ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ನಾಪತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕಾಲೇಜು ಯುವತಿಯರು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಮರೆಯಾಗುತ್ತಿದ್ದಾರೆ. ಇನ್ನು ಪ್ರಸಕ್ತ ವರ್ಷದಲ್ಲಿ ಯುವತಿಯರ ಮಿಸ್ಸಿಂಗ್ ಕೇಸ್‌ಗಳು ಹೆಚ್ಚಾಗಿದ್ದು ಜಿಲ್ಲೆಯ ಜನರನ್ನ ಆತಂಕಕ್ಕೀಡು ಮಾಡಿದೆ. ಇದನ್ನ ಭೇದಿಸೋಕೆ ಪೊಲೀಸ್ ಇಲಾಖೆ ಸಜ್ಜಾಗಿದೆ.
ರಾಜ್ಯದಲ್ಲೇ ಶಾಂತ ಜಿಲ್ಲೆ ಎನ್ನುವ ಹೆಸರು ಉತ್ತರ ಕನ್ನಡ ಜಿಲ್ಲೆಗಿದೆ. ಈ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕೂಡಾ ವಿರಳ. ಆದ್ರೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಯುವತಿಯರು, ಮಹಿಳೆಯರ ನಾಪತ್ತೆ ಪ್ರಕರಣಗಳು ಸಾಕಷ್ಟು ಸದ್ದು ಮಾಡುತ್ತಿವೆ. ಕಳೆದ 11 ತಿಂಗಳ ಅವಧಿಯಲ್ಲೇ ಇನ್ನೂರಕ್ಕೂ ಅಧಿಕ ನಾಪತ್ತೆ ಪ್ರಕರಣಗಳು ದಾಖಲಾಗಿವೆ.
ಇನ್ನು ಬಹುತೇಕ ಪ್ರಕರಣಗಳು ಗ್ರಾಮೀಣ ಭಾಗದಲ್ಲೇ ನಡೆದಿರೋದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಕೊರೊನಾ ಸೋಂಕಿನ ಮೊದಲ ಅಲೆ ವೇಳೆಯಲ್ಲೇ ಯುವತಿಯರ ಮಿಸ್ಸಿಂಗ್ ಕೇಸ್‌ಗಳ ಸಂಖ್ಯೆ ಹೆಚ್ಚಳವಾಗಿವೆ.
2019ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 257 ಯುವತಿಯರು ನಾಪತ್ತೆ ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ನಾಪತ್ತೆಯಾಗಿದ್ದ 236 ಯುವತಿಯರನ್ನ ಪತ್ತೆ ಹಚ್ಚಲಾಗಿದೆ. ಅದರಲ್ಲಿ ಇನ್ನೂ 21 ಪ್ರಕರಣಗಳು ಪೊಲೀಸರ ತನಿಖೆಯಲ್ಲಿವೆ. ಇನ್ನು 2020ರ ಕೋವಿಡ್ ಲಾಕ್‌ಡೌನ್ ಅವಧಿಯಲ್ಲೇ 212 ನಾಪತ್ತೆ ಕೇಸ್‌ಗಳು ದಾಖಲಾಗಿದ್ದವು. ಈ ಕೇಸ್‌ಗಳಲ್ಲಿ 197 ಮಂದಿಯನ್ನ ಪತ್ತೆ ಮಾಡಲಾಗಿದೆ.
ಇನ್ನೂ 15 ಮಂದಿ ಯುವತಿಯರಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಇನ್ನು ಕಳೆದೆರಡು ವರ್ಷದಲ್ಲಿ ನಾಪತ್ತೆ ಪ್ರಕರಣದ ಅಂಕಿ-ಅಂಶ ಕಡಿಮೆಯಾಗಿತ್ತು. ಆದ್ರೆ, ಪ್ರಸ್ತುತ 2021ರ ಅಂಕಿ-ಅಂಶ ಆತಂಕ ಮೂಡಿಸುವಂತಿದೆ. 2021ರಲ್ಲಿ ನವೆಂಬರ್ ಹೊರತುಪಡಿಸಿ 11 ತಿಂಗಳ ಅವಧಿಯಲ್ಲೇ 232 ಪ್ರಕರಣ ದಾಖಲಾಗಿವೆ.
ಈ ಎಲ್ಲ ಅಂಕಿ ಅಂಶಗಳನ್ನ ಗಮನಿಸಿದಾಗ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಯುವತಿಯರ ನಾಪತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಅಂತಾರೇ ಸ್ಥಳೀಯರು.
ಇನ್ನು ನಾಪತ್ತೆ ಪ್ರಕರಣಗಳಲ್ಲಿ ಬಹುತೇಕ ಕೇಸ್‌ಗಳು ಪ್ರೀತಿ-ಪ್ರೇಮ, ಅನೈತಿಕ ಸಂಬಂಧದಂತಹ ವೈಯಕ್ತಿಕ ಕಾರಣಗಳಿಂದಾಗಿ ಮನೆಬಿಟ್ಟು ಹೋದವರಾಗಿದ್ದಾರೆ. ಬೆರಳೆಣಿಕೆಯಷ್ಟು ಪ್ರಕರಣಗಳಲ್ಲಿ ಅಪಹರಣದ ಶಂಕೆ ಇದ್ದು, ಇನ್ನೂ ಕೆಲವರು ಮಾನಸಿಕವಾಗಿ ಅಸ್ವಸ್ಥಗೊಂಡು ನಾಪತ್ತೆಯಾಗಿದ್ದಾರೆ ಅನ್ನೋದು ತಿಳಿದುಬಂದಿದೆ.
ನಾಪತ್ತೆ ಪ್ರಕರಣಗಳಲ್ಲಿ ವಿವಾಹಿತ ಮಹಿಳೆಯರು, ಶಾಲಾ-ಕಾಲೇಜು ಯುವತಿಯರು ಹೆಚ್ಚಾಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳೇ ಕಾರಣ ಎನ್ನಲಾಗಿದೆ. ಇನ್ನು ಈ ಬಗ್ಗೆ ದಿಟ್ಟ ಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದಾಗಿದ್ದಾರೆ. ಜೊತೆಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಜಿಲ್ಲೆಯಲ್ಲಿ ಒಂದು ವರ್ಷದ ಅವಧಿಯಲ್ಲೇ ಯುವತಿಯರ ನಾಪತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿರೋದು ಆತಂಕಕಾರಿಯಾಗಿದೆ. ಹೀಗಾಗಿ ಜಿಲ್ಲಾ ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಪಾಲಕರೂ ಸಹ ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.