ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷದ ಸ್ಥಾನದಲ್ಲಿದೆ. ರಾಜ್ಯದಲ್ಲಿ ಅಧಿಕೃತವಾಗಿ ಬಿಜೆಪಿ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿದೆ. ಆದರೆ ಇಲ್ಲೀವರೆಗೂ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಯಾರೊಬ್ಬರನ್ನೂ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್, ಆರ್ ಅಶೋಕ್, ಬಸವರಾಜ ಬೊಮ್ಮಾಯಿ, ಸುನಿಲ್ ಕುಮಾರ್ ಸೇರಿದಂತೆ ಸಾಕಷ್ಟು ಜನ ಶಾಸಕರು ವಿರೋಧ ಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕನನ್ನಾಗಿ ಯಾರನ್ನು ಆಯ್ಕೆ ಮಾಡುವುದು ಅನ್ನೋ ಗೊಂದಲದಲ್ಲಿ ಮುಳುಗಿದೆ. ಇದೀಗ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗಿರುವ ಕಾರಣಕ್ಕೆ ವಿಪಕ್ಷ ನಾಯಕನ ಆಯ್ಕೆ ಆಗುತ್ತಾ ಅನ್ನೋ ನಿರೀಕ್ಷೆ ಹುಟ್ಟಿಸಿದೆ.
ಬಸವರಾಜ ಬೊಮ್ಮಾಯಿಗೆ ಬುಲಾವ್ ಕೊಟ್ಟ ಬಿಜೆಪಿ ಹೈಕಮಾಂಡ್..
ರಾಜ್ಯ ಬಿಜೆಪಿಯಲ್ಲಿ ನಾವಿಕನಿಲ್ಲದ ದೋಣಿಯಂತಾಗಿರುವ ಬಿಜೆಪಿಗೆ ಹೊಸ ನೀರು ಸಿಕ್ಕಂತಾಗಿದೆ. ರಾಜ್ಯ ಬಿಜೆಪಿಗೆ ಸಂದೇಶ ಕಳುಹಿಸಿದ ಬಿಜೆಪಿ ಹೈಕಮಾಂಡ್ ಬಸವರಾಜ ಬೊಮ್ಮಾಯಿ ಅವರನ್ನು ದೆಹಲಿಗೆ ಬರಮಾಡಿಕೊಂಡಿದೆ. ಭಾನುವಾರ ಸಂಜೆಯೇ ದೆಹಲಿ ತಲುಪಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಅಮಿತ್ ಷಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವ ಸಾಧ್ಯತೆಗಳು ಇವೆ. ಆದರೆ ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ನಾಯಕತ್ವ ವಹಿಸಿಕೊಂಡು ಸೋಲುಂಡಿರುವ ಬಸವರಾಜ ಬೊಮ್ಮಾಯಿಗೆ ವಿರೋಧ ಪಕ್ಷದ ನಾಯಕನ ಸ್ಥಾನಮಾನ ನೀಡುವುದಕ್ಕೆ ವಿರೋಧ ವ್ಯಕ್ತವಾಗಿದೆ. ಇದೀಗ ವಿರೋಧದ ನಡುವೆಯೂ ಬಸವರಾಜ ಬೊಮ್ಮಾಯಿಗೆ ವಿರೋಧ ಪಕ್ಷದ ನಾಯಕನ ಪಟ್ಟ ಕಟ್ತಾರಾ..? ಅನ್ನೋ ಕುತೂಹಲ ಮೂಡಿಸಿದೆ.
ಭಾರತೀಯ ಜನತಾ ಪಾರ್ಟಿಯಲ್ಲಿ ನಾಯಕರ ಹಗ್ಗಾಜಗ್ಗಾಟ..
ಭಾರತೀಯ ಜನತಾ ಪಾರ್ಟಿ ಹೇಳಿ ಕೇಳಿ ಶಿಸ್ತಿನ ಪಕ್ಷ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಚುನಾವಣೆ ಫಲಿತಾಂಶ ಬಂದು ಮೂರು ತಿಂಗಳುಗಳೇ ಸಮೀಪಿಸುತ್ತಿದೆ. ಈಗಾಗಲೇ ಬಜೆಟ್ ಅಧಿವೇಶನ ವಿರೋಧ ಪಕ್ಷದ ನಾಯಕನಿಲ್ಲದೆ ಮುಗಿದು ಹೋಗಿದೆ. ಆದರೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಯಾಕೆ ಸಾಧ್ಯವಾಗಿಲ್ಲ ಅನ್ನೋ ಚರ್ಚೆ ಶುರುವಾಗಿದೆ. ಅಂದರೆ ಬಿಜೆಪಿಯಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತು. ಆದರೆ ಬಿ.ಎಲ್ ಸಂತೋಷ್ ನೇತೃತ್ವದಲ್ಲಿ ಒಂದು ಬಣ ದೆಹಲಿ ಮಟ್ಟದಲ್ಲಿ ಪ್ರಭಾವ ಬೀರುವುದಕ್ಕೆ ಶುರುವಾದ ಬಳಿಕ ಇಷ್ಟೆಲ್ಲಾ ರಾಮಾಯಣ ನಡೆಯುತ್ತಿದೆ ಎನ್ನುವುದು ಬಿಜೆಪಿ ನಾಯಕರ ಅಳಲು.
ಯಡಿಯೂರಪ್ಪ ಕೈ ಬಿಟ್ಟರೆ ಲೋಕಸಭೆಯಲ್ಲೂ ಹೊಡೆತದ ಭೀತಿ..
ಈಗಾಗಲೇ ಯಡಿಯೂರಪ್ಪ ಅವರನ್ನು ತೆರೆಮರೆಗೆ ಸರಿಸಲಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಯಡಿಯೂರಪ್ಪ ಅವರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದ್ದೂ ಬಿಜೆಪಿ ಹೀನಾಯ ಸೋಲಿಗೆ ಕಾರಣ ಅನ್ನೋ ಚರ್ಚೆಗಳು ನಡೆದಿದೆ. ಇದೀಗ ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದ್ದು, ಅನಿವಾರ್ಯವಾಗಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಮಣೆ ಹಾಕಲೇಬೇಕಿದೆ. ಒಂದು ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗು ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಯಡಿಯೂರಪ್ಪ ಹೊರತುಪಡಿಸಿದ ನಾಯಕರಿಗೆ ಕೊಟ್ಟರೆ, ಸಂಕಷ್ಟ ಕಟ್ಟಿಟ್ಟ ಬುತ್ತಿ ಅನ್ನೋ ಮಾತುಗಳು ಹೈಕಮಾಂಡ್ ಭೀತಿಗೆ ಕಾರಣ ಆಗಿದೆ. ಇದೇ ಕಾರಣಕ್ಕೆ ಸಿ.ಟಿ ರವಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿ, ಬಸವರಾಜ ಬೊಮ್ಮಾಯಿಗೆ ವಿರೋಧ ಪಕ್ಷದ ನಾಯಕನ ದಂಡ ನೀಡುವ ಸಾಧ್ಯತೆಯಿದೆ. ಆದರೆ ಬಿಜೆಪಿ ಹೈಕಮಾಂಡ್ ಇನ್ಯಾವ ಅಚ್ಚರಿಯ ಹೆಸರು ಪ್ರಕಟ ಮಾಡಿದರೂ ಮಾಡಬಹುದು ಎನ್ನಲಾಗ್ತಿದೆ..
ಕೃಷ್ಣಮಣಿ