ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ 45 ವರ್ಷದ ಮಹಿಳೆಯೊಬ್ಬಳ ಮೇಲೆ ಆಕೆಯ ಪತಿಯ ಎದುರೇ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಳ್ಳತನ ಮಾಡುವ ಉದ್ದೇಶದಿಂದ ನಾಲ್ವರು ಮನೆಗೆ ನುಗ್ಗಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಘಟನೆ ಬುಧವಾರ ನಡೆದಿದೆ. ಆದರೆ ಆಘಾತದಿಂದ ದಂಪತಿ ಗುರುವಾರದವರೆಗೂ ಮನೆಯಿಂದ ಹೊರಗೆ ಬಂದಿರಲಿಲ್ಲ. ಇದಾದ ಬಳಿಕ ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿ ಶುಕ್ರವಾರ ಸ್ಥಳೀಯ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುತ್ತಿರುವ ಪೊಲೀಸರು ಶನಿವಾರ ಮೂವರು ಆರೋಪಿಗಳನ್ನು ಬಂಧಿಸಿದ್ದು, ನಾಲ್ಕನೇ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
ಸಂತ್ರಸ್ತೆಯ ಪತಿ ಸೆಕ್ಯುರಿಟಿ ಗಾರ್ಡ್ ಆಘಿ ಕೆಲಸ ಮಾಡುತ್ತಿದ್ದಾರೆ ಎಂದು ಪಿಂಡ್ವಾರಾ ಉಪ ಪೊಲೀಸ್ ವರಿಷ್ಠಾಧಿಕಾರಿ ಜೇತು ಸಿಂಗ್ ಹೇಳಿದ್ದಾರೆ. ಬುಧವಾರ ರಾತ್ರಿ ಇಬ್ಬರೂ ಮಲಗಲು ತಯಾರಿ ನಡೆಸುತ್ತಿದ್ದಾಗ ನಾಲ್ವರು ಬಲವಂತವಾಗಿ ಅವರ ಮನೆಗೆ ನುಗ್ಗಿದ್ದಾರೆ. ದುಷ್ಕರ್ಮಿಗಳು ಮಹಿಳೆಯ ಪತಿಯ ಜೇಬಿನಲ್ಲಿದ್ದ 1,400 ರೂ. ದೋಚಿದ್ದಾರೆ.
ಹೆಚ್ಚಿನ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕೇಳಿದರು ಆದರೆ ದಂಪತಿಗಳ ಬಳಿ ಕೆಲವು ಬೆಳ್ಳಿ ಆಭರಣಗಳನ್ನು ಹೊರತುಪಡಿಸಿ ಏನೂ ಇರಲಿಲ್ಲ. ಇದಕ್ಕಿಂತ ಹೆಚ್ಚಿಗೆ ಏನೂ ಸಿಗದಿದ್ದಾಗ ಸರದಿಯಂತೆ ಪತಿಯ ಎದುರೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಠಾಣೆಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ವಿವಿಧ ಠಾಣೆಗಳ ಪೊಲೀಸ್ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ತೊಡಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
“ಆರೋಪಿಗಳನ್ನು ತ್ವರಿತವಾಗಿ ಗುರುತಿಸಲಾಯಿತು.ಅವರಲ್ಲಿ ಮೂವರನ್ನು ಶನಿವಾರ ಬಂಧಿಸಲಾಯಿತು. ನಮ್ಮ ತಂಡಗಳು ನಾಲ್ಕನೇ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದು, ಶೀಘ್ರದಲ್ಲೇ ಆತನನ್ನೂ ಬಂಧಿಸಲಾಗುವುದು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.