ಸಿನಿಮಾಗೂ ಮತ್ತು ರಾಜಕಾರಣಕ್ಕೂ ಅವಿನಾಭಾವ ಸಂಬಂಧವಿದೆ. ಈಗಾಗಲೇ ಹಲವು ನಟ, ನಟಿಯರು ರಾಜಕಾರಣಕ್ಕೆ ಎಂಟ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಹಲವು ಉದಾಹರಣೆ ಕಣ್ಣ ಮುಂದೇನೆ ಇದೆ. ಇನ್ನು, ತಮಿಳುನಾಡಿನಲ್ಲಿ ಸಿ.ಜೋಸೆಫ್ ವಿಜಯ್ ಅವರು ಟಿವಿಕೆ ಪಕ್ಷ ಸ್ಥಾಪಿಸಿ, ಅಧಿಕಾರದ ಚುಕ್ಕಾಣಿ ಹಿಡಿದಿದ ಬೆನ್ನಲ್ಲೇ ತೆಲುಗು ಸ್ಟಾರ್ ಅಲ್ಲು ಅರ್ಜುನ್ ಕೂಡ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಯೊಂದು ಜೋರಾಗಿ ನಡೆಯುತ್ತಿದೆ.

ಸದ್ಯ ಈ ವಿಷಯ ತೆಲಂಗಾಣ ಮತ್ತು ಆಂಧ್ರ ರಾಜ್ಯಗಳಲ್ಲಿ ಜೋರಾಗಿ ಹರಡುತ್ತಿದೆ. ಇದಕ್ಕೆ ಕಾರಣ ಬೇರೇನೂ ಅಲ್ಲ, ರಾಜಕೀಯ ಚತುರ ಅಂತ ಕರೆಸಿಕೊಳ್ಳುವ ಪ್ರಶಾಂತ್ ಕಿಶೋರ್ ಜೊತೆ ಸಮಾಲೋಚನೆ ನಡೆಸಿದ್ದಾರೆ ಎಂಬುದೂ. ಪುಷ್ಪ-2 ಸಿನಿಮಾ ರಿಲೀಸ್ ಸಂದರ್ಭದಲ್ಲಿ ತೆಲಂಗಾಣ ಕಾಂಗ್ರೆಸ್ ಸರ್ಕಾರದ ಜೊತೆ ಉಂಟಾದ ವಿವಾದಗಳಿಂದಾಗಿ ರೇವಂತ್ ರೆಡ್ಡಿ ಸರ್ಕಾರವನ್ನ ಗುರಿಯಾಗಿಸಿಕೊಂಡು ತೆಲಂಗಾಣದಲ್ಲಿ ರಾಜಕೀಯಕ್ಕೆ ಇಳಿಯುತ್ತಾರೆ ಎಂದೇ ಬಣ್ಣಿಸಲಾಗುತ್ತಿದೆ.

ಹಾಗೆ ನೋಡಿದರೆ, ಅಲ್ಲು ಅರ್ಜುನ್ ಅವರಿಗೆ ಹೈದರಾಬಾದ್, ನಿಜಾಮಾಬಾದ್ ಮತ್ತು ಖಮ್ಮಮ್ ಸೇರಿದಂತೆ ಇತರೆ ಕಡೆಗಳಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಬಹುಶಃ ರಾಜಕಾರಣಕ್ಕೆ ಅವರು ಬಂದಲ್ಲಿ ಈ ಸ್ಥಳಗಳು ಅವರಿಗೆ ಪ್ಲಸ್ ಆಗಲಿವೆ ಎಂಬ ಮಾತಿದೆ. ಇನ್ನಷ್ಟು ಮಂದಿ, ಆಂಧ್ರ ಪ್ರದೇಶವನ್ನೇ ಅಲ್ಲು ಆಯ್ಕೆ ಮಾಡಿಕೊಳ್ಳಬಹುದು. ಯಾಕೆಂದರೆ, ಅಲ್ಲು ಅರ್ಜುನ್ ಅವರ ಕಾಪು ಸಮುದಾಯದ ಗಟ್ಟಿ ಮತಬ್ಯಾಂಕ್ ಅಲ್ಲಿದೆ ಎನ್ನಲಾಗುತ್ತಿದೆ.

ಅದೇನೆ ಇರಲಿ, ಈ ಎಲ್ಲಾ ಅಂತೆ-ಕತೆಗಳ ಬಗ್ಗೆ ಸ್ವತಃ ಅಲ್ಲು ಅರ್ಜುನ್ ತಂಡ ಸ್ಪಷ್ಟನೆ ನೀಡಿದೆ. ಅಲ್ಲು ಅರ್ಜುನ್ ಅವರು ಸಿನಿಮಾ ಮಾಡುವತ್ತ ಗಮನಹರಿಸಿದಾರ. ಪುಷ್ಪ ಸಕ್ಸಸ್ ಬಳಿಕ ಅವರ ಕೈಯಲ್ಲಿ ಹಲವು ದೊಡ್ಡ ಪ್ರಾಜೆಕ್ಟ್ ಗಳಿವೆ. ಸಿನಿಮಾ ಹೊರತು ರಾಜಕಾರಣದ ಬಗ್ಗೆ ಯಾವುದೇ ಯೋಚನೆ ಅವರಿಗಿಲ್ಲ ಎಂದು ಹೇಳಿದೆ. ಆದರೆ, ಪ್ರಶಾಂತ್ ಕಿಶೋರ್ ಜೊತೆ ಸಮಾಲೋಚನೆ ನಡೆದಿದೆ. ಇದು ನಿಜವೇ ಆಗಿದ್ದರೆ ಅದು ಯಾಕೆ ಅನ್ನೋದು ಈಗಿರುವ ಪ್ರಶ್ನೆ.






