ಡಿಜಿಟಲ್ ಯುಗದಲ್ಲಿ ಕನ್ನಡ ಮಾಧ್ಯಮ ಲೋಕ ತನ್ನದೇ ಆದ ವಿಭಿನ್ನ ಆಯಾಮಗಳನ್ನು ಕಂಡುಕೊಳ್ಳುತ್ತಾ ಜನರತ್ತ ತಲುಪಲು ಪ್ರಯತ್ನಿಸುತ್ತಿದೆ. ಇದರಲ್ಲಿ ವಿದ್ಯುನ್ಮಾನ ಮಾಧ್ಯಮಗಳು, ಸುದ್ದಿಮನೆಗಳು ಒಂದು ಮಾರ್ಗವನ್ನು ಅನುಸರಿಸಿದರೆ ಮತ್ತೊಂದೆಡೆ ಮುದ್ರಣ ಮಾಧ್ಯಮಗಳೂ ಸಹ ಮಾರುಕಟ್ಟೆ ಪೈಪೋಟಿಯ ನಡುವೆಯೇ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡುಬರುತ್ತಿವೆ. ಅತಿ ಹೆಚ್ಚು ಜನರನ್ನು ಕ್ಷಿಪ್ರಗತಿಯಲ್ಲಿ ತಲುಪುವ ಒಂದು ಮಾರ್ಗವಾಗಿ ಇಂದು ಡಿಜಿಟಲ್ ಮಾಧ್ಯಮ ತನ್ನ ಬಾಹುಗಳನ್ನು ತೆರೆದುಕೊಂಡಿದೆ.
ರೋಚಕತೆ, ಭಟ್ಟಂಗಿತನ, ವಂದಿಮಾಗಧ ಧೋರಣೆ ಮತ್ತು ಅಧಿಕಾರ ಪೀಠಗಳನ್ನು ಸಂತೃಪ್ತಿಗೊಳಿಸುವ ಪ್ರಯತ್ನಗಳ ನಡುವೆಯೇ ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಮೌಲ್ಯವನ್ನು ಕಳೆದುಕೊಂಡು, ಸುದ್ದಿಗಳನ್ನು ಮಾರುಕಟ್ಟೆಯ ಸರಕುಗಳಂತೆ ಬಿಂಬಿಸುತ್ತಿರುವ ಹೊತ್ತಿನಲ್ಲಿ, ಯಾವುದೇ ಜಾಹೀರಾತುಗಳ ಹಂಗಿಲ್ಲದೆ, ಆಳುವವರ ಹಂಗಿನ ಹಂಬಲವಿಲ್ಲದೆ, ಕನ್ನಡದ ಓದುಗರಿಗೆ ವಸ್ತುನಿಷ್ಠ ವರದಿಗಳನ್ನು, ಸುದ್ದಿ ವಿಶ್ಲೇಷಣೆಗಳನ್ನು ಮತ್ತು ಪ್ರಚಲಿತ ವಿದ್ಯಮಾನಗಳ-ಜ್ವಲಂತ ಸಮಸ್ಯೆಗಳ ಸಕಾರಾತ್ಮಕ ವಿಶ್ಲೇಷಣೆಯನ್ನು ಕಾಲದಿಂದ ಕಾಲಕ್ಕೆ ಒದಗಿಸುವುದು ಸವಾಲಿನ ಮಾತೇ ಸರಿ.
ಇಂತಹ ಒಂದು ಸವಾಲನ್ನು ಸ್ವೀಕರಿಸಿ, ಯಶಸ್ವಿಯಾಗಿ ತನ್ನದೇ ಆದ ಧ್ವನಿಯನ್ನು ಮೂಡಿಸುವ ನಿಟ್ಟಿನಲ್ಲಿ ನಮ್ಮೆಲ್ಲರ “ ಪ್ರತಿಧ್ವನಿ ” ಡಿಜಿಟಲ್ ಮಾಧ್ಯಮ ತನ್ನ ಮೂರನೇಯ ವರ್ಷವನ್ನು ಪೂರೈಸಿ, ನಾಲ್ಕನೆ ವರ್ಷಕ್ಕೆ ಮುನ್ನಡೆದಿದೆ. ಸಾಮಾನ್ಯ ಜನತೆಗೆ ಕೇವಲ ಸುದ್ದಿ ನೀಡುವುದಷ್ಟೇ ಅಲ್ಲದೆ, ಸಮಾಜದಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಪಲ್ಲಟಗಳನ್ನು ಮತ್ತು ಜನಸಾಮಾನ್ಯರು ಎದುರಿಸುತ್ತಿರುವ ತಲ್ಲಣಗಳನ್ನು ವಸ್ತುಸ್ಥಿತಿಯ ಸಮರ್ಪಕ ವಿಶ್ಲೇಷಣೆಯೊಂದಿಗೆ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಧ್ವನಿ ತನ್ನದೇ ಆದ ಪಾರಮ್ಯ ಸಾಧಿಸಿದೆ. ನಿರ್ಭೀತಿಯಿಂದ, ನಿಷ್ಪಕ್ಷಪಾತವಾಗಿ, ಪ್ರಾಮಾಣಿಕವಾದ ಅಭಿಪ್ರಾಯ ಮತ್ತು ವಿಶ್ಲೇಷಣೆಗಳನ್ನು ಓದುಗರ ಮುಂದಿಡುವ ಮೂಲಕ ಸಮಾಜದ ತಲ್ಲಣಗಳಿಗೆ ಕನ್ನಡಿ ಹಿಡಿಯುವ ಸಕಾರ್ಯದಲ್ಲಿ ಪ್ರತಿಧ್ವನಿ ಯಶಸ್ವಿಯಾಗಿದೆ.


ಈ ಡಿಜಿಟಲ್ ಮಾಧ್ಯಮದ ವೇದಿಕೆಯಲ್ಲಿ ನನ್ನ ಪ್ರತಿಪಾದನೆಗಳನ್ನು, ವಿಶ್ಲೇಷಣೆಗಳನ್ನು, ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ನೀಡುತ್ತಿರುವ ಪ್ರತಿಧ್ವನಿ ತಂಡಕ್ಕೆ ನನ್ನ ಧನ್ಯವಾದಗಳನ್ನು ಹೇಳುತ್ತಲೇ, ಈ ವೇದಿಕೆಯ ಒಂದು ಭಾಗವಾಗಿ ನನ್ನನ್ನು ಗುರುತಿಸಿಕೊಳ್ಳಲು ಹೆಮ್ಮೆ ಪಡುತ್ತೇನೆ.
ಪ್ರತಿಧ್ವನಿಯು Truth Pro Foundation India ಎಂಬ ಸರ್ಕಾರೇತರ ಸಂಸ್ಥೆಯ ಅಂಗ ಸಂಸ್ಥೆ. ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶವನ್ನು ಹೊಂದಿದೆ ಸಂಸ್ಥೆ TPFI. ಹಲವು ವರ್ಷಗಳ ಕಾಲ ಶಿಕ್ಷಣ ಕ್ಷೇತ್ರವನ್ನೇ ಗುರಿಯಾಗಿಸಿ ಸೇವೆ ಸಲ್ಲಿಸುತ್ತಿದ್ದ ಸಂಸ್ಥೆ, ಮಾಧ್ಯಮ ಕ್ಷೇತ್ರದಲ್ಲಿ ಆಗುತ್ತಿರುವ ಅಮೂಲಾಗ್ರ ಬದಲಾವಣೆಗಳನ್ನು ಕಂಡು, ಈ ಕ್ಷೇತ್ರದಲ್ಲಿ ನಿಜವಾದ ಹಾಗೂ ಪ್ರಾಯೋಗಿಕವಾದ ಬದಲಾವಣೆಯನ್ನು ತರುವ ಸಲುವಾಗಿ ಪ್ರತಿಧ್ವನಿ ಎಂಬ ಸುದ್ದಿ ಸಂಸ್ಥೆಯನ್ನು ಆರಂಭಿಸಿದೆ.
ಪ್ರತಿಧ್ವನಿ ಬಳಗದ ಸಮಸ್ತರಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತಲೇ, ಈ ಅಕ್ಷರ ಸೇವೆ ಇನ್ನೂ ಪರಿಣಾಮಕಾರಿಯಾಗಿ ಹೆಚ್ಚು ವರ್ಷಗಳ ಕಾಲ ಮುಂದುವರೆಯಲಿ ಎಂದು ಹಾರೈಸುತ್ತೇನೆ.













