ಅದಾನಿ ಕಂಪನಿಯಲ್ಲಿ ಮಾಡಲಾದ ನಿಘೂಡ ಹೂಡಿಕೆಯ ಹಣವು ಸುರುಳಿಯಾಕಾರದ ಹಾದಿಯನ್ನು ಅನುಸರಿಸಿದ್ದು ಅದನ್ನು ಕಂಡುಹಿಡಿಯುವುದು ತುಂಬಾ ಕಷ್ಟಕರವಾಗಿದೆ. ಈ ಹೂಡಿಕೆಯನ್ನು ನಾಲ್ಕು ಕಂಪನಿಗಳು ಮತ್ತು ಗ್ಲೋಬಲ್ ಆಪರ್ಚುನಿಟೀಸ್ ಫಂಡ್ (GOF) ಎಂದು ಕರೆಯಲಾಗುವ ಬರ್ಮುಡಾ ಮೂಲದ ಹೂಡಿಕೆ ನಿಧಿಯ ಮೂಲಕ ಪ್ರಸಾರ ಮಾಡಲಾಯಿತು. ಈ ತನಿಖಾ ತಂಡದ ವರದಿಗಾರರು ಪಡೆದ ದಾಖಲೆಗಳ ಪ್ರಕಾರ, EIFF ಮತ್ತು EMRF ಪದೇ ಪದೇ ಅದಾನಿ ಸ್ಟಾಕ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡಿದ್ದರಿಂದ ಈ ಹೂಡಿಕೆಗಳು ಗಮನಾರ್ಹ ಲಾಭಗಳನ್ನು ಗಳಿಸಿವೆ. ಅವುಗಳ ನಡುವೆ, ಜೂನ್ ೨೦೧೬ ರಲ್ಲಿ ತಮ್ಮ ಹೂಡಿಕೆಯ ಉತ್ತುಂಗದಲ್ಲಿ, ಎರಡು ನಿಧಿಗಳು ೮ ರಿಂದ ಸುಮಾರು ೧೪ ಪ್ರತಿಶತದವರೆಗಿನ ನಾಲ್ಕು ಅದಾನಿ ಗ್ರೂಪ್ ಕಂಪನಿಗಳಾದ ಅದಾನಿ ಪವರ್, ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ಅದಾನಿ ಟ್ರಾನ್ಸ್‌ಮಿಷನ್ಸ್ ಗಳು ಫ್ರೀ-ಫ್ಲೋಟಿಂಗ್ ಷೇರುಗಳನ್ನು ಹೊಂದಿದ್ದವು ಎನ್ನುತ್ತವೆ ವರದಿಗಳು.
ಅದಾನಿ ಕುಟುಂಬದೊಂದಿಗೆ ಚಾಂಗ್ ಮತ್ತು ಅಹ್ಲಿಯ ಸಂಪರ್ಕಗಳು ವ್ಯಾಪಕವಾಗಿ ಕೇಳಿಬಂದಿವೆ. ಅದಾನಿ ಗ್ರೂಪ್ ಮಾಡಿದ ತಪ್ಪಿಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಸರ್ಕಾರಿ ತನಿಖೆಗಳಲ್ಲಿ ಇವರಿಬ್ಬರು ಅದಾನಿ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದಾರೆ. ಆದರೆ ಈ ಎರಡೂ ಪ್ರಕರಣಗಳು ಅಂತಿಮವಾಗಿ ವಜಾಗೊಂಡಿವೆ. ಮೊದಲ ಪ್ರಕರಣವು ಹಣಕಾಸು ಸಚಿವಾಲಯದ ಅಡಿಯಲ್ಲಿ ಭಾರತದ ಪ್ರಧಾನ ತನಿಖಾ ಸಂಸ್ಥೆಯಾದ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ನಿಂದ ೨೦೦೭ ರ ಅಕ್ರಮ ವಜ್ರದ ವ್ಯಾಪಾರ ಯೋಜನೆಯ ತನಿಖೆ ಮಾಡಿತ್ತು. DRI ವರದಿಯು ಚಾಂಗ್ ಅವರು ಯೋಜನೆಯಲ್ಲಿ ಭಾಗಿಯಾಗಿರುವ ಮೂರು ಅದಾನಿ ಕಂಪನಿಗಳ ನಿರ್ದೇಶಕರಾಗಿದ್ದರು ಎಂದಿದೆ. ಆದರೆ ಅಹ್ಲಿ ಸಹ ಈ ವ್ಯಾಪಾರ ಸಂಸ್ಥೆಯನ್ನು ಪ್ರತಿನಿಧಿಸಿದ್ದರು. ಪ್ರಕರಣದ ಭಾಗವಾಗಿ, ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಹಿರಿಯ ಸಹೋದರ ವಿನೋದ್ ಅದಾನಿ ಅವರೊಂದಿಗೆ ಚಾಂಗ್ ಸಿಂಗಾಪುರ ನಿವಾಸದ ವಿಳಾಸವನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಎರಡನೆಯ ಪ್ರಕರಣವು ಪ್ರತ್ಯೇಕವಾಗಿ ೨೦೧೪ DRI ತನಿಖೆಯಲ್ಲಿ ಬಹಿರಂಗವಾದ ಓವರ್-ಇನ್ವಾಯ್ಸಿಂಗ್ ಹಗರಣವಾಗಿದೆ. ಅದಾನಿ ಗ್ರೂಪ್ ಕಂಪನಿಗಳು ತಮ್ಮ ಸ್ವಂತ ವಿದೇಶಿ ಅಂಗಸಂಸ್ಥೆಗೆ ಆಮದು ಮಾಡಿಕೊಂಡ ವಿದ್ಯುತ್ ಉತ್ಪಾದನಾ ಉಪಕರಣಗಳಿಗಾಗಿ $೧ ಬಿಲಿಯನ್‌ಗಳಷ್ಟು ಹೆಚ್ಚು ಪಾವತಿಸುವ ಮೂಲಕ ಅಕ್ರಮವಾಗಿ ಹಣವನ್ನು ಭಾರತದಿಂದ ಹೊರಹಾಕುತ್ತಿವೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿತ್ತು. ಇಲ್ಲಿಯೂ ಚಾಂಗ್ ಮತ್ತು ಅಹ್ಲಿಯ ಹೆಸರುಗಳು ಕಾಣಿಸಿಕೊಂಡಿದ್ದವು. ಪ್ರತ್ಯೇಕ ಸಮಯಗಳಲ್ಲಿ, ಈ ಇಬ್ಬರು ವ್ಯಕ್ತಿಗಳು ನಂತರ ವಿನೋದ್ ಅದಾನಿ ಒಡೆತನದ ಎರಡು ಕಂಪನಿಗಳ ನಿರ್ದೇಶಕರಾಗಿದ್ದರು, ಅವರು ಈ ಯೋಜನೆಯಿಂದ ಒಬ್ಬರು ಯುಎಇ ಮತ್ತು ಇನ್ನೊಬ್ಬರು ಮಾರಿಷಸ್‌ನಲ್ಲಿ ಕುಳಿತು ಆದಾಯವನ್ನು ನಿರ್ವಹಿಸಿದರು. ಹಿಂಡೆನ್‌ಬರ್ಗ್ ವರದಿಯ ಪ್ರಕಾರ, ಅದಾನಿ ಕಂಪನಿಯೊಂದು ಬಹಿರಂಗಪಡಿಸಿದ ಮಾಹಿತಿಯನುಸಾರ “ಸಂಬಂಧಿತ ಪಕ್ಷ” ಎಂದು ಪಟ್ಟಿ ಮಾಡಲಾದ ಸಿಂಗಾಪುರ್ ಕಂಪನಿಯಲ್ಲಿ ಚಾಂಗ್ ಸಹ ನಿರ್ದೇಶಕ ಅಥವಾ ಷೇರುದಾರರಾಗಿದ್ದರು ಎನ್ನುತ್ತವೆ ವರದಿಗಳು.
ಅದಾನಿಯ ಜೊತೆಗೆ ಈ ಹಿಂದಿನ ಸಂಪರ್ಕದ ಹೊರತಾಗಿ, ಅದಾನಿ ಸ್ಟಾಕ್‌ನಲ್ಲಿ ಚಾಂಗ್ ಮತ್ತು ಅಹ್ಲಿಯ ವ್ಯಾಪಾರವು ಅದಾನಿ ಕುಟುಂಬದೊಂದಿಗೆ ಸಂಘಟಿತವಾಗಿದೆ ಎಂಬುದಕ್ಕೆ ಅನೇಕ ಪುರಾವೆಗಳಿವೆಯಂತೆ. ತಮ್ಮ ಬಂಡವಾಳದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೆಸರಿಸಲಾಗದ ಅದಾನಿ ಗ್ರೂಪ್‌ನ ವ್ಯವಹಾರದೊಂದಿಗೆ ಪರಿಚಿತವಾಗಿರುವ ಮೂಲದ ಪ್ರಕಾರ, ಇಐಎಫ್‌ಎಫ್ ಮತ್ತು ಇಎಂಆರ್‌ಎಫ್‌ನಲ್ಲಿ ಚಾಂಗ್ ಮತ್ತು ಅಹ್ಲಿಯ ಹೂಡಿಕೆಗಳ ಉಸ್ತುವಾರಿ ನಿಧಿಯ ವ್ಯವಸ್ಥಾಪಕರು ಅದಾನಿ ಕಂಪನಿಯಿಂದ ಹೂಡಿಕೆಗಳ ಕುರಿತು ನೇರ ಸೂಚನೆಗಳನ್ನು ಪಡೆದಿದ್ದರಂತೆ. ಎಕ್ಸೆಲ್ ಇನ್ವೆಸ್ಟ್‌ಮೆಂಟ್ ಮತ್ತು ಅಡ್ವೈಸರಿ ಸರ್ವೀಸಸ್ ಲಿಮಿಟೆಡ್ ಎಂದು ಹೆಸರಿಸಲಾದ ರಹಸ್ಯ ಕಡಲಾಚೆಯ ಕಂಪನಿಯು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಕಾರ್ಪೊರೇಟ್ ಕುರಿತ ದಾಖಲೆಗಳು ಲಭ್ಯವಿಲ್ಲ ಎಂದಿದೆಯಂತೆ. ಆದಾಗ್ಯೂ, ವರದಿಗಾರರು ಪಡೆದ ದಾಖಲೆಗಳು ಖಾತೆಯ ಮೂಲವನ್ನು ದೃಢೀಕರಿಸುತ್ತವೆ ಎನ್ನುತ್ತವೆ ಸುದ್ದಿ ಮೂಲಗಳು.
EIFF ಮತ್ತು EMRF ಗೆ ಸಲಹಾ ಸೇವೆಗಳನ್ನು ಒದಗಿಸಲು ಎಕ್ಸೆಲ್ ಗಾಗಿ ಒಪ್ಪಂದವನ್ನು ೨೦೧೧ ರಲ್ಲಿ ವಿನೋದ್ ಅದಾನಿ ಸ್ವತಃ ಎಕ್ಸೆಲ್ ಗಾಗಿ ಸಹಿ ಹಾಕಿದ್ದರು. ಇತ್ತೀಚಿಗೆ ೨೦೧೫ ರಲ್ಲಿ, ಎಕ್ಸೆಲ್ ಕಂಪನಿಯು ಅಸೆಂಟ್ ಟ್ರೇಡ್ & ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಒಡೆತನದಲ್ಲಿದ್ದು, ಇದು ೨೦೧೬ ರ ಇಮೇಲ್ ಪ್ರಕಾರ ವಿನೋದ್ ಅದಾನಿ ಮತ್ತು ಅವರ ಪತ್ನಿಯ ಮಾಲೀಕತ್ವದಲ್ಲಿದೆ. ಅಸೆಂಟ್ ಕಂಪನಿ ನೋಂದಣಿಯಾಗಿರುವ ಮಾರಿಷಸ್‌ನ ಪ್ರಸ್ತುತ ಕಾರ್ಪೊರೇಟ್ ದಾಖಲೆಗಳು ಕಂಪನಿಯ ಮಾಲಿಕರು ಯಾರು ಎನ್ನುವುದನ್ನು ಹೇಳದಿದ್ದರೂ, ವಿನೋದ್ ಅದಾನಿ ಅದರ ನಿರ್ದೇಶಕ ಮಂಡಳಿಯಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದೆಯಂತೆ. EIFF, EMRF ಮತ್ತು ಬರ್ಮುಡಾ ಮೂಲದ GOF ನ ನಿರ್ವಹಣಾ ಕಂಪನಿಗಳು ಜೂನ್ ೨೦೧೨ ಮತ್ತು ಆಗಸ್ಟ್ ೨೦೧೪ ರ ನಡುವೆ ಎಕ್ಸೆಲ್‌ಗೆ $ ೧.೪ ಮಿಲಿಯನ್‌ಗಿಂತಲೂ ಹೆಚ್ಚು “ಸಲಹಾ” ಶುಲ್ಕವನ್ನು ಪಾವತಿಸಿವೆ ಎಂದು ಇನ್‌ವಾಯ್ಸ್‌ಗಳು ಮತ್ತು ವಹಿವಾಟು ದಾಖಲೆಗಳು ತೋರಿಸುತ್ತವೆ ಎಂದು ತನಿಖಾ ವರದಿಗಳು ಅತ್ಯಂತ ಸ್ಪಷ್ಟವಾಗಿ ಉಲ್ಲೇಖಿಸಿವೆ.
ಮುಂಬರುವ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ, ಎಕ್ಸೆಲ್‌ನ ಹೂಡಿಕೆ ಸಲಹೆಯನ್ನು ಸಮರ್ಥಿಸಲು ಸಾಕಷ್ಟು ದಾಖಲೆಗಳನ್ನು ಹೊಂದಿಲ್ಲ ಎಂದು ನಿಧಿ ವ್ಯವಸ್ಥಾಪಕರು ಕಳವಳ ವ್ಯಕ್ತಪಡಿಸಿದ್ದಾರೆ ಎನ್ನುವ ಸಂಗತಿ ಆಂತರಿಕ ಇಮೇಲ್ ವಿನಿಮಯದಿಂದ ಬಹಿರಂಗಗೊಂಡಿದೆಯಂತೆ. ಅಂತಹ ಒಂದು ಇಮೇಲ್‌ನಲ್ಲಿ, ಹೂಡಿಕೆಯ ಹಿಂದಿನ ತಾರ್ಕಿಕತೆಯನ್ನು ಸಮರ್ಥಿಸುವ ದಾಖಲೆಗಳನ್ನು ಕೃತಕವಾಗಿ ಸೃಷ್ಟಿಸುವಂತೆ ಕಂಪನಿಯ ವ್ಯವಸ್ಥಾಪಕರು ತನ್ನ ಉದ್ಯೋಗಿಗಳಿಗೆ ಸೂಚಿಸಿದ ವಿಷಯ ಗೊತ್ತಾಗಿದೆ. ಮತ್ತೊಂದರಲ್ಲಿ, ಎಕ್ಸೆಲ್‌ನಿಂದ ವರದಿಯನ್ನು ಪಡೆಯುವಂತೆ ವಿನಂತಿಸುತ್ತಾರೆ. ಆ ವರದಿಯು ನಿಧಿಯು ಹೂಡಿಕೆ ಮಾಡಿದ ಸೆಕ್ಯುರಿಟಿಗಳ ಸಂಖ್ಯೆಗಿಂತ ಹೆಚ್ಚಿನ ಹೂಡಿಕೆಯನ್ನು ಶಿಫಾರಸು ಮಾಡಬೇಕು, ಇದರಿಂದಾಗಿ ಹೂಡಿಕೆ ವ್ಯವಸ್ಥಾಪಕರು ತಮ್ಮ ಹೂಡಿಕೆಗಳ ಆಯ್ಕೆಯಲ್ಲಿ ವಿವೇಚನೆಯನ್ನು ಬಳಸಿದ್ದಾರೆ ಎಂಬುದನ್ನು ಪ್ರದರ್ಶಿಸಬಹುದು ಎಂಬುದು ಕಂಪನಿಯ ಉದ್ದೇಶವಾಗಿರುವ ಬಗ್ಗೆ ಈ ತನಿಖಾ ವರದಿಗಳು ಬಹಿರಂಗಪಡಿಸಿವೆ.
ಅದಾನಿ ಗ್ರೂಪ್ ನಲ್ಲಿನ ಹೂಡಿಕೆಗಾಗಿ ಚಾಂಗ್ ಮತ್ತು ಅಹ್ಲಿಯವರ ಹಣವು ಅದಾನಿ ಕುಟುಂಬದಿಂದ ಬಂದಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಹಾಗು ಆ ನಿಧಿಯ ಮೂಲ ತಿಳಿದಿಲ್ಲ. ಆದರೆ OCCRP ಗೆ ದೊರೆತ ದಾಖಲೆಗಳು ವಿನೋದ್ ಅದಾನಿ ಅದೇ ಮಾರಿಷಸ್ ನಿಧಿಗಳಲ್ಲಿ ಒಂದನ್ನು ಸ್ವಂತ ಹೂಡಿಕೆ ಮಾಡಲು ಬಳಸಿದ್ದಾರಂತೆ. ೨೦೧೪ ರಲ್ಲಿ DRI ಗೆ SEBI ಬರೆದಿರುವ ಪತ್ರವು ಈ ತನಿಖೆಯ ವರದಿಗಾರರಿಗೆ ದೊರೆತ್ತಿದ್ದು, ಅದರಲ್ಲಿ DRI ತಾನು ತನಿಖೆ ನಡೆಸುತ್ತಿರುವ ಆಪಾದಿತ ಓವರ್-ಇನ್‌ವಾಯ್ಸಿಂಗ್ ಯೋಜನೆಯಿಂದ ಹಣವನ್ನು ಮಾರಿಷಸ್‌ಗೆ ಕಳುಹಿಸಲಾಗಿದೆ ಎಂಬುದಕ್ಕೆ ಪುರಾವೆಗಳಿವೆ ಎಂದು ಹೇಳಿದೆಯಂತೆ. ಅಂದರೆ ಇಲ್ಲಿ ಹಣವು ಸೋರಿಕೆಯಾಗಿದೆ. ಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಮತ್ತು ಹಿಂತೆಗೆದುಕೊಳ್ಳುವಿಕೆಯಾಗಿ ಭಾರತದಲ್ಲಿನ ಷೇರು ಮಾರುಕಟ್ಟೆಗಳಿಗೆ ಸೋರಿಹೋದ ಹಣದ ಒಂದು ಭಾಗವು ದಾರಿ ಕಂಡುಕೊಂಡಿರಬಹುದು ಎಂಬ ಸೂಚನೆಗಳಿವೆ ಎಂದು ಡಿಆರ್‌ಐನ ಆಗಿನ ಮಹಾನಿರ್ದೇಶಕ ನಜೀಬ್ ಶಾ ಪತ್ರದಲ್ಲಿ ಬರೆದಿದ್ದಾರೆನ್ನುತ್ತವೆ ವರದಿಗಳು.
DRI ಪ್ರಕರಣದ ಪ್ರಕಾರ, ಆಪಾದಿತ ಯೋಜನೆಯಿಂದ ಹಣವನ್ನು ಎಲೆಕ್ಟ್ರೋಜೆನ್ ಇನ್ಫ್ರಾ ಎಫ್ ಝೆಡ್ ಇ ಎಂಬ ಎಮಿರಾಟಿ ಕಂಪನಿಗೆ ಕಳುಹಿಸಲಾಗಿದೆ. ಈ ಕಂಪನಿಯು ನಂತರ ಸುಮಾರು $ ೧ ಶತಕೋಟಿ ಮೊತ್ತದ ಆದಾಯವನ್ನು ಮಾರಿಷಸ್ ಮೂಲದ ಹೋಲ್ಡಿಂಗ್ ಕಂಪನಿಗೆ ರವಾನಿಸಿದೆ, ಅಂತಿಮವಾಗಿ ಅದೇ ಹೆಸರಿನ ಎಲೆಕ್ಟ್ರೋಜನ್ ಇನ್ಫ್ರಾ ಹೋಲ್ಡಿಂಗ್ ಪ್ರೈ. ಲಿಮಿಟೆಡ್ ನ ಮಾಲಿಕರು ವಿನೋದ್ ಅದಾನಿ ಎನ್ನುತ್ತವೆ ವರದಿಗಳು. ಈ ನಿಧಿಯ $ ೧೦೦ ಮಿಲಿಯನ್‌ಗಿಂತಲೂ ಹೆಚ್ಚಿನ ಹರಿವನ್ನು ವರದಿಗಾರರು ಪತ್ತೆಹಚ್ಚಲು ಸಾಧ್ಯವಾಗಿದೆಯಂತೆ. ಮಾರಿಷಸ್ ಕಂಪನಿಯು ವಿನೋದ್ ಅದಾನಿಯ ಮತ್ತೊಂದು ಕಂಪನಿಯಾದ ಅಸೆಂಟ್ ಟ್ರೇಡ್ & ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ಗೆ ಏಷ್ಯನ್ ಇಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹಣವನ್ನು ಸಾಲವಾಗಿ ನೀಡಿದ ಬಗ್ಗೆ ದಾಖಲೆಗಳಿವೆ ಎನ್ನುತ್ತವೆ ವರದಿಗಳು. ಇದೆಲ್ಲವನ್ನು ಗಮನಿಸಿದಾಗ ಅದಾನಿ ಕಂಪನಿ ಮಾಡಿರುವ ಬೃಹತ್ ಆರ್ಥಿಕ ಹಗರಣದ ವಿಶ್ವರೂಪ ಬಯಲಾದಂತಾಗಿದೆ.
ಎಲೆಕ್ಟ್ರೋಜನ್ ಇನ್ಫ್ರಾ ಹೋಲ್ಡಿಂಗ್ ಮತ್ತು ಅಸೆಂಟ್ ಎರಡರ ಲಾಭದಾಯಕ ಮಾಲೀಕರಾಗಿ, ವಿನೋದ್ ಅದಾನಿ ಅವರು ಸಾಲದಾತರಾಗಿ ಮತ್ತು ಸಾಲಗಾರರಾಗಿ ಸಾಲದ ದಾಖಲೆಗೆ ಸಹಿ ಮಾಡಿದ್ದಾರಂತೆ. ಅಂತಿಮವಾಗಿ, ಹಣವನ್ನು ಚಾಂಗ್ ಮತ್ತು ಅಹ್ಲಿ ಬಳಸಿದ ಅದೇ ಮಧ್ಯವರ್ತಿಯಾದ GOF ನಲ್ಲಿ ಇರಿಸಲಾಯಿತು ಮತ್ತು ನಂತರ EIFF ಮತ್ತು ಏಷ್ಯಾ ವಿಷನ್ ಫಂಡ್ ಎರಡರಲ್ಲೂ ಹೂಡಿಕೆ ಮಾಡಲಾಗಿದ್ದು ಇದು ಮತ್ತೊಂದು ಮಾರಿಷಸ್ ಮೂಲದ ಹೂಡಿಕೆ ವಾಹನವಾಗಿದೆ. ೨೦೧೪ ರಲ್ಲಿ ತನಗೆ ಬಂದ ಪತ್ರದ ಬಗ್ಗೆ ಪ್ರತಿಕ್ರಿಯಿಸಲು ಈ ತನಿಖಾ ವರದಿಗಾರರು ವಿನಂತಿದಾಗ ಸೆಬಿ ಪ್ರತಿಕ್ರಿಯಿಸಲಿಲ್ಲವಂತೆ. ಈ ವರ್ಷದ ಹಿಂಡೆನ್‌ಬರ್ಗ್ ಆರೋಪಗಳ ಹಿನ್ನೆಲೆಯಲ್ಲಿ, ತಾನು ನೇಮಿಸಿದ ತಜ್ಞರ ಸಮಿತಿಯ ಜೊತೆಗೆ, ಭಾರತದ ಸರ್ವೋಚ್ಚ ನ್ಯಾಯಾಲಯವು ತನಿಖೆಗೆ SEBI ಗೆ ನಿರ್ದೇಶನ ನೀಡಿದೆಯಂತೆ. ಅದರ ವರದಿ ಮುಂದಿನ ತಿಂಗಳು ಬರಲಿದೆ ಎನ್ನುತ್ತದೆ ಈ ಸುದ್ದಿಯ ಮೂಲಗಳು. ಮೋದಿ ಪ್ರಧಾನಿಯಾಗಿದ್ದಕ್ಕೆ ಅಚ್ಛೆ ದಿನ ಯಾರಿಗೆ ಬಂದಿವೆ ಎನ್ನುವುದು ತಮಗೆಲ್ಲ ಅರ್ಥವಾಯಿತೆ?
~ಡಾ. ಜೆ ಎಸ್ ಪಾಟೀಲ.