ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ ಬಿಡುಗಡೆಯತ್ತ ಹೆಜ್ಜೆಯಿಡುತ್ತಿದ್ದು, ಚಿತ್ರದ ಇಂಗ್ಲಿಷ್ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಟ್ರೇಲರ್ ವೀಕ್ಷಿಸಿದ ಅನೇಕ ಪ್ರೇಕ್ಷಕರು, ಇದು ಮೂಲ ಹಿಂದಿ ಆವೃತ್ತಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರದ ಇಂಗ್ಲಿಷ್ ಟ್ರೇಲರ್‌ನಲ್ಲಿ ಪ್ರಸಿದ್ಧ ವಿಎಫ್‌ಎಕ್ಸ್ ಸಂಸ್ಥೆ DNEG ಅಭಿವೃದ್ಧಿಪಡಿಸಿರುವ ‘Brahma AI’ ಲಿಪ್‌ಸಿಂಕ್ ತಂತ್ರಜ್ಞಾನ ಬಳಸಲಾಗಿದೆ. ಈ ತಂತ್ರಜ್ಞಾನದ ಮೂಲಕ ಕಲಾವಿದರು ಇಂಗ್ಲಿಷ್ ಸಂಭಾಷಣೆಗಳನ್ನು ಹೇಳುವಂತೆ ತುಟಿಗಳ ಚಲನೆ ಸಹಜವಾಗಿ ಹೊಂದಾಣಿಕೆಯಾಗಿದ್ದು, ನಟರೇ ನೇರವಾಗಿ ಇಂಗ್ಲಿಷ್‌ನಲ್ಲಿ ಅಭಿನಯಿಸಿರುವ ಅನುಭವವನ್ನು ನೀಡುತ್ತದೆ.ಇಂಗ್ಲಿಷ್ ಆವೃತ್ತಿಯ ಮೂಲಕ ಭಾರತೀಯ ಪೌರಾಣಿಕ ಕಥೆ ಜಾಗತಿಕ ಪ್ರೇಕ್ಷಕರನ್ನು ಸೆಳೆಯುತ್ತಿದೆ. ವಿಶೇಷವಾಗಿ ಇಂದ್ರನ ವಾಹನ ಐರಾವತದ ಮೇಲೆ ರಾವಣ ದಾಳಿ ಮಾಡುವ ದೃಶ್ಯ ಹಾಗೂ ಅದ್ಭುತ ದೃಶ್ಯ ವೈಭವ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿದೆ.
ಆದರೆ, ಕೆಲವು ಇಂಗ್ಲಿಷ್ ಭಾಷಿಕರು ಭಾರತೀಯ ಶೈಲಿಯ ಉಚ್ಚಾರಣೆಯ ಕುರಿತು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಪ್ರೇಕ್ಷಕರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಬೇಕಾದರೆ ಅಮೆರಿಕನ್ ಅಥವಾ ಬ್ರಿಟಿಷ್ ಧ್ವನಿ ಕಲಾವಿದರಿಂದ ಡಬ್ಬಿಂಗ್ ಮಾಡಿಸಿದರೆ ಉತ್ತಮವಾಗಿರುತ್ತದೆ ಎಂಬ ಸಲಹೆಗಳೂ ಕೇಳಿಬಂದಿವೆ.ಈ ಭವ್ಯ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸನ್ನಿ ಡಿಯೋಲ್, ರವಿ ದುಬೆ, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಅರುಣ್ ಗೋವಿಲ್, ಲಾರಾ ದತ್ತಾ ಹಾಗೂ ಕುನಾಲ್ ಕಪೂರ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.






