ಲೇಖನ: ನಾ ದಿವಾಕರ
ಸಬಲೀಕರಣದ ಆಶಯಗಳೊಂದಿಗೇ ಹೆಚ್ಚಿನ ಮಹಿಳೆಯರು ಅಪರಾಧಗಳಿಗೆ ತುತ್ತಾಗುತ್ತಿರುವುದು ದುರಂತ
ಬಹಳ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಮಾತನಾಡುತ್ತಿದ್ದ ಪ್ರಸಿದ್ದ ಚಿಂತಕರೊಬ್ಬರು “ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುವುದು ಘೋಷಣೆಗಳು” ಎಂದು ಮಾರ್ಮಿಕವಾಗಿ ಹೇಳಿದ್ದ ನೆನಪು. ಇದೇನೂ ಅತಿರೇಕದ ಅಭಿವ್ಯಕ್ತಿಯಲ್ಲ ಎಂದು ಅಂದೂ ಭಾಸವಾಗಿತ್ತು. ಇಂದಿಗೂ ಅದೇ ವಾಸ್ತವ. ಮೂಲತಃ ನಮ್ಮ ಸಾಮಾಜಿಕ ಪರಿಸರದಲ್ಲೇ ಘೋಷಣೆಗಳಿಗೆ ಒಂದು ಮಹತ್ತರವಾದ ಸ್ಥಾನವನ್ನು ನಾವೇ ಕಲ್ಪಿಸಿಕೊಂಡಿದ್ದೇವೆ. ಹೆಣ್ಣು ಭ್ರೂಣ ಹತ್ಯೆಯಂತಹ ಅಮಾನುಷ ಕೃತ್ಯಗಳಾಗಲೀ, ಅಸ್ಪೃಶ್ಯತೆಯಂತಹ ಬೆತ್ತಲೆಗೊಳಿಸುವ ಹೀನ ನಡವಳಿಕೆಗಳಾಗಲೀ, ಇಂತಹ ಅನಾಗರಿಕ ವರ್ತನೆ, ಮನೋಭಾವ ಹಾಗೂ ಸಂಸ್ಕೃತಿಯನ್ನು ಪರಿಹರಿಸುವುದಕ್ಕಿಂತಲೂ ಹೆಚ್ಚಾಗಿ, ಪರಿಹಾರೋಪಾಯದ ಘೋಷಣೆಗಳು ಜನಾಕರ್ಷಣೆಗೆ ಒಳಗಾಗುತ್ತವೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತೀಯ ಸಮಾಜ ಆಳುವ ಪಕ್ಷಗಳ, ರಾಜಕೀಯ ನೇತಾರರ ಇಂತಹ ಆಶಾದಾಯಕ ಘೋಷಣೆಗಳಿಂದ ಭ್ರಮಾಧೀನವಾಗಿಯೇ ನಡೆದುಬಂದಿದೆ.
ಇದಕ್ಕೆ ಕಾರಣವೇನೆಂದರೆ ನಮ್ಮ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಆಡಳಿತ ವ್ಯವಸ್ಥೆಯೊಳಗಿನ ಪ್ರಜಾಸತ್ತಾತ್ಮಕ ಆಶಯಗಳಲ್ಲಿ ಜನಮಾನಸದ ವಿಶ್ವಾಸ ಇನ್ನೂ ಗಟ್ಟಿಯಾಗಿದೆ. ಇಂದಲ್ಲಾ ನಾಳೆ ಇದು ಸರಿಹೋಗಬಹುದು ಎಂಬ ಆಶಾವಾದದಲ್ಲೇ ಜನಸಾಮಾನ್ಯರೂ ಸಹ ಕಾಲಕಾಲಕ್ಕೆ ವಿವಿಧ ರಾಜಕೀಯ ಪಕ್ಷಗಳಿಗೆ ಅಧಿಕಾರವನ್ನು ನೀಡುತ್ತಲೇ ಬಂದಿದ್ದಾರೆ. 75ನೆಯ ವರ್ಷದಲ್ಲಿರುವ ಸ್ವತಂತ್ರ ಭಾರತದ ಶ್ರೀಸಾಮಾನ್ಯನಿಗೆ ಈ ಆಶಾವಾದವೇ ಶ್ರೀರಕ್ಷೆಯಾಗಿದ್ದರೆ, ಆಳುವ ವರ್ಗಗಳಿಗೆ ಜನತೆಯ ಈ ದೌರ್ಬಲ್ಯವೇ ಪ್ರಧಾನ ಬಂಡವಾಳವೂ ಆಗಿದೆ. ಹಾಗಾಗಿಯೇ “ ಭಾರತದ ಬೀದಿಗಳಲ್ಲಿ ನಡು ರಾತ್ರಿಯಲ್ಲೂ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮುಕ್ತವಾಗಿ ನಿರ್ಭೀತಿಯಿಂದ ಓಡಾಡುವಂತಾದರೆ ಆಗ ದೇಶ ಸ್ವತಂತ್ರವಾದಂತೆ ” ಎಂಬ ಮಹಾತ್ಮಾ ಗಾಂಧಿ ಅವರ ಮಾರ್ಮಿಕ ಹೇಳಿಕೆ ಇಂದಿಗೂ ಸಹ ಸಾಕಾರಗೊಳ್ಳದ ಸ್ಥಿತಿಯಲ್ಲೇ ನಮ್ಮ ನಡುವೆ ಚಾಲ್ತಿಯಲ್ಲಿದೆ.
ಸಬಲೀಕರಣದ ವಾಸ್ತವಗಳು
ವಿಶಾಲ ಸಮಾಜದಲ್ಲಿ ನಿಂತು ನೋಡಿದಾಗ ಮಹಿಳೆಯರ ಸಾಧನೆ ಗ್ರಾಮ ಪಂಚಾಯತಿಯಿಂದ ಚಂದ್ರಲೋಕದವರೆಗೂ ವಿಸ್ತರಿಸುವುದನ್ನು ಕಾಣಬಹುದು. ಇದು ದೇಶದ ಮಹಿಳೆಯರಿಗೆ ಸಂವಿಧಾನ ನೀಡಿರುವ ಒಂದು ಮಹತ್ತರ ಕೊಡುಗೆಯ ಪರಿಣಾಮ. ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಸಾರ್ವಜನಿಕ ಜೀವನದ ಸಹಭಾಗಿತ್ವದ ನೆಲೆಗಳಲ್ಲಿ ಮಹಿಳೆಯರು ಎಲ್ಲ ರೀತಿಯ ಕೌಟುಂಬಿಕ, ಧಾರ್ಮಿಕ, ಜಾತೀಯ, ಸಾಂಸ್ಕೃತಿಕ ನಿರ್ಬಂಧಗಳನ್ನೂ ಮೆಟ್ಟಿನಿಂತು ಸಾಧನೆಗೈದಿರುವುದನ್ನು ಗುರುತಿಸಬಹುದು. ಈ ಸಾಧನೆಯನ್ನು ಗುರುತಿಸಿ ಸಮ್ಮಾನಿಸುವುದರಲ್ಲೂ ನಮ್ಮ ಸಮಾಜವೇನೂ ಕಡಿಮೆಯಿಲ್ಲ. ಪ್ರತಿಯೊಂದು ವಲಯದಲ್ಲೂ ಮಹಿಳೆಯರಿಗೆ ಕೊಂಚಮಟ್ಟಿಗಾದರೂ ಪ್ರಾತಿನಿಧ್ಯ ನೀಡುವುದಷ್ಟೇ ಅಲ್ಲದೆ, ಮಹಿಳಾ ಸಂಕುಲದ ಸಾಧನೆಯನ್ನು ಗುರುತಿಸುವುದನ್ನೂ ಕಾಣಬಹುದು.
ಈ ಸಕಾರಾತ್ಮಕ ಬೆಳವಣಿಗೆಗಳ ನಡುವೆಯೂ ಒಂದು ಋಣಾತ್ಮಕ ವಿದ್ಯಮಾನವನ್ನು ಗುರುತಿಸಬಹುದಾದರೆ ಅದು ಅಪರಾಧ ಜಗತ್ತಿನ ಕ್ರೌರ್ಯ ಮತ್ತು ಅಮಾನುಷತೆಯ ನಡುವೆ ಕಾಣಬಹುದು. ಬೇಟಿ ಬಚಾವೋ ಬೇಟಿ ಪಢಾವೋ ಎಂಬ ಉದಾತ್ತ ಕಾರ್ಯಯೋಜನೆಯೊಂದಿಗೆ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮಹಿಳಾ ಸಂಕುಲವನ್ನು ರಕ್ಷಿಸಲು ಮುಂದಾಗಿರುವ ಹೊತ್ತಿನಲ್ಲೇ ದೇಶಾದ್ಯಂತ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದು ಚಿಂತೆಗೀಡುಮಾಡುವ ವಿಚಾರ. ಹೆಣ್ಣುಮಕ್ಕಳಿಗೆ ಶಿಕ್ಷಣ, ಉದ್ಯೋಗ ಅಥವಾ ಸಾಮಾಜಿಕ ಭದ್ರತೆಯನ್ನು ಒದಗಿಸುವ ನೂರಾರು ಯೋಜನೆಗಳ ನಡುವೆಯೇ, ಹತ್ತಾರೂ ಕಾಯಿದೆಗಳ ನಡುವೆಯೇ ದೇಶದ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಶೋಷಣೆ ಹೆಚ್ಚಾಗುತ್ತಲೇ ಇರುವುದು ಚರ್ಚೆಗೊಳಗಾಗಬೇಕಾದ ವಿಚಾರ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ಸಲ್ಲಿಸಿರುವ 2022ರ ವರದಿಯ ಅನುಸಾರ ದೇಶದಲ್ಲಿ ಅಪರಾಧಗಳ ಪ್ರಮಾಣ ಕಳೆದ ಒಂದು ವರ್ಷದಲ್ಲಿ ಕೊಂಚ ಕುಸಿತ ಕಂಡಿದೆ. 2021ರಲ್ಲಿ ಒಂದು ಲಕ್ಷ ಜನಸಂಖ್ಯೆಗೆ 268 ರಷ್ಟು ಅಪರಾಧಗಳು ನಡೆಯುತ್ತಿದ್ದರೆ ಅದು 2022ರಲ್ಲಿ 258.1ಕ್ಕೆ ಇಳಿದಿದೆ. ಆದರೆ ಇದೇ ಅವಧಿಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಶೇಕಡಾ 4ರಷ್ಟು ಹೆಚ್ಚಾಗಿದೆ. ಅಂದರೆ ಅಪರಾಧಗಳ ಸಂಖ್ಯೆಯಲ್ಲಿನ ಇಳಿಮುಖ ಮಹಿಳಾ ಸಂಕುಲಕ್ಕೆ ಆಶಾದಾಯಕವಾಗಿ ಕಾಣುತ್ತಿಲ್ಲ. ಎನ್ಸಿಆರ್ಬಿ ವರದಿಯ ಅನುಸಾರ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧಗಳಲ್ಲಿ ಗಂಡ ಅಥವಾ ಕುಟುಂಬದವರಿಂದ ಕಿರುಕುಳ ಶೇ31.4ರಷ್ಟಿದೆ. ಅಪಹರಣದ ಪ್ರಕರಣಗಳು ಶೇ 19.2ರಷ್ಟಿವೆ. ಮಹಿಳೆಯರ ಮಾನಹರಣಕ್ಕಾಗಿಯೇ ನಡೆಯುವ ಆಕ್ರಮಣಗಳ ಪ್ರಮಾಣ ಶೇ 18.7ರಷ್ಟು ದಾಖಲಾಗಿವೆ. ಶೇ 7ರಷ್ಟು ಪ್ರಕರಣಗಳಲ್ಲಿ ಅತ್ಯಾಚಾರ ನಡೆದಿದೆ. ಈ ಒಂದು ವರ್ಷದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯಡಿ 13,479 ಪ್ರಕರಣಗಳು ದಾಖಲಾಗಿವೆ.
ಎನ್ಸಿಆರ್ಬಿ ವರದಿಯ ಅನುಸಾರ 2022ರಲ್ಲಿ ಮಹಿಳೆಯರ ವಿರುದ್ಧದ 4.45 ಲಕ್ಷ ಪ್ರಕರಣಗಳು ದಾಖಲಾಗಿವೆ. ಅಂದರೆ ಪ್ರತಿ ಗಂಟೆಗೆ 51 ಎಫ್ಐಆರ್ಗಳು ದಾಖಲಾಗಿವೆ. ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಮಹಿಳೆಯರ ಮೇಲಿನ ಅಪರಾಧಗಳ ಪ್ರಮಾಣ ಶೇ 66.4ರಷ್ಟಿದೆ. ಇದು ಮಹಿಳಾ ಸಮುದಾಯ ಸಮಾಜದಲ್ಲಿ ಅನುಭವಿಸುತ್ತಿರುವ ಕೆಳಸ್ತರದ ಸ್ಥಾನಮಾನ ಹಾಗೂ ಅಸಮಾನತೆಯ ಸಂಕೇತವಾಗಿಯೇ ಕಾಣುತ್ತದೆ. ನವ ಉದಾರವಾದಿ ಆರ್ಥಿಕತೆಯ ಯುಗದಲ್ಲಿ ಪಿತೃಪ್ರಧಾನತೆಯೂ ಬಲಗೊಳ್ಳುತ್ತಿರುವುದನ್ನು ಗುರುತಿಸುವ ವಿದ್ವಾಂಸರು ಎಲ್ಲ ಜಾತಿಗಳಲ್ಲೂ, ಎಲ್ಲ ವರ್ಗಗಳ ನಡುವೆಯೂ ಮಹಿಳೆಯನ್ನು ಶಾಶ್ವತವಾದ ಆಘಾತ ಸಹಿಸಿಕೊಳ್ಳುವ ಒಂದು ಸಮೂಹವಾಗಿ ಕಾಣುತ್ತಿರುವುದನ್ನೂ ಗಮನಾರ್ಹವಾಗಿ ದಾಖಲಿಸುತ್ತಾರೆ. ಮಹಿಳೆಯರ ರಕ್ಷಣೆಗಾಗಿ ಅತ್ಯಂತ ಕಠಿಣ ಕಾನೂನುಗಳನ್ನು ಹೊಂದಿದ್ದರೂ, ಅವುಗಳ ಅನುಷ್ಠಾನದಲ್ಲಿ ಇರುವ ಕೊರತೆ ಮತ್ತು ನ್ಯಾಯದಾನದ ವಿಳಂಬವೂ ಸಹ ಮಹಿಳಾ ದೌರ್ಜನ್ಯಗಳ ಹೆಚ್ಚಳಕ್ಕೆ ಕಾರಣವಾಗಿದೆ.
ದೇಶದ ರಾಜಧಾನಿ ದೆಹಲಿಯಲ್ಲಿ 2022ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ 14,247 ಪ್ರಕರಣಗಳು ದಾಖಲಾಗಿದ್ದು ಅಗ್ರಸ್ಥಾನದಲ್ಲಿದೆ. ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಾಗಿ ಒಂದು ಲಕ್ಷ ಜನಸಂಖ್ಯೆಗೆ 144.4 ದೌರ್ಜನ್ಯ ಪ್ರಕರಣಗಳು ದಾಖಲಾಗಿರುವುದು, ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವುದರ ಸಂಕೇತವೂ ಆಗಿದೆ. ಆದರೆ ಅಂಕಿಅಂಶಗಳು ಸೂಚಿಸುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಅಪರಾಧಗಳು, ದೌರ್ಜನ್ಯಗಳು ನಡೆಯುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ . ಏಕೆಂದರೆ ಭಾರತದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಹತ್ತುವುದಿಲ್ಲ ಎನ್ನುವುದು ಜನಜನಿತ ವಾಸ್ತವ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ, ಕೌಟುಂಬಿಕ-ವರದಕ್ಷಿಣೆ ಕಿರುಕುಳ ಇವೆಲ್ಲವೂ ವರದಿಯಾಗದೆ ಉಳಿದುಬಿಡುತ್ತವೆ.
ಉತ್ತಮ ಕಾನೂನು ಪ್ರಾಚೀನ ನಡವಳಿಕೆ
ಉತ್ತಮ ಶಿಕ್ಷಣ ಸೌಲಭ್ಯಗಳ ಹೊರತಾಗಿಯೂ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚಾಗುತ್ತಿರುವುದಕ್ಕೆ ಸಮಾಜದಲ್ಲಿ ಬೇರೂರಿರುವ ಪಿತೃಪ್ರಧಾನತೆಯ ಮನಸ್ಥಿತಿಯೇ ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ದೇಶದ ಮಹಿಳಾ ಚಳುವಳಿಗಳು ಹಲವು ದಶಕಗಳಿಂದಲೂ ವಿರೋಧಿಸುತ್ತಾ ಬಂದಿರುವ ಪ್ರತಿಗಾಮೀ ಮೌಲ್ಯಗಳು ಮಹಿಳೆಯರ ಪಾಲಿಗೆ ಮತ್ತೊಮ್ಮೆ ಮುನ್ನೆಲೆಗೆ ಬರುತ್ತಿರುವುದು ಮತ್ತು ಈ ಮೌಲ್ಯಗಳಿಗೆ ಸಂಸ್ಕೃತಿ, ಸಂಪ್ರದಾಯ, ಪರಂಪರೆಯ ಹೆಸರಿನಲ್ಲಿ ಅಧಿಕೃತತೆಯನ್ನು ನೀಡುತ್ತಿರುವುದು ಮಹಿಳಾ ದೌರ್ಜನ್ಯಗಳ ಹೆಚ್ಚಳಕ್ಕೆ ಕಾರಣವಾಗಿರುವುದನ್ನು ಸಾಮಾಜಿಕ ಕಾರ್ಯಕರ್ತರು ಗುರುತಿಸುತ್ತಾರೆ. ಮಹಿಳೆಯನ್ನು ಇಂದಿಗೂ ಭೋಗದ ವಸ್ತುವನ್ನಾಗಿ ನೋಡುವ ಸಮಾಜದಲ್ಲೇ, ವಿವಾಹ ಯೋಗ್ಯ ವಧುವನ್ನು ವಿನಿಮಯ ಮಾಡಬಹುದಾದ ಸರಕಿನಂತೆ ಕಾಣುವ ಸಾಂಪ್ರದಾಯಿಕ ಮನಸ್ಥಿತಿಯೂ ಜೀವಂತವಾಗಿದ್ದು, ಇದರಿಂದಲೇ ವರದಕ್ಷಿಣೆಯಂತಹ ಪಿಡುಗು ಇಂದಿಗೂ ಚಾಲ್ತಿಯಲ್ಲಿರುವುದು ಸ್ಪಷ್ಟ. ಒಳಹೊಕ್ಕು ನೋಡಿದರೆ 13 ಸಾವಿರ ದಾಖಲಿತ ವರದಕ್ಷಿಣೆ ಪ್ರಕರಣಗಳ ಹೊರತಾಗಿಯೂ ವಿವಾಹಿತ ಮಹಿಳೆಯರು ಮೌನವಾಗಿ ಕಿರುಕುಳ ಸಹಿಸುತ್ತಿರುವುದನ್ನು ಕಾಣಲು ಸಾಧ್ಯವಾದೀತು.
ಹಾಗೆ ನೋಡಿದರೆ 1956 ರಿಂದ 2013ರವರೆಗಿನ ಅವಧಿಯಲ್ಲಿ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರನ್ನು ರಕ್ಷಿಸುವ ಸಲುವಾಗಿಯೇ ಹಲವು ಕಾಯ್ದೆಗಳನ್ನು ಜಾರಿಗೊಳಿಸಿದ್ದು, ಕಾಲಕಾಲಕ್ಕೆ ಪರಿಷ್ಕರಿಸುವ ಮೂಲಕ ಬಿಗಿಗೊಳಿಸುತ್ತಲೂ ಬರಲಾಗಿದೆ. 1956ರ ಅನೈತಿಕ ಸಾಗಾಣಿಕೆ (ನಿರ್ಬಂಧಕ) ಕಾಯ್ದೆ, 1961ರ ವರದಕ್ಷಿಣೆ ನಿಷೇಧ ಕಾಯ್ದೆ, 1987ರ ಸತಿ (ನಿರ್ಬಂಧಕ) ಕಾಯ್ದೆ, 2005ರ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ, 2013ರ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ ಪರಿಹಾರ ಮತ್ತು ನಿಷೇಧ) ಕಾಯ್ದೆ ಹಾಗೂ 1986ರ ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿರ್ಬಂಧಕ) ಕಾಯ್ದೆ ಇವೆಲ್ಲವೂ ಸಹ ಶಾಸನಬದ್ಧವಾಗಿ ಜಾರಿಯಲ್ಲಿವೆ. ನಿರ್ಭಯ ಪ್ರಕರಣದ ನಂತರ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಪೋಕ್ಸೋ ಕಾಯ್ದೆಯೂ ಸಹ ಜಾರಿಯಲ್ಲಿದ್ದು ಕಠಿಣ ನಿಯಮಗಳನ್ನು ಹೊಂದಿದೆ.
ಸುಪ್ರೀಂಕೋರ್ಟ್ ನ್ಯಾಯವಾದಿ ಶಿಲ್ಪಿ ಜೈನ್ ಅವರು ಹೇಳುವಂತೆ ಉತ್ತಮ ಕಾನೂನುಗಳಿವೆ ಈ ಹಿಂದೆಯೂ ಇದ್ದವು ಸಮಸ್ಯೆ ಇರುವುದು ಅವುಗಳ ಅನುಸರಣೆ ಮತ್ತು ಅನುಷ್ಠಾನದಲ್ಲಿ. “ ಉನ್ನತ ಮಟ್ಟದ ಶಿಕ್ಷಣ ದೊರೆಯುತ್ತಿದ್ದರೂ ಭಾರತದ ಸಮಾಜದಲ್ಲಿ ಪುರುಷ ಮನಸ್ಥಿತಿ ಮತ್ತು ಸಮಾಜದ ಧೋರಣೆ ಇಂದಿಗೂ ಬದಲಾಗಿಲ್ಲ ” ಎಂದು ವಿಷಾದಿಸುವ ಶಿಲ್ಪಿ ಜೈನ್ ನಾವು ಪ್ರಗತಿಪರ ಸಮಾಜ ಎಂದು ಬೆನ್ನು ತಟ್ಟಿಕೊಳ್ಳುತ್ತೇವೆ ಆದರೆ ಇಂದಿಗೂ ಪ್ರಾಚೀನತೆಯಲ್ಲೇ ಉಳಿದಿದ್ದೇವೆ ಎಂದು ಹೇಳುತ್ತಾರೆ. “ ಮಹಿಳೆಯರನ್ನು ಹಾಗೂ ಹೆಣ್ಣು ಮಕ್ಕಳನ್ನು ಎಲ್ಲ ಜಾತಿ, ವರ್ಗ, ಸಮುದಾಯಗಳಲ್ಲೂ ಸಹ ಶಾಶ್ವತವಾಗಿ ಆಘಾತವನ್ನು ಸಹಿಸುವ ಧಾರಣಾ ಶಕ್ತಿಯುಳ್ಳವರೆಂದೇ ಭಾವಿಸಲಾಗುತ್ತದೆ. ಇದು ನವ ಉದಾರವಾದಿ ಯುಗದಲ್ಲಿ ಪಿತೃಪ್ರಧಾನತೆಯನ್ನು ಪುನರುಜ್ಜೀವನಗೊಳಿಸುವ ಒಂದು ಪರಿಣಾಮವೇ ಆಗಿದೆ ” ಎನ್ನುತ್ತಾರೆ ಜಾಗೋರಿ ಮಹಿಳಾ ಆಂದೋಲನದ ನಿರ್ದೇಶಕಿ ಜಯಶ್ರೀ ವೇಲಾಂಕರ್.
ಕಾನೂನುಗಳನ್ನು ಅನುಷ್ಟಾನಗೊಳಿಸುವಲ್ಲಿ ಹಲವು ಸಮಸ್ಯೆಗಳನ್ನೂ ಶಿಲ್ಪಿ ಜೈನ್ ಗುರುತಿಸುತ್ತಾರೆ. ಬಹುತೇಕ ತನಿಖಾಧಿಕಾರಿಗಳು ಕಿರಿಯ ಶ್ರೇಣಿಯಲ್ಲಿದ್ದು ಕಡಿಮೆ ವೇತನದಲ್ಲಿ ದುಡಿಯುತ್ತಾರೆ. ಇದು ತನಿಖೆಗೆ ಅಡೆತಡೆಗಳನ್ನು ಉಂಟುಮಾಡುವುದೇ ಅಲ್ಲದೆ ಆರೋಪ ಪಟ್ಟಿಯ ಸಲ್ಲಿಕೆಗೂ ಸಮಸ್ಯೆ ಒಡ್ಡುತ್ತದೆ. ಒಮ್ಮೆ ಪ್ರಕರಣ ನ್ಯಾಯಾಂಗದ ವ್ಯಾಪ್ತಿಗೆ ತಲುಪಿದರೆ, ಕೆಳಹಂತದ ನ್ಯಾಯಾಲಯಗಳಲ್ಲಿ ಐದಾರು ವರ್ಷಗಳ ವಿಚಾರಣೆ ನಡೆಯುತ್ತದೆ. ಮೆಲ್ಮನವಿ ಸಲ್ಲಿಸಿದರೆ ಇನ್ನೂ 10-15 ವರ್ಷಗಳಾಗುತ್ತವೆ. ಗಂಭೀರ ಅಪರಾಧಗಳನ್ನು ವಿಚಾರಣೆಗೊಳಪಡಿಸಲು ತ್ವರಿತ ನ್ಯಾಯದಾನದ ನ್ಯಾಯಾಲಯಗಳು ಸ್ಥಾಪನೆಯಾಗಿದ್ದರೂ ಅಲ್ಲಿಯೂ ಸಹ ವಿಳಂಬವಾಗುತ್ತಿರುವುದನ್ನು ಗಮನಿಸಬಹುದು. ಅಪರಾಧ ಭೇದಿಸುವುದನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣ ಎನ್ನುತ್ತಾರೆ ಶಿಲ್ಪಿ ಜೈನ್.
ದೆಹಲಿ ಮುಂತಾದ ಮಹಾನಗರಗಳನ್ನು ಹೊರತುಪಡಿಸಿ ಭಾರತದ ಇತರೆಡೆಗಳಲ್ಲಿ ಮಹಿಳೆಯರು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಪೊಲೀಸ್ ಠಾಣೆಯಲ್ಲಿ ದಾಖಲು ಮಾಡುವ ಧೈರ್ಯವನ್ನೂ ತೋರುವುದಿಲ್ಲ ಎಂದು ಹೇಳುವ Common Cause India ಎಂಬ ಎನ್ಜಿಒ ಕಾರ್ಯಕರ್ತ ವಿಪುನ್ ಮುಡ್ಗಲ್ “ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ನೇಮಕಾತಿ ಪ್ರಮಾಣವೂ ಕಡಿಮೆ ಇದ್ದು, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿವಾರಿಸಲು ಅಗತ್ಯವಾದ ಮಹಿಳಾ ಸಿಬ್ಬಂದಿಯೂ ಕಡಿಮೆ ಇದೆ. ಇದು ಎಲ್ಲ ರಾಜ್ಯಗಳ ಸಮಸ್ಯೆಯಾಗಿದೆ. ಇದರಿಂದ ಹಾಲಿ ಇರುವ ಮಹಿಳಾ ಪೊಲೀಸ್ ಅಧಿಕಾರಿಗಳ ಮೇಲೆ ಕೆಲಸದ ಒತ್ತಡವೂ ಹೆಚ್ಚಾಗುತ್ತದೆ, ಚಾರ್ಜ್ಷೀಟ್ ಸಲ್ಲಿಕೆ ಮೊದಲಾದ ಕಾನೂನು ಪ್ರಕ್ರಿಯೆಯೂ ವಿಳಂಬವಾಗುತ್ತದೆ ” ಎಂದು ವಿಷಾದ ವ್ಯಕ್ತಪಡಿಸುತ್ತಾರೆ. ಫೆಬ್ರವರಿ 2023ರಲ್ಲಿ ರಾಜ್ಯಸಭೆಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯ ಸಲ್ಲಿಸಿದ ವರದಿಯ ಅನುಸಾರ ದೇಶಾದ್ಯಂತ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಕೇವಲ ಶೇಕಡಾ 11.7ರಷ್ಟಿದೆ.
ಕರಾಳ ಪರಿಸ್ಥಿತಿಯ ವಾಸ್ತವ
ಈ ಕಾನೂನಾತ್ಮಕ ಕೊರತೆಗಳನ್ನು ಬದಿಗಿಟ್ಟು ನೋಡಿದಾಗಲೂ 2022ರಲ್ಲಿ ಪೋಕ್ಸೋ ಕಾಯ್ದೆಯಡಿ ದಾಖಲಾದ 63,116 ಪ್ರಕರಣಗಳಲ್ಲಿ 38,030 ಪ್ರಕರಣಗಳು ಅತ್ಯಾಚಾರಕ್ಕೆ ಸಂಬಂಧಿಸಿರುವುದು ಸಮಸ್ಯೆಯ ಗಂಭೀರತೆಯನ್ನು ಸೂಚಿಸುತ್ತದೆ. 2021ರಲ್ಲಿ 33,186 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ದಿನ ಕಳೆದಂತೆ ಮಹಿಳೆಯರ ಮೇಲಿನ ದೌರ್ಜನ್ಯಗಳು, ಅತ್ಯಾಚಾರಗಳು, ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇರುವುದು ಕಳವಳಕಾರಿಯಾಗಿದೆ. ಕರ್ನಾಟಕದಲ್ಲಿ ಪೋಕ್ಸೋ ಕಾಯ್ದೆಯಡಿ 2022ರಲ್ಲಿ 3225 ಪ್ರಕರಣಗಳು ದಾಖಲಾಗಿವೆ. ವಿಶೇಷ ಎಂದರೆ ಪೋಕ್ಸೋ ಪ್ರಕರಣಗಳಲ್ಲಿ ಮೊದಲ ಸ್ಥಾನವನ್ನು ಇತ್ತೀಚಿನ ದಿನಗಳಲ್ಲಿ ಮಾದರಿ ಆಳ್ವಿಕೆ ಎಂದೇ ಬಿಂಬಿಸಲಾಗುತ್ತಿರುವ ಉತ್ತರ ಪ್ರದೇಶ 7,970 ಪಡೆದಿದೆ. ಮತ್ತೊಂದೆಡೆ ಉತ್ತರಭಾರತದ ಕೆಲವು ರಾಜ್ಯಗಳಿಗಷ್ಟೇ ಸೀಮಿತವಾಗಿದ್ದ ಮಹಿಳಾ ದೌರ್ಜನ್ಯದ ಕ್ರೌರ್ಯದ ಒಂದು ಸ್ವರೂಪ ಕರ್ನಾಟಕದ ಬೆಳಗಾವಿಯ ಬೆತ್ತಲೆಗೊಳಿಸುವ ಪ್ರಕರಣದಲ್ಲೂ ದಾಖಲಾಗಿರುವುದು ಕರ್ನಾಟಕದ ಪ್ರಜ್ಞಾವಂತರನ್ನು ಎಚ್ಚರಿಸಬೇಕಿದೆ.
ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿ ಥಳಿಸಿರುವ ಈ ಪ್ರಕರಣ, ಮಹಿಳಾ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಕರ್ನಾಟಕವನ್ನೂ ಕಪ್ಪುಪಟ್ಟಿಗೆ ಸೇರಿಸುವ ಕ್ರೂರ ಘಟನೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇಂತಹ ಘಟನೆಗಳಿಗೆ ನಿದರ್ಶನಪ್ರಾಯವಾಗಿ ಮಣಿಪುರ, ಊನ ಮುಂತಾದ ಘಟನೆಗಳು ನಿಲ್ಲುತ್ತವೆ. ಪಿತೃಪ್ರಧಾನತೆ-ಪುರುಷ ಪ್ರಧಾನತೆಯಂತೆಯೇ, ಲಿಂಗ ಸೂಕ್ಷ್ಮತೆ ಮತ್ತು ಸ್ತ್ರೀ ಸಂವೇದನೆಯ ಕೊರತೆಯೂ ಸಹ ಒಂದು ಸಾರ್ವತ್ರಿಕ ಸಮಸ್ಯೆ ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ. 2022ರಲ್ಲಿ ನ್ಯಾಯಾಲಯಗಳು 1.81 ಲಕ್ಷ ಅತ್ಯಾಚಾರ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದರೂ ವರ್ಷಾಂತ್ಯಕ್ಕೆ 21.84 ಲಕ್ಷ ಅತ್ಯಾಚಾರ ಪ್ರಕರಣಗಳು ( ಕರ್ನಾಟಕದಲ್ಲಿ 72,455 ) ವಿಚಾರಣೆಗೆ ಬಾಕಿ ಉಳಿಸಿರುವುದು ನ್ಯಾಯದಾನದಲ್ಲಿ ವಿಳಂಬವಾಗುತ್ತಿರುವುದನ್ನು ಸೂಚಿಸುತ್ತದೆ. ಈ ಸಮಸ್ಯೆಗಳೇ ಸಾಲದೆಂಬಂತೆ ಈಗ ಕರ್ನಾಟಕದ ಹೆಣ್ಣು ಭ್ರೂಣ ಹತ್ಯೆಯ ರಾಜಧಾನಿಯಾಗಿ ಹೊರಹೊಮ್ಮಿದ್ದು ಮತ್ತೊಮ್ಮೆ ಪಿತೃಪ್ರಧಾನ ವ್ಯವಸ್ಥೆಯ ಸ್ತ್ರೀ ದ್ವೇಷಿ ನೆಲೆಗಳನ್ನು ಬಹಿರಂಗಪಡಿಸಿದೆ.
ಸಮಾಜದ ನೈತಿಕ ಹೊಣೆ
ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟುವುದು ಕೇವಲ ಕಾನೂನು/ನ್ಯಾಯಾಂಗದ ಕರ್ತವ್ಯ ಎಂದು ಭಾವಿಸುವ ಒಂದು ನಿರ್ಲಿಪ್ತ ಸಮಾಜದಲ್ಲಿ ನಾವಿದ್ದೇವೆ. ಅಂದರೆ ಸಂಭವಿಸಿದ ಘಟನೆಗಳ ಸುತ್ತ ನಡೆಯುವ ಸಂಕಥನಗಳ ನಡುವೆ , ಅಪರಾಧ/ಅಪರಾಧಿ/ಶಿಕ್ಷೆ/ಖುಲಾಸೆ ಇತ್ಯಾದಿಗಳ ಚರ್ಚೆಗಳ ನಡುವೆ ಒಂದು ನಾಗರಿಕತೆಯಾಗಿ ವಿಶಾಲ ಸಮಾಜಕ್ಕೂ ಒಂದು ನೈತಿಕ ಜವಾಬ್ದಾರಿ ಇದೆ ಎನ್ನುವುದನ್ನು ನಾವು ಮರೆಯುತ್ತಿದ್ದೇವೆ. ಹಾಗಾಗಿಯೇ ಲಿಂಗಸೂಕ್ಷ್ಮತೆ-ಸಂವೇದನೆಯ ಮನಸ್ಸುಗಳನ್ನು ಸೃಷ್ಟಿಸುವ ಹೊಣೆಯನ್ನು ಕೇವಲ ಮಹಿಳಾ ಸಂಘಟನೆಗಳ ಹೆಗಲಿಗೆ ಹೊರಿಸಿ, ಪುರುಷ ಕೇಂದ್ರಿತ-ಪುರುಷ ಪ್ರಧಾನ ಸಾಂಘಿಕ ನೆಲೆಗಳೂ ಸಹ ತಮ್ಮ ಜವಾಬ್ದಾರಿಯನ್ನು ಮರೆತಂತೆ ಕಾಣುತ್ತದೆ. ನವ ಉದಾರವಾದದ ಯುಗದಲ್ಲಿ ಇಂದಿಗೂ ಗುಪ್ತಗಾಮಿನಿಯಂತೆ ಸಮಾಜದ ಆಂತರ್ಯದಲ್ಲಿ ಹರಿಯುತ್ತಿರುವ ಪಿತೃಪ್ರಧಾನತೆ ಮತ್ತು ಇದರಿಂದ ಉಗಮಿಸುವ ಸ್ತ್ರೀ ದ್ವೇಷದ ತಂತುಗಳು ಮಹಿಳೆಯನ್ನು ಸದಾ ಅಧೀನಳನ್ನಾಗಿಯೇ ಇರಿಸುವ ವಿಶಾಲ ಸಮಾಜದ ಪ್ರಯತ್ನಗಳಿಗೆ ಬುನಾದಿಯಾಗಿರುವುದನ್ನು ಇನ್ನಾದರೂ ಗಮನಿಸಬೇಕಿದೆ.
ದತ್ತಾಂಶಗಳು, ಅಂಕಿಅಂಶಗಳನ್ನು ಬದಿಗಿಟ್ಟು ನೋಡುವ ವ್ಯವಧಾನವನ್ನು ಸಮಾಜ, ವಿಶೇಷವಾಗಿ ಪುರುಷ ಕೇಂದ್ರಿತ ಸಮಾಜ, ಬೆಳೆಸಿಕೊಳ್ಳಬೇಕಿದೆ. ರಾಜ್ಯದ ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗಲೇ ಕೂಗಳತೆ ದೂರದಲ್ಲಿ ಒಬ್ಬ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸುವುದು ನಮ್ಮ ಇಡೀ ವ್ಯವಸ್ಥೆಯ ನಿರ್ಲಿಪ್ತತೆಯನ್ನು, ಸಮಾಜದ ತಣ್ಣನೆಯ ನಿಷ್ಕ್ರಿಯತೆಯನ್ನು ತೋರುತ್ತದೆ. ಮಹಿಳಾ ದೌರ್ಜನ್ಯಗಳನ್ನು, ಅಪ್ರಾಪ್ತರ ಮೇಲಿನ ಅತ್ಯಾಚಾರ-ಲೈಂಗಿಕ ಕಿರುಕುಳಗಳನ್ನು ಸಾಂಸ್ಕೃತಿಕ ಅಸ್ಮಿತೆಗಳಿಂದಾಚೆಗಿಟ್ಟು ನೋಡುವ ಹೃದಯವೈಶಾಲ್ಯವನ್ನೂ ನಮ್ಮ ಸಮಾಜ ರೂಢಿಸಿಕೊಳ್ಳಬೇಕಿದೆ. “ಮಹಿಳಾ ವಿರೋಧಿ ಆಚರಣೆಗಳನ್ನು ವೈಭವೀಕರಿಸುವ ಒಂದು ಪ್ರವೃತ್ತಿ ಹೆಚ್ಚಾಗುತ್ತಿದೆ” ಎಂದು ಸುಪ್ರೀಂಕೋರ್ಟ್ ನ್ಯಾಯವಾದಿ ಶಿಲ್ಪಿ ಜೈನ್ ಹೇಳುವುದನ್ನು ಅಕ್ಷರಶಃ ಒಪ್ಪಲೇಬೇಕಿದೆ. ನಿವೃತ್ತ ಐಪಿಎಸ್ ಅಧಿಕಾರಿ ಮೀರನ್ ಚಡ್ಡಾ ಬೋರ್ವಂಕರ್ “ ದೇಶದ ರಾಜಧಾನಿಯನ್ನೂ ಸೇರಿದಂತೆ ಉತ್ತರ ಭಾರತದ ಬಹುತೇಕ ಭಾಗಗಳು ಮಹಿಳೆಯರಿಗೆ ರಾತ್ರಿಯ ವೇಳೆ ಸುರಕ್ಷಿತವಲ್ಲ ” ಎಂದು ಹೇಳುವುದು ಮಾರ್ಮಿಕವಷ್ಟೇ ಅಲ್ಲ, ವಾಸ್ತವವೂ ಹೌದು.
ಬದಲಾಗಬೇಕಿರುವುದು ಪುರುಷಾಹಮಿಕೆಯ ಮನಸ್ಥಿತಿ ಮತ್ತು ಸುಧಾರಿಸಬೇಕಿರುವುದು ಮಹಿಳಾ ದ್ವೇಷದ-ಮಹಿಳಾ ವಿರೋಧಿ ಮನಸ್ಥಿತಿ. ಇದೊಂದು ಸಾಮಾಜಿಕ ವ್ಯಸನ ಮತ್ತು ಸಾಂಸ್ಕೃತಿಕ ವ್ಯಾಧಿ. ಇದಕ್ಕೆ ಮದ್ದು ನೀಡುವುದೇ ಆದರೆ ಮೊಳಕೆಯ ಹಂತದಿಂದಲೇ ನೀಡಬೇಕಿದೆ. ಲೈಂಗಿಕ ಶಿಕ್ಷಣದ ಮೂಲಕ ಹೆಣ್ಣು-ಗಂಡುಮಕ್ಕಳಿಗೆ ಅರಿವು ಮೂಡಿಸುವುದರೊಂದಿಗೇ, ಬಾಲ್ಯಾವಸ್ಥೆಯಿಂದಲೇ ಪುರುಷ ಸಮಾಜದಲ್ಲಿ ಲಿಂಗ ಸೂಕ್ಷ್ಮತೆ-ಮಹಿಳಾ ಸಂವೇದನೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಡೀ ಸಮಾಜವೇ ಕಾರ್ಯೋನ್ಮುಖವಾಗಬೇಕಿದೆ. ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ನೆಲೆಗಳಲ್ಲಿ ಸಕ್ರಿಯವಾಗಿರುವ ಎಲ್ಲ ಸಂಘಟನೆಗಳೂ ತಮ್ಮ ಪಿತೃಪ್ರಧಾನತೆಯ ಹೊದಿಕೆಯನ್ನು ಕಳಚಿಹಾಕಿ, ಈ ನಿಟ್ಟಿನಲ್ಲಿ ಕಾರ್ಯೊನ್ಮುಖವಾದರೆ ಹೆಣ್ಣು ಭ್ರೂಣಗಳೂ ಉಳಿಯುತ್ತವೆ, ಪ್ರಪಂಚಕ್ಕೆ ಕಣ್ತೆರೆಯುವ ಎಳೆಯ ಹೆಣ್ಣು ಜೀವಗಳೂ ಉಳಿಯುತ್ತವೆ, ಬೆಳೆದು ನಿಂತ ಹೆಣ್ಣು ಮಕ್ಕಳೂ ಸುರಕ್ಷಿತವಾಗಿರುತ್ತಾರೆ. ಇದು ನಮ್ಮ ಸಾಮಾಜಿಕ ಆದ್ಯತೆಯೂ, ಕರ್ತವ್ಯವೂ ಆಗಬೇಕಿದೆ.