ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬೀಳ್ತಿದ್ದ ಹಾಗೆ ಚಿಕ್ಕೋಡಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಎದುರಾಗಿದೆ. ನಿನ್ನೆಯಷ್ಟೇ ಲಕ್ಷ್ಮಣ್ ಸವದಿ ಹಾಗೂ ಕುಡುಚಿ ಶಾಸಕ ಮಹೇಂದ್ರ ತಮ್ಮಣ್ಣನವರ್ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ರು. ಇದರ ಬೆನ್ನಲ್ಲೇ ಇಂದು ಕಾಂಗ್ರೆಸ್ ಶಾಸಕರು ಒಗ್ಗಟ್ಟಾಗಿ ಅಥಣಿ ಶಾಸಕ ಲಕ್ಷ್ಮಣ್ ಸವದಿ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಅಸಮಾಧಾನ ವಿಚಾರವಾಗಿ ಚರ್ಚೆ ನಡೆಸಿದ್ದಾರೆ.

ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಸಚಿವರ ಅಸಮಾಧಾನ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಸ್ವಂತ ಪಕ್ಷದ ಶಾಸಕರ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದಾರೆ. ಪಕ್ಷದ ನಾಯಕರಿಗೂ ದೂರು ಕೊಟ್ಟಿರುತ್ತಾರೆ. ರಾಜ್ಯ ನಾಯಕರ ಬಳಿ ಏನೆಲ್ಲಾ ಹೇಳಬೇಕು ಅನ್ನೋ ಬಗ್ಗೆ ಚರ್ಚೆ ಮಾಡಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಸಾಧಿಸಿದ್ದರೂ ಅಥಣಿ ವಿಧಾನಸಭೆ ಹಾಗು ಕುಡುಚಿ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ ಲೀಡ್ ಬಂದಿಲ್ಲ ಎನ್ನುವ ಕಾರಣಕ್ಕೆ ಸತೀಶ್ ಜಾರಕಿಹೊಳಿ ಗರಂ ಆಗಿದ್ದಾರೆ.

ಬೆಳಗಾವಿಯಲ್ಲಿ ಜಾರಕಿಹೊಳಿ ಫ್ಯಾಮಿಲಿ ರಾಜಕೀಯವಾಗಿ ನಿಯಂತ್ರಣ ಹೊಂದಿದೆ. ಇದೇ ಕಾರಣಕ್ಕೆ ಲಕ್ಷ್ಮಣ ಸವದಿ ಪ್ರಿಯಾಂಕಾ ಜಾರಕಿಹೊಳಿಗೆ ಬೆಂಬಲ ಕೊಟ್ಟಿಲ್ಲ ಎನ್ನುವ ಗುಸುಗುಸು ಕೇಳಿ ಬರುತ್ತಿದೆ. ಜೊತೆಗೆ ಕುಡುಚಿಯಲ್ಲೂ ಕಾಂಗ್ರೆಸ್ಗೆ ಅಂದುಕೊಂಡಷ್ಟು ಮತಗಳು ಬಂದಿಲ್ಲ ಎನ್ನುವ ಕಾರಣಕ್ಕೆ ಸತೀಶ್ ಜಾರಕಿಹೊಳಿ ಗರಂ ಆಗಿದ್ದರು. ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಡಾ ಸುಧಾಕರ್ ಪರವಾಗಿ ಕೆಲಸ ಮಾಡಿದ ಆರೋಪದಲ್ಲಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದ್ದು, ಬೆಳಗಾವಿ ವಿಚಾರದಲ್ಲಿ ಕಾಂಗ್ರೆಸ್ ಯಾವ ಕ್ರಮ ತೆಗೆದುಕೊಳ್ಳಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
