ಮೈಸೂರು : ರಾಜ್ಯದಲ್ಲಿ ಚುನಾವಣಾ ಅಖಾಡದ ಕಾವು ರಂಗೇರಿರುವ ಬೆನ್ನಲ್ಲೇ ಸಾಕಷ್ಟು ರಾಜಕೀಯ ಬೆಳವಣಿಗೆಗಳು ಕಂಡು ಬರ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವರುಣ ಕ್ಷೇತ್ರದಿಂದ ಪುತ್ರ ಬಿ.ವೈ ವಿಜಯೇಂದ್ರರನ್ನು ಕಣಕ್ಕಿಳಿಸೋದಾಗಿ ಹೇಳಿದ್ದರು. ಈ ಮೂಲಕ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಟಫ್ ಫೈಟ್ ಕೊಡೋದು ಬಿಜೆಪಿ ಪ್ಲಾನ್ ಆಗಿತ್ತು.

ಆದರೀಗ ವರುಣಾ ಕ್ಷೇತ್ರದ ಲೆಕ್ಕಾಚಾರ ಉಲ್ಟಾ ಆಗಿದ್ದು ಇಲ್ಲಿ ಹೊಂದಾಣಿಕೆಯ ರಾಜಕಾರಣ ನಡೀತಿದ್ಯಾ ಎಂಬ ಅನುಮಾನ ಮೂಡಿದೆ. ಸಿದ್ದರಾಮಯ್ಯರಿಗೆ ಯಡಿಯೂರಪ್ಪ ಸಹಾಯ ಮಾಡಲು ಮುಂದಾಗಿದ್ದಾರಾ ಎಂಬ ಪ್ರಶ್ನೆ ಎದುರಾಗಿದ್ದು ಈ ಮಾತಿಗೆ ಪುಷ್ಠಿ ಎಂಬಂತೆ ವರುಣ ಕ್ಷೇತ್ರದಲ್ಲಿ ಬಿ.ವೈ ವಿಜಯೇಂದ್ರ ಹೆಸರನ್ನು ಕೈ ಬಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವರುಣಾ ಕ್ಷೇತ್ರದಿಂದ ಮೂವರು ಟಿಕೆಟ್ ಆಕಾಂಕ್ಷಿಗಳ ಹೆಸರನ್ನು ರಾಜ್ಯ ಬಿಜೆಪಿ ಹೈಕಮಾಂಡ್ಗೆ ರವಾನೆ ಮಾಡಲಾಗಿದ್ದು ಈ ಮೂವರಲ್ಲಿ ವಿಜಯೇಂದ್ರ ಹೆಸರು ಇಲ್ಲ ಎನ್ನಲಾಗಿದೆ. ವರುಣದಲ್ಲಿ ಮಗನನ್ನು ಕಣಕ್ಕಿಳಿಸದೇ ಬೇರೆಯವರನ್ನು ಕಣಕ್ಕಿಳಿಸುವ ಮೂಲಕ ಯಡಿಯೂರಪ್ಪ ಸಿದ್ದರಾಮಯ್ಯ ಗೆಲುವಿಗೆ ಸಹಾಯ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೊಸ ಮುಖಕ್ಕೆ ಮಣೆ ಹಾಕಬೇಕೆಂಬ ಉದ್ದೇಶದಿಂದ ಸ್ಥಳೀಯ ಕಾರ್ಯಕರ್ತ ದೇವನೂರು ಪ್ರತಾಪ್, 2013ರಲ್ಲಿ ವರುಣಾದಿಂದ ಸ್ಪರ್ಧಿಸಿದ್ದ ಕಾ.ಪು ಸಿದ್ದಲಿಂಗಸ್ವಾಮಿ ಹಾಗೂ ಬಿಜೆಪಿ ಸ್ಥಳೀಯ ಸಂಘಟನಾ ಕಾರ್ಯಕರ್ತ ಸದಾನಂದ ಹೆಸರನ್ನು ಹೈಕಮಾಂಡ್ಗೆ ಕಳುಹಿಸಿ ಕೊಡಲಾಗಿದೆ. ಮೂವರಲ್ಲಿ ಯಾರಿಗೇ ಬಿಜೆಪಿಯಿಂದ ಟಿಕೆಟ್ ಸಿಕ್ಕರೂ ಸಿದ್ದರಾಮಯ್ಯ ಗೆಲುವು 100 ಪ್ರತಿಶತ ಖಚಿತ ಎಂದು ಆಂತರಿಕ ವರದಿ ಹೇಳಿದೆ.