ಭಾರತ ವಿವಿಧತೆಯಲ್ಲಿ ಏಕತೆ ಸಾಧಿಸಿದ ರಾಷ್ಟ್ರ. ಇಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಸೇರಿದಂತೆ ಅನೇಕ ಮತ, ಧರ್ಮಗಳ ಜನರಿದ್ದಾರೆ. ಅವರೆಲ್ಲರೂ ಭಿನ್ನಾಭಿಪ್ರಾಯ ಮತ್ತು ಆಂತರಿಕ ವೈರುದ್ಯಗಳನ್ನು ಬದಿಗಿಟ್ಟು ಸಾಮರಸ್ಯದಿಂದ ಬಾಳುವ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾಗುವಂತೆ ಭಾವೈಕ್ಯತೆಯಿಂದ ಬದುಕಿದ್ದಾರೆ. ಇಂತಹ ಇತಿಹಾಸ ಇರುವ ದೇಶದಲ್ಲಿ ಇಂದು ಮನುವಾದಿಗಳ ಸರ್ಕಾರ ರಚನೆಯಾಗಿ ಜಾತಿ, ಧರ್ಮ, ಕೋಮು ಸಂಘರ್ಷಗಳನ್ನು ಹುಟ್ಟು ಹಾಕುತ್ತಿದೆ. ಜಾಹಿರಾತುಗಳಲ್ಲೂ ಧರ್ಮ ಹುಡುಕುವ ವ್ಯವಸ್ಥೆ ಸೃಷ್ಠಿಯಾಗಿದೆ. ಇದು ನಿಜಕ್ಕೂ ಹಿಂದೂಸ್ಥಾನದ ಆತ್ಮಕ್ಕೆ ಧಕ್ಕೆಯಾಗುವಂತಾ ನಡೆ ಎಂದು ದಿ ಸ್ಕ್ರಾಲ್ ನ ಸುದೇಂದ್ರ ಕುಲ್ಕರ್ಣಿ ಹೇಳಿದ್ದಾರೆ.
ದೇಶದಲ್ಲಿ ಸಾಮರಸ್ಯ ಬೆಸೆಯುವ ಹಲವು ಸಂಸ್ಕೃತಿಯಿದೆ. ವಿವಿಧತೆಯಲ್ಲಿ ಏಕತೆ ಸಾಧಿಸಿದ ರಾಷ್ಟ್ರ ಎಂಬ ಹೆಗ್ಗಳಿಗೆ ಪಾತ್ರವಾಗಿರುವ ಭಾರತದಲ್ಲಿ ಇಂತಹ ಕೋಮು ದ್ವೇಷಗಳು, ವಿರೋಧಗಳು /ವಿವಾದಗಳು ದೇಶದ ಸಾಮರಸ್ಯವನ್ನೇ ಕದಡುತ್ತಿದೆ. ಕಳೆದ ಎರಡು ಮೂರು ವರ್ಷಗಳಿಂದ ಧಾರ್ಮಿಕ ಲೇಪನ ಹಚ್ಚಿ ಹಲವು ಜಾಹೀರಾತನ್ನು ವಿರೋಧಿಸುತ್ತಿರುವ ರಾಜಕೀಯ ನಾಯಕರು ಮತ್ತವರ ಬೆಂಬಲಿಗರ ಮನಸ್ಥಿತಿ ಹೇಗಿದೆ ಎಂದು ಎತ್ತಿ ತೋರಿಸುತ್ತದೆ. 2019 ರಲ್ಲಿ ಸರ್ಫ್ ಎಕ್ಸೆಲ್ ಜಾಹೀರಾತಿನ ವಿವಾದ, 2020 ರಲ್ಲಿ ಕೆಂಟ್ ಹಿಟ್ಟು ನಾದುವ ಯಂತ್ರದ ಜಾಹೀರಾತಿನ ವಿವಾದ, 2020 ರಲ್ಲಿ ತನಿಷ್ಕ್ ಆಭರಣಗಳ ಜಾಹೀರಾತಿನ ವಿವಾದ, 2021 ಇದೀಗ ಫ್ಯಾಬ್ ಇಂಡಿಯಾ ಉತ್ಪನ್ನಗಳ ಜಾಹೀರಾತಿನ ವಿವಾದ. ಸಾಲು ಸಾಲು ಬ್ರ್ಯಾಂಡ್ ಕಂಪನಿಗಳ ಜಾಹೀರಾತುಗಳನ್ನು ವಿವಾದಕ್ಕೆ ಸಿಲುಕಿಸಿ ರಾಜಕೀಯ ಮಾಡಿದ್ದಾರೆ.
ಪ್ರಸ್ತುತ ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ, ಉಡುಪುಗಳು ಮತ್ತು ಪೀಠೋಪಕರಣಗಳ ಬ್ರಾಂಡ್ ಫ್ಯಾಬ್ ಇಂಡಿಯಾದ ಜಾಹೀರಾತಿನ ವಿರುದ್ಧ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದರು.
ತೇಜಸ್ವಿಯ ಈ ಟ್ವೀಟ್ ಒಂದನ್ನು ಪೂರ್ತಿ ವಿಮರ್ಶೆಗೆ ಒಳಪಡಿಸಿದ ದಿ ಸ್ಕ್ರಾಲ್ ನ ಸುದೇಂದ್ರ ಕುಲ್ಕರ್ಣಿ ಒಂದಷ್ಟು ಪ್ರಶ್ನೆಗಳನ್ನು ಎತ್ತಿದ್ದಾರೆ.

ಮೊದಲನೆಯದು: ನೀವು “ಹಿಂದೂ ಹಬ್ಬಗಳ ಅಬ್ರಹ್ಮೈಸೇಶನ್” ಬಗ್ಗೆ ಆರೋಪ ಮಾಡುತ್ತಿದ್ದೀರಿ. ನೀವು ಅಬ್ರಹ್ಮಿಕ್ ಭಾಷೆಯನ್ನು ಬಳಸಿ ಮಾತಾಡುತ್ತಿರುವುದು ವಿಪರ್ಯಾಸ. ಅಥವಾ ಹಿಂದುತ್ವ ಸ್ಕೂಲ್ ಆಫ್ ಲಿಂಗ್ವಿಸ್ಟಿಕ್ ಇತ್ತೀಚೆಗೆ ಇಂಗ್ಲಿಷ್ ಒಂದು ಮೂಲ ಭಾರತೀಯ ಭಾಷೆ ಎಂದು ಕಂಡುಹಿಡಿದಿದೆಯೇ? ಎಂದು ದಿ ಸ್ಕ್ರಾಲ್ ನ ಸುದೇಂದ್ರ ಕುಲ್ಕರ್ಣಿ ಪ್ರಶ್ನಿಸಿದ್ದಾರೆ.
ಎರಡನೆಯದು: ದೀಪಾವಳಿಯನ್ನು ಕೇವಲ “ಸಾಂಪ್ರದಾಯಿಕ ಹಿಂದೂ ಉಡುಗೆಗಳನ್ನು” ಧರಿಸಿ ಆಚರಿಸಬೇಕು ಎಂದು ನೀವು ಒತ್ತಾಯಿಸುತ್ತೀರಿ. ಈ “ಸಾಂಪ್ರದಾಯಿಕ ಹಿಂದೂ ಉಡುಗೆಗಳು” ಯಾವುವು? ಮುಂಬೈನ ಕೊಳೆಗೇರಿಗಳಿಗೆ ಬಂದು ಲಕ್ಷಾಂತರ ಬಡ ಹಿಂದುಗಳು ಹೇಗೆ ತಮ್ಮ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಬೌದ್ಧ ನೆರೆಹೊರೆಯವರೊಂದಿಗೆ ದೀಪಾವಳಿಯನ್ನು ಆಚರಿಸುತ್ತಾರೆ ಎಂಬುದನ್ನು ನೋಡಿ. ಅವರು ಮಾನ್ಯಾವರ್ ಮತ್ತು ಮೊಹೇಯರಿಂದ “ಸಾಂಪ್ರದಾಯಿಕ ಹಿಂದೂ ಉಡುಪನ್ನು” ಧರಿಸುವುದಿಲ್ಲ. ಆದರೂ, ಅವರ ಆಚರಣೆಯು ಮಿಲಿಯನೇರ್ಗಳ ಮನೆಗಳಿಗಿಂತ ಹೆಚ್ಚು ಸಂಭ್ರಮದಿಂದ ಕೂಡಿರುತ್ತದೆ.
ಪುರುಷರು ಸಾಮಾನ್ಯವಾಗಿ ಪ್ಯಾಂಟ್ ಮತ್ತು ಶರ್ಟ್ ಧರಿಸುತ್ತಾರೆ, ಅದು ಭಾರತೀಯ ಮೂಲದದ್ದಲ್ಲ. ಅದು ವಸಾಹತುಶಾಹಿ ಯುಗದಲ್ಲಿ ಇಂಗ್ಲೆಂಡಿನಿಂದ ಭಾರತಕ್ಕೆ ಬಂದದ್ದು. ಆದರೀಗ ಭಾರತದ ಸಾಮಾಜಿಕ-ಸಾಂಸ್ಕೃತಿಕ ಸಂಪ್ರದಾಯಗಳ ಭಾಗವಾಗಿದೆ. ದೀಪಾವಳಿ ಮತ್ತು ಇತರ ಹಬ್ಬದ ದಿನಗಳಲ್ಲಿ ನಾನು ಅದೇ ಉಡುಪನ್ನು ಧರಿಸುತ್ತೇನೆ. ಹೀಗೆ ಮಾಡುವ ಮೂಲಕ, ನಾನು ಮತ್ತು ನನ್ನಂತಹ ಲಕ್ಷಾಂತರ ಭಕ್ತರು ಕ್ರೈಸ್ತರಾಗುತ್ತೇವೆಯೇ? ಎಂದು ಪ್ರಶ್ನಿಸಿದ್ದಾರೆ.
ಮೂರನೆಯದು: ಭಾರತದಾದ್ಯಂತ ಯಾವುದೇ ಹಿಂದೂ ಹಬ್ಬವನ್ನು ಏಕರೂಪವಾಗಿ ಆಚರಿಸಲಾಗುವುದಿಲ್ಲ. ದೀಪಾವಳಿಯ ಸಾಮಾನ್ಯ ಅಂಶವೆಂದರೆ ದೀಪಗಳನ್ನು ಹಚ್ಚುವುದು ಕತ್ತಲೆಯಿಂದ ಬೆಳಕಿನ ಕಡೆಗೆ ಬರುವುದು, ಅಜ್ಞಾನದಿಂದ ಜ್ಞಾನದೆಡೆಗೆ ಬರುವುದು ಮತ್ತು ಕೆಟ್ಟದ್ದರಿಂದ ಒಳ್ಳೆಯ ಕಡೆಗೆ ಮರಳುವುದು. ಜೈನರು, ಸಿಖ್ಖರು ಮತ್ತು ಕೆಲವು ಬೌದ್ಧರು ತಮ್ಮ ದೀಪಾವಳಿಯನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ ಎಂದಿದ್ದಾರೆ.
ಇದಲ್ಲದೆ, ನಾನು ಬೆಳೆದ ಗ್ರಾಮೀಣ ಭಾಗದಲ್ಲಿ, ಮುಸ್ಲಿಮರು ಸೇರಿದಂತೆ ಇಡೀ ಹಳ್ಳಿಯ ಸಮುದಾಯವು ಎಲ್ಲಾ ಹಬ್ಬಗಳನ್ನು (ದೀಪಾವಳಿ ಮತ್ತು ಈದ್ ಸೇರಿದಂತೆ) ಒಟ್ಟಿಗೆ ಆಚರಿಸುತ್ತೇವೆ, ಅಬ್ರಹ್ಮಿಕ್ ಮತ್ತು ಅಬ್ರಹ್ಮಿಕವಲ್ಲದ ಸಂಪ್ರದಾಯಗಳ ನಡುವೆ ಯಾವುದೇ ಕೃತಕ ವ್ಯತ್ಯಾಸವನ್ನು ನಾವು ಮಾಡಲ್ಲ ಎಂದಿದ್ದಾರೆ
ನಾನು ಮನೆಯಲ್ಲಿ ಕ್ರಿಸ್ಮಸ್ ಆಚರಿಸಿದಾಗ, ನನ್ನ ಕ್ರಿಶ್ಚಿಯನ್ ಸ್ನೇಹಿತರು ನಾನು ಅಬ್ರಾಹ್ಮಕವಲ್ಲದ ರೀತಿಯಲ್ಲಿ ಮಾಡುತ್ತೇನೆ ಎಂದು ಎಂದಿಗೂ ದೂರು ನೀಡುವುದಿಲ್ಲ. ನನ್ನ ಮುಸ್ಲಿಂ ಸ್ನೇಹಿತರು ದೀಪಾವಳಿ, ಹೋಳಿ ಅಥವಾ ದಸರಾದಲ್ಲಿ ನನ್ನನ್ನು ಅಭಿನಂದಿಸಿದಾಗ, ಅವರು ಇದನ್ನು “ಹಿಂದೂ” ರೀತಿಯಲ್ಲಿ ಆಚರಿಸಬೇಕು ಎಂದು ನಾನು ಒತ್ತಾಯಿಸುವುದಿಲ್ಲ ಎಂದಿದ್ದಾರೆ.
ನಾಲ್ಕನೆಯದು: ತೇಜಸ್ವಿ, ನಿಮ್ಮ ಟ್ವೀಟ್ನಲ್ಲಿ ನೀವು “ಹಿಂದೂ” ಎಂಬ ಪದವನ್ನು ಬಳಸಿದ್ದೀರಿ. ಇದು ಅಬ್ರಾಹ್ಮಣವಲ್ಲವೇ? “ಹಿಂದ್” ಮತ್ತು “ಹಿಂದೂ” ಪದಗಳನ್ನು ಪರ್ಷಿಯನ್ನರು ಮತ್ತು ಅರಬ್ಬರು ಬಳಸಿದ್ದಾರೆ ಎಂದು ತೋರಿಸಲು ಹಲವು ಪುರಾವೆಗಳಿವೆ. ನಮ್ಮ ರಾಷ್ಟ್ರದ ಹೆಸರು “ಭಾರತ” ಕೂಡ ಅಬ್ರಾಹ್ಮಣವಾಗಿದೆ. ನಿಮ್ಮನ್ನು ನೀವು ಹಿಂದೂ ಮತ್ತು ಭಾರತೀಯ ಎಂದು ಕರೆಯುವುದನ್ನು ನಿಲ್ಲಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಆಗಸ್ಟ್ 15, ಭಾರತದ ಸ್ವಾತಂತ್ರ್ಯ ದಿನ. ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಅಧಿಕೃತ ಹೆಸರು ನಿಮಗೆ ತಿಳಿದಿದೆಯೇ? ಅದು “ಆಜಾದಿ ಕಾ ಅಮೃತ್ ಮಹೋತ್ಸವ” – ಸ್ವಾತಂತ್ರ್ಯದ ಅಮೃತದ ಆಚರಣೆ? “ಆಜಾದಿ”, ಪದ ಮೂಲತಃ ಪರ್ಷಿಯನ್/ಉರ್ದು ಪದವಾಗಿದೆ ಇದು ನಿಮಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಆಚರಣೆಯ ಅಧಿಕೃತ ಲೋಗೋ ಇಲ್ಲಿದೆ. “ಆಜಾದಿ ಕಾ ಅಮೃತ್ ಮಹೋತ್ಸವ” ವನ್ನು ಬಹಿಷ್ಕರಿಸುವಂತೆ ನೀವು ಏಕೆ ಟ್ವೀಟ್ ಮಾಡಬಾರದು? ಎಂದು ಪ್ರಶ್ನಿಸಿದ್ದಾರೆ.

ವಿವಿಧತೆಯಲ್ಲಿ ಏಕತೆ ಮತ್ತು ಭಾರತ ಸಂವಿಧಾನ ಹೇಳುವುದೇನು?
ವಿವಿಧತೆಯಲ್ಲಿ ಏಕತೆ ಎಂಬುದು ಭಾರತ ದೇಶದ ಸಂಸ್ಕಾರ, ಪದ್ದತಿಯಲ್ಲ, ಆದು ದೇಶದ ಶಕ್ತಿ. ವೈವಿದ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆ ಹೊರತು ಅದನ್ನು ಕೆಡಿಸಲು ಯತ್ನಿಸಬಾರದು. ಕೋಮು ಸಂಘರ್ಷ, ಧಾರ್ಮಿಕ ಬಣ್ಣ ಹಚ್ಚಿ ವಿರೋಧಿಸಿರುವುದು, ನಿನ್ನೆಯದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಇದೆ. ಆದರೆ ವೈವಿದ್ಯತೆ ಬಲಪಡಿಸುವ ಕೆಲಸ ಆಗಾಗ ನಡೆಯುತ್ತಿದೆ. ಆದರೆ ಸ್ವಾತಂತ್ರ ನಂತರದ ಭಾರತದಲ್ಲಿ ನಡೆಯುತ್ತಿರುವ ಹಲವಾರು ಸಂಘರ್ಷಗಳು ರಾಜಕೀಯ ದೃವೀಕರಣಕ್ಕೆ ಕಾರಣವಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ತಮ್ಮ ರಾಜಕೀಯ ಅಧಿಕಾರಕ್ಕಾಗಿ ಈತರದ ಸಂಘರ್ಷವನ್ನು ಶಾಶ್ವತ ಪ್ರಕ್ರಿಯೆಯಾಗಿಸಲು ನಿರಂತರ ಪ್ರಯತ್ನಗಳನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿವೆ.
ಜನರ ನಡುವೆ ಬಾಂಧವ್ಯ ಬೆಸೆಯಬೇಕಾದ ಜಾಹಿರಾತುಗಳು ಇಂದು ಸಂಘರ್ಷದ ವಸ್ತುವಾಗಿರುವುದು ವಿಪರ್ಯಾಸ. ಇದು ದೇಶದ ದುರ್ದೈವ ಕೂಡ. ಭಾರತದಲ್ಲಿ ವಾಸಿಸುವ ಎಲ್ಲರನ್ನು ಭಾರತೀಯರೆಂಬಂತೆ ಕಾಣಬೇಕಾಗಿದೆ. ಮಾನವೀಯತೆಯನ್ನು ಬಲಪಡಿಸುವ ಕೆಲಸವನ್ನು ಸರ್ಕಾರ ಮಾಡಬೇಕಾಗಿತ್ತು ಆದರೆ ವಿಚ್ಚಿದ್ರಕಾರಿ ಶಕ್ತಿಗಳ ಕೈಗೆ ದೇಶದ ಆಡಳಿತ ನೀಡಿದರೆ ಅದರಿಂದ ಹೊರಬರಲು ಭಾರತದಂತಹ ರಾಷ್ಟ್ರಕ್ಕೆ ಸ್ವಲ್ಪ ಕಷ್ಟವೇ ಸರಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕಾಗಿದೆ.
ಸ್ವಾತಂತ್ರ್ಯ ಪೂರ್ವದಿಂದಲೂ ವಿಭಿನ್ನ ಭಾಷೆ, ಜಾತಿ, ಧರ್ಮ, ಸಂಸ್ಕೃತಿ ಹೊಂದಿರುವ ಭಾರತ ದೇಶದ ಪರಿಸ್ಥಿತಿಯ ಹಿನ್ನೋಟ ಮತ್ತು ಮುನ್ನೋಟ ಎಲ್ಲವನ್ನು ಅರಿತಿದ್ದ ಡಾ. ಅಂಬೇಡ್ಕರ್ರವರು ಪ್ರಮುಖವಾಗಿ 1909ರ ಮಾರ್ಲೇಮಿಂಟೋ ಸುಧಾರಣೆಗಳು, 1919 ಮತ್ತು 1935ರ ಭಾರತ ಸರ್ಕಾರದ ಅಧಿನಿಯಮಗಳನ್ನು ಅವಲೋಕಿಸಿ ವಿವಿಧತೆಯಲ್ಲಿ ಏಕತೆ ಕಾಣಲು ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಎಂದು ಸಾರುವ ತತ್ವದಡಿ ‘ಪ್ರಜೆಗಳು ಪ್ರಭುಗಳು’ ಎಂಬ ಪ್ರಜೆಗಳೇ ಪರಮಾಧಿಕಾರ ಹೊಂದುವ ‘ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ’ ಇರುವ ಸರ್ಕಾರವನ್ನು ಭಾರತದಲ್ಲಿ ಸ್ಥಾಪಿಸಲು ಮತ್ತು ನಾಗರಿಕರಿಗೆ ಆತ್ಮ ಗೌರವವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಸ್ತ್ರೀ, ಪುರುಷರೆಲ್ಲರೂ ಸಮಾನರು ಎಂದು ಹೇಳುವ ಮೂಲಭೂತ ಹಕ್ಕುಗಳನ್ನು ಸಮರ್ಪಕವಾಗಿ ನೀಡುವ ಉತ್ತಮ ಶಕ್ತಿಯುತ ಸಂವಿಧಾನದಲ್ಲಿ ನಮ್ಮದು.
ಡಾ. ಅಂಬೇಡ್ಕರ್ರವರು ಬರೆದ ಸಂವಿಧಾನದ ಪ್ರಸ್ತಾವನೆಯಲ್ಲಿ ‘‘ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ‘ಸಮಾಜವಾದಿ’ ‘ಧರ್ಮನಿರಪೇಕ್ಷ’ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ, ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು, ಸಮಗ್ರತೆಗಾಗಿ, ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕಾಗಿ ಧೃಢಸಂಕಲ್ಪಮಾಡಿ, ವಿಚಾರದ, ವಿಶ್ವಾಸದ, ನಂಬಿಕೆಯ, ಆರಾಧನೆ ಹಾಗೂ ಅಭಿವ್ಯಕ್ತಿಗೊಳಿಸುವ ಸಮಾನತೆಯ ಸ್ಥಾನ ಮತ್ತು ಅವಕಾಶ ಹಾಗೂ ಈ ಭಾವನೆಗಳನ್ನು ಸಮಸ್ತರಲ್ಲಿ ಹರಡಲು, ಭ್ರಾತೃತ್ವವನ್ನು ವ್ಯಕ್ತಿ ಗೌರವದ ಮತ್ತು ರಾಷ್ಟ್ರದ ಐಕ್ಯತೆಯನ್ನು ಕಾಪಾಡುತ್ತೇವೆ’’ ಎಂಬ ಬಲಿಷ್ಠ ಪೀಠಿಕೆಯಿದೆ. ಇದರ ತದ್ವಿರುದ್ಧವಾಗಿ ನಡೆಯುತ್ತಿರುವ ಜನಪ್ರತಿನಿಧಿಗಳನ್ನು ಸಂವಿಧಾನ ವಿರೋಧಿಗಳಲ್ಲದೇ ಬೇರೇನಿಲ್ಲ.

ಸಾಮಾನ್ಯ ಜಾಹಿರಾತನ್ನು ವಿವಾದಕ್ಕೆ ಸಿಲುಕಿಸಿ ರಾಜಕೀಯವೇನೊ ಮಾಡಬಹುದು ಆದರೆ ಬ್ರ್ಯಾಂಡ್ ಕಂಪನಿಗಳೆ ಕಥೆ ಏನು?
ಮಾರುಕಟ್ಟೆಯ ವರದಿಗಳ ಪ್ರಕಾರ ಸರ್ಫ್ ಎಕ್ಸೆಲ್ ಹಾಗೂ ತನಿಷ್ಕ್ ಬ್ರಾಂಡ್ಗಳಿಗೆ ಜಾಹೀರಾತಿನ ವಿವಾದದ ನಂತರ ಜನಪ್ರಿಯತೆ ಹೆಚ್ಚಾಗಿತ್ತು. ಗೂಗಲ್ ಹಾಗೂ ಇತರ ಸರ್ಚ್ ಇಂಜಿನ್ಗಳಲ್ಲಿ ಈ ಎರಡೂ ಬ್ರಾಂಡ್ಗಳ ಬಗ್ಗೆ ಸರ್ಚ್ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು. ಆದರೆ ಕೆಂಟ್ ವಿಷಯದಲ್ಲಿ ಹೀಗಾಗಲಿಲ್ಲ. ಯಾಕೆ?
ಸರ್ಫ್ ಎಕ್ಸೆಲ್ ಹಾಗೂ ತನಿಷ್ಕ್ ಎರಡರ ಜಾಹೀರಾತುಗಳು ಸಮಾಜದ ಕೆಲ ವರ್ಗಕ್ಕೆ ಸರಿ ಕಾಣದಿದ್ದರೆ ಹೆಚ್ಚಿನವರು ಅದರಲ್ಲಿ ತಪ್ಪು ಕಾಣಲಿಲ್ಲ. ಈ ಎರಡೂ ಜಾಹೀರಾತುಗಳಿಗೆ ಬಂದ ವಿರೋಧದಲ್ಲೇ ಅರ್ಥವಿರಲಿಲ್ಲ. ಹಾಗಾಗಿ ಸಮಾಜದ ಒಂದು ವರ್ಗ ಈ ಎರಡೂ ಬ್ರಾಂಡ್ಗಳ ಪರ ನಿಂತು, ಬ್ಯಾನ್ ಬ್ಯಾನ್ ಎಂದು ಕೂಗಿದವರ ಆಸೆಗೆ ನೀರೆರಚಿತ್ತು.
ಆದರೆ ಕೊರೋನಾದ ಉತ್ತುಂಗದಲ್ಲಿ ಬಂದ ಕೆಂಟ್ ಜಾಹೀರಾತಿನ ಬಗ್ಗೆ ಯಾರೂ ಸಿಂಪಥಿ ಹೊಂದಲಿಲ್ಲ ಯಾಕೆಂದರೆ ಜಾಹೀರಾತಿನಲ್ಲಿ ಮನೆ ಕೆಲಸದವರ ಕೈಯಿಂದ ಹಿಟ್ಟನ್ನು ನಾದುವುದರಿಂದ ಅವರ ಕೈಯಿಂದ ‘ಕೊರೋನಾ’ ವೈರಸ್ ನಮಗೂ ಬರಬಹುದೆನ್ನುವ ಸಂದೇಶವಿತ್ತು. ಹಾಗಾಗಿ ಹೆಚ್ಚಿನವರು ಈ ಜಾಹೀರಾತಿನ ವಿರುದ್ಧವಿದ್ದರು. ಸರ್ಫ್ ಎಕ್ಸೆಲ್ , ತನಿಷ್ಕ್ ರೀತಿಯಲ್ಲೇ ಕೆಂಟ್ ಕೂಡಾ ಜಾಹೀರಾತನ್ನು ಹಿಂಪಡೆದಿತ್ತು.
ಇದೀಗ ಫ್ಯಾಬ್ ಇಂಡಿಯಾ ಸರದಿ. ಫ್ಯಾಬ್ ಇಂಡಿಯಾ ಕೂಡಾ ಜಾಹೀರಾತನ್ನು ಹಿಂಪಡೆದಿದೆ. ಬಹುಷ ಫ್ಯಾಬ್ ಇಂಡಿಯಾ ಕೂಡಾ ಇದೀಗ ಸರ್ಫ್ ಎಕ್ಸೆಲ್ ಹಾಗೂ ತನಿಷ್ಕ್ ದಾರಿಯಲ್ಲೇ ಇದೆ.