ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ಫೆಬ್ರವರಿ 19ರಂದು ಸಿಟಿ ರವಿ ಬಾಡೂಟ ಸೇವನೆ ಮಾಡಿದ್ದರು. ಆ ಬಳಿಕ ಭಟ್ಕಳ ನಗರದ ಕರಿಬಂಟ ಹನುಮನ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ ಅನ್ನೋದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಮಾತ್ರ ನಾನು ನಾನ್ವೆಜ್ ತಿನ್ನುವ ಜಾತಿಯಲ್ಲೇ ಹುಟ್ಟಿದ್ದೀನಿ. ನಾನು ದೇವಸ್ಥಾನದ ಒಳಕ್ಕೆ ಹೋಗಿಲ್ಲ. ದೇವಸ್ಥಾನದ ಬಾಗಿಲು ಹಾಕಿತ್ತು. ನಾನು ಹೊರಗಿನಿಂದಲೇ ಕೈ ಮುಗಿದು ಅಲ್ಲಿಂದ ಬಂದಿದ್ದೇನೆ. ಕೆಲವು ದೇವರಿಗೆ ವ್ರತ ಮಾಡಿಕೊಂಡು ಪೂಜೆ ಮಾಡಬೇಕು. ಇನ್ನು ಕೆಲವು ದೇವರಿಗೆ ಮಾಂಸಹಾರವೇ ನೈವೇದ್ಯ ಆಗಿರುತ್ತದೆ. ಕಾಂಗ್ರೆಸ್ನವರಿಗೆ ಇದು ಅರ್ಥ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ, ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿರುವ ವಿಚಾರ ದೊಡ್ಡ ಚರ್ಚೆಯ ವಿಚಾರ ಅಲ್ಲ. ನಾನು ಅದಕ್ಕೆಲ್ಲಾ ಹೆಚ್ಚಿನ ಮಾನ್ಯತೆ ಕೊಡಲ್ಲ ಎಂದಿದ್ದರು. ಆದರೆ ಆ ಬಳಿಕ ಬಿಡುಗಡೆ ಆದ ವೀಡಿಯೋ ಮತ್ತಷ್ಟು ಕಿಚ್ಚು ಹೊತ್ತಿಸಿತ್ತು. ಸಿದ್ದರಾಮಯ್ಯ ಯೂ ಟರ್ನ್ ಹೊಡೆಯುವಂತೆಯೂ ಮಾಡಿತ್ತು.
2ನೇ ದಿನವೂ ಸುಳ್ಳು ಹೇಳಿ ಮುಗ್ಗರಿಸಿದ ಬಿಜೆಪಿ ನಾಯಕ..!
ನಾನ್ ವೆಜ್ ತಿಂದದ್ದು ಸತ್ಯ , ದೇವಸ್ಥಾನಕ್ಕೆ ಹೋಗಿಲ್ಲ, ದೇವಾಲಯದ ರಸ್ತೆಯಲ್ಲಿ ನಿಂತು ಕೈಮುಗಿದಿದ್ದೇನೆ ಎಂದು BJP ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ರು. ಸುಳ್ಳು ಹೇಳೋದು ನನ್ನ ಜಾಯಮಾನವಲ್ಲ, ಅದು ಕಾಂಗ್ರೆಸ್ನವರದ್ದು, ಮಾಂಸಾಹಾರವನ್ನು ನೈವೇದ್ಯ ಇಡುವ ದೇವಾಲಯಗಳು ಇವೆ . ಇದು ಕಾಂಗ್ರೆಸ್ನವರಿಗೆ ಅರ್ಥ ಆಗದಿರುವುದು ದುರ್ದೈವ. ಎದೆ ಬಗೆದು ತೋರಿಸಲು ನಾನು ಹನುಮಂತ ಅಲ್ಲ ಎಂದು ಸಿ.ಟಿ.ರವಿ ಮಾತನಾಡಿದ್ರು. ಅದಾದ ಕೆಲವೇ ಗಂಟೆಗಳಲ್ಲಿ ಸಿ.ಟಿ ರವಿ ಗರ್ಭಗುಡಿ ಎದುರು ನಿಂತು ಕೈ ಮುಗಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣವನ್ನು ತಲುಪಿತ್ತು. ಮಾಂಸಹಾರ ಮಾಡಿ ದೇವಸ್ಥಾನಕ್ಕೆ ಹೋಗುವುದು, ದೇವಸ್ಥಾನಕ್ಕೆ ಹೋಗದಿರುವುದು, ಮಾಂಶ ತಿನ್ನುವುದು ತಿನ್ನದೆ ಇರುವುದು. ಇದೆಲ್ಲಾ ವಿವಾದಗಳೇ ಅಲ್ಲ ಎಂದಿದ್ದ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ರು. ಸಿಟಿ ರವಿ ಬಗ್ಗೆ ಆಕ್ರೋಶ ಹೊರಹಾಕಿದ್ರು. ಅದರ ಜೊತೆಗೆ ಮಠಾಧೀಶರ ಮೌನವನ್ನೂ ಪ್ರಶ್ನಿಸಿದ್ರು.

ಸಿದ್ದರಾಮಯ್ಯ ಮಾಡಿದ್ರೆ ತಪ್ಪು ಸಿ.ಟಿ ರವಿ ಮಾಡಿದ್ರೆ ಸರೀನಾ..!?
ಮಾಂಸ ತಿನ್ನುವುದು ತಿನ್ನದಿರುವುದು, ದೇವಸ್ಥಾನಗಳಿಗೆ ಹೋಗುವುದು ಹೋಗದಿರುವುದು ವೈಯಕ್ತಿಕ ಆಯ್ಕೆಗಳು. ಇದು ರಾಜಕೀಯ ಚರ್ಚೆಯ ವಸ್ತು ಆಗಬಾರದು. ಜನತೆಯ ಕಲ್ಯಾಣ, ರಾಜ್ಯದ ಅಭಿವೃದ್ದಿ ಬಗ್ಗೆ ಚರ್ಚಿಸಬೇಕು. ಸದಾಕಾಲ ಪರರದೂಷಣೆ ಮಾಡುವ ಸಿ.ಟಿ ರವಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ. ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿರುವ ವಿಡಿಯೋ ಜಗತ್ತಿಗೆಲ್ಲ ಸತ್ಯ ಸಾರುತ್ತಿರುವಾಗ ತಾನು ತಿಂದದ್ದು ನಿಜ, ದೇವಸ್ಥಾನದ ಒಳಪ್ರವೇಶಿಸಿಲ್ಲ, ರಸ್ತೆಯಲ್ಲಿಯೇ ಕೈಮುಗಿದಿದ್ದೆ’’ ಎನ್ನುವ ಸಿ.ಟಿ ರವಿ ಅವರ ವಾದ, ಸದಾ ಹಸಿಹಸಿ ಸುಳ್ಳು ಹೇಳುವ ಅವರ ಹುಟ್ಟು ಗುಣಕ್ಕೆ ತಕ್ಕ ಹಾಗೆ ಇದೆ. ನಾನು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎನ್ನುವ ಸುಳ್ಳು ಸುದ್ದಿಯನ್ನೇ ಪ್ರಚಾರ ಮಾಡಿ ನನ್ನನ್ನು ಹಿಂದೂ ವಿರೋಧಿ ಎಂದು ಬಿಜೆಪಿ ನಾಯಕರು ಅಪಪ್ರಚಾರ ಮಾಡಿದ್ದರು. ಅಪಪ್ರಚಾರ ಮಾಡಿದವರೆಲ್ಲರೂ ಈಗ ಸಿ.ಟಿ ರವಿ ಕೃತ್ಯದಿಂದ ತಾವು ಮಾಡಿದ್ದ ವಾಂತಿಯನ್ನು ತಾವೇ ತಿನ್ನುವಂತಾಗಿದೆ ಎಂದು ವ್ಯಂಗ್ಯವಾಡಿದ್ದರು. ಜೊತೆಗೆ ಬಿಜೆಪಿ ನಾಯಕರ ಸುಳ್ಳು ಸುದ್ದಿಯನ್ನು ನಂಬಿ, ನನ್ನನ್ನು ಟೀಕಿಸಿದ್ದ ರಾಜ್ಯದ ಕೆಲವು ಮಠಾಧೀಶರು, ಸಿ.ಟಿ.ರವಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿರುವ ಬಗ್ಗೆ ಮೌನವಾಗಿರುವುದು ನನಗೆ ಅಚ್ಚರಿ ಉಂಟುಮಾಡಿದೆ ಎಂದು ಮಠಾಧೀಶರಿಗೂ ಕುಟುಕಿದರು.
ದೈವ ನಂಬಿಕೆ, ಆಚರಣೆ, ಅಪಮಾನ ಪಕ್ಷದಿಂದ ಪಕ್ಷಕ್ಕೆ ಬದಲಾಗುತ್ತಾ..?
ಬಾಡೂಟದ ಬಗ್ಗೆ ಸಿದ್ದರಾಮಯ್ಯಗೆ ತಕರಾರು ಇಲ್ಲ. ಮಠಾಧೀಶರ ಮೌನದ ಬಗ್ಗೆ ಪ್ರಶ್ನೆ ಉದ್ಬವವಾಗಿದೆ. ಬಿಜೆಪಿ ನಾಯಕರು ಸಿ.ಟಿ ರವಿಯನ್ನು ಸಮರ್ಥನೆ ಮಾಡಿಕೊಲ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಮಾತ್ರ ಸಿಟಿ ರವಿಗೆ ಚಾಟಿ ಬೀಸಿದ್ದಾರೆ. ಸಿಟಿ ರವಿ ಮಾಂಸ ತಿಂದು ದೇವಾಲಯದ ಪ್ರವೇಶ ಮಾಡಿರುವ ವಿಚಾರ, ಬಿಜೆಪಿಯವರು ಎರಡು ನಾಲಿಗೆಯವರು ಎಂದು ಇಲ್ಲಿ ಸ್ಪಷ್ಟವಾಗುತ್ತದೆ. ಸಿದ್ದರಾಮಯ್ಯನವರ ವಿಚಾರದಲ್ಲಿ ಇಡೀ ಬಿಜೆಪಿಯವರೇ ಮುಗಿ ಬಿದ್ರು, ನಾನು ಮಾಂಸ ತಿಂದಿಲ್ಲ, ದೇವಾಲಯಕ್ಕೆ ಹೋಗಿದ್ದು ನಿಜ ಅಂತ ಸಿದ್ದರಾಮಯ್ಯ ಹೇಳಿದ್ರು. ನಾನು ಮಾಂಸ ತಿಂದಿದ್ರು ನೀವ್ಯಾರು ಕೇಳೋಕೆ ಅಂದಿದ್ರು. ಆಹಾರ ಪದ್ದತಿಗಳನ್ನ ಪ್ರಶ್ನಿಸೋ ಹಕ್ಕು ಸಂವಿಧಾನದಲ್ಲಿ ಇಲ್ಲ. ಇದೀಗ ಸಿಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ.
ಇದು ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ. ಬಾಗಿಲು ಮುಚ್ಚಿತ್ತು, ಹೊರಗಡೆಯಿಂದ ನೋಡ್ಕೊಂಡು ಬಂದೊ ಅಂತ ಹೇಳಿದ್ರು. ನೀವು ಮಾಡಿದಾಗ ಎಲ್ಲವೂ ಸರಿಯಾಗಿರುತ್ತೆ. ಆದ್ರೆ ಬೇರೆಯವರು ಮಾಡಿದ್ರೆ ಹಿಂದೂ ಧರ್ಮ ವಿರೋದಿ ಅಂತೀರಲ್ಲಾ..? ಅಂತಾ ಕಿಡಿಕಾರಿದ್ರು. ಒಟ್ಟಿನಲ್ಲಿ ಸಿಟಿ ರವಿ ಮೊದಲಿಗೆ ಸುಳ್ಳು ಹೇಳಿ ಅದನ್ನೇ ಸಾಧಿಸಲು ಸುಳ್ಳಿನ ಮೇಲೊಂದು ಸುಳ್ಳು ಹೇಳುವ ಮೂಲಕ ಸಿಕ್ಕಿಬಿದ್ದಿದ್ದಂತು ಸತ್ಯ.
ಕೃಷ್ಣಮಣಿ











