ಬೆಂಗಳೂರು : ರಾಜ್ಯದಲ್ಲ ಬೂದಿ ಮುಚ್ಚಿದ ಕೆಂಡದಂತಿರುವ ನಾಯಕತ್ವ ಬದಲಾವಣೆಯ ವಿಚಾರ ಮತ್ತೆ ಮುನ್ನೆಲೆಗೆ ಬರುವ ಮುನ್ಸೂಚನೆಗಳು ಗೋಚರಿಸುತ್ತಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್‌ಜಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ವಿಶೇಷ ಅಧಿವೇಶನದ ಬಳಿಕ ಮತ್ತೊಮ್ಮೆ ಡಿಸಿಎಂ ಡಿಕೆ ಶಿವಕುಮಾರ್ ಬಣ ಅಲರ್ಟ್ ಆಗಿದ್ದು, ಅಧಿವೇಶನದ ಬಳಿಕ ಪುನಃ ಹೈಕಮಾಂಡ್ ಮುಂದೆ ತಮ್ಮ ಬೇಡಿಕೆಯನ್ನು ಮುಂದಿಡಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ದೇವರಾಜ ಅರಸು ದಾಖಲೆಯನ್ನು ಸರಿಗಟ್ಟಿದ ಸಾಧನೆ ಮಾಡಿದ್ದಾರೆ. ಸುದೀರ್ಘ ಅವಧಿಯ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಈ ಸಂಭ್ರಮದಲ್ಲಿರುವ ಸಿದ್ದರಾಮಯ್ಯ ಅವರಿಗೆ ಪಕ್ಷದಲ್ಲಿನ ಭಿನ್ನ ಧ್ವನಿಗಳಿಂದ ನೆಮ್ಮದಿಯೇ ಇಲ್ಲದಂತಾಗಿದೆ.
ಇದನ್ನೂ ಓದಿ : “ಸುಪ್ರೀಂ”ನಲ್ಲಿ ಮಮತಾ ಬ್ಯಾನರ್ಜಿ ವಾದ ಮಂಡನೆ..!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಇಂದಿನವರೆಗೂ ನಾಯಕತ್ವದ ವಿಚಾರದಲ್ಲಿ ಎಲ್ಲವೂ ಗೊಂದಲದ ಗೂಡಾಗಿಯೇ ಉಳಿಯುವಂತಾಗಿದೆ. ಈ ಗೂಡಿನಲ್ಲಿ ಏನಿದೆ ಎಂಬುದನ್ನು ಬಿಡಿಸಿ ಹೇಳುವ ಪ್ರಯತ್ನವನ್ನು ಪಕ್ಷದ ಹೈಕಮಾಂಡ್ ಮಾಡದಿರುವುದೇ ಇಬ್ಬರ ನಾಯಕರ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಅವರು ತಮ್ಮ ಸಿಎಂ ಕುರ್ಚಿಯನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟು ಕೊಡಬೇಕೆಂಬುದು ಡಿಸಿಎಂ ಬಣದ ವಾದವಾಗಿದೆ. ಹೀಗಾಗಿಯೇ ಹಲವು ಸುತ್ತಿನ ಕಸರತ್ತುಗಳ ಬಳಿಕ ಮತ್ತೆ ತಮ್ಮ ವಾದವನ್ನು ಮಂಡಿಸೋಕೆ ಡಿಕೆ ಟೀಂ ಸಿದ್ಧವಾಗಿದೆ.

ಸದ್ಯ 16 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ 17ನೇ ಬಜೆಟ್ ಮಂಡನೆ ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಡಿಕೆ ಶಿವಕುಮಾರ್ ಬಣವೂ ಇದಕ್ಕೆ ಅವಕಾಶ ನೀಡುತ್ತದೆಯಾ.? ಇಲ್ಲವಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ಬಜೆಟ್‌ಗೂ ಮುನ್ನವೇ ಡಿಸಿಎಂ ಅವರು ಸಿಎಂ ಆಗಿ ಪ್ರಮೋಟ್ ಆಗ್ತಾರಾ ಎಂಬ ಚರ್ಚೆಯು ನಡೆಯುತ್ತಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಈ ವಿಚಾರದಲ್ಲಿ ಯಾವ ನಿಲುವು ತಾಳಲಿದ್ದಾರೆ ಎನ್ನುವುದು ಕೂಡ ಅತ್ಯಂತ ಮಹತ್ವದ ವಿಚಾರವಾಗಿದೆ.






