ಬಿಹಾರದಲ್ಲಿ ಆರಂಭವಾದ ರಾಜಕೀಯ ಪಲ್ಲಟ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆದಿದೆ. ಎನ್.ಡಿ.ಎ. ಜೊತೆಗಿದ್ದ ನಿತೀಶ್ ಕುಮಾರ್ ಅವರು ಈ ಮೈತ್ರಿಕೂಟದ ಸಖ್ಯ ತೊರೆದು ಆರ್.ಜೆ.ಡಿ. ಮತ್ತು ಇತರೆ ಪಕ್ಷಗಳ ಜೊತೆಗೆ ಸಖ್ಯವನ್ನು ಬೆಳೆಸಿ ‘ಮಹಾಘಟಬಂಧನ್’ ಮೂಲಕ ಅಧಿಕಾರದ ಹೊಸ ಪರ್ವವನ್ನು ಆರಂಭಿಸಿದ್ದಾರೆ. ಲೋಕಸಭಾ ಚುನಾವಣೆಗೆ ಕೇವಲ ಒಂದು ವರ್ಷ ಉಳಿದಿರುವ ಸಂದರ್ಭದಲ್ಲಿ ಎನ್.ಡಿ.ಎ. ತೊರೆಯುವ ರಿಸ್ಕ್ ನಿತೀಶ್ ಏಕೆ ತಗೊಂಡರು? ಪ್ರಧಾನಿ ಗಾದಿ ಮೇಲೆ ಕಣ್ಣಿಟ್ಟಿದ್ದಾರೆಯೇ ಹಿರಿಯ ಸಮಾಜವಾದಿ ನಾಯಕ? ತನ್ನ ಹಳೆಯ ರಾಜಕೀಯ ದೋಸ್ತಿಗಳ ಜೊತೆ ಮತ್ತೆ ಯಾಕೆ ಮುನಿಸಿಕೊಂಡರು ನಿತೀಶ್? ಎಂಬೆಲ್ಲಾ ಪ್ರಶ್ನೆಗಳು ಇದೀಗ ರಾಷ್ಟ್ರ ರಾಜಕೀಯದ ಪಡಸಾಲೆಯಲ್ಲಿ ಚರ್ಚಾ ವಸ್ತುವಾಗಿದೆ. ಈ ಹಿನ್ನಲೆಯಲ್ಲಿ ನಿತೀಶ್ ಅವರ ‘ಚಾಣಾಕ್ಷ ನಡೆ’ಯತ್ತ ಒಂದು ಒಳನೋಟ ಹರಿಸುವ ಪ್ರಯತ್ನ ಇಲ್ಲಿದೆ.
ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಗಳ ರೇಸ್ ನಲ್ಲಿ ನಿತೀಶ್!
ಮುಂಬರುವ ಲೊಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ.ಗೆ ಟಾಂಗ್ ನೀಡಲು ವಿಪಕ್ಷಗಳು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿವೆ. ಈಗಾಗಲೇ ದೇಶದ ಉನ್ನತ ಪದವಿ ಮೇಲೆ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಎನ್. ಚಂದ್ರಶೇಖರ್ ಜೊತೆ ಇನ್ನೂ ಹಲವರ ಹೆಸರುಗಳು ಕೇಳಿ ಬರುತ್ತಿದ್ದು ಇದಕ್ಕೀಗ ಹೊಸದಾಗಿ ನಿತೀಶ್ ಕುಮಾರ್ ಅವರ ಹೆಸರು ಸೇರ್ಪಡೆಗೊಂಡಂತಾಗಿದೆ.
‘ರಾಷ್ಟ್ರ ಮಟ್ಟದ ನಾಯಕರಾಗಬಲ್ಲ ಎಲ್ಲಾ ಅರ್ಹತೆಗಳನ್ನು ನಿತೀಶ್ ಕುಮಾರ್ ಹೊಂದಿರುವುದರಿಂದ ಅವರು ಪ್ರಧಾನಿ ಅಭ್ಯರ್ಥಿಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ. ಆದರೆ ಈಗಲೇ ಏನನ್ನೂ ಹೇಳಲು ಬರುವುದಿಲ್ಲ’ ಎಂಬ ಮಾತುಗಳನ್ನು ಜೆಡಿ(ಯು) ಪಕ್ಷದ ಅಧ್ಯಕ್ಷ ಉಪೇಂದ್ರ ಕುಶ್ವಾಹ ಆಡಿರುವುದು ಈ ಊಹಾಪೋಹಗಳಿಗೆ ಇನ್ನಷ್ಟು ಪುಷ್ಠಿಯನ್ನು ನೀಡಿದಂತಾಗಿದೆ.
ಇಷ್ಟು ಮಾತ್ರವಲ್ಲದೇ ಆರ್.ಜೆ.ಡಿ. ನಾಯಕ ಶರದ್ ಯಾದವ್ ಅವರೂ ಸಹ ನಿತೀಶ್ ಅವರ ಪರವಾಗಿಯೇ ಬ್ಯಾಟ್ ಬಿಸುತ್ತಿರುವುದೂ ಸಹ ನಿತಿಶ್ ಅವರನ್ನು ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ರೇಸ್ ನಲ್ಲಿ ಮುಂಚೂಣಿಯಲ್ಲಿರಿಸಿದೆ. ಈಗಾಗಲೇ ವಿಪಕ್ಷಗಳು ನರೇಂದ್ರ ಮೋದಿ ಅಥವಾ ಬಿಜೆಪಿಯಿಂದ ಯಾರೇ ಪ್ರಧಾನಿ ಅಭ್ಯರ್ಥಿಯಾದರೂ ಅವರಿಗೆ ಎದುರಾಗಿ ಸಮರ್ಥ ಅಭ್ಯರ್ಥಿಯನ್ನು ಬಿಂಬಿಸಲು ಕಸರತ್ತು ನಡೆಸಲು ಪ್ರಾರಂಭಿಸಿರುವುದು ಸುಳ್ಳಲ್ಲ!
ಆದರೆ, ನಿತೀಶ್ ಕುಮಾರ್ ಅವರಂತೂ ಸದ್ಯಕ್ಕೆ ಈ ಎಲ್ಲಾ ಮಾತುಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ ಬಿಜೆಪಿಗೆ ಕೈಕೊಟ್ಟು ಆರ್.ಜೆ.ಡಿ. ನೇತೃತ್ವದ ಮಹಾಘಟಬಂಧನ್ ಕೈ ಹಿಡಿಯುವ ರಿಸ್ಕ್ ತೆಗೆದುಕೊಂಡಿರುವ ನಿತೀಶ್ ಅವರ ನಡೆಯನ್ನು ರಾಜಕೀಯ ವಿಶ್ಲೇಷಕರು, ಅವರು ಪ್ರಧಾನಿ ಪಟ್ಟದ ಮೇಲೊಂದು ಕಣ್ಣಿಟ್ಟೇ ಈ ರಿಸ್ಕ್ ತೆಗೆದುಕೊಂಡಿದ್ದಾರೆ ಎಂದು ಅಂದಾಜಿಸುತ್ತಿದ್ದಾರೆ.
‘ಪಲ್ಟು ರಾಮ್’ ಇದೀಗ ಆರ್.ಜೆ.ಡಿ.ಯ ಬ್ಲೂ ಬಾಯ್!
ಅಂದು, 2017ರಲ್ಲಿ ಆರ್.ಜೆ.ಡಿ. ಸಖ್ಯ ತೊರೆದು ಎನ್.ಡಿ.ಎ.ಗೆ ಸೇರಿದ್ದ ನಿತೀಶ್ ಅವರನ್ನು ಆರ್.ಜೆ.ಡಿ. ನಾಯಕ ತೇಜಸ್ವಿ ಯಾದವ್ ‘ಪಲ್ಟು ರಾಮ್’ ಎಂದು ಟಿಕಿಸಿದ್ದರು ಮತ್ತು ಭವಿಷ್ಯದಲ್ಲಿ ನಿತೀಶ್ ಅವರೊಂದಿಗೆ ಕೈಜೋಡಿಸುವ ಯಾವುದೇ ಸಾಧ್ಯತೆಗಳನ್ನು ಯಾದವ್ ತಳ್ಳಿ ಹಾಕಿದ್ದರು. ಆದರೆ ಇದೀಗ ಗಂಗೆಯಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ! ಮತ್ತು ಆರ್.ಜೆ.ಡಿ. ಸಹಿತ ವಿಪಕ್ಷಗಳಿಗೆ ನಿತೀಶ್ ಅವರಂತಹ ಚಾರ್ಮಿಂಗ್ ನಾಯಕರ ಸಖ್ಯ ಮತ್ತೆ ಆಪ್ತವೆಣಿಸಿದೆ.
‘ಜಂಗಲ್ ರಾಜ್’ ಘೋಷಣೆ ಮಾಡಿ ಮುಖ್ಯಮಂತ್ರಿಯಾಗಿದ್ದ ನಿತಿಶ್!
ಬಿಹಾರದಲ್ಲಿ ಸುದೀರ್ಘ ಆಡಳಿತ ನಡೆಸಿದ್ದ ಲಾಲೂ ಪ್ರಸಾದ್ ಯಾದವ್ ಅವರ ಆಡಳಿತವನ್ನು ‘ಜಂಗಲ್ ರಾಜ್’ ಎಂದು ಬಿಂಬಿಸಿ ರಾಜ್ಯವ್ಯಾಪಿ ಪ್ರವಾಸ ಮಾಡಿ ಬಿಜೆಪಿ ಜೊತೆ ಸೇರಿ ನಿತಿಶ್ ಅವರು 2005ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿ ಗದ್ದುಗೆಗೇರಿದ್ದರು. ಬಳಿಕ 2013ರಲ್ಲಿ ಬಿಜೆಪಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ಕಮಲ ನಾಯಕರ ಮೇಲೆ ಮುನಿಸಿಕೊಂಡು ಎನ್.ಡಿ.ಎ. ಸಖ್ಯ ತೊರೆದಿದ್ದರು. ಆ ಬಳಿಕ 2015ರಲ್ಲಿ ಆರ್.ಜೆ.ಡಿ. ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಜೆಡಿ(ಯು) ಪಕ್ಷದ ನೇತಾರ ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರಿದ್ದರು. ಆದರೆ ಮತ್ತೆ ಯೂ-ಟರ್ನ್ ಹೊಡೆಯುವ ಮೂಲಕ ಮಹಾ ಘಟಬಂಧನ್ ಗೆ ಕೈಕೊಟ್ಟು ಮರಳಿ ಎನ್.ಡಿ.ಎ. ತೆಕ್ಕೆಗೆ ಬಂದು ಮುಖ್ಯಮಂತ್ರಿಯಾಗಿ ಮುಂದುವರೆದರು.
ಕ್ಲೀನ್ ಇಮೇಜಿನ ನಾಯಕನ ಯೂ-ಟರ್ನ್ ಪರ್ವ!
ನಿತೀಶ್ ಕುಮಾರ್ ಅವರನ್ನು ರಾಷ್ಟ್ರ ರಾಜಕಾರಣದಲ್ಲಿ ‘ಕ್ಲೀನ್ ಇಮೇಜ್’ ನಾಯಕನೆಂದೇ ಪರಿಗಣಿಸಲಾಗುತ್ತಿದೆ. ಭ್ರಷ್ಟಾಚಾರವನ್ನು ಸಹಿಸದೇ ಮಹಾಘಟಬಂಧನ್ ತೊರೆದು ಬಂದಾಗಲೂ ಬಿಹಾರದ ಜನತೆ ಅವರ ಕೈಬಿಟ್ಟಿರಲಿಲ್ಲ. ಆದರೆ ಅವರ ಊಹೆಗೂ ನಿಲುಕದ ರೀತಿಯ ‘ಯೂ-ಟರ್ನ್’ ನಡೆಗಳು ಎಲ್ಲಾ ಪಕ್ಷಗಳಿಗೂ ತಲೆಬಿಸಿ ಉಂಟುಮಾಡಿದೆ.
ಇದೀಗ ನಿತೀಶ್ ಕುಮಾರ್ ಅವರು ಮತ್ತೆ ಎನ್.ಡಿ.ಎ. ತೊರೆದಿರುವುದು ಸೂಕ್ತ ನಾಯಕತ್ವವಿಲ್ಲದೆ ಸೊರಗಿರುವ ವಿಪಕ್ಷಗಳ ಪಾಲಿಗೆ ಹೊಸ ಭರವಸೆಯಂತೆ ಕಾಣಲಾರಂಭಿಸಿದೆ. ಈ ಕಾರಣದಿಂದಲೇ ನಿತಿಶ್ ಅವರ ನಡೆಯನ್ನು ಶಿವಸೇನೆ, ತೃಣಮೂಲ ಕಾಂಗ್ರೆಸ್, ಎನ್.ಸಿ.ಪಿ., ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳು ಸ್ವಾಗತಿಸಿವೆ. ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿತಿಶ್ ಅವರ ಈ ನಿರ್ಧಾರ ವಿಪಕ್ಷಗಳಿಗೆ ಮತ್ತು ಸ್ವತಃ ನಿತಿಶ್ ಕುಮಾರ್ ಅವರಿಗೇ ಎಷ್ಟು ಲಾಭ ತರಲಿದೆ ಎಂಬುದನ್ನು ಮಾತ್ರ ಕಾದು ನೋಡಬೇಕಾಗಿದೆ!