆಗಲು ನೀಡುತ್ತಿರುವ ʼಆಂದೋಲನʼ 52 ವಸಂತಗಳನ್ನು ಪೂರೈಸಿರುವುದು ವೈಯ್ಯುಕ್ತಿಕವಾಗಿ ಹೆಮ್ಮೆ ಪಡುವ ವಿಚಾರ. ರಾಜಶೇಖರ ಕೋಟಿಯವರ ಕನಸನ್ನು ಸಾಕಾರಗೊಳಿಸುತ್ತಿರುವ ರವಿಕೋಟಿ, ರಷ್ಮಿ ಕೋಟಿ ಮತ್ತು ಸಮಸ್ತ ಆಂದೋಲನ ಕುಟುಂಬಕ್ಕೆ 52ನೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.
-೦-೦-೦-