ಅಕ್ಟೋಬರ್ ನಿಂದ ನವೆಂಬರ್ ವರೆಗೆ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ವಿಜೇತ ತಂಡಕ್ಕೆ 1.6 ದಶಲಕ್ಷ ಡಾಲರ್ ಬಹುಮಾನ ಮೊತ್ತ ಲಭಿಸಲಿದೆ.
ಐಸಿಸಿ ಶುಕ್ರವಾರ ಟೂರ್ನಿಯ ಬಹುಮಾನ ಮೊತ್ತದ ವಿವರ ಪ್ರಕಟಿಸಿದೆ. ಐಸಿಸಿ ಪುರುಷರ ಟಿ-20 ವಿಶ್ವಕಪ್ ಟೂರ್ನಿಯ ವಿಜೇತ ತಂಡ 1.6 ದಶಲಕ್ಷ ಡಾಲರ್ ಬಹುಮಾನ ಮೊತ್ತ ಪಡೆಯಲಿದ್ದರೆ, ರನ್ನರ್ ಅಪ್ ತಂಡ ಇದರ ಅರ್ಧದಷ್ಟು ಮೊತ್ತವನ್ನು ಜೇಬಿಗಿಳಿಸಲಿದೆ.
ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿದ್ದು, ಸೆಮಿಫೈನಲ್ ನಲ್ಲಿ ಸೋತ ತಂಡಗಳು ತಲಾ 4 ಲಕ್ಷ ಡಾಲರ್ ಬಹುಮಾನ ಬಹುಮಾನ ಗಳಿಸಲಿದೆ. ಟೂರ್ನಿಯ ಒಟ್ಟಾರೆ ಬಹುಮಾನ ಮೊತ್ತ 5.6 ದಶಲಕ್ಷ ಡಾಲರ್ ಆಗಿದೆ.
8 ತಂಡಗಳು ಸೂಪರ್ -12 ಲೀಗ್ ಪ್ರವೇಶಿಸಲಿದ್ದು, ಪ್ರತಿ ತಂಡಗಳು 70 ಸಾವಿರ ಡಾಲರ್ ಗಳಿಸಲಿದೆ. ಸೂಪರ್ 12ರಲ್ಲಿ ಪಂದ್ಯ ಗೆದ್ದ ಪ್ರತಿ ತಂಡಕ್ಕೆ 40 ಸಾವಿರ ಡಾಲರ್ ದೊರೆಯಲಿದೆ.
ಸೂಪರ-12ಗೆ 8 ತಂಡಗಳು ನೇರ ಪ್ರವೇಶ ಪಡೆದಿದ್ದು, ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಆಫ್ಘಾನಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಸ್ಥಾನ ಗಳಿಸಿವೆ.
ಶ್ರೀಲಂಕಾ, ನಮೀಬಿಯಾ, ಹಾಲೆಂಡ್ ಮತ್ತು ಯುಎಇ ತಂಡಗಳು ಗುಂಪು ಎ ಮತ್ತು ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಐರ್ಲೆಂಡ್, ಮತ್ತು ಜಿಂಬಾಬ್ವೆ ತಂಡಗಳು ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮೊದಲ ಸುತ್ತಿನಲ್ಲಿ ವಿಜೇತ ತಂಡಕ್ಕೆ 40 ಸಾವಿರ ಡಾಲರ್ ಬಹುಮಾನ ಮೊತ್ತ ದೊರೆಯಲಿದೆ. ಅಲ್ಲದೇ ಮೊದಲ ಸುತ್ತಿನಲ್ಲಿ ಹೊರಬಿದ್ದ ತಂಡಕ್ಕೆ 40 ಸಾವಿರ ಡಾಲರ್ ದೊರೆಯಲಿದೆ.