ಕೃಷ್ಣಗಿರಿ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪೋಚಂಪಲ್ಲಿ ಬಳಿಯ ಪುಲಿಯಂಪಟ್ಟಿಯ 27 ವರ್ಷದ ಮಹಿಳೆ ಹೆರಿಗೆ ನಂತರ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.
ಮಹಿಳೆಯ ಪತಿ ಯೂಟ್ಯೂಬ್ ಚಾನೆಲ್‌ಗಳನ್ನು ನೋಡಿ ಮನೆಯಲ್ಲಿ ಹೆರಿಗೆ ಮಾಡಿಸಿದ್ದ ಎಂದು ನೆರೆಹೊರೆಯವರು ಆರೋಪಿಸಿದ್ದು, ಪೊಲೀಸರು ಆಕೆಯ ಪತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ನವಜಾತ ಶಿಶುವನ್ನು ಪೋಚಂಪಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಮೃತರನ್ನು ಎಂ ಲೋಕನಾಯಕಿ ಎಂದು ಗುರುತಿಸಲಾಗಿದೆ.
ಪೆರುಗೋಬನಪಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಎಂ. ರಾಧಿಕಾ ಮಂಗಳವಾರ ಪೋಚಂಪಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಪ್ರಭಾವತಿ ಅವರಿಗೆ ದೂರು ನೀಡಿದ ನಂತರ ಸಾವಿನ ಬಗ್ಗೆ ತಿಳಿಯಿತು ಎಂದು ಪೋಚಂಪಲ್ಲಿ ಡಿಎಸ್‌ಪಿ ಮನೋಹರನ್ ತಿಳಿಸಿದ್ದಾರೆ.
ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಮನೆಯಲ್ಲಿಯೇ ಪತಿ ಮಾದೇಶ್ ಹೆರಿಗೆಗೆ ಯತ್ನಿಸಿ ಲೋಕನಾಯಕಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ರಾಧಿಕಾ ತಿಳಿಸಿದ್ದಾರೆ.
“ಹೆರಿಗೆಯ ನಂತರ ಹೊಕ್ಕುಳಬಳ್ಳಿಯನ್ನು ಕತ್ತರಿಸಲಾಗಿಲ್ಲ. ಹೀಗಾಗಿ ತೀವ್ರ ರಕ್ತಸ್ರಾವವಾಗಿದೆ.” ಎಂದು ವೈದ್ಯರು ಹೇಳಿದ್ದಾರೆ.