ಬೆಂಗಳೂರು: ಪೆನ್ ಡ್ರೈವ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಕೊನೆಗೆ ಪ್ರತ್ಯಕ್ಷನಾಗಿದ್ದು, ರಾಜ್ಯದ ಜನರ ಕ್ಷಮೆ ಕೋರಿದ್ದಾನೆ.
ಮೇ 31 ರಂದು ನಾನು ರಾಜ್ಯಕ್ಕೆ ಬರುತ್ತೇನೆ ಎಂದು ಪ್ರಜ್ವಲ್ ರೇವಣ್ಣ (Prajwal Revanna) ಹೇಳಿದ್ದಾರೆ. ಈ ಕುರಿತು ವಿದೇಶದಿಂದಲೇ ವಿಡಿಯೋ ಬಿಡುಗಡೆ ಮಾಡಿದ್ದು, ಬೆಂಗಳೂರಿಗೆ (Bengaluru) ಬಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ (SIT) ಮುಂದೆ ಹಾಜರಾಗಿ ಉತ್ತರ ನೀಡುತ್ತೇನೆ. ಅಲ್ಲದೇ, ಜನರು ಹಾಗೂ ಕುಟುಂಬಸ್ಥರ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ನಾನು ವಿದೇಶಕ್ಕೆ ಹೋಗುವುದು ಮೊದಲೇ ನಿರ್ಧರಿತವಾಗಿತ್ತು. ನಾನು ವಿದೇಶಕ್ಕೆ ಹೋಗುವ ಸಂದರ್ಭದಲ್ಲಿ ಯಾವುದೇ ಆರೋಪ ನನ್ನ ಮೇಲೆ ಇರಲಿಲ್ಲ. ನಾನು ವಿದೇಶದಲ್ಲಿದ್ದಾಗ ಯ್ಯೂಟೂಬ್ ನ್ಯೂಸ್ ನೋಡಿ ನನ್ನ ಮೇಲೆ ಗಂಭೀರ ಆರೋಪ ಬಂದಿರುವುದು ತಿಳಿಯಿತು. ನನ್ನ ಮೇಲೆ ರಾಜಕೀಯ ಪಿತೂರಿ ನಡೆದಿದೆ. ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ಆರೋಪದಿಂದ ನಾನು ಖಿನ್ನತೆಗೆ ಜಾರಿದ್ದೆ. ನನ್ನ ಹೆಸರನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ.
ಎಸ್‌ಐಟಿ ನೋಟಿಸ್ ನೀಡಿದ ವಿಚಾರ ಗೊತ್ತಾಯಿತು. ನಾನು ರಾಜಕೀಯವಾಗಿ ಬೆಳೆಯಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾರೆ. ಹೀಗಾಗಿಯೇ ನಾನು ಮಾನಸಿಕವಾಗಿ ಖಿನ್ನತೆಯಿಂದ ಹೊರ ಬರುವುದಕ್ಕಾಗಿ ವಿದೇಶಕ್ಕೆ ಬಂದಿದ್ದೆ. ಈ ಸುಳ್ಳು ಪ್ರಕರಣದಿಂದ ನಾನು ಹೊರ ಬರುತ್ತೇನೆ. ಬಂದ ಮೇಲೆ ಎಲ್ಲರಿಗೂ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.