ಕೋಲಾರ: ಕೋಲಾರ(Kolar) ಜಿಲ್ಲೆ ಬಿಟ್ಟು ಚಿಕ್ಕಬಳ್ಳಾಪುರ(Chikkaballapura) ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ನನಗೆ ಆಸಕ್ತಿ ಇಲ್ಲ. ಮುಳಬಾಗಿಲು(Mulabagilu) ಕ್ಷೇತ್ರದಲ್ಲಿಯೇ ನಾನು ಸ್ಪರ್ಧೆ ಮಾಡುತ್ತೇನೆ. ಅದರಲ್ಲಿ ಅನುಮಾನವೇ ಇಲ್ಲ ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್(Kothur Manjunath) ಸ್ಪಷ್ಟಪಡಿಸಿದರು.
ಮುಳಬಾಗಿಲು ತಾಲೂಕಿನ ಆವಣಿ ಜಾತ್ರೆಗೆ ಆಗಮಿಸಿದ್ದ ಕೊತ್ತೂರು ಮಂಜುನಾಥ್ ಮಾಧ್ಯಮದವರೊಂದಿಗೆ ಮಾತನಾಡಿ, ಮುಳಬಾಗಿಲು ಕ್ಷೇತ್ರದಲ್ಲಿ ಸ್ಪರ್ಧಿಸುವ ಸಂಬಂಧ ಜಾತಿ ಪ್ರಮಾಣ ಪತ್ರದ ಕೇಸ್ ಕೋರ್ಟಿನಲ್ಲಿ ಇದೆ. ಹಾಗಾಗಿ ಈ ತಿಂಗಳ ಕೊನೆಯವರೆಗೂ ಈ ಬಗ್ಗೆ ನಾನು ಏನೂ ಮಾತಾಡುವುದಿಲ್ಲ. ಆದರೆ ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧಿಸುವುದು ಸಾಧ್ಯವಾಗದಿದ್ದರೆ ಇಲ್ಲೇ ಜನರ ಸೇವೆ ಮಾಡಿಕೊಂಡು ಇರುತ್ತೇನೆ ಹೊರತು ಚಿಕ್ಕಬಳ್ಳಾಪುರ ಜಿಲ್ಲೆಗೆ ಹೋಗುವುದಿಲ್ಲ ಎಂದು ತಮ್ಮ ನಿಲುವನ್ನು ತಿಳಿಸಿದರು.

ಇರುವುದನ್ನು ಕಳೆದುಕೊಳ್ಳಲು ರಾಜಕೀಯಕ್ಕೆ ಬರಬೇಕು
ನಾನು ಅಧಿಕಾರಕ್ಕಾಗಿ ರಾಜಕೀಯಕ್ಕೆ ಬಂದವನಲ್ಲ. ಈಗಲೂ ನನಗೆ ಚುನಾವಣೆಯಲ್ಲಿ ನಿಲ್ಲಬೇಕು ಎಂದು ಆಸೆಯಿಲ್ಲ. ಜನರ ಪ್ರೀತಿ ವಿಶ್ವಾಸಕ್ಕಾಗಿ ಮಾತ್ರ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ರಾಜಕಾರಣಕ್ಕೆ ಬಂದು ದುಡ್ಡು ಮಾಡಬೇಕೆಂದರೆ ಆಗುವುದಿಲ್ಲ. ಇರುವ ಹಣವನ್ನು ಕಳೆದುಕೊಳ್ಳಬೇಕೆಂದರೆ ರಾಜಕೀಯಕ್ಕೆ ಬರಬೇಕು. ನಾನು ಸಮಾಜಸೇವೆಯನ್ನು ಇಷ್ಟಪಟ್ಟು ಮಾಡುತ್ತಿದ್ದೇನೆ ಎಂದರು.
ಜೆಡಿಎಸ್ ಅಭ್ಯರ್ಥಿ ಹೊಗಳಿಲ್ಲ ವಾಸ್ತವ ಹೇಳಿದ್ದಾರೆ
ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರು ನನ್ನನ್ನು ಹೊಗಳುತ್ತಿಲ್ಲ. ಇಲ್ಲದೆ ಇರುವುದನ್ನು ಹೇಳಿದರೆ ಅದನ್ನು ಹೊಗಳುವುದು ಎನ್ನುತ್ತಾರೆ. ಆದರೆ ಅವರು ನಾನು ಸಮಾಜಸೇವೆ ಮಾಡಿರುವ ಬಗ್ಗೆ ವಾಸ್ತವವನ್ನು ಹೇಳಿದ್ದಾರೆ. ಅವರ ಪಕ್ಷದ ಸಿದ್ಧಾಂತಗಳು ಅವರದ್ದು, ನಮ್ಮ ಪಕ್ಷದ ಸಿದ್ಧಾಂತಗಳು ನಮ್ಮದು ಎಂದರು.