ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘2024ರ ಲೋಕಸಭಾ ಚುನಾವಣೆ ಬಿಜೆಪಿಗೆ ಸುಲಭದ ತುತ್ತೇನಲ್ಲ. ಪ್ರತಿಪಕ್ಷಗಳಿಗೆ ಈಗಲೂ ಕಾಲ ಮಿಂಚಿಲ್ಲ. ಸಂಘಟಿತ ಹೋರಾಟ ಮಾಡಿದರೆ ಬಿಜೆಪಿ ಸೋಲಿಸುವುದು ಸಾಧ್ಯವಿಲ್ಲದ ಮಾತೇನಲ್ಲ’ ಎಂದಿದ್ದರು. ಪ್ರಶಾಂತ್ ಕಿಶೋರ್ ಇಂಥದೊಂದು ಮಾತು ಹೇಳಿ ವಾರವೂ ಪೂರ್ತಿಯಾಗಿಲ್ಲ. ಇದೇ ಪ್ರಶಾಂತ್ ಕಿಶೋರ್ ದೇಶದ ರಾಜಕೀಯ ನಕ್ಷೆಯನ್ನು ಬದಲಿಸುತ್ತಾರೆ ಎಂದು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅನುಮೋದಿಸಿದ್ದಾರೆ.
ಕೆಸಿಆರ್ ಎಂದು ಜನಪ್ರಿಯವಾಗಿರುವ ರಾವ್, ‘2024ಕ್ಕೆ ‘ಬಿಜೆಪಿ ವಿರೋಧಿ’ ಪಕ್ಷಗಳನ್ನು ಒಟ್ಟುಗೂಡಿಸುವ ಹೊಸ ಪ್ರಯತ್ನ ಪ್ರಶಾಂತ್ ಕಿಶೋರ್ ಮೂಲಕ ನಡೆಯುತ್ತಿದೆ. ಅವರು ದೇಶದಲ್ಲಿ ಪರಿವರ್ತನೆ ತರಲಿದ್ದಾರೆ. ರಾಜಕಾರಣಕ್ಕೆ ಹೊಸ ದಿಕ್ಕನ್ನು ತೋರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ’ ಎಂದು ಪರಿ ಪರಿಯಾಗಿ ಪ್ರಶಾಂತ್ ಕಿಶೋರ್ ಅವರನ್ನು ಹೊಗಳಿದ್ದಾರೆ. ಇದ್ದಕ್ಕಿದ್ದಂತೆ ಬಿಜೆಪಿ ವಿರುದ್ಧ ಬಂಡೆದ್ದಿರುವ ಕೆ. ಚಂದ್ರಶೇಖರ್ ರಾವ್ ಈಗ ಇದ್ದಕ್ಕಿದ್ದಂತೆ ಪ್ರಶಾಂತ್ ಕಿಶೋರ್ ಅವರನ್ನು ಯದ್ವಾತದ್ವ ಹೊಗಳುತ್ತಿರುವುದು ಸಹಜವಾಗಿಯೇ ಅಚ್ಚರಿ ಮೂಡಿಸಿತ್ತು. ಕೆಲವೇ ಹೊತ್ತಿನಲ್ಲಿ ಕಾರಣ ಬಹಿರಂಗವಾಗಿದೆ. ಪ್ರಶಾಂತ್ ಕಿಶೋರ್ ಮುಂದಿನ ವರ್ಷ ನಡೆಯಲಿರುವ ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ ಪರವಾನಗಿ ತಂತ್ರಗಾರಿಕೆ ಮಾಡಲಿದ್ದಾರೆ.
ಚಂದ್ರಶೇಖರ್ ರಾವ್ ಯಾವ ರೀತಿಯಲ್ಲಿ ಪ್ರಶಾಂತ್ ಕಿಶೋರ್ ಅವರನ್ನು ಅಟ್ಟಕ್ಕಲ್ಲ, ಆಗಸಕ್ಕೆ ಏರಿಸಿದ್ದಾರೆ ಎಂಬುದಕ್ಕೆ ಇನ್ನಷ್ಟು ಪುರಾವೆಗಳಿವೆ. ‘ಈ ದೇಶಕ್ಕೆ ಬದಲಾವಣೆಯ ಅಗತ್ಯವಿದೆ. ಅದಕ್ಕಾಗಿಯೇ ಪ್ರಶಾಂತ್ ಕಿಶೋರ್ ನನ್ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ನಿಖರವಾಗಿ ಸಮೀಕ್ಷೆ ಮಾಡುವ ಕಲೆ ಅವರಿಗೆ ಸಿದ್ದಿಸಿದೆ. ಕಳೆದ 7-8 ವರ್ಷಗಳಿಂದ ಪ್ರಶಾಂತ್ ಕಿಶೋರ್ ನನ್ನ ಆತ್ಮೀಯ ಸ್ನೇಹಿತರು. ಅವರು ಕೂಲಿಗಾಗಿ ಕೆಲಸ ಮಾಡುವವರಲ್ಲ. ರಾಷ್ಟ್ರ ಹಿತಕ್ಕೆ ಬದ್ಧರಾಗಿದ್ದಾರೆ’ ಎಂದು ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಆದರೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸರ್ಕಾರದ ಮೂಲಗಳ ಪ್ರಕಾರ ಪ್ರಶಾಂತ್ ಕಿಶೋರ್ ಅವರ ಭಾರತೀಯ ರಾಜಕೀಯ ಕ್ರಿಯಾ ಸಮಿತಿ (ಐ-ಪಿಎಸಿ) ತಂಡವು ಈಗಾಗಲೇ ಹೈದರಾಬಾದ್‌ನಲ್ಲಿ ಕೆಲಸ ಆರಂಭಿಸಿದೆ. ತೆಲಂಗಾಣ ರಾಷ್ಟ್ರ ಸಮಿತಿ ಸರ್ಕಾರದ ಜನಕಲ್ಯಾಣ ಯೋಜನೆಗಳ ಪ್ರಭಾವ ಎಷ್ಟಿದೆ ಎಂದು ಅಂದಾಜು ಮಾಡುವ ಕೆಲಸ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಕ್ಷೇತ್ರವಾದ ಸಿದ್ದಿಪೇಟೆ ಜಿಲ್ಲೆಯ ಗಜ್ವೇಲ್‌ನಿಂದಲೇ ಆರಂಭವಾಗಿದೆ.

ಇದೇ ಫೆಬ್ರವರಿಯಲ್ಲಿ ಪ್ರಶಾಂತ್ ಕಿಶೋರ್ ಅವರು ಮುಖ್ಯಮಂತ್ರಿ ಕೆಸಿಆರ್ ಮತ್ತು ಅವರ ಮಗ ಕೆಟಿ ರಾಮರಾವ್ ಅವರನ್ನು ಸಿದ್ದಿಪೇಟೆಯ ಎರವೆಲ್ಲಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಭೇಟಿಯಾಗಿ ಗಹನವಾದ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಬಿಜೆಪಿಯ ಕಟ್ಟಾ ವಿಮರ್ಶಕ, ನಟ ಕಮ್ ರಾಜಕಾರಣಿ ಪ್ರಕಾಶ್ ರಾಜ್ ಅವರು ಕೂಡ ಉಪಸ್ಥಿತರಿದ್ದರು. ಇದಾದ ಮೇಲೆ ಚಂದ್ರಶೇಖರ್ ರಾವ್ ಅವರ ನೆಚ್ಚಿನ ಯೋಜನೆ ಎಂದೇ ಹೇಳಲಾಗುವ ಜಾಳೇಶ್ವರಂ ಲಿಫ್ಟ್ ನೀರಾವರಿ ಯೋಜನಾ ಸ್ಥಳಕ್ಕೆ ಪ್ರಶಾಂತ್ ಕಿಶೋರ್ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಎರಡು ಉಪಚುನಾವಣೆಗಳು ಮತ್ತು 2020ರ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಿದ ನಂತರ ಬಿಜೆಪಿ ಚಂದ್ರಶೇಖರ್ ರಾವ್ ಅವರ ಪಾಲಿಗೆ ದೊಡ್ಡ ಶತ್ರುವಾಗಿದೆ. ಇದೇ ಹಿನ್ನೆಲೆಯಲ್ಲಿ ಚಂದ್ರಶೇಖರ್ ರಾವ್ ಮುಂದಿನ ಚುನಾವಣೆಯ ರಣತಂತ್ರ ರೂಪಿಸುವ ಹೊಣೆಯನ್ನು ಪ್ರಶಾಂತ್ ಕಿಶೋರ್ ಅವರ ಹೆಗಲಿಗೆ ಏರಿಸಿದ್ದಾರೆ ಎಂದು ತಿಳಿದುಬಂದಿದೆ.
ತೆಲಂಗಾಣದಲ್ಲಿ ಮತ್ತೆ ಅಧಿಕಾರ ಹಿಡಿಯುವುದರ ಜೊತೆಗೆ ಟಿಆರ್‌ಎಸ್ ಮುಖ್ಯಸ್ಥ ಚಂದ್ರಶೇಖರ್ ರಾವ್ ರಾಷ್ಟ್ರ ರಾಜಕಾರಣದತ್ತಲೂ ನೋಡುತ್ತಿದ್ದಾರೆ. ಮಕ್ಕಳನ್ನು ತೆಲಂಗಾಣದಲ್ಲಿ ಸ್ಥಾಪಿಸಿ ತಾವು ದೆಹಲಿಗೆ ದಾಂಗುಡಿ ಇಡಬೇಕೆಂದು ಬಯಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಅವರು ಪ್ರಶಾಂತ್ ಕಿಶೋರ್ ನೆರವು ಪಡೆಯುತ್ತಿದ್ದಾರೆ. ಪ್ರಶಾಂತ್ ಕಿಶೋರ್ ಸಲಹೆ ಮತ್ತು ಸಹಾಯದಿಂದ ‘ಸಮಾನ ಮನಸ್ಸಿನ ನಾಯಕರಾದ’ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಮಹಾರಾಷ್ಟ್ರ ಸಿಎಂ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಮುಂದೆ ಇನ್ನೂ ಒಂದಿಷ್ಟು ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ಸಾಧ್ಯತೆಯೂ ಇದೆ.