• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ವಾಸ್ತವಿಕ ನೆಲೆಯಲ್ಲಿ ಮಹಿಳಾ ಸಬಲೀಕರಣ-ಸಮಾನತೆ

ನಾ ದಿವಾಕರ by ನಾ ದಿವಾಕರ
March 8, 2025
in ಕರ್ನಾಟಕ, ಜೀವನದ ಶೈಲಿ, ವಿಶೇಷ
0
ವಾಸ್ತವಿಕ ನೆಲೆಯಲ್ಲಿ ಮಹಿಳಾ ಸಬಲೀಕರಣ-ಸಮಾನತೆ
Share on WhatsAppShare on FacebookShare on Telegram

—–ನಾ ದಿವಾಕರ—–

ADVERTISEMENT

ಬಾಹ್ಯ ಪದರಗಳ ಚಿತ್ರಣಕ್ಕೂ ತಳಮಟ್ಟದ ನೆಲದವಾಸ್ತವಗಳಿಗೂ ಅಂತರ ಹೆಚ್ಚಾಗುತ್ತಿದೆ

ಸ್ವತಂತ್ರ ಭಾರತದ ಪ್ರಜಾಸತ್ತಾತ್ಮಕ ಆಳ್ವಿಕೆಯನ್ನು ಮೂಲತಃ ನಿರ್ದೇಶಿಸುವುದು ನಮ್ಮ ಸಂವಿಧಾನ ಮತ್ತು ಈ ಸಾಂವಿಧಾನದಲ್ಲಿ ಅಡಕವಾಗಿರುವ ಸಾಮಾಜಿಕ-ಸಾಂಸ್ಕೃತಿಕ ಹಾಗೂ ರಾಜಕೀಯ ಆಶಯಗಳು. ಡಾ, ಬಿ.ಆರ್‌. ಅಂಬೇಡ್ಕರ್‌ ಸಂವಿಧಾನ ಪೀಠಿಕೆಯಲ್ಲಿ ʼ ಭ್ರಾತೃತ್ವ ʼದ ಪರಿಕಲ್ಪನೆಗೆ ಹೆಚ್ಚು ಒತ್ತು ನೀಡಿರುವುದರ ಉದ್ದೇಶ ಎಂದರೆ ಈ ಪುರುಷಸೂಚಕ ಪದವು ಆಂತರಿಕವಾಗಿ ಲಿಂಗ ಸೂಕ್ಷ್ಮತೆಯ ಆಶಯಗಳನ್ನೂ ಹೊಂದಿರುವುದು. ಫ್ರೆಂಚ್‌ ಕ್ರಾಂತಿಯ ಉದ್ಘೋಷವಾಗಿ ಜಗತ್ತಿನ ಎಲ್ಲ ಸಮಾಜಗಳಲ್ಲೂ ಪ್ರತಿಧ್ವನಿಸಿದ Fraternity ಯ ಮೂಲ Frater ಎಂಬ ಲ್ಯಾಟಿನ್‌ ಪದ, ಇದರರ್ಥ Brother. ಇದನ್ನೇ ಸಾಮೂಹಿಕ ನೆಲೆಯಲ್ಲಿ Fraternity ಅಥವಾ Brotherhood ಎಂದೂ ಬಳಸಲಾಗುತ್ತಿದೆ. ಇದಕ್ಕೆ ಸಂವಾದಿಯಾಗಿ ನಾವು ʼ ಭ್ರಾತೃತ್ವ ʼ ಪದವನ್ನು ಬಳಸುತ್ತಾ ಬಂದಿದ್ದೇವೆ. ಇಲ್ಲಿ ಮಹಿಳಾ ಅಸ್ಮಿತೆ ಇದೆ ಎಂದು ಪರಿಭಾವಿಸಬಹುದಾದರೂ, Sisterhood ಅಥವಾ ಸೋದರಿತ್ವ ಎಂಬ ಪದ ಇಲ್ಲಿ ಅಗೋಚರ ಸ್ಥಿತಿಯಲ್ಲಿದೆ.

 ಆದರೂ ಎಲ್ಲ ಸಮಾಜಗಳಲ್ಲೂ ಈ ಪದವನ್ನು ಸಮಾನಾಂತರವಾಗಿ ಬಳಸಲಾಗುತ್ತಿದ್ದು,                                ʼಮಹಿಳೆಯರನ್ನೂ ಒಳಗೊಳ್ಳುವʼ ಒಂದು ತಾತ್ವಿಕ ನೆಲೆಯಲ್ಲಿ ನಿರ್ವಚಿಸಲಾಗುತ್ತಿದೆ. ಭಾಷಾ ಬೆಳವಣಿಗೆಯೂ ಸಮಾಜದ ಅಭ್ಯುದಯದ ಒಂದು ಭಾಗವಾಗಿ ರೂಪುಗೊಳ್ಳುವುದರಿಂದ ಆಂಗ್ಲ ಭಾಷೆಯಲ್ಲಿ ಮಹಿಳೆಯರಿಗೆ ನಿರ್ದಿಷ್ಟವಾದ Sorority ಎಂಬ ಪದವನ್ನು ಗುರುತಿಸಲಾಗಿದೆ. ಉಭಯಲಿಂಗ ಸೂಚಕವಾಗಿ Adelphity ಎಂಬ ಪದವನ್ನೂ ಗುರುತಿಸಲಾಗಿದೆ. ಆದರೆ ಭಾರತದ ಸಂದರ್ಭದಲ್ಲಿ ʼ ಸೋದರಿತ್ವ ʼ ಎಂಬ ಪದ ಬಳಕೆಯಲ್ಲಿದೆ. ಇಲ್ಲಿ ನಾವು ಮಹಿಳಾ ಸಂಕಥನಗಳಲ್ಲಿ ಹೊರತುಪಡಿಸಿದರೆ ಈ ಪದವನ್ನು ಎಷ್ಟರ ಮಟ್ಟಗೆ ಬಳಸುತ್ತೇವೆ ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇದಕ್ಕೆ ಉತ್ತರ ನಮ್ಮ ಸಮಾಜದ ಆಲೋಚನಾ ವಿಧಾನವನ್ನು ಆವರಿಸಿರುವ ಪಿತೃಪ್ರಧಾನ-ಪುರುಷಾಧಿಪತ್ಯದ ಪಾರಂಪರಿಕ ಮನಸ್ಥಿತಿಯೇ ಆಗಿದೆ. ನಮ್ಮೊಳಗಿನ ಈ ಲಿಂಗ ಸೂಕ್ಷ್ಮತೆ-ಸಂವೇದನೆಯ ಕೊರತೆಯನ್ನು ನೀಗಿಸಿಕೊಳ್ಳುವ ಅವಶ್ಯಕತೆ ಇದೆ.

 ಸಾಂವಿಧಾನಿಕ ಹೆಜ್ಜೆಗಳ ನಡುವೆ

 ಈ ಸೂಕ್ಷ್ಮತೆ ಮತ್ತು ಸಂವೇದನೆ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಮತ್ತು ರಾಜಕೀಯ ಪರಿಭಾಷೆಗಳಲ್ಲಿ ಇಲ್ಲದಿರುವುದರಿಂಲೇ ಸಾಂವಿಧಾನಿಕ ನೆಲೆಯಲ್ಲಿ ಸರ್ಕಾರಗಳು ಬಳಸುವ ಮತ್ತು ಅನುಸರಿಸಲು ಬಯಸುವ ʼ ಸಬಲೀಕರಣ ʼ ಮತ್ತು ʼ ಸಮಾನತೆ ʼ ಎಂಬ ಪದಗಳೂ ಸಹ ಲಿಂಗ ಸೂಕ್ಷ್ಮತೆಯಿಂದ ವಂಚಿತವಾಗುತ್ತಿವೆ. ಡಾ. ಅಂಬೇಡ್ಕರ್‌ ಸಂವಿಧಾನ ರಚನೆಯ ಸಂದರ್ಭದಲ್ಲಿ ಮತ್ತೆ ಮತ್ತೆ ನೆನಪಿಸಿದಂತೆ ಆರ್ಥಿಕ-ಸಾಮಾಜಿಕ ನೆಲೆಯಲ್ಲಿ ಕಾಣದ ಸಮಾನತೆ ರಾಜಕೀಯ ನೆಲೆಯಲ್ಲಿ ಸಾಕಾರಗೊಂಡರೂ ಅರ್ಥಹೀನವಾಗುತ್ತದೆ. ಭಾರತದ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಈ ಪ್ರಮೇಯವನ್ನು ಮಹಿಳಾ ಸಮೂಹಕ್ಕೆ ಅನ್ವಯಿಸಿ ನೋಡಿದಾಗ, ಏಳು ದಶಕಗಳ ಸ್ವತಂತ್ರ ಆಳ್ವಿಕೆಯ ನಂತರವೂ ಈ ಎರಡೂ ಪದಗಳು ವಾಸ್ತವಿಕ ನೆಲೆಯಲ್ಲಿ ಸಮಷ್ಟಿ ರೂಪವನ್ನು ಪಡೆದುಕೊಳ್ಳದಿರುವುದು ಗೋಚರಿಸುತ್ತದೆ. ಈ ದೃಷ್ಟಿಯಿಂದಲೇ ಆಳ್ವಿಕೆಯ ನೆಲೆಯಲ್ಲಿ ಬಳಸಲಾಗುತ್ತಿರುವ ʼ ಮಹಿಳಾ ಸಬಲೀಕರಣ ಮತ್ತು ಸಮಾನತೆʼಯ ಪರಿಕಲ್ಪನೆಯನ್ನು ಮರುನಿರ್ವಚಿಸುವುದು ಅತ್ಯವಶ್ಯವಾಗಿದೆ.

 ಏಕೆಂದರೆ ಈ ಎರಡೂ ಪರಿಕಲ್ಪನೆಗಳು ಆಡಳಿತಾತ್ಮಕವಾಗಿ, ಸಾಂವಿಧಾನಿಕ  ನಿಯಮಗಳನುಸಾರ ಚಾಲ್ತಿಯಲ್ಲಿದ್ದರೂ, ಮಹಿಳಾ ಸಮೂಹದ ಒಳಹೊಕ್ಕು ನೋಡಿದಾಗ ಸಬಲೀಕರಣ ಎನ್ನುವುದು ಕೇವಲ ಆರ್ಥಿಕತೆಗೂ, ಸಮಾನತೆ ಎನ್ನುವುದು ಮೇಲ್ಪದರದ ಸಾಮಾಜಿಕ ಪರಿಸರಕ್ಕೂ ಸೀಮಿತವಾಗಿರುವುದು ಸ್ಪಷ್ಟವಾಗುತ್ತದೆ.  ಈ ಎರಡೂ ಉದಾತ್ತ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರುವ ಆಳ್ವಿಕೆಯ ಕೇಂದ್ರಗಳು ಸಮಾಜದ ಬಾಹ್ಯ ಪದರವನ್ನು ದಾಟಿ, ಸಾಮಾಜಿಕ ಪಿರಮಿಡ್ಡಿನ ತಳಮಟ್ಟದಲ್ಲಿರುವ ಅಸಂಖ್ಯಾತ ಜನಸಮುದಾಯಗಳನ್ನು ತಲುಪದೆ ಇರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮಾರುಕಟ್ಟೆ ಒದಗಿಸುವ ಉದ್ಯೋಗಾವಕಾಶಗಳು ಹಾಗೂ ಔದ್ಯಮಿಕ ವಲಯದಲ್ಲಿ ಒದಗಿಸಲಾಗುವ ವೇತನ ಇತ್ಯಾದಿ ಸೌಲಭ್ಯಗಳು ಸಬಲೀಕರಣದ ಒಂದು ಅಂಶ ಮಾತ್ರ ಎನ್ನುವುದನ್ನು ಗುರುತಿಸಬೇಕಿದೆ.

 ಇಲ್ಲಿ ಮಹಿಳಾ ಸಂಕುಲದ ಸಬಲೀಕರಣ ಮತ್ತು ಸಮಾನತೆ ಎರಡೂ ವಿದ್ಯಮಾನಗಳು ಅಂತರ್‌ ಸಂಬಂಧ ಹೊಂದಿರುವುದನ್ನೂ ಗುರುತಿಸಬೇಕಿದೆ. ಆರ್ಥಿಕವಾಗಿ ಸಬಲೀಕರಣಗೊಂಡ ಮಹಿಳಾ ಸಮೂಹ ಮೇಲ್ನೋಟಕ್ಕೆ ಸಮಾಜದ ವಿವಿಧ ಸ್ತರಗಳಲ್ಲಿ ಸಮಾನತೆ ಪಡೆದಿರುವುದಾಗಿ ಕಂಡರೂ, ಆಂತರಿಕವಾಗಿ ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯು ಇಂದಿಗೂ ಕಾಪಾಡಿಕೊಂಡು ಬಂದಿರುವ ಸ್ತರೀಯ ತಾರತಮ್ಯಗಳು  (Graded discriminations) ಸಾಮಾಜಿಕ ನೆಲೆಯಲ್ಲಿ ತಳಸಮುದಾಯದ ಮಹಿಳಾ ಸಂಕುಲವನ್ನು ಕಾಡುತ್ತಿರುವುದು ಗೋಚರಿಸುತ್ತದೆ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ಸಬಲೀಕರಣಕ್ಕೆ ಸಮಾನಾಂತರವಾಗಿ ಮಹಿಳಾ ದೌರ್ಜನ್ಯಗಳೂ ಹೆಚ್ಚಾಗುತ್ತಿವೆ. ಸಮಾಜದ ಯಾವುದೇ ವಲಯದಲ್ಲೂ ಮಹಿಳೆ ಇಂದು ಸುರಕ್ಷಿತಳಾಗಿಲ್ಲ ಎನ್ನುವುದಕ್ಕೆ ಶೈಕ್ಷಣಿಕ ಕೇಂದ್ರಗಳಲ್ಲಿ, ಅಧ್ಯಾತ್ಮ ವಲಯದಲ್ಲಿ, ಧಾರ್ಮಿಕ ಸ್ಥಾವರಗಳಲ್ಲಿ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಅಸಹಾಯಕ ಮಹಿಳೆಯರು ಅತ್ಯಾಚಾರ, ಕಿರುಕುಳ ಮತ್ತು ಹತ್ಯೆಗೀಡಾಗುತ್ತಿರುವುದೇ ಸಾಕ್ಷಿಯಾಗಿದೆ.

 ಆಡಳಿತಾತ್ಮಕ ಚೌಕಟ್ಟುಗಳಲ್ಲಿ

 ಭಾರತದ ಆಡಳಿತ ವ್ಯವಸ್ಥೆಯಲ್ಲಿ ಮಹಿಳಾ ಸಬಲೀಕರಣವನ್ನು ಸಂಕುಚಿತ ದೃಷ್ಟಿಯಿಂದ, ಕೇವಲ ಆರ್ಥಿಕತೆಗಷ್ಟೇ ಸೀಮಿತಗೊಳಿಸುವ ಧೋರಣೆಯೇ ಪ್ರಧಾನವಾಗಿರುವುದು ಇದಕ್ಕೆ ಕಾರಣವಾಗಿದೆ. ಮತ್ತೆ ಮತ್ತೆ ಅಂಬೇಡ್ಕರ್‌ ಅವರತ್ತ ನೋಡಬೇಕಾಗುತ್ತದೆ. ಆರ್ಥಿಕವಾಗಿ ಸಬಲೀಕರಣಗೊಂಡ ಮಹಿಳೆ ಸಾಮಾಜಿಕವಾಗಿ ಸಮನಾದ ಸ್ಥಾನಮಾನಗಳನ್ನು ಪಡೆಯಲು ಸಾಧ್ಯವಾಗದೆ ಹೋದರೆ, ಸಾಂಸ್ಕೃತಿಕವಾಗಿ ಮಹಿಳಾ ಅಸ್ಮಿತೆಯು ಮುಖ್ಯವಾಹಿನಿಯ ಒಂದು ಭಾಗವಾಗದೆ ಹೋದರೆ ಹಾಗೂ ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ಪಡೆಯದೆ ಹೋದರೆ, ಅಲ್ಲಿ ಮತ್ತೊಮ್ಮೆ ಅಸಮಾನತೆ ಮತ್ತು ತಾರತಮ್ಯಗಳು ತಲೆದೋರುತ್ತವೆ. ಇದನ್ನು ಸಾಧಿಸಲು ಭಾರತೀಯ ಸಮಾಜಕ್ಕೆ ಸಾಧ್ಯವಾಗಿದೆಯೇ ? ಬಹುಶಃ  ಹೌದು ಎನ್ನಲು ಯಾವುದೇ ಸಾಕ್ಷ್ಯಪುರಾವೆಗಳಿಲ್ಲ.  ಏಕೆಂದರೆ ಇಂದಿಗೂ ಸಹ ಔದ್ಯೋಗಿಕ ಪರಿಸರದಲ್ಲೂ ಉನ್ನತ ಮಟ್ಟಕ್ಕೆ ಹೋದಂತೆಲ್ಲಾ ಮಹಿಳಾ ಪ್ರಾತಿನಿಧ್ಯ ಕಡಿಮೆಯಾಗುತ್ತಲೇ ಇರುವುದನ್ನು ಗಮನಿಸುತ್ತಿದ್ದೇವೆ.

 ಕೇಂದ್ರ ಸರ್ಕಾರದ ಮಹಿಳಾ ಕೇಂದ್ರಿತ ನೀತಿಗಳ ಹೊರತಾಗಿಯೂ ದುಡಿಮೆಯ ವಲಯದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಗುರುತಿಸುವಾಗ ನಮಗೆ ಗೋಚರಿಸುವ ಗಾರ್ಮೆಂಟ್‌, ಕಟ್ಟಡ ನಿರ್ಮಾಣ ಮತ್ತಿತರ ಕ್ಷೇತ್ರಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳವು, ಸಮಗ್ರ ನೆಲೆಯಲ್ಲಿ ನೋಡಿದಾಗ ಕಾಣುವುದಿಲ್ಲ. ಭಾರತದಲ್ಲಿ ದುಡಿಮೆಯ ವಲಯದ ಮಹಿಳಾ ಪ್ರಾತಿನಿಧ್ಯ ಶೇಕಡಾ 35.9ರಷ್ಟಿದೆ. ಆದರೆ ಉದ್ಯೋಗ ವಲಯದ ಉನ್ನತ ಸ್ತರದಲ್ಲಿ ಗಮನಿಸುವಾಗ ಈ ಅನುಪಾತ ಕೇವಲ 12.7ಕ್ಕೆ ಸೀಮಿತವಾಗಿರುವುದು ಕಂಡುಬರುತ್ತದೆ. ಇದೇ ವಿದ್ಯಮಾನವನ್ನು ಇತ್ತೀಚೆಗೆ ಸರ್ಕಾರವು ಅನುಸರಿಸುತ್ತಿರುವ ಲಿಂಗತ್ವ ಬಜೆಟ್‌ ( Gender Budget) ಕಲ್ಪನೆಯಲ್ಲೂ ಗುರುತಿಸಬಹುದು. ಉದಾಹರಣೆಗೆ 2024-25ರ ಬಜೆಟ್‌ನಲ್ಲಿ ಹಲವು ಮಹಿಳಾ ಯೋಜನೆಗಳನ್ನೊಳಗೊಂಡ ಎಂಎಸ್‌ಎಂಇ ಕ್ಷೇತ್ರಕ್ಕೆ ಜೆಂಡರ್‌ ಬಜೆಟ್‌ನ ಶೇಕಡಾ 0.7ರಷ್ಟು ಮಾತ್ರ ಮೀಸಲಿರಿಸಲಾಗಿದೆ.

 ದುಡಿಮೆಯ ವಲಯದಲ್ಲಿ ಮಹಿಳೆಯರನ್ನು ಒಳಗೊಳ್ಳುವಿಕೆಗೆ ಇರುವ ತೊಡಕಿಗೆ ಮೂಲ ಕಾರಣ ಮಕ್ಕಳ ಲಾಲನೆ ಪಾಲನೆ ಮತ್ತು ವೈಯುಕ್ತಿಕವಾದ ಕೌಟುಂಬಿಕ ಜವಾಬ್ದಾರಿಗಳು ಎಂದು ಸಮೀಕ್ಷೆಯೊಂದರಲ್ಲಿ ಹೇಳಲಾಗಿದೆ. 2023-24ರಲ್ಲಿ 15 ರಿಂದ 59 ವರ್ಷದವರೆಗಿನ ಮಹಿಳೆಯರ ಪೈಕಿ ಶೇಕಡಾ 64.5ರಷ್ಟು ಜನರು ಈ ಕಾರಣಗಳಿಗಾಗಿ ದುಡಿಮೆಯಿಂದ ದೂರ ಉಳಿದಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆಯಾದರೂ ಈ ವರ್ಷದ ಜೆಂಡರ್‌ ಬಜೆಟ್‌ನಲ್ಲಿ ಕೇವಲ ಶೇಕಡಾ 4.2ರಷ್ಟು ನಿಧಿಯನ್ನು ಮೀಸಲಿರಿಸಲಾಗಿದೆ. ಈ ಬಜೆಟ್‌ ಅನುದಾನದಲ್ಲಿ ಶೇಕಡಾ 80ರಷ್ಟನ್ನು ಪಿಎಂ ಕಿಸಾನ್‌ ಯೋಜನೆಗೆ ಮೀಸಲಿರಿಸಲಾಗಿದೆ. ಪ್ರತಿ ಕೃಷಿ ಕುಟುಂಬಕ್ಕೂ ವರ್ಷಕ್ಕೆ 6000 ರೂ ಒದಗಿಸುವ ಈ ಕಾರ್ಯಕ್ರಮದಡಿ ಮಹಿಳಾ ಕೃಷಿಕರಿಗೆ ಎಷ್ಟು ಸಲ್ಲುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಬಹುಪಾಲು ಭೂಮಿ ಪುರುಷರ ಒಡೆತನಕ್ಕೊಳಪಟ್ಟಿರುವುದರಿಂದ ಇಲ್ಲಿ ನೇರವಾಗಿ ಮಹಿಳೆ ಫಲಾನುಭವಿಯಾಗಿರುವ ಸಾಧ್ಯತೆಗಳು ಬಹಳ ಕಡಿಮೆ ಇರುತ್ತದೆ .

 ಪ್ರಾತಿನಿಧ್ಯದ ತಡೆಗೋಡೆಗಳು

 ಈ ಆರ್ಥಿಕತೆಯಿಂದ ಹೊರತಾಗಿ ನೋಡಿದಾಗ, ಸಾಮಾಜಿಕವಾಗಿ ಮತ್ತು ಒಂದು ಹಂತಕ್ಕೆ ಆರ್ಥಿಕವಾಗಿ ಸಮಾನ ಸ್ತರದಲ್ಲಿ ಕಾಣುವ ಮಹಿಳೆ, ಸಾಂಸ್ಕೃತಿಕವಾಗಿ ಸದಾ ನೇಪಥ್ಯದಲ್ಲೇ ಇರುವುದನ್ನು ಗುರುತಿಸಬೇಕಿದೆ. ಸಮಾನತೆ ಎನ್ನುವುದನ್ನು ಸಾಮಾಜಿಕ ನೆಲೆಯಲ್ಲಿ ನಿಷ್ಕರ್ಷೆಗೊಳಪಡಿಸಿದಾಗ, ಭಾರತೀಯ ಸಮಾಜದ ಸಾಂಸ್ಥಿಕ ನೆಲೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನೂ ಗಮನಿಸಬೇಕಾಗುತ್ತದೆ. ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನೂ ಒಳಗೊಂಡಂತೆ ರಾಜಕೀಯವಾಗಿ ಮಹಿಳಾ ಪ್ರಾತಿನಿಧ್ಯವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಯಾವುದೇ ರಾಜಕೀಯ ಪಕ್ಷವೂ ಗಂಭೀರ ಚಿಂತನೆ ನಡೆಸದೆ ಇರುವುದನ್ನೂ ನಾವು ಗಮನಿಸುತ್ತಿದ್ದೇವೆ. ಆಂತರಿಕ ಪ್ರಜಾಪ್ರಭುತ್ವದ ಕಲ್ಪನೆಯೇ ಇಲ್ಲದ ಅಥವಾ ಆ ಉದಾತ್ತ ಕಲ್ಪನೆಗೆ ಪ್ರಾಶಸ್ತ್ಯವನ್ನೇ ನೀಡದ ರಾಜಕೀಯ ಪಕ್ಷಗಳು ತಮ್ಮೊಳಗಿನ ಶ್ರೇಣೀಕರಣದಲ್ಲಿ ಮಹಿಳಾ ಸಮೂಹಕ್ಕೆ ಸೂಕ್ತ ಸ್ಥಾನಮಾನವನ್ನು ಕಲ್ಪಿಸುವ ಆಲೋಚನೆ ಮಾಡುವುದು ವರ್ತಮಾನದ ತುರ್ತು.

 ಆದರೆ ಎಡಪಕ್ಷಗಳನ್ನೂ ಒಳಗೊಂಡಂತೆ ಯಾವ ಪಕ್ಷದಲ್ಲೂ ಈ ಔದಾತ್ಯವನ್ನು ಕಾಣಲಾಗುತ್ತಿಲ್ಲ. ಹಾಗಾಗಿಯೇ ಆಡಳಿತಾತ್ಮಕ ನೆಲೆಯಲ್ಲಿ ಅನುಸರಿಸಲಾಗುವ ಕಾಯ್ದೆ, ಕಾನೂನು, ನಿಯಮ ಮತ್ತು ನೀತಿಗಳು ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ಮಹಿಳಾ ಸುರಕ್ಷತೆಯನ್ನು ಸಾಕಾರಗೊಳಿಸಲಾಗುತ್ತಿಲ್ಲ. ಸಮಾನತೆಗಾಗಿ ಹೋರಾಡುತ್ತಿರುವ ಮಹಿಳಾ ಚಳುವಳಿಗಳಲ್ಲಿ ಸಮಾನ ಹಕ್ಕುಗಳಷ್ಟೇ ಅಲ್ಲದೆ ಸಮಾನ ಸಾಮಾಜಿಕ-ಸಾಂಸ್ಕೃತಿಕ ಸ್ಥಾನಮಾನಗಳೂ ಒಂದು ಪ್ರಧಾನ ಕಾರ್ಯಸೂಚಿಯಾಗಬೇಕಿದೆ. ಏಕೆಂದರೆ ಭಾರತದ ಇಡೀ ಸಮಾಜವನ್ನು ಅದರೊಳಗೇ ರೂಪುಗೊಳ್ಳುವ ರಾಜಕೀಯ ವ್ಯವಸ್ಥೆಯನ್ನು ಇಂದಿಗೂ  ನಿರ್ದೇಶಿಸುತ್ತಿರುವುದು ಪ್ರಾಚೀನ ಪಿತೃಪ್ರಧಾನ-ಊಳಿಗಮಾನ್ಯ ಧೋರಣೆಗಳೇ. ಈ ಧೋರಣೆಯಿಂದ ಹೊರಬರದಿದ್ದರೆ, ಮಹಿಳಾ ಸಮಾನತೆ ಎನ್ನುವ ಕಲ್ಪನೆಯೇ ಅಲಂಕಾರಿಕವಾಗುವ ಸಾಧ್ಯತೆಗಳಿವೆ.

 ಈ ನೆಲೆಯಲ್ಲಿ ನಿಂತು ನೋಡುವಾಗ ನಮ್ಮ ಸಮಾಜ ಮತ್ತು ಆಡಳಿತ ವ್ಯವಸ್ಥೆಯು ರೂಪಿಸಿರುವ ಸಬಲೀಕರಣ ಮತ್ತು ಸಮಾನತೆ ಎರಡೂ ಉದಾತ್ತ ಕಲ್ಪನೆಗಳು, ತಳಸಮಾಜದ ಬಹುಸಂಖ್ಯಾತ ಮಹಿಳೆಯರ ದೃಷ್ಟಿಯಲ್ಲಿ ಮಿಥ್ಯೆಯಂತೆ ಕಾಣುತ್ತದೆ. ಏಕೆಂದರೆ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸಬಲೀಕರಣ ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ಕಡಿಮೆ ಮಾಡಲು ನೆರವಾಗಿಲ್ಲ. ಇದಕ್ಕಿಂತಲೂ ಮುಖ್ಯವಾಗಿ ಹೆಣ್ತನದ ಬಗ್ಗೆ ನಮ್ಮ ಸಾಮಾಜಿಕ ಧೋರಣೆ ಬದಲಾಗಿಲ್ಲ. ಮೂರು ವರ್ಷದ ಹೆಣ್ಣುಮಗುವಿನ ವರ್ತನೆಯೇ ಲೈಂಗಿಕ ದೌರ್ಜನ್ಯಕ್ಕೆ ಕಾರಣ ಎನ್ನುವ ಒಂದು ಮನಸ್ಥಿತಿ ನಮ್ಮ ಆಡಳಿತ ವ್ಯವಸ್ಥೆಯಲ್ಲೇ ಇರುವುದನ್ನು ಪ್ರತ್ಯಕ್ಷವಾಗಿ ನೋಡಿದ್ದೇವೆ. ಇಂತಹ ವ್ಯಕ್ತಿಗಳನ್ನು ಅಮಾನತು ಮಾಡುವುದು ಪರಿಹಾರವಲ್ಲ. ಹೆಣ್ತನದ ಘನತೆಯನ್ನು ಗೌರವಿಸುವ ಒಂದು ಆರೋಗ್ಯಕರ ಸಮಾಜವನ್ನು ಕಟ್ಟುವುದು ಪರಿಹಾರವಾಗುತ್ತದೆ.

 ಕರ್ಮಠ ಮನಸ್ಥಿತಿಯ ಭಿನ್ನ ಆಯಾಮಗಳು

 ಮನುವಾದ, ಸನಾತನವಾದ ಎಂಬ ಕ್ಲೀಷೆಗಳಿಂದ ಹೊರಬಂದು ನೋಡಿದಾಗ, ಡಿಜಿಟಲ್‌ ಯುಗದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂವಹನ ಸಾಧನಗಳ ನಡುವೆಯೂ ಸುಶಿಕ್ಷಿತ ಸಮಾಜ ಮಹಿಳೆಯನ್ನು ನೋಡುವ ದೃಷ್ಟಿಕೋನ ತನ್ನ ಪ್ರಾಚೀನತೆಯ ಪೊರೆಯನ್ನು ಕಳಚಿಕೊಂಡಿಲ್ಲ ಎನ್ನುವ ಕಟು ವಾಸ್ತವ ನಮ್ಮನ್ನು ಕಾಡಬೇಕಿದೆ. ಜಾತಿ, ಮತ ಮತ್ತು ಆರ್ಥಿಕ ಸ್ಥಾನಮಾನಗಳ ಅಸ್ಮಿತೆಗಳಿಂದಾಚೆಗೂ ಈ ಮನಸ್ಥಿತಿ ಜೀವಂತವಾಗಿರುವುದೂ ಸಹ ಗಂಭೀರ ಸಮಸ್ಯೆಯಾಗಿದೆ. ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ-ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಪುರುಷಕೇಂದ್ರಿತ ಭದ್ರಕೋಟೆಗಳನ್ನು ಭೇದಿಸುವ ತುರ್ತು ಇಂದು ಎದುರಾಗಿದೆ. ಇದಕ್ಕೆ ಬಹುಮುಖ್ಯವಾಗಿ ಅಡ್ಡಿಯಾಗುವುದು ನವ ಉದಾರವಾದ ಮತ್ತು ಬಂಡವಾಳಶಾಹಿಯು ಸೃಷ್ಟಿಸುವಂತಹ ಮಾರುಕಟ್ಟೆಯ ಗೋಡೆಗಳು. ಈ ಅಪಾಯಕಾರಿ ಗೋಡೆಗಳನ್ನು ಕೆಡವುವ ನಿಟ್ಟಿನಲ್ಲಿ, ಮಹಿಳೆಯೇ ನಾಯಕತ್ವ ವಹಿಸಿರುವ ಬಹುಜನ ಸಮಾಜ ಪಕ್ಷ, ತೃಣಮೂಲ ಕಾಂಗ್ರೆಸ್‌ನಂತಹ ಪಕ್ಷಗಳೂ ಕ್ರಿಯಾಶೀಲವಾಗಿ ಯೋಚಿಸುತ್ತಿಲ್ಲ. ಇದು ಕಟು ವಾಸ್ತವ.

 ಹಾಗಾಗಿಯೇ ಈ ಮಹಿಳಾ ನಾಯಕತ್ವಗಳೂ ಸಹ ಸಮಾಜದಲ್ಲಿ ಬೇರೂರಿರುವ ಶೋಷಣೆಯ ಬೇರುಗಳನ್ನು ಅಲುಗಾಡಿಸಲಾಗುತ್ತಿಲ್ಲ. ಮಹಿಳಾ ದೌರ್ಜನ್ಯಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಪಿತೃಪ್ರಧಾನತೆ ಮೂಲತಃ ಬೆಳೆಯುವುದು ಸಾಮಾಜಿಕ-ಆರ್ಥಿಕ ನೆಲೆಯಲ್ಲಿ. ಅದನ್ನು ದೀರ್ಘಕಾಲ ಯಥಾಸ್ಥಿತಿಯಲ್ಲಿರಿಸಿ ಸ್ಥಾಪಿತ ಹಿತಾಸಕ್ತಿಯನ್ನಾಗಿಸುವುದು ಜಾತಿ ಶ್ರೇಷ್ಠತೆಗಳ ಚಿಂತನೆ ಮತ್ತು ಧಾರ್ಮಿಕ ನಂಬಿಕೆಗಳು. ಭಾರತದ ಅಲ್ಪಸಂಖ್ಯಾತ ಸಮುದಾಯದ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಈ ವಾಸ್ತವವನ್ನು ಸ್ಪಷ್ಟವಾಗಿ ಕಾಣಬಹುದು. ಹಿಂದೂ-ಮುಸ್ಲಿಂ ಕ್ರೈಸ್ತ ಸಮಾಜಗಳಲ್ಲಿರುವ ಪುರೋಹಿತಶಾಹಿಯ ನಿಯಂತ್ರಣದ ಒಂದು ಆಯಾಮವನ್ನು ಮಾತ್ರ ಮೇಲ್ಜಾತಿಗಳಲ್ಲಿರುವ ಕರ್ಮಠ ಧೋರಣೆ ಮತ್ತು ಸಾಂಪ್ರದಾಯಿಕ ಚಿಂತನೆಗಳಲ್ಲಿ ಕಾಣಬಹುದು. ಇದನ್ನೂ ದಾಟಿದಂತೆ ಆಳವಾಗಿ ಬೇರೂರಿರುವ ಪ್ರಾಚೀನ ಊಳಿಗಮಾನ್ಯ ಚಿಂತನೆಗಳು ಪಿತೃಪ್ರಧಾನತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿರುತ್ತವೆ.

 ಈ ಗಟ್ಟಿ ತಳಪಾಯವನ್ನು ಭೇದಿಸಿ ಭಂಗಗೊಳಿಸಬೇಕಾದರೆ ಅರಿವಿನ ವಿಸ್ತರಣೆಯಾಗುವುದು ಅತ್ಯವಶ್ಯ. ಅರಿವು ಮೂಡಬೇಕಿರುವುದು ಕೇವಲ ತಳಸಮಾಜದಲ್ಲಿ ಅಲ್ಲ. ಆಧುನಿಕತೆಗೆ ತೆರೆದುಕೊಂಡಿರುವ, ನಗರೀಕರಣಕ್ಕೊಳಗಾಗಿರುವ ಹಾಗೂ ತಂತ್ರಜ್ಞಾನಾಧಾರಿತ ಸಂವಹನ ಕ್ಷೇತ್ರವನ್ನು ಪ್ರಭಾವಿಸುವ ಒಂದು ಹಿತವಲಯದ ಸಮಾಜದ ನಡುವೆ ಲಿಂಗ ಸೂಕ್ಷ್ಮತೆ ಮತ್ತು ಸಂವೇದನೆಯ ಅರಿವು ಮೂಡಬೇಕಿದೆ. ಅಧಿಕಾರ ರಾಜಕಾರಣ, ಅದರೊಡನೆ ಅಧಿಕಾರಶಾಹಿಯ ಸಾಂಸ್ಥಿಕ ನೆಲೆಗಳನ್ನು ಪ್ರಭಾವಿಸುವುದಷ್ಟೇ ಅಲ್ಲದೆ, ಆಡಳಿತಾತ್ಮಕ ನೀತಿಗಳನ್ನೂ, ವಿದ್ಯುನ್ಮಾನ ಮಾಧ್ಯಮಗಳನ್ನೂ ಒಳಗೊಂಡಂತೆ ಸಂವಹನ ಕ್ಷೇತ್ರಗಳನ್ನೂ, ದೇಶದ ಬೌದ್ಧಿಕ ಸಂಕಥನಗಳನ್ನೂ ನಿಯಂತ್ರಿಸುವ ಒಂದು ವರ್ಗದ ನಡುವೆ ಇದನ್ನು ಬೆಳೆಸಬೇಕಿದೆ. ಏಕೆಂದರೆ ಈ ವರ್ಗವೇ ಸಮಾಜಕ್ಕೆ ಅಗತ್ಯವಾದ ಬೌದ್ಧಿಕ ಚಿಂತನೆಗಳನ್ನೂ ಪರಿಣಾಮಕಾರಿಯಾಗಿ ಒದಗಿಸುತ್ತದೆ.

 ಸಮಾಜದ ಮೇಲ್ಪದರವನ್ನು ಪ್ರತಿನಿಧಿಸುವ ಈ ವರ್ಗವೇ ಸಾಂಸ್ಕೃತಿಕ ವಲಯದಲ್ಲೂ ತನ್ನ ಪ್ರಭಾವ ಬೀರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗಾಗಿಯೇ ಸಂಘಟನಾತ್ಮಕವಾಗಿ, ಸಾಂಸ್ಥಿಕ ನೆಲೆಗಳಲ್ಲೂ ಸಹ ಭಾರತದ ಮಹಿಳಾ ಸಂಕುಲ ತನ್ನ ಪ್ರಾತಿನಿಧ್ಯಕ್ಕಾಗಿ ಹೋರಾಡುವುದರೊಂದಿಗೆ ಲಿಂಗಸೂಕ್ಷ್ಮತೆ-ಸಂವೇದನೆಗಳನ್ನು ಬೆಳೆಸುವತ್ತ ಗಮನಹರಿಸಬೇಕಿದೆ. ಪುರುಷಾಧಿಪತ್ಯದ ಭದ್ರಕೋಟೆಗಳನ್ನು ಭೇದಿಸದೆ ಹೋದರೆ “ ಮಹಿಳಾ ಸಬಲೀಕರಣ ಮತ್ತು ಸಮಾನತೆ ” ಎರಡೂ ಆಶಯಗಳು ಅಲಂಕಾರಿಕವಾಗಿಬಿಡುತ್ತವೆ.  ಇದು ರಾಜಕೀಯ ಕಾರ್ಯಕ್ರಮವಾಗುವುದಕ್ಕಿಂತಲೂ ಅಂಬೇಡ್ಕರ್‌, ಫುಲೆ, ಮಾರ್ಕ್ಸ್‌, ಲೋಹಿಯಾ, ಗಾಂಧಿ ಮತ್ತು ಪೆರಿಯಾರ್‌ ಮೊದಲಾದ ದಾರ್ಶನಿಕರನ್ನು ಅನುಸರಿಸುವ ಸಂಘಟನೆಗಳ ಕಾರ್ಯಸೂಚಿಯಾಗಬೇಕಿದೆ. ಈ ಸಾಂಘಿಕ ನೆಲೆಗಳಲ್ಲಿರುವ ಪಿತೃಪ್ರಧಾನತೆಯ ಗೋಡೆಗಳನ್ನು ಕೆಡವಿ, ಸಮ ಸಮಾಜವನ್ನು ಕಟ್ಟುವತ್ತ ಸಾಗಬೇಕಿದೆ. ಮಹಿಳಾ ಸಮಾನತೆ ಇಲ್ಲದ ಸಮ ಸಮಾಜ ಅರ್ಥಹೀನ ಎನ್ನುವ ಕಟು ವಾಸ್ತವವನ್ನು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪುನರ್‌ ಮನನ ಮಾಡಿಕೊಳ್ಳೋಣ.

ಸಮಸ್ತ ಮಹಿಳೆಯರಿಗೂ ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆಯ ಶುಭಾಶಯಗಳು

-೦-೦-೦-೦-

Tags: gender inequality in indiainternational women's dayinternational womens day speech in englishreality of international students in australiareality of student life in australiasad realityspeech on international women's day in englishspeech on women's day in englishwomen empowerment in indiawomen's day speech in englishwomen's rights
Previous Post

ಪಾನ ನಿರೋಧದಿಂದ ಭಾಗಶಃ ಮುಕ್ತವಾಗಿರುವ ಗುಜರಾತ್

Next Post

ಬಜೆಟ್ ನಲ್ಲಿ ಇಂಧನ ಇಲಾಖೆಯಿಂದ ರಾಜ್ಯಕ್ಕೆ ಭರಪೂರ ಅನುದಾನ

Related Posts

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?
ದೇಶ

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

by ಪ್ರತಿಧ್ವನಿ
July 5, 2025
0

ಪ್ರಶ್ನೆಯೊಂದಿಗೆ ಕನ್ನಡದ ಎಎಂಆರ್‌ ರಮೇಶ್ ರಾಜೀವ್‌ ಗಾಂಧಿ ಹತ್ಯೆ ಕುರಿತು ಚಿತ್ರ/ ವೆಬ್‌ ಸೀರೀಸ್‌ ಮಾಡಲು ಕಳೆದ ಮೂವತ್ತು ವರ್ಷಗಳಿಂದ ಕನಸುತ್ತಿರುವ ಕನ್ನಡದ ಎಎಂಆರ್‌ ರಮೇಶ್‌ ಈಗ...

Read moreDetails

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

July 5, 2025
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

July 5, 2025

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

July 5, 2025
Next Post
ಬಜೆಟ್ ನಲ್ಲಿ ಇಂಧನ ಇಲಾಖೆಯಿಂದ ರಾಜ್ಯಕ್ಕೆ ಭರಪೂರ ಅನುದಾನ

ಬಜೆಟ್ ನಲ್ಲಿ ಇಂಧನ ಇಲಾಖೆಯಿಂದ ರಾಜ್ಯಕ್ಕೆ ಭರಪೂರ ಅನುದಾನ

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
Top Story

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

by ಪ್ರತಿಧ್ವನಿ
July 5, 2025
Top Story

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

by ಪ್ರತಿಧ್ವನಿ
July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

July 5, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada