ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಗರಿಗೆದರಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಟ್ಟಿ ಹಾಕಲು ಜೆಡಿಎಸ್-ಬಿಜೆಪಿ ಮೈತ್ರಿ ರಾಜಕಾರಣ ಶುರು ಮಾಡಿದೆ. ಮುಂದಿನ ಕೆಲವೇ ದಿನಗಳಲ್ಲಿ ಎರಡೂ ಪಕ್ಷಗಳ ಅಗ್ರಗಣ್ಯ ನಾಯಕರು ಮೈತ್ರಿಯನ್ನು ಅಧಿಕೃತ್ವಾಗಿ ಘೋಷಣೆ ಮಾಡಲಿದ್ದಾರೆ. ಆದರೆ ಈ ಮೈತ್ರಿಯಿಂದ ಕಾಂಗ್ರೆಸ್‌ಗೆ ಸಣ್ಣ ಪ್ರಮಾಣದಲ್ಲಿ ಹೊಡೆತ ಬೀಳುವುದು ನಿಶ್ಚಿತ. ಹಾಗಿದ್ದರೂ ಜೆಡಿಎಸ್ಗೆ ಬಿಜೆಪಿ ಜೊತೆಗಿನ ಮೈತ್ರಿಯಿಂದ ಯಾವ ಪ್ರಮಾಣದಲ್ಲಿ ಲಾಭ ಆಗಲಿದೆ ಎನ್ನುವುದನ್ನು ನೋಡಿದಾಗ, ಜೆಡಿಎಸ್ಗೆ ಈ ಬಾರಿಯ ಚುನಾವಣೆಯಲ್ಲೂ ನಷ್ಟ ಎದುರಾಗುವ ಸಾಧ್ಯತೆಗಳೇ ಹೆಚ್ಚಾಗಿ ಕಾಣಿಸುತ್ತಿವೆ. ಜೆಡಿಎಸ್ ಕೇಳಿರುವ ಕ್ಷೇತ್ರಗಳು ಹಾಗು ಅಲ್ಲಿನ ಪರಿಸ್ಥಿತಿಗಳು ಚಿಂತಾಜನಕವಾಗಿವೆ.
ಹಾಸನದಲ್ಲಿ ಜೆಡಿಎಸ್ ಗೆಲುವಿಗೆ ಕೈ ಜೋಡಿಸುತ್ತಾ ಬಿಜೆಪಿ..?
ಹಾಸನದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗು ಬಿಜೆಪಿ ಮೂರು ಪಕ್ಷಗಳು ಸದ್ಯಕ್ಕೆ ಬಲಾಢ್ಯ ಆಗಿದೆ. ಸಕಲೇಶಪುರ, ಬೇಲೂರಿನಲ್ಲಿ ಬಿಜೆಪಿ ಜಯ ಗಳಿಸಿದ್ದರೆ, ಅರಕಲಗೂಡು, ಹೊಳೆನರಸೀಪುರ, ಹಾಸನ, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಇನ್ನು ಅರಸೀಕೆರೆಯಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಜಿಲ್ಲೆಯ 4 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದರೂ ಆ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೂಡ ಬಲಾಢ್ಯವಾಗಿಯೇ ಇದೆ. ಇನ್ನುಳಿದಂತೆ ಸಕಲೇಶಪುರ ಹಾಗು ಬೇಲೂರಿನಲ್ಲಿ ಬಿಜೆಪಿ ಶಾಸಕರಿದ್ದು, ಇಲ್ಲಿ ಪ್ರಮುಖ ಎದುರಾಳಿ ಜೆಡಿಎಸ್ ಆಗಿದೆ. ಹೀಗಾಗಿ ಈ ಎರಡೂ ಕ್ಷೇತ್ರದ ಜೊತೆಗೆ ಹಾಸನದಲ್ಲೂ ಪ್ರಬಲ ಆಗಿರುವ ಬಿಜೆಪಿ ಹೊಂದಾಣಿಕೆ ಆಗುತ್ತಾ..? ಅನ್ನೋದು ಅನುಮಾನ ಸೃಷ್ಟಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋತು ಕುದಿಯುತ್ತಿರುವ ಮಾಜಿ ಶಾಸಕ ಪ್ರೀತಂಗೌಡ ಕಾಂಗ್ರೆಸ್ ಜೊತೆಗೆ ಕೈಜೋಡಿಸಿದರೆ ಜೆಡಿಎಸ್ ಗೆಲುವು ಕಷ್ಟ ಎನ್ನಬಹುದಾಗಿದೆ.
ಮಂಡ್ಯ, ಹಾಸನದಲ್ಲೂ ಜೆಡಿಎಸ್ಗೆ ಸಂಕಷ್ಟ ಗ್ಯಾರಂಟಿ..!
ಮಂಡ್ಯ ಹಾಗು ತುಮಕೂರಿನಲ್ಲೂ ಜೆಡಿಎಸ್ಗೆ ಲಾಭ ಆಗುವ ಸಾಧ್ಯತೆಗಳು ತೀರಾ ವಿರಳ ಎನ್ನಬಹುದು. ಮಂಡ್ಯದ 6 ಕ್ಷೇತ್ರಗಳಲ್ಲಿ ಜೆಡಿಎಸ್ ಸೋಲುಂಡು ಕಾಂಗ್ರೆಸ್ ಗೆದ್ದು ಬೀಗಿದೆ. ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಗೆಲುವು ಸಾಧಿಸಿದೆ. ಅಂದ ಮಾತ್ರಕ್ಕೆ ಜೆಡಿಎಸ್ ಜಿಲ್ಲೆಯಲ್ಲಿ ಶಕ್ತಿಹೀನ ಎಂದು ಭಾವಿಸಲಾಗದು. ಜೆಡಿಎಸ್ ಹಾಗು ಕಾಂಗ್ರೆಸ್ ಹೆಚ್ಚುಕಡಿಮೆ ಸಮಬಲ ಹೊಂದಿದ್ದು, ಸ್ವಲ್ಪ ಆ ಕಡೆ ಈ ಕಡೆಗೆ ಮತಗಳು ವಾಲಿದರೂ ಸೋಲು ಗೆಲುವಿನ ಲೆಕ್ಕಚಾರಗಳು ಬದಲಾಗುವ ಸಾಧ್ಯತೆಗಳಿವೆ. ಇನ್ನು ಹಾಲಿ ಸಂಸದೆ ಸುಮಲತಾ ಬಿಜೆಪಿ – ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡರೂ ಸ್ಪರ್ಧೆಯಿಂದ ಹಿಂದೆ ಸರಿಯಲಾರರು ಎನ್ನಲಾಗ್ತಿದೆ. ಇತ್ತ ತುಮಕೂರಿನಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವ ಮಾಹಿತಿ ಸಿಗುತ್ತಿದೆ. ಕಳೆದ ಬಾರಿ ದೇವೇಗೌಡರೇ ಸ್ಪರ್ಧೆ ಮಾಡಿದ್ದರು. ಆದರೆ ತುಮಕೂರಿನ ಜನರು ಸೋಲಿಸಿದ್ದರು. ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡರು ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗದೆ ತಟಸ್ಥವಾಗಿದ್ದರು. ಈ ಬಾರಿ ಮತ್ತೆ ಬಿಜೆಪಿಯ ಹಾಲಿ ಸಂಸದ ಜಿ.ಎಸ್ ಬಸವರಾಜು ಟಿಕೆಟ್ ಕೈತಪ್ಪಿದ್ರೆ ತಟಸ್ಥರಾಗಲಿದ್ದು, ಬಿಜೆಪಿ ಶಾಸಕರು ಜೆಡಿಎಸ್ಗೆ ಸಂಪೂರ್ಣ ಮನಸ್ಸಿನಿಂದ ಕೆಲಸ ಮಾಡಲಾರರು ಅನ್ನೋ ಮಾಹಿತಿ ಇದೆ.
ಕುಮಾರಸ್ವಾಮಿ ಮಾಡಿಕೊಳ್ಳುವ ಎಡವಟ್ಟು ಏನು ಗೊತ್ತಾ..?
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಾನವೀಯತೆ ಹೊಂದಿರುವ ರಾಜಕಾರಣಿ, ರೈತರ ಬಗ್ಗೆ ಎಲ್ಲರಿಗಿಂತಲೂ ತುಸು ಹೆಚ್ಚು ಮಮಕಾರ ಹೊಂದಿರುವ ನಾಯಕ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಕಳೆದ ಬಾರಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಾಗಲೂ ಮೇಲ್ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡರು. ಗೆಲ್ಲುವುದಕ್ಕೆ ಸಾಧ್ಯವಾಗದೆ ಸೋಲುಂಡರು. ಸ್ಥಳೀಯವಾಗಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಲಿಲ್ಲ. ಈ ಬಾರಿ ಆದರೂ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಮಾಡಿದರೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡುವುದರಿಂದ ಒಂದಿಷ್ಟು ಲಾಭ ಆಗಬಹುದು. ಅದನ್ನು ಬಿಟ್ಟು ಕೇವಲ ದೆಹಲಿ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡು ಸ್ಥಳೀಯ ನಾಯಕರನ್ನು ಮಾತನಾಡಿಸದೆ ಇದ್ದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಆದರೆ ಕಾಂಗ್ರೆಸ್ ಮೈತ್ರಿಗಿಂತ ಬಿಜೆಪಿ ಜೊತೆಗಿನ ಮೈತ್ರಿ ಜೆಡಿಎಸ್ಗೆ ಉತ್ತಮ ಎನ್ನಬಹುದು.