
ರಿತುಪರ್ಣ ಪತಗಿರಿ
(ಮೂಲ : Celebrating the legacy of Womenʼs learning – Rituparna Patgiri ಇಂಡಿಯನ್ ಎಕ್ಸ್‌ಪ್ರೆಸ್ 11 ಮಾರ್ಚ್ 2025)
ಕನ್ನಡಕ್ಕೆ : ನಾ ದಿವಾಕರ
ಭಾರತದಲ್ಲಿ ಮಹಿಳಾ ಸಬಲೀಕರಣದ ಹಾದಿಯಲ್ಲಿ ಒಂದು ನಿರ್ಣಾಯಕ ಮಾನದಂಡ ಮತ್ತು ಮಾಪಕವಾಗಿ ಕಾಣುವುದು ಶಿಕ್ಷಣದ ಹಕ್ಕು. ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನದ ಧ್ಯೇಯವಾಕ್ಯ “ಕ್ರಿಯೆಯನ್ನು ಚುರುಕುಗೊಳಿಸುವುದು” (Accelerate Action) ಎಂದು ಘೋಷಿಸಲಾಗಿತ್ತು. ಇದರ ಮೂಲ ಉದ್ದೇಶ ಲಿಂಗ ಸಮಾನತೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಮಾಜಿಕ ಹೋರಾಟ ಮತ್ತು ಚಟುವಟಿಕೆಗಳನ್ನು ಮತ್ತಷ್ಟು ಕ್ರಿಯಾಶೀಲ ಮತ್ತು ಚಲನಶೀಲವಾಗಿಸುವುದು. ಶಿಕ್ಷಣ ಮತ್ತು ಉದ್ಯೋಗ ವಲಯದಲ್ಲಿ ಹಾಗೂ ನಾಯಕತ್ವದ ಪಾತ್ರವನ್ನು ಕಲ್ಪಿಸುವ ಹಾದಿಯಲ್ಲಿ ಮಹಿಳಾ ಸಬಲೀಕರಣವನ್ನು ಚುರುಕುಗೊಳಿಸುವುದು ಬಹುಮುಖ್ಯ ಕ್ರಿಯೆಗಳಾಗಿದ್ದು, ಇದು ವ್ಯವಸ್ಥೆಯೊಳಗಿನ ಅಡೆತಡೆಗಳನ್ನು ನಿವಾರಿಸಿ ಮುನ್ನಡೆಯಲು ಸಹಕಾರಿಯಾಗುತ್ತದೆ. ತನ್ಮೂಲಕ ಲಿಂಗ ಸಮಾನತೆಯನ್ನು ಸಾಧಿಸಿ ಒಳಗೊಳ್ಳುವ ಬೆಳವಣಿಗೆಯತ್ತ (Inclusive Growth) ಸಾಗುವುದು ಸುಗಮವಾಗುತ್ತದೆ.
2025 ವರ್ಷದ ಮಹತ್ವದ ಹಿಂದೆ ಇರುವ ಮತ್ತೊಂದು ಕಾರಣ ಎಂದರೆ ಇದು ಬೀಜಿಂಗ್ ಘೋಷಣೆಯ 30ನೆಯ ವರ್ಷ. ಮಹಿಳೆಯರ ಮತ್ತು ಬಾಲಕಿಯರ ಹಕ್ಕುಗಳ ಬಗ್ಗೆ ಒಂದು ನಿರ್ಣಾಯಕವಾದ ಹಾಗೂ ಮೂಲಭೂತ ದಸ್ತಾವೇಜು “ಬೀಜಿಂಗ್ ಘೋಷಣೆ ಮತ್ತು ಕ್ರಿಯಾಶೀಲತೆಯ ಭೂಮಿಕೆ ”(Beejing Declaration and Platform for Action) ಈಗ ಮೂರು ದಶಕಗಳನ್ನು ಪೂರೈಸಿದೆ. ಹಾಗಾಗಿ ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಮಹಿಳಾ ಕ್ರಾಂತಿಕಾರಿಗಳ ಅವಿರತ ಸಂಘರ್ಷ ಮತ್ತು ಹೋರಾಟಗಳನ್ನು ಪುನರ್ ಮನನ ಮಾಡಿಕೊಳ್ಳಲು ಈ ಚರಿತ್ರೆಯ ಹಾದಿಗಳು ನೆರವಾಗುತ್ತದೆ. ತನ್ಮೂಲಕ ಭಾರತದಲ್ಲಿ ಮಹಿಳಾ ಶಿಕ್ಷಣಕ್ಕಾಗಿ ಶ್ರಮಿಸಿದ ಕ್ರಾಂತಿಕಾರಿ ಮಹಿಳೆಯರನ್ನು ಸ್ಮರಿಸುವ ಅವಕಾಶವಾಗಿಯೂ ಪರಿಣಮಿಸುತ್ತದೆ.

ಸಾಂಸಾರಿಕ ಒಳಗೊಳ್ಳುವಿಕೆ ಮತ್ತು ಮಹಿಳಾ ಶಿಕ್ಷಣ
ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ನಡೆದ ಸಾಮಾಜಿಕ ಸುಧಾರಣಾ ಹೋರಾಟಗಳ ಕೇಂದ್ರ ಬಿಂದು ಮತ್ತು ಪ್ರಧಾನ ಗುರಿಯಾಗಿದ್ದುದು ಮಹಿಳೆಯರ ಶಿಕ್ಷಣ. ಆದಾಗ್ಯೂ ಮಹಿಳೆಯರ ಜೀವನ-ಜೀವನೋಪಾಯವನ್ನು ಅಮೂಲಾಗ್ರವಾಗಿ ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಣವನ್ನು ಪ್ರಧಾನ ಸಾಧನವಾಗಿ ಪರಿಗಣಿಸಿರಲಿಲ್ಲ. ಮಹಿಳಾ ಶಿಕ್ಷಣದ ಮೂಲಕ ಸ್ಥಾಪಿತ ಸಾಮಾಜಿಕ ಸಂರಚನೆಗಳನ್ನು ಮತ್ತು ಸಾಮಾಜಿಕ ಪ್ರಕ್ರಿಯೆಗಳನ್ನು ಸುಧಾರಿಸುವ ಪ್ರಯತ್ನಗಳು ನಡೆದಿದ್ದವೇ ಹೊರತು, ಮೂಲ ಸಂರಚನೆಯನ್ನೇ ಬುಡಮೇಲು ಮಾಡುವ ಅಥವಾ ಭಂಗಗೊಳಿಸುವ ಚಿಂತನೆಗಳು ರೂಪುಗೊಂಡಿರಲಿಲ್ಲ.
ಮಹಿಳಾ ಶಿಕ್ಷಣದ ಪಠ್ಯಕ್ರಮಗಳಲ್ಲಿ ಮುಖ್ಯವಾಗಿ ಕಾಣುತ್ತಿದ್ದುದು ಕೌಟುಂಬಿಕ ಆರ್ಥಿಕತೆ, ಅಡುಗೆ, ಕಸೂತಿ, ನೈತಿಕ ಶಿಕ್ಷಣ ಮತ್ತು ನೈರ್ಮಲ್ಯ ಮುಂತಾದ ವಿಷಯಗಳು. ಈ ನೆಲೆಯಲ್ಲೇ ಗೃಹ ವಿಜ್ಞಾನವೂ ಸಹ ಮಹಿಳಾ ಶಿಕ್ಷಣದ ಅವಿಭಾಜ್ಯ ಅಂಗವಾಗಿ ರೂಪುಗೊಂಡಿತ್ತು. ಈ ಅಧ್ಯಯನ ಶಿಸ್ತಿನಲ್ಲಿ ಆಹಾರ ತಯಾರಿಕೆ ಮತ್ತು ಪೌಷ್ಟಿಕಾಂಶ ನಿರ್ವಹಣೆಯಲ್ಲಿ ಅವಶ್ಯವಾದ ಪ್ರಾಯೋಗಿಕ ಕೌಶಲಗಳ, ಗೃಹ ನಿರ್ವಹಣೆ, ಮಾತೃತ್ವ ಮತ್ತು ಮಕ್ಕಳ ಲಾಲನೆ-ಪಾಲನೆ, ಜವಳಿ ಮತ್ತು ಉಡುಪುಗಳು, ನೈರ್ಮಲ್ಯ ಮತ್ತು ನಿರ್ಬಂಧಕ ಔಷಧಿಗಳನ್ನು ಕುರಿತ ವಿಷಯಗಳನ್ನು ಬೋಧಿಸಲಾಗುತ್ತಿತ್ತು. ಮಹಿಳಾ ಶಿಕ್ಷಣದ ಮೂಲ ಉದ್ದೇಶ ಅವರನ್ನು ಉತ್ತಮ ಗೃಹಿಣಿಯರನ್ನಾಗಿ, ತಾಯಿಯರನ್ನಾಗಿ ರೂಪಿಸುವುದಾಗಿತ್ತು. ಹಾಗೂ ಸಾಂಸಾರಿಕ ನೆಲೆಯಲ್ಲಿ ಆದರ್ಶ ಮಹಿಳೆಯಾಗಿ ರೂಪುಗೊಳ್ಳುವ ಸಾಮಾಜೀಕರಣ (Socialisation) ಪ್ರಕ್ರಿಯೆಗೆ ಪ್ರಾಮುಖ್ಯತೆ ನೀಡಲಾಗಿತ್ತು.

ಮಹಿಳೆಯನ್ನು ಸಾಂಸಾರಿಕ ನೆಲೆಯಲ್ಲಿ ಒಳಗೊಳ್ಳುವಂತೆ ಮಾಡುವ ಈ ಬೆಳವಣಿಗೆಗೂ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಚಿಂತನೆಗಳಿಗೂ ನಿಕಟ ಸಂಬಂಧ ಇದ್ದುದನ್ನು ಗಮನಿಸಬಹುದು. ಕುಟುಂಬವನ್ನು ಸುಧಾರಿಸುವ ಜವಾಬ್ದಾರಿ ಮತ್ತು ಹೊರೆಯನ್ನು ಸಹಜವಾಗಿ ನಾಗರಿಕಳಾಗಿ ರೂಪುಗೊಂಡ, ಸುಶಿಕ್ಷಿತ ಮಹಿಳೆಯ ಹೆಗಲಿಗೇರಿಸಲಾಯಿತು. ಅಷ್ಟೇ ಅಲ್ಲದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಸುಗಮಗೊಳಿಸುವ ಒಂದು ಮಾರ್ಗವಾಗಿ ಮಹಿಳಾ ಶಿಕ್ಷಣವನ್ನು ನೋಡಲಾಗಿತ್ತು. ಈ ನಿಟ್ಟಿನಲ್ಲಿ ಮಹಿಳೆಯರನ್ನು ದೇಶದ ಹಾಗೂ ಸಮಾಜದ ಸಾಂಸ್ಕೃತಿಕ ವಾಹಕರಾಗಿ ಬಿಂಬಿಸಲಾಯಿತು. ಆದರ್ಶ ಮಹಿಳೆ ಎಂದರೆ ಸಾಂಪ್ರದಾಯಿಕ ಸದ್ಗುಣ ಮತ್ತು ಲಕ್ಷಣಗಳನ್ನೊಳಗೊಂಡ ವ್ಯಕ್ತಿಯಾಗಿಯೂ, ಆಧುನಿಕ ಶಿಕ್ಷಣ ಪಡೆದ ಸಾಂಸಾರಿಕ ವ್ಯಕ್ತಿಯಾಗಿಯೂ ಕಲ್ಪಿಸಲಾಯಿತು.
ಈ ವಿಶಾಲ ಸಾಮಾಜಿಕ ನಿರೀಕ್ಷೆಗಳ ಹೊರತಾಗಿಯೂ, ಸ್ವಾತಂತ್ರ್ಯಪೂರ್ವ ಭಾರತದಲ್ಲಿ, ಶಾಲೆಗಳಲ್ಲಿ ಬಾಲಕಿಯರ ಪ್ರವೇಶದ ಪ್ರಮಾಣದಲ್ಲಿ ಪ್ರಾದೇಶಿಕವಾಗಿ ಭಿನ್ನ ಚಿತ್ರಣಗಳನ್ನು ಗಮನಿಸಬಹುದು. ಭಾರತ ಸರ್ಕಾರದ “ ಶಿಕ್ಷಣದಲ್ಲಿ ಭಾರತದ ಪ್ರಗತಿ- ಪಂಚವಾರ್ಷಿಕ ವರದಿ 1922-27 ಮತ್ತು 1934-47 ” ವರದಿಗಳ ಅನುಸಾರ, ಮದ್ರಾಸ್ (ಪ್ರಸ್ತುತ ಚೆನ್ನೈ) ಮತ್ತು ಬಂಗಾಲ ಪ್ರಾಂತ್ಯಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ದಾಖಲಾತಿಯನ್ನು ಕಂಡಿದ್ದವು. ಆ ಪ್ರದೇಶದ ಸಮಾಜ ಸುಧಾರಕರು ವಹಿಸಿದ ಮಹತ್ತರ ಪಾತ್ರ ಹಾಗೂ ಕ್ರೈಸ್ತ ಮಿಷನರಿಗಳ ಶೈಕ್ಷಣಿಕ ಕ್ರಮಗಳು ಈ ಬೆಳವಣಿಗೆಗೆ ಮುಖ್ಯ ಕಾರಣವಾಗಿದ್ದವು.

ಶಿಕ್ಷಣಕ್ಕಾಗಿ ಮಹಿಳಾ ಪ್ರತಿಪಾದಕರ ಹೋರಾಟ
ಸ್ವಾತಂತ್ರ್ಯಪೂರ್ವ ಯುಗದಲ್ಲಿ ಮಹಿಳಾ ಶಿಕ್ಷಣಕ್ಕಾಗಿ ಅವಿರತ ಶ್ರಮಿಸಿದ ಮಹಿಳಾ ಕ್ರಾಂತಿಕಾರಿಗಳು ಹಲವರನ್ನು ಗುರುತಿಸಬಹುದು. ಅವರಲ್ಲಿ ಪ್ರಮುಖವಾಗಿ ಪ್ರಮುಖವಾಗಿ ಸಾವಿತ್ರಿ ಬಾಯಿ ಫುಲೆ, ಫಾತಿಮಾ ಶೇಖ್, ಪಂಡಿತ ರಮಾಬಾಯಿ, ಚಂದ್ರಪ್ರಭಾ ಸೈಕಿಯಾನಿ, ಬೇಗಮ್ ರೋಕೆಯಾ ಸಖಾವತ್ ಹೊಸೇನ್, ಸರಳಾ ರೇ, ಅನಸೂಯ ಸಾರಾಭಾಯಿ ಮತ್ತು ಅಬಾಲಾ ಬೋಸ್ ಅವರನ್ನು ಹೆಸರಿಸಬಹುದು. ಈ ಸುಧಾರಕ ಮಹಿಳೆಯರು ಮಹಿಳಾ ಶಿಕ್ಷಣವನ್ನು ಪ್ರತಿಪಾದಿಸುವಲ್ಲಿ ಹಾಗೂ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದುದೇ ಅಲ್ಲದೆ, ಜಾತಿ, ಮತ ಮತ್ತು ಪ್ರಾದೇಶಿಕತೆಯನ್ನು ಮೀರಿ ಶ್ರಮಿಸಿದ್ದರು. ಇದರು ಭಾರತದ ಮಹಿಳಾ ಚಳುವಳಿಯ ವೈವಿಧ್ಯತೆಯನ್ನು ಬಿಂಬಿಸುತ್ತದೆ. ಇವರಲ್ಲಿ ಕೆಲವು ಸುಧಾರಕರ ದೂರಗಾಮಿ ಪ್ರಭಾವವನ್ನು ನಾವು ಗುರುತಿಸಬಹುದು.
ಸಾವಿತ್ರಿಬಾಯಿ ಫುಲೆ
ಸಾವಿತ್ರಿಬಾಯಿ ಫುಲೆ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರು. ಅವರು ತಮ್ಮ ಸುಧಾರಣಾವಾದಿ ಪದ್ಧತಿಗಳ ಮೂಲಕ ಶಿಕ್ಷಣದ ಮೇಲ್ಜಾತಿಯ ಪ್ರಾಬಲ್ಯವನ್ನು ಪ್ರಶ್ನಿಸಿದ್ದರು. ಸಾವಿತ್ರಿಬಾಯಿ ಫುಲೆ 1848 ರಲ್ಲಿ ಮಹಾರಾಷ್ಟ್ರದ ಪುಣೆಯ ವಿಶ್ರಂಬಾಗ್ ವಾಡಾದಲ್ಲಿ ತಮ್ಮ ಪತಿ ಜ್ಯೋತಿರಾವ್ ಫುಲೆ ಅವರೊಂದಿಗೆ ಭಾರತದ ಮೊದಲ ಬಾಲಕಿಯರ ಶಾಲೆಯನ್ನು ತೆರೆದರು. ಅವರ ಶಾಲೆ ಎಲ್ಲಾ ಜಾತಿಗಳಿಗೂ ಮುಕ್ತವಾಗಿತ್ತು.

ಸಾವಿತ್ರಿಬಾಯಿ ಫುಲೆ ಹುಡುಗಿಯರಿಗೆ ಶಿಕ್ಷಣವನ್ನು ಉತ್ತೇಜಿಸಿದ್ದಲ್ಲದೆ, ಅಸ್ಪೃಶ್ಯತೆ ಮತ್ತು ವಿಧವಾ ಪುನರ್ವಿವಾಹ ನಿಷೇಧದಂತಹ ಚಾಲ್ತಿಯಲಿದ್ದ ಸಾಮಾಜಿಕ ಅನಿಷ್ಠಗಳನ್ನು ವಿರೋಧಿಸಿದರು. ಆದರೆ ಅವರ ಪ್ರಯತ್ನಗಳಿಗಾಗಿ ಸಮಾಜದಿಂದ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಶಾಲೆಗೆ ಹೋಗುವಾಗ, ಅವರ ಮೇಲೆ ಆಗಾಗ್ಗೆ ಕಲ್ಲುಗಳನ್ನು ಮತ್ತು ಸಗಣಿಯನ್ನು ಎಸೆಯಲಾಗುತ್ತಿತ್ತು. ಅಶ್ಲೀಲ, ಅಸಭ್ಯ ಮಾತುಗಳನ್ನೂ ಕೇಳಬೇಕಾಗಿತ್ತು. ಫುಲೆ ಅವರು ಬಹುಮುಖ್ಯವಾಗಿ ಬಾಲಕಿಯರಿಗೆ, ವಿಶೇಷವಾಗಿ ಕೆಳಜಾತಿಯವರಿಗೆ ಶಿಕ್ಷಣ ನೀಡುತ್ತಿದ್ದ ಕಾರಣ ಈ ದಾಳಿಗಳು ಸಂಭವಿಸುತ್ತಿದ್ದವು. ಆದಾಗ್ಯೂ ಈ ದಾಳಿಗಳಿಗೆ ಎದೆಗುಂದದೆ ಸಾವಿತ್ರಿಬಾಯಿ ಫುಲೆ ತಮ್ಮ ಸುಧಾರಣಾ ಹಾದಿಯಿಂದ ವಿಮುಖವಾಗಲಿಲ್ಲ.
ಫಾತಿಮಾ ಶೇಖ್ ಮತ್ತು ಪಂಡಿತಾ ರಮಾಬಾಯಿ
ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಣತಜ್ಞೆ ಎಂದು ವ್ಯಾಪಕವಾಗಿ ಗುರುತಿಸಲ್ಪಡುವ ಫಾತಿಮಾ ಶೇಖ್ ಮತ್ತೋರ್ವ ಮಹಿಳಾ ಸುಧಾರಕರಾಗಿದ್ದರು. ಫಾತಿಮಾ ಅವರು ಪುಣೆಯಲ್ಲಿ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸಹಚರರಾಗಿದ್ದರು. ದುರದೃಷ್ಟವಶಾತ್ ಐತಿಹಾಸಿಕ ದಾಖಲೆಗಳ ಕೊರತೆ ಇರುವುದರಿಂದ ಅವರ ಬಗ್ಗೆ ಹೆಚ್ಚು ತಿಳಿದಿಲ್ಲ. (ಇತ್ತೀಚೆಗೆ ಹಲವು ಸಂಶೋಧಕರು ಫಾತಿಮಾ ಶೇಖ್ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತಿದ್ದಾರೆ- ಅನು). ಆದರೂ ಚಾರಿತ್ರಿಕ ನಿರೂಪಣೆಗಳಲ್ಲಿ ಮಹಿಳೆಯರು ಹೇಗೆ ಅಂಚಿನಲ್ಲಿಡಲ್ಪಟ್ಟಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಆದಾಗ್ಯೂ ಆ ಕಾಲದ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭವನ್ನು ಗಮನಿಸಿದರೆ, ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಮುಸ್ಲಿಂ ಮಹಿಳಾ ಶಿಕ್ಷಕಿಯಾಗುವುದು ಸುಲಭವಾಗಿರಲಿಲ್ಲ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಮಂಗಳೂರಿನ (ಆಗ ಮದ್ರಾಸ್ ಪ್ರೆಸಿಡೆನ್ಸಿ ಆದರೆ ಈಗ ಕರ್ನಾಟಕದ ಭಾಗ) ಪಂಡಿತಾ ರಮಾಬಾಯಿ, ತಳ ಸ್ತರದ ಜಾತಿಯ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಮತ್ತೊಬ್ಬ ಸಮಾಜ ಸುಧಾರಕಿಯಾಗಿ ಚರಿತ್ರೆಯಲ್ಲಿ ದಾಖಲಾಗಿದ್ದಾರೆ. ರಮಾಬಾಯಿ ಅವರು ಮಹಿಳಾ ಶಿಕ್ಷಣದ ಪರವಾಗಿ ದೃಢವಾದ ಪ್ರತಿಪಾದಕಿಯಾಗಿದ್ದರು ಮತ್ತು ವಿಧವೆಯರ, ವಿಶೇಷವಾಗಿ ಬಾಲ ವಿಧವೆಯರ ಮತ್ತು ಬಾಲ್ಯ ವಿವಾಹದ ಅನಿಷ್ಠ ಪದ್ಧತಿಯ ವಿರುದ್ಧ ಸಕ್ರಿಯವಾಗಿ ಹೋರಾಡಿದ್ದರು.. ಬಾಲ್ಯ ವಿವಾಹವನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ರಮಾಬಾಯಿ ಅವರು ಮಹಿಳಾ ಶಿಕ್ಷಣವನ್ನು ಉತ್ತೇಜಿಸಲು 1882 ರಲ್ಲಿ ಆರ್ಯ ಮಹಿಳಾ ಸಮಾಜವನ್ನು ಸ್ಥಾಪಿಸಿದರು.
ಚಂದ್ರಪ್ರಭಾ ಸೈಕಿಯಾನಿ
ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಸಕ್ರಿಯವಾಗಿ, ಕ್ರಿಯಾಶೀಲವಾಗಿದ್ದ ಹಲವು ಮಹಿಳಾ ಶಿಕ್ಷಣತಜ್ಞರು ಪ್ರಾದೇಶಿಕವಾಗಿ ಬಹಳ ಪ್ರಭಾವಶಾಲಿಯಾಗಿ ತಮ್ಮದೇ ಆದ ಅಸ್ಮಿತೆಯನ್ನು ದಾಖಲಿಸಿದ್ದಾರೆ. ಅಸ್ಸಾಂನ ಸಮಾಜ ಸುಧಾರಕಿ ಮತ್ತು ಮಹಿಳಾ ಶಿಕ್ಷಣದ ಸಕ್ರಿಯ ಪ್ರತಿಪಾದಕಿ ಚಂದ್ರಪ್ರಭಾ ಸೈಕಿಯಾನಿ ಅಂತಹ ವ್ಯಕ್ತಿಗಳಲ್ಲಿ ಒಬ್ಬರು. 1925 ರಲ್ಲಿ ನಡೆದ ಅಸ್ಸಾಂ ಸಾಹಿತ್ಯ ಸಭಾ ಅಧಿವೇಶನದಲ್ಲಿ ಮಹಿಳಾ ಹಕ್ಕುಗಳ ಬಗೆಗಿನ ಅವರ ಬದ್ಧತೆಯನ್ನು ಎತ್ತಿ ತೋರಿಸುವ ಒಂದು ಗಮನಾರ್ಹ ಘಟನೆ ಸಂಭವಿಸಿತು. ಅಲ್ಲಿ ಸೈಕಿಯಾನಿ ಮಹಿಳಾ ಶಿಕ್ಷಣದ ಪ್ರಾಮುಖ್ಯತೆ ಮತ್ತು ಪುರುಷರಂತೆಯೇ ಸಮಾನ ಅವಕಾಶಗಳನ್ನು ಪಡೆಯುವ ಅವರ ಹಕ್ಕಿನ ಬಗ್ಗೆ ಬಲವಾಗಿ ಪ್ರತಿಪಾದಿಸಿದ್ದರು . ಈ ಕಾರ್ಯಕ್ರಮದಲ್ಲಿ ಪುರುಷರಿಂದ ಮಹಿಳೆಯರನ್ನು ಪ್ರತ್ಯೇಕಿಸುವ ವ್ಯವಸ್ಥೆಯನ್ನು ಅನುಸರಿಸಲಾಗಿದ್ದು, ಮಹಿಳೆಯರು ಪುರುಷರ ಹಿಂದೆ ಕುಳಿತುಕೊಳ್ಳುತ್ತಿದ್ದರು. ಈ ತಡೆಗೋಡೆಯನ್ನು ತೆಗೆದುಹಾಕಿ ಪುರುಷರ ಪಕ್ಕದಲ್ಲಿ ಕುಳಿತುಕೊಳ್ಳಲು ಸೈಕಿಯಾನಿ ಮಹಿಳೆಯರನ್ನು ಒತ್ತಾಯಿಸಿದ್ದರು. ಇದು ಮಹಿಳೆಯರ ಸಮಾನ ಹಕ್ಕುಗಳು ಮತ್ತು ಲಿಂಗ ಸಮಾನತೆಗೆ ಅವರ ಬದ್ಧತೆಯನ್ನು ಪ್ರದರ್ಶಿಸುವ ಸಾಂಕೇತಿಕ ಪ್ರತಿಭಟನೆಯಾಗಿ ದಾಖಲಾಗಿತ್ತು.

ಸೈಕಿಯಾನಿ ತನ್ನ ಸ್ವಗ್ರಾಮ ಡೈಸಿಂಗರಿಯಲ್ಲಿರುವ ಬಾಲಕರ ಶಾಲೆಯಲ್ಲಿ ತನ್ನ ಆರಂಭಿಕ ಶಿಕ್ಷಣವನ್ನು ಪಡೆದರು. ಅಲ್ಲಿ ಅವರು ತಮ್ಮ ಸಹೋದರಿಯೊಂದಿಗೆ ತರಗತಿಗಳಿಗೆ ಹೋಗುತ್ತಿದ್ದರು. ಹೀಗಾಗಿ, ಇತರ ಹುಡುಗಿಯರಿಗೂ ಶಿಕ್ಷಣದ ಪ್ರವೇಶ ದೊರೆಯಬೇಕೆಂದು ಅವರು ಬಯಸಿದ್ದರು. 13 ನೇ ವಯಸ್ಸಿನಲ್ಲಿಯೇ ಬಾಲಕಿಯರಿಗಾಗಿ ಶಾಲೆಯನ್ನು ಪ್ರಾರಂಭಿಸುವ ಮೂಲಕ ಅವರು ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು ಈ ಶಾಲೆಯಲ್ಲಿ ಸೈಕಿಯಾನಿ ಅವರು ತಮ್ಮಲ್ಲಿರುವ ಅರಿವು, ಜ್ಞಾನವನ್ನು ಇತರ ಬಾಲಕಿಯರಿಗೂ ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ದರು. ಸೈಕಿಯಾನಿ ಅವರ ಕ್ರಿಯಾಶೀಲತೆಯು ಶಿಕ್ಷಣವನ್ನು ಮೀರಿ ವಿಸ್ತರಿಸಿತ್ತು. ದೊಡ್ಡ ಸಾರ್ವಜನಿಕ ಸಭೆಯೊಂದರಲ್ಲಿ ಅವರು ಅಫೀಮು ನಿಷೇಧಕ್ಕೆ ಕರೆ ನೀಡಿದ್ದರು. ಸಾರ್ವಜನಿಕ ಸಭೆಗಳಲ್ಲಿ ಮಹಿಳೆಯರು ಮಾತನಾಡುವುದು ಅಸಾಂಪ್ರದಾಯಿಕವಾಗಿದ್ದ ಆ ಯುಗದಲ್ಲಿ ಮಹಿಳೆಯರ ದೃಷ್ಟಿಯಿಂದ ಇದು ಅಸಾಧಾರಣ ಬೆಳವಣಿಗೆಯಾಗಿತ್ತು. 1926 ರಲ್ಲಿ ಸೈಕಿಯಾನಿ ಅಸ್ಸಾಂ ಪ್ರಾದೇಶಿಕ ಮಹಿಳಾ ಸಮಿತಿಯನ್ನು ಸ್ಥಾಪಿಸಿದರು ಮತ್ತು ಮಹಿಳಾ ಶಿಕ್ಷಣಕ್ಕಾಗಿ ಸಮರ್ಪಿಸಿಕೊಂಡು ಜೀವನವಿಡೀ ಶ್ರಮಿಸಿದ್ದರು.
ಬೇಗಂ ರೋಕೆಯಾ ಸಖಾವತ್ ಹೊಸೇನ್ ಮತ್ತು ಸರಳಾ ರೇ
ಮಹಿಳಾ ಶಿಕ್ಷಣಕ್ಕೆ ಬೇಗಂ ರೋಕೆಯಾ ಸಖಾವತ್ ಹೊಸೇನ್ ಮತ್ತು ಸರಳಾ ರೇ ಅವರಂತಹ ಇತರ ವ್ಯಕ್ತಿಗಳ ಕೊಡುಗೆಗಳು ಸಹ ಚಾರಿತ್ರಿಕವಾಗಿ ಗುರುತಿಸಬಹುದಾದ ಅಪ್ರತಿಮ ಸಾಧನೆಗಳಾಗಿವೆ. ಬಂಗಾಳದ (ಈಗ ಬಾಂಗ್ಲಾದೇಶದ ಭಾಗ) ರಂಗಪುರದ ಪೈರಾಬಂದ್‌ನಲ್ಲಿ ಜನಿಸಿದ ಬೇಗಂ ರೋಕೆಯಾ ತಮ್ಮ ದಾರ್ಶನಿಕ, ದೂರಗಾಮಿ ಮಹಿಳಾ ಕೇಂದ್ರಿತ ಬರಹಗಳ ಮೂಲಕ ಮುಸ್ಲಿಂ ಮಹಿಳಾ ಶಿಕ್ಷಣವನ್ನು ಬಲವಾಗಿ ಪ್ರತಿಪಾದಿಸಿದ್ದರು. ಅವರ ಅತ್ಯಂತ ಪ್ರಸಿದ್ಧ ಸಣ್ಣ ಕಥೆ ʼ ಸುಲ್ತಾನರ ಕನಸು ʼ ಸ್ಥಾಪಿತ ಲಿಂಗತ್ವ ಸಮಾಜದ ಚಿಂತನೆಗಳಿಗೆ ವ್ಯತಿರಿಕ್ತವಾಗಿ ಮಹಿಳೆಯರು ಜಗತ್ತನ್ನು ಮುನ್ನಡೆಸುತ್ತಾರೆ ಮತ್ತು ಪುರುಷರು ಸಾಮಾಜಿಕವಾಗಿ ಆಂತರಿಕವಾಗಿ ಸೀಮಿತವಾಗಿರುತ್ತಾರೆ ಎಂದು ಪ್ರತಿಪಾದಿಸಿತ್ತು. ಔಪಚಾರಿಕ ಶಿಕ್ಷಣವನ್ನು ಪಡೆಯಲು ಎಂದಿಗೂ ಅವಕಾಶವಿಲ್ಲದ ಅವರು, ಭಾಗಲ್ಪುರ (1909) ಮತ್ತು ಕೋಲ್ಕತ್ತಾದಲ್ಲಿ (1911) ಮುಸ್ಲಿಂ ಹುಡುಗಿಯರಿಗಾಗಿ ಶಾಲೆಗಳನ್ನು ಪ್ರಾರಂಭಿಸಿದರು.
ಬಂಗಾಳದ ಶಿಕ್ಷಣ ತಜ್ಞೆ ಸರಳಾ ರೇ 1920 ರಲ್ಲಿ ಕೋಲ್ಕತ್ತಾದಲ್ಲಿ ಗೋಖಲೆ ಸ್ಮಾರಕ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರು, ಅಲ್ಲಿ ಎಲ್ಲಾ ಹುಡುಗಿಯರು ಶಾಲೆಯ ನವೀನ ಪಠ್ಯಕ್ರಮದ ಭಾಗವಾಗಿ ಹಿಂದಿ, ಬಂಗಾಳಿ ಮತ್ತು ಇಂಗ್ಲಿಷ್ ಎಂಬ ಮೂರು ಭಾಷೆಗಳನ್ನು ಕಲಿಯಲು ಪ್ರೋತ್ಸಾಹಿಸಲಾಯಿತು. ನಂತರ, ಅವರು ಮಹಿಳಾ ಉನ್ನತ ಶಿಕ್ಷಣದ ಕಡೆಗೆ ತಮ್ಮ ಪ್ರಯತ್ನಗಳನ್ನು ವಿಸ್ತರಿಸಿದರು ಮತ್ತು 1938 ರಲ್ಲಿ ಗೋಖಲೆ ಸ್ಮಾರಕ ಬಾಲಕಿಯರ ಕಾಲೇಜನ್ನು ಸ್ಥಾಪಿಸಿದರು.
ಮಹಿಳಾ ಕ್ರಾಂತಿಕಾರಿಗಳ ಪರಂಪರೆ
ಮೇಲೆ ಉಲ್ಲೇಖಿಸಿದ ಮಹಿಳೆಯರು ಮಹಿಳಾ ಶಿಕ್ಷಣದಲ್ಲಿ ಚಾರಿತ್ರಿಕವಾಗಿ ಪ್ರವರ್ತಕ ಪಾತ್ರವನ್ನು ವಹಿಸಿದ್ದರೂ, ಅವರ ಜೀವನದ ಪಯಣದಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಉದಾಹರಣೆಗೆ, ಶಾಲೆಗಳಲ್ಲಿ ಹುಡುಗಿಯರ ದಾಖಲಾತಿ ಮತ್ತು ಉಳಿಸಿಕೊಳ್ಳುವಿಕೆಯು ಪ್ರಾಥಮಿಕ ಸವಾಲುಗಳಲ್ಲಿ ಒಂದಾಗಿತ್ತು, ಇದು ಸರಿಯಾದ ನೈರ್ಮಲ್ಯ ಸೌಲಭ್ಯಗಳ ಕೊರತೆಯಿಂದ ಗಂಭೀರ ಸಮಸ್ಯೆಯಾಗಿ ಕಾಡತೊಡಗಿತ್ತು. ಭಾರತದ ಹಲವು ಪ್ರದೇಶಗಳಲ್ಲಿ, ಮುಟ್ಟನ್ನು ಅಶುದ್ಧತೆಯ ಸಂಕೇತವಾಗಿ ನೋಡಲಾಗುತ್ತದೆ. ಹಾಗಾಗಿ ಹುಡುಗಿಯರು ತಮ್ಮ ಋತುಚಕ್ರದ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಿಂದ ಹೊರಗುಳಿಯುವ ಪದ್ಧತಿ ವ್ಯಾಪಕವಾಗಿ ಚಾಲ್ತಿಯಲ್ಲಿತ್ತು. ಈ ಕಾರಣಗಳಿಂದಾಗಿ, ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದರು. ಪ್ರಸವಪೂರ್ವ ವಿವಾಹಗಳು ಸಹ ಪ್ರಚಲಿತವಾಗಿದ್ದವು ಮತ್ತು ಇದರಿಂದಾಗಿ ಅನೇಕ ಹುಡುಗಿಯರನ್ನು ಪ್ರೌಢಾವಸ್ಥೆಗೆ ತಲುಪುವ ಮೊದಲು ಶಾಲೆಯಿಂದ ಹಿಂತೆಗೆದುಕೊಳ್ಳಲಾಗುತ್ತಿತ್ತು.

ಮತ್ತೊಂದು ಸಾಮಾಜಿಕ ತಡೆಗೋಡೆಯೆಂದರೆ ಪರ್ದಾ ವ್ಯವಸ್ಥೆ ಜಾರಿಯಲ್ಲಿದ್ದುದು. ಇದು ಮುಸ್ಲಿಂ ಮತ್ತು ಮೇಲ್ಜಾತಿಯ ಮಹಿಳೆಯರ ಚಲನಶೀಲತೆಯನ್ನು ನಿರ್ಬಂಧಿಸಿದ್ದುದೇ ಅಲ್ಲದೆ ಶೈಕ್ಷಣಿಕ ಅವಕಾಶಗಳಿಂದ ಅವರನ್ನು ಹೊರಗಿಡಲು ಕಾರಣವಾಯಿತು. ಸಾವಿತ್ರಿಬಾಯಿ ಫುಲೆ ಮತ್ತು ಬೇಗಂ ರೋಕೆಯಾ ಅವರಂತಹ ಮಹಿಳೆಯರು ಅಂಚಿನಲ್ಲಿರುವ ಸಮುದಾಯಗಳಿಗೆ ಶಿಕ್ಷಣ ನೀಡುವ ತಮ್ಮ ಪ್ರಯತ್ನದಲ್ಲಿ ಜಾತಿ, ಮತ ಮತ್ತು ಧರ್ಮಾಧಾರಿತ ವಿರೋಧವನ್ನು ಎದುರಿಸಿದರು. ಇದಲ್ಲದೆ, ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಬ್ರಿಟಿಷ್ ಸರ್ಕಾರವು ಸ್ಥಾಪಿಸಿದ ಸಹ-ಶಿಕ್ಷಣ ಶಾಲೆಗಳಿಗೆ ಕಳುಹಿಸಲು ಹಿಂಜರಿಯುತ್ತಿದ್ದರು.
ಏನೇ ಆದರೂ, ಮಹಿಳಾ ಕ್ರಾಂತಿಕಾರಿಗಳು ಮಹಿಳಾ ಶಿಕ್ಷಣಕ್ಕಾಗಿ ತಮ್ಮ ಹೋರಾಟದಲ್ಲಿ ಅಪಾರ ಧೈರ್ಯ ಮತ್ತು ದಿಟ್ಟತನವನ್ನು, ಬದ್ಧತೆಯನ್ನು ಪ್ರದರ್ಶಿಸಿದರು. ಅವರು ಸಾಮಾಜಿಕ ಅಡೆತಡೆಗಳನ್ನು ಭೇದಿಸಿ, ಭಾರತದಲ್ಲಿ ಮಹಿಳೆಯರಿಗೆ ಶಿಕ್ಷಣದ ಪ್ರವೇಶಕ್ಕೆ ದಾರಿ ಮಾಡಿಕೊಟ್ಟರು. ಅವರ ಪ್ರಯತ್ನವು ಮಹಿಳಾ ಸಬಲೀಕರಣಕ್ಕೆ ಅಡಿಪಾಯ ಹಾಕಿತು ಮತ್ತು ಮಹಿಳೆಯರ ಪೀಳಿಗೆಗೆ ಶಿಕ್ಷಣವನ್ನು ಮುಂದುವರಿಸಲು ಸ್ಫೂರ್ತಿ ನೀಡಿತು ಎನ್ನುವುದು ನಿರ್ವಿವಾದ ಸತ್ಯ. ಆದರೆ ಮಹಿಳಾ ಶಿಕ್ಷಣದಲ್ಲಿ ಪ್ರಗತಿ ಸಾಧಿಸಿದ್ದರೂ, ಮಹಿಳೆಯರು ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯಕ್ಕೆ ಒಳಗಾಗುತ್ತಲೇ ಇದ್ದಾರೆ, ಏಕೆಂದರೆ ಅವರ ದಾಖಲಾತಿ ಮತ್ತು ಶೈಕ್ಷಣಿಕ ಮುಂದುವರೆಯುವಿಕೆಯ ಪ್ರಮಾಣವು ಕಡಿಮೆ ಇದೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿಯೂ ಮಹಿಳೆಯರು ಹಿಂಸೆ ಮತ್ತು ಕಿರುಕುಳವನ್ನು ಎದುರಿಸುತ್ತಿದ್ದಾರೆ. ಈ ಸನ್ನಿವೇಶದಲ್ಲಿ ಸ್ವಾತಂತ್ರ್ಯಪೂರ್ವ ಭಾರತದ ಕ್ರಾಂತಿಕಾರಿ ಮಹಿಳೆಯರ ಹೋರಾಟ-ಸಂಘರ್ಷದ ಪರಂಪರೆ ಹೆಚ್ಚು ಪ್ರಸ್ತುತತೆ ಪಡೆದುಕೊಳ್ಳುತ್ತದೆ.

-೦-೦-೦-