ಬೆಂಗಳೂರು: ರಾಜಧಾನಿಯಲ್ಲೂ ಕಾವೇರಿ ಕಿಚ್ಚು ತೀವ್ರಗೊಂಡಿದ್ದು, ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೀಡಿರುವ ‘ಬೆಂಗಳೂರು ಬಂದ್’ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ರಾಜಧಾನಿ ಸ್ತಬ್ಧವಾಗುವುದು ಬಹುತೇಕ ನಿಶ್ಚಿತವಾಗಿದೆ. ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, 100 ಕ್ಕೂ ಹೆಚ್ಚು ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ. ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನೌಕರರ ಸಂಘ, ಓಲಾ, ಉಬರ್ ಚಾಲಕರು ಮತ್ತು ಮಾಲೀಕರ ಸಂಘ, ಯಶವಂತಪುರ ಎಪಿಎಂಸಿ ಮಾರುಕಟ್ಟೆ, ದಾಸನಪುರ ಮಾರುಕಟ್ಟೆ ಆಡಳಿತ ಮಂಡಳಿಯು ಬಂದ್ಗೆ ಬೆಂಬಲ ಘೋಷಿಸಿವೆ.
ಖಾಸಗಿ ಶಾಲೆಗಳ ಒಕ್ಕೂಟ ಸಹ ಬಂದ್ಗೆ ನೈತಿಕ ಬೆಂಬಲ ಸೂಚಿಸಿದ್ದು, ರಜೆ ಘೋಷಿಸುವ ವಿಚಾರವನ್ನು ಆಯಾ ಶಾಲೆಗಳಿಗೆ ಬಿಟ್ಟಿದೆ. ಖಾಸಗಿ ಸಾರಿಗೆ ಸಂಘಟನೆಗಳು, ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಶನ್, ಹೋಟೆಲ್ ಮಾಲೀಕರ ಸಂಘ ಸಹ ಬಂದ್ಗೆ ನೈತಿಕ ಬೆಂಬಲ ವ್ಯಕ್ತಪಡಿಸಿವೆ. ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಸ್, ಆಟೊ, ಕ್ಯಾಬ್, ಮಾರುಕಟ್ಟೆ ಸೇರಿದಂತೆ ಅಗತ್ಯ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಬಂದ್ನ ಭಾಗವಾಗಿ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ.