ಚೀನಾದ ವಸ್ತು-ಸೇವೆಗಳಿಗೆ ನಮ್ಮ ದೇಶ ಹೆಚ್ಚು ಅವಲಂಬನೆಗೊಂಡರೆ ನಾವು ಅವರ ಮುಂದೆ ತಲೆಬಾಗಬೇಕಾಗುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಎಚ್ಚರಿಸಿದ್ದಾರೆ.
ಮುಂಬೈನಲ್ಲಿ ಸ್ವಾತಂತ್ರ ದಿನದಂದು ಧ್ವಜಾರೋಹಣ ಮಾಡಿ ಭಾಷಣ ಮಾಡಿದ ಅವರು, “ಸ್ವದೇಶಿ” ಅಂದರೆ ಭಾರತೀಯ ಶೈಲಿಯಲ್ಲಿ ವ್ಯಾಪಾರ ಮಾಡುವುದು ಎಂಬ ಅರ್ಥವೂ ಇದೆ ಎಂದು ಅವರು ಹೇಳಿದ್ದಾರೆ.
ನಾವು ತಂತ್ರಜ್ಞಾನ ಮತ್ತು ಇಂಟರ್‌ನೆಟ್ ಅನ್ನು ಸಾಕಷ್ಟು ಬಳಸುತ್ತಿದ್ದೇವೆ. ಆದರೆ, ನಮ್ಮ ದೇಶದ ಟೆಕ್ನಾಲಜಿ ಅಲ್ಲ ಇವು. ಇದು ಹೊರಗಿನಿಂದ ಬಂದಿರುವಂತದ್ದು ಎಂದು ಅವರು ಹೇಳಿದ್ದಾರೆ.

ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂದು ನಾವು ಎಷ್ಟೇ ಬೊಬ್ಬಿರಿದರೂ ಪ್ರಯೋಜನವಿಲ್ಲ. ನಿಮ್ಮ ಕೈಯಲ್ಲಿರುವ ಫೋನ್‌ಗಳನ್ನೇ ಗಮನಿಸಿ, ಅದು ಚೀನಾ ನಿರ್ಮಿತ ಅಥವಾ ಚೀನೀ ವಸ್ತುಗಳನ್ನೇ ಅವಲಂಬಿಸಿಕೊಂಡಿದೆ. ಚೀನಾದ ಮೇಲೆ ನಮ್ಮ ಅವಲಂಬನೆ ಹೆಚ್ಚಾದರೆ ನಾವು ಅವರೆದುರು ತಲೆಬಾಗಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದ್ದಾರೆ.
“ಆರ್ಥಿಕ ಭದ್ರತೆ ಮುಖ್ಯವಾಗಿದೆ, ತಂತ್ರಜ್ಞಾನ ಸೇರಿಸುವುದು ನಮ್ಮ ನಿಯಮಗಳನ್ನು ಆಧರಿಸಿರಬೇಕು. ಅದಕ್ಕೆ “ನಾವು ಸ್ವಾಭಿಮಾನಿಯಾಗಿರಬೇಕು” ಎಂದು ಅವರು ಹೇಳಿದ್ದಾರೆ.
“ಸ್ವದೇಶಿ ಎಂದರೆ ಉಳಿದ ಎಲ್ಲವನ್ನೂ ನಿರ್ಲಕ್ಷಿಸುವುದು ಎಂದಲ್ಲ. ಅಂತರಾಷ್ಟ್ರೀಯ ವ್ಯಾಪಾರ ಉಳಿಯುತ್ತದೆ, ಆದರೆ ನಮ್ಮ ನಿಯಮಗಳ ಪ್ರಕಾರ ಅದಕ್ಕಾಗಿ ನಾವು ಸ್ವಾವಲಂಬಿಗಳಾಗಬೇಕು ಎಂದು ಅವರು ಹೇಳಿದ್ದಾರೆ.
ನಮ್ಮ ಮನೆಯಲ್ಲಿ ಏನು ತಯಾರಿಸಲು ಸಾಧ್ಯವೋ ಅದನ್ನು ನಾವು ಮಾರುಕಟ್ಟೆಯಿಂದ ತರಬಾರದು. ಆರ್ಥಿಕ ದೃಷ್ಟಿಕೋನವು ಉತ್ಪಾದನೆಯ ಗುಣಮಟ್ಟದಲ್ಲಿ ಸ್ಪರ್ಧೆಯನ್ನು ತರಬೇಕು. ಹಾಗೆಂದು ನಾವು ಅಂತರಾಷ್ಟ್ರೀಯ ವ್ಯಾಪಾರಗಳಿಗೆ ವಿರುದ್ಧ ಎಂದಲ್ಲ. ಆದರೆ, ನಮ್ಮ ಉತ್ಪಾದನೆ ನಮ್ಮ ಹಳ್ಳಿಗಳನ್ನು ಕೇಂದ್ರೀಕರಿಸಿರಬೇಕು. ತುಂಬಾ ಉತ್ಪಾದನೆಯಾಗಬೇಕೆಂದು ಅಲ್ಲ, ಆದರೆ, ತುಂಬಾ ಮಂದಿಯಿಂದ ಉತ್ಪಾದನೆಯಾಗಬೇಕು ಎಂದು ಅವರು ಹೇಳಿದ್ದಾರೆ.
ಉತ್ಪಾದನೆಯ ವಿಕೇಂದ್ರೀಕರಣವು ಉದ್ಯೋಗ ಸೃಷ್ಟಿಯನ್ನುಂಟು ಮಾಡುತ್ತದೆ. ಹಾಗೂ ಸ್ವ-ಉದ್ಯೋಗ ಕಂಡುಕೊಳ್ಳಲು ಸಹಾಯಕವಾಗುತ್ತದೆ. ಹೆಚ್ಚಿನ ಉತ್ಪಾದಕರೊಂದಿಗೆ, ಹೆಚ್ಚಿನ ಜನರು ಸ್ವಾವಲಂಬಿಗಳಾಗುತ್ತಾರೆ, ಆದಾಯವನ್ನು ಸಮಾನವಾಗಿ ವಿತರಿಸಬೇಕು. ಕೈಗಾರಿಕೆಗಳು ಸರ್ಕಾರದಿಂದ ಪ್ರೋತ್ಸಾಹ ಪಡೆಯಬೇಕು. ಸರ್ಕಾರವು ನಿಯಂತ್ರಕನಾಗಿ ಕಾರ್ಯನಿರ್ವಹಿಸಬೇಕು ಮತ್ತು ಸ್ವತಃ ವ್ಯಾಪಾರ ಮಾಡಬಾರದು ಎಂದು ಅವರು ಹೇಳಿದ್ದಾರೆ.












