ಕಳೆದ ಕೆಲವು ವರ್ಷಗಳಿಂದ, ಇಸ್ಲಾಮಿಕ್ ಸಮಾಜದಲ್ಲಿನ ಲಿಂಗ ಸಮಾನತೆಯ ಸಂಕೀರ್ಣತೆಯ ಬಗ್ಗೆ ಚರ್ಚೆಗಳು ಮುಸ್ಲಿಂ ಮಹಿಳೆಯರು ಹಿಜಾಬ್ನೊಂದಿಗೆ ಹೊಂದಿರುವ ಸಂಕೀರ್ಣ ಸಂಬಂಧದ ಬಗ್ಗೆಯೂ ಹಲವಾರು ವಾದಗಳನ್ನು ಹುಟ್ಟುಹಾಕಿದೆ. ಹಿಜಾಬ್ ಸಹ ಇತರ ಸಾರ್ಟೋರಿಯಲ್ ಗುರುತುಗಳಂತೆ, ರಾಜಕೀಯ ಮತ್ತು ಸಾಮಾಜಿಕ ಸಂದರ್ಭಗಳು ಬದಲಾದಂತೆ ಹೊಸ ಅರ್ಥಗಳನ್ನು ಪಡೆಯುತ್ತದೆ, ಆದರೂ ಅದನ್ನು ದಬ್ಬಾಳಿಕೆಯ ಸಾಧನದಂತೆ ಯುರೋಪ್ ಕೇಂದ್ರಿತ ಸಂಸ್ಕೃತಿಯು ಪ್ರತಿಪಾದಿಸುತ್ತಾ ಬಂದಿದೆ. ಭಾರತದಲ್ಲೂ, ಮುಸ್ಲಿಮೇತರ ಉದಾರವಾದಿಗಳ ಒಂದು ವಿಭಾಗವು ಹಿಜಾಬ್ ಅನ್ನು ಸಮುದಾಯವು ತಿರಸ್ಕರಿಸಬಹುದಾದ ಉಡುಪು ಎಂದೂ ಹಿಂದುತ್ವ ರಾಜಕೀಯವು ರಾಷ್ಟ್ರಕ್ಕೆ ನಿಷ್ಠೆಯನ್ನು ಪ್ರದರ್ಶಿಸಲು ಇಸ್ಲಾಮಿಸ್ಟ್ ಆಚರಣೆಯಾದ ಹಿಜಾಬನ್ನು ನಿರಾಕರಿಸಬೇಕು ಎಂದೂ ಬಯಸುತ್ತದೆ.
20 ನೇ ಶತಮಾನದ ಕೊನೆಯಿಂದ ಕೆಲವು ಮುಸ್ಲಿಂ ಸ್ತ್ರೀವಾದಿ ವಿದ್ವಾಂಸರು ಹಿಜಾಬ್ನ್ನು ವಿರೋಧಿಸುವ ಇಂತಹ ಪೌರಸ್ತ್ಯವಾದಿ, ಉದಾರವಾದಿ ಮತ್ತು ನವ-ರಾಷ್ಟ್ರೀಯವಾದಿಗಳ ವಿರುದ್ಧ ವಾದಿಸಿದ್ದಾರೆ. ಹೊಸ ಸ್ತ್ರೀವಾದಿ ಸಂಶೋಧನೆಯು ಹಿಜಾಬ್ನ ನಿರಂತರವಾಗಿ ಬದಲಾಗುತ್ತಿರುವ ಅರ್ಥಗಳನ್ನು ಪರಿಶೀಲಿಸುತ್ತದೆ ಮತ್ತು ಕೆಲವು ರೀತಿಯ ನೈತಿಕ, ಧರ್ಮನಿಷ್ಠ ಅಧಿಕಾರ, ರಾಜಕೀಯ ಧ್ವನಿ ಮತ್ತು ಸ್ವಾಯತ್ತತೆಯನ್ನು ಸಾಧಿಸಲು ಯುವ, ವಿದ್ಯಾವಂತ ಮತ್ತು ಉದ್ಯೋಗಸ್ಥ ಮುಸ್ಲಿಂ ಮಹಿಳೆಯರು ಹೆಡ್ ಸ್ಕಾರ್ಫ್ ಅನ್ನು ಹೇಗೆ ಅಳವಡಿಸಿಕೊಳ್ಳುತ್ತಾರೆ ಎಂಬುದನ್ನು ನೋಡುತ್ತದೆ.
ಕರ್ನಾಟಕದ ಆದೇಶಕ್ಕೆ ಪ್ರತಿಕ್ರಿಯೆಗಳು
ಕಳೆದ ತಿಂಗಳು ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಶಾಲೆಯ ಪ್ರವೇಶ ನಿರಾಕರಿಸಿದ ನಂತರ ರಾಜ್ಯದ ಇತರ ಸ್ಥಳಗಳಲ್ಲಿ, ಹಿಜಾಬ್ನ ಮೇಲೆ ಇದೇ ರೀತಿಯ ನಿಷೇಧವನ್ನು ಹೇರುವಂತೆ ಕಾಲೇಜು ಆಡಳಿತದ ಮೇಲೆ ಒತ್ತಡ ಹೇರಲು ಹಿಂದೂ ವಿದ್ಯಾರ್ಥಿಗಳು ಕೇಸರಿ ಸ್ಕಾರ್ಫ್ ಮತ್ತು ಪೇಟಗಳನ್ನು ಧರಿಸಲು ಪ್ರಾರಂಭಿಸಿದರು.
ಕೆಲವು ಕಾಲೇಜುಗಳಲ್ಲಿ ಕೇಸರು ಶಾಲು ಧರಿಸಿ ಮಹಿಳಾ ವಿದ್ಯಾರ್ಥಿಗಳನ್ನು ಬೆದರಿಸುವ ಗುಂಪುಗಳ ವಿಡಿಯೋ ದೃಶ್ಯಾವಳಿಗಳು ಪ್ರಪಂಚದಾದ್ಯಂತ ದೊಡ್ಡ ಕೋಲಾಹಲವನ್ನು ಸೃಷ್ಟಿಸಿದವು. ಇಂತಹ ಘಟನೆಗಳು ಭಾರತದಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಕ್ನ್ನು ಸೂಚಿಸುತ್ತದೆ ಎಂದು ಚೋಮ್ಸ್ಕಿಯಂತಹ ಪ್ರಭಾವಿ ಬುದ್ಧಿಜೀವಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್ಜಾಯ್, “ಹಿಜಾಬ್ ಧರಿಸಿದ ಹೆಣ್ಣುಮಕ್ಕಳಿಗೆ ಶಿಕ್ಷಣ ನಿರಾಕರಿಸುತ್ತಿರುವುದು ಭಯಾನಕ. ಕಡಿಮೆ ಅಥವಾ ಹೆಚ್ಚು ಬಟ್ಟೆ ಧರಿಸುವುದಕ್ಕಾಗಿ ಮಹಿಳೆಯರಿಗೆ ಅಭ್ಯಂತರ ಒಡ್ಡುವುದು ಮುಂದುವರಿಯುತ್ತಿದೆ. ಭಾರತೀಯ ನಾಯಕರು ಮುಸ್ಲಿಂ ಮಹಿಳೆಯರನ್ನು ಕಡೆಗಣಿಸುವುದನ್ನು ನಿಲ್ಲಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಕಾಂಗ್ರೆಸ್ನಿಂದ ಹಿನ್ನಡೆಯನ್ನು ಅನುಭವಿಸಿದ ನಂತರ ಕರ್ನಾಟಕದಾದ್ಯಂತ “ವಿಕೃತ” ಸಾಂಸ್ಕೃತಿಕ ಗುರುತುಗಳ ಮೇಲೆ, ವಿಶೇಷವಾಗಿ ಇಸ್ಲಾಮಿಕ್ ಗುರುತುಗಳ ಮೇಲೆ ಜಾಗೃತ ಗುಂಪುಗಳ ದಾಳಿಗಳು ಹೆಚ್ಚಿವೆ. ಹಿಂದುತ್ವ ಗುಂಪುಗಳು ಭಾರತದ ಸಾಂವಿಧಾನಿಕ ಹಕ್ಕುಗಳ ತಳಹದಿಯನ್ನೇ ಸವಾಲು ಮಾಡುವ, ಸೆಕ್ಯುಲರ್ ಫೋಬಿಕ್ ನಿರೂಪಣೆಗಳನ್ನು ನಿರಂತರವಾಗಿ ಸಮಾಜದಲ್ಲಿ ಹೇರುತ್ತಿದೆ ಎಂಬ ಅಭಿಪ್ರಾಯಗಳೂ ಅಂತರರಾಷ್ಟ್ರೀಯವಾಗಿ ವ್ಯಕ್ತವಾಗಿವೆ.
ಹಿಜಾಬ್ನ ವಿವಿಧ ಅರ್ಥಗಳು
ಬಹಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಹಿಜಾಬ್ ವಿಭಿನ್ನ ಕಾಲಘಟ್ಟದಲ್ಲಿ ವಿಭಿನ್ನ ಅರ್ಥವನ್ನು ಧ್ವನಿಸಿವೆ. ಮುಸ್ಲಿಂ ಮಹಿಳೆಯರ ಭೌತಿಕ ವೈವಿಧ್ಯತೆಯಂತೆಯೇ, ಶಿರಸ್ತ್ರಾಣಗಳು ಸಹ ಸಂಸ್ಕೃತಿಯ ಮತ್ತು ರಾಜಕೀಯದ ವಿಭಿನ್ನ ಕಾಲದಲ್ಲಿ ವಿಭಿನ್ನ ಅರ್ಥಗಳನ್ನು ಹುಟ್ಟುಹಾಕಿವೆ ಮತ್ತು ಹಿಜಾಬ್ಗೆ ಯಾವುದೇ ಸ್ಥಿರ ಅರ್ಥವಿಲ್ಲ.
ಲೀಲಾ ಅಬು ಲುಘೋಡ್, ಅಮಿನಾ ವದುದ್, ಫಾತೆಮಾ ಮೆರ್ನಿಸ್ಸಿ ಮತ್ತು ಸಾಬಾ ಮಹಮೂದ್ ಸೇರಿದಂತೆ ಹಲವಾರು ಮುಸ್ಲಿಂ ಮಹಿಳಾ ವಿದ್ವಾಂಸರು, 20 ನೇ ಶತಮಾನದ ಕೊನೆಯ ಕಾಲು ಶತಮಾನದಿಂದ ನಗರವಾಸಿ, ವಿವಿಧ ಜನಾಂಗೀಯ ಮತ್ತು ವಿವಿಧ ಸಾಂಸ್ಕೃತಿಕ ಪ್ರದೇಶಗಳ ವಿದ್ಯಾವಂತ ಮುಸ್ಲಿಂ ಮಹಿಳೆಯರು ಏಕೆ ಹಿಜಾಬ್ ಧರಿಸುತ್ತಿದ್ದಾರೆ ಎಂಬುವುದನ್ನು ವಿವರಿಸಿದ್ದಾರೆ.
ವಿಶ್ವದ ಅಗ್ರಮಾನ್ಯ ಮಾನವಶಾಸ್ತ್ರಜ್ಞರಲ್ಲಿ ಒಬ್ಬರಾದ ಲುಘೋಡ್ ಪ್ರಕಾರ, ವಿದ್ಯಾವಂತ ಮುಸ್ಲಿಂ ಮಹಿಳೆಯರಲ್ಲಿ ಸ್ಕಾರ್ಫ್ನ ಆಧುನಿಕ ಬಳಕೆಯು 1970 ರ ದಶಕದ ಅಂತ್ಯದಲ್ಲಿ ಅರಬ್ ಜಗತ್ತಿನ ಅಧಿಕಾರ ರಚನೆಗಳ ವಿರುದ್ಧ ರಾಜಕೀಯ ಪ್ರತಿಭಟನಾ ಕ್ರಮವಾಗಿ ಹೊರಹೊಮ್ಮಿದೆ.
ಸಂಕೀರ್ಣ ಅರ್ಥ
ಇಂದು, ಭಾರತದಲ್ಲಿ ಹಿಜಾಬ್ ಸಂಕೀರ್ಣವಾದ ಅರ್ಥವನ್ನು ಪಡೆಯುತ್ತಿದೆ. ಇಲ್ಲಿ ಇಂಗ್ಲಿಷ್ ಮಾತನಾಡಬಲ್ಲ ವಿದ್ಯಾವಂತ ಯುವ ಮುಸ್ಲಿಂ ಮಹಿಳೆಯರು 1970ರ ದಶಕದ ಉತ್ತರಾರ್ಧದಲ್ಲಿ ಅರಬ್ ಇಸ್ಲಾಮಿಕ್ ಜಗತ್ತಿನ ಪರಿವರ್ತನೆಗಳನ್ನು ಧ್ವನಿಸುವಂತೆ ಹಿಜಾಬನ್ನು ಬಳಸಲು ಆರಂಭಿಸಿದರು.
ಪರಿಣಾಮವಾಗಿ ಹಿಜಾಬ್ ಧರಿಸಿದ ಮುಸ್ಲಿಂ ಮಹಿಳೆಯರನ್ನು ಕಲ್ಪಿತ ‘ದಬ್ಬಾಳಿಕೆ-ವಿಮೋಚನೆ’ ಬೈನರಿಯಲ್ಲಿ ಇರಿಸುವ ಪ್ರಕ್ರಿಯೆ ಪ್ರಾರಂಭವಾಯಿತು ಮತ್ತು ಮುಸ್ಲಿಂ ಮಹಿಳೆಯರ ನವ- ಉದಾರವಾದಿ ಜಗತ್ತಿನ ಹಲವಾರು ಅರ್ಥಗಳನ್ನು ಅಳಿಸಿಹಾಕುವ ಯತ್ನವೂ ಆರಂಭವಾಯಿತು.
ಜಾಗತಿಕ ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರಗಳಲ್ಲಿ ಪ್ರಬಲ ಸಮುದಾಯವಾಗಿ ರೂಪುಗೊಳ್ಳದ ಮುಸ್ಲಿಂ ಮಹಿಳೆಯರು ಶಿಕ್ಷಣದ ಅಸಾಂಪ್ರದಾಯಿಕ ರೀತಿಯಲ್ಲಿ ಹಿಜಾಬ್ ಧರಿಸಲು ಪ್ರಾರಂಭಿಸಿದರು ಮತ್ತು ದಬ್ಬಾಳಿಕೆಯ ಸಂಕೇತ ಎಂಬ ಪೂರ್ವಾಗ್ರಹಕ್ಕೆ ಪ್ರತಿರೋಧವಾಗಿ ಇದು ನೋಂದಾಯಿಸಲ್ಪಟ್ಟಿತು.
ದೇಶ ವಿಭಜನೆಯ ನಂತರ ಮುಸ್ಲಿಂ ಮಹಿಳೆಯರು ‘ಹೊರಗಿನವರಾಗುವ’ ಮತ್ತು ‘ಇತರ’ ಭಯದಿಂದ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸುವುದನ್ನು ತ್ಯಜಿಸಿದ್ದರು, ಆದರೆ ಮಂಡಲ್ ವರದಿಯ ನಂತರದ ಭಾರತದಲ್ಲಿ ವಿದ್ಯಾವಂತ ಮುಸ್ಲಿಂ ಮಹಿಳೆಯರು ಅಂತಹ ಆತಂಕಗಳನ್ನು ಹೊಂದಿಲ್ಲ. ಸಾಮಾ ಅಬ್ದುರ್ರಾಕಿಬ್ ಅವರಂತಹ ವಿದ್ವಾಂಸರು ಅಮೆರಿಕನ್ ಡಯಾಸ್ಪೊರಾದಲ್ಲಿನ ಮುಸ್ಲಿಂ ಮಹಿಳೆಯರ ವಿಷಯದಲ್ಲಿ ಸೂಚಿಸಿರುವಂತೆ, ಮಂಡಲ್ ನಂತರದ ಮಹಿಳೆಯರು ತಮ್ಮ ಧರ್ಮನಿಷ್ಠ ಮತ್ತು ಸಾರ್ಟೋರಿಯಲ್ (ಉಡುಪು) ಆಯ್ಕೆಗಳೊಂದಿಗೆ ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ವಿಚಾರಗಳನ್ನು ಸಂಯೋಜಿಸುವ ಮೂಲಕ ಮುಖ್ಯವಾಹಿನಿಯ ಗ್ರಹಿಕೆಗಳನ್ನು ಬದಲಾಯಿಸುವ ರಾಜಕೀಯ ದೃಢತೆಯನ್ನು ಹೊಂದಿರುವಂತೆ ತೋರುತ್ತದೆ.
ಹಿಜಾಬ್ ಬಹು ಅರ್ಥಗಳನ್ನು ಪಡೆದುಕೊಂಡಂತೆ, ವಿದ್ಯಾವಂತ ಮುಸ್ಲಿಂ ಮಹಿಳೆಯರು, ತಮ್ಮದೇ ಆದ ಧ್ವನಿಯೊಂದಿಗೆ, ತಮ್ಮ ಸಾಂಸ್ಕೃತಿಕ ಅಸ್ಮಿತೆಯ ಬಗ್ಗೆ ಕ್ಷಮೆಯಾಚಿಸದೆ, ಸಂವಿಧಾನದ ಗಡಿಯೊಳಗೆ ತಮಗಾಗಿ ಕಾನೂನುಬದ್ಧ ಪ್ರಜಾಪ್ರಭುತ್ವದಲ್ಲಿ ಜಾಗವೊಂದನ್ನು ಸೃಷ್ಟಿಸುತ್ತಿದ್ದಾರೆ.
ಬದಲಾವಣೆಯ ಏಜೆಂಟ್
ಕಳೆದ ಎರಡು ದಶಕಗಳ ಬಹು ಚಲನಶೀಲತೆಗಳ ಜೊತೆಗೆ, ಪ್ರಪಂಚದಾದ್ಯಂತದ ಸ್ಪರ್ಧಾತ್ಮಕ ಸಾಂಸ್ಕೃತಿಕ ಮತ್ತು ಜನಾಂಗೀಯ ತಾಣಗಳಲ್ಲಿ ಹಿಜಾಬ್ನೊಂದಿಗಿನ ವಿದ್ಯಾವಂತ ಮುಸ್ಲಿಂ ಮಹಿಳೆಯರ ಹೆಚ್ಚುತ್ತಿರುವ ಪರಿಚಿತತೆಯು ತಮ್ಮನ್ನು ತಾವು ಬದಲಾವಣೆಯ ಏಜೆಂಟ್ ಎಂದು ನಂಬುವಂತೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಸಾಮಾಜಿಕ ಮತ್ತು ರಾಜಕೀಯ ಭೂದೃಶ್ಯದಲ್ಲಿನ ಬದಲಾವಣೆಗಳನ್ನು ಜೊತೆಯಲ್ಲಿಟ್ಟುಕೊಂಡು ಮುಸ್ಲಿಂ ಮಹಿಳೆಯರ ಸಾರ್ಟೋರಿಯಲ್ ಸಮರ್ಥನೆಯನ್ನು ಸಂಪೂರ್ಣವಾಗಿ ವಿವರಿಸಬಹುದು. ಈ ಅವಧಿಯು ಹಲವಾರು ಸ್ಥಳಗಳಲ್ಲಿ ದೊಡ್ಡ ವಿಭಜನೆಗೆ ಸಾಕ್ಷಿಯಾಗಿದೆ. ಹೀಗಾಗಿ, ಹೊಸ ಸಾರ್ಟೋರಿಯಲ್ ಗುರುತನ್ನು ವಿಭಜನೆಯಿಂದ ಹೊರಹೊಮ್ಮಿದ ಹೊಸ ಸಂವಾದಾತ್ಮಕ, ಭಾವನಾತ್ಮಕ, ಮತ್ತು ರಾಜಕೀಯ ಸನ್ನಿವೇಶಗಳಿಂದ ತೆಗೆದುಹಾಕಲಾಗುವುದಿಲ್ಲ.
ಇಸ್ಲಾಮಿನ ಪುರುಷ ಕೇಂದ್ರಿತ ವ್ಯಾಖ್ಯಾನವನ್ನು ನಿರಂತರವಾಗಿ ಪ್ರಶ್ನಿಸುತ್ತಾ ಬಂಧಿರುವ ಪ್ರಖ್ಯಾತ ಮುಸ್ಲಿಂ ಸ್ತ್ರೀವಾದಿ ವಿದ್ವಾಂಸರಾದ ಅಮಿನಾ ವದುದ್, 2000 ರ ದಶಕದ ಆರಂಭದಲ್ಲಿ ಮುಸ್ಲಿಂ ಮಹಿಳೆಯರು ‘ಅಮೆರಿಕನ್ ಆಕ್ರೋಶದ ಸಾರ್ವಜನಿಕ ಗುರಿ’ ಯಾದಾಗ ಅಂತಹ ಸಾರ್ಟೋರಿಯಲ್ ಬದಲಾವಣೆ ಅಮೆರಿಕದ ಮುಸ್ಲಿಂ ಮಹಿಳೆಯರಲ್ಲೂ ಕಂಡು ಬಂದಿತ್ತು ಎನ್ನುತ್ತಾರೆ.
ಪ್ರಸ್ತುತ, ಇಸ್ಲಾಮೋಫೋಬಿಕ್ ಜಗತ್ತಿನಲ್ಲಿ ಪ್ರಭಾವಶಾಲಿ ಭಿನ್ನಾಭಿಪ್ರಾಯದ ಅಭಿವ್ಯಕ್ತಿಯಾಗಿರುವ ಮುಸ್ಲಿಮ್ ಬುದ್ಧಿಜೀವಿಗಳು ಮತ್ತು ಕೆಲವು ಪ್ರಗತಿಪರರ ನಡುವೆ ಹಿಜಾಬ್ ಬಗ್ಗೆ ಒಮ್ಮತದ ಅಭಿಪ್ರಾಯವೇ ಇದೆ. ಆದರೆ ಅವರೊಳಗಿನ ಒಂದು ವಿಭಾಗವು ಪರದಾ ಮತ್ತು ನಖಾಬ್ ವಿರುದ್ಧ ಕಠಿಣ ಟೀಕೆ ಮಾಡುತ್ತದೆ.
ಆದರೆ ಸಾಂಸ್ಕೃತಿಕ ರಾಷ್ಟ್ರೀಯತೆಗಳ ಹಿನ್ನಲೆಯಲ್ಲಿ ನೋಡುವಾಗ ಸಾರ್ಟೋರಿಯಲ್ ಸಮರ್ಥನೆಯು ಭಿನ್ನಾಭಿಪ್ರಾಯದ ಅತ್ಯಂತ ಪರಿಣಾಮಕಾರಿ, ಅಹಿಂಸಾತ್ಮಕ ಮಾರ್ಗವಾಗಿದೆ. ಆದ್ದರಿಂದ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ಕಷ್ಟಕರವಾದ ರಾಜಕೀಯ ಸಮಯದಲ್ಲಿ ಕರ್ನಾಟಕ ಅಥವಾ ಇತರೆಡೆಗಳಲ್ಲಿ ಹಿಜಾಬ್ ಧರಿಸಿರುವ ಮಹಿಳೆಯರ ಸಮಸ್ಯೆಗಳನ್ನು ಶಿಕ್ಷಣದ ಹಕ್ಕಿನ ಚೌಕಟ್ಟಿನಿಂದ ಹೆಚ್ಚು ಸೂಕ್ತವಾದ ಸೈದ್ಧಾಂತಿಕ ಪ್ರಮೇಯಕ್ಕೆ ವರ್ಗಾಯಿಸಬೇಕಾಗಿದೆ.
ಹಾಗಾಗಿ ಮತಾಂಧತೆ ವ್ಯಾಪಕವಾದ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡದಂತಹ ಜಿಲ್ಲೆಗಳಲ್ಲಿ ಯುವ ಮುಸ್ಲಿಂ ಮಹಿಳೆಯರು ಹೊಸ ಸಾರ್ಟೋರಿಯಲ್ ಆಯ್ಕೆಗಳನ್ನು ಭಿನ್ನಾಭಿಪ್ರಾಯ, ವಿಶ್ವಾಸ ಮತ್ತು ಆತ್ಮ ಗೌರವದ ಸಂಕೇತಗಳಾಗಿ ನೋಡುತ್ತಾರೆ ಎಂಬುವುದನ್ನು ನಾವು ಗೌರವಿಸಬೇಕಾಗುತ್ತದೆ. ಧರ್ಮನಿಷ್ಠೆಯ ಅಂಶಗಳ ಹೊರತಾಗಿ ಸ್ವಾಯತ್ತತೆ, ಸಾಮಾಜಿಕ ಚಲನಶೀಲತೆ, ರಾಜಕೀಯ ಪ್ರಜ್ಞೆ ಮತ್ತು ಸಾಂವಿಧಾನಿಕ ಸಾಕ್ಷರತೆಯ ಅಂಶಗಳೊಂದಿಗೆ ಅವುಗಳನ್ನು ವಿಶ್ಲೇಷಿಸಬೇಕಾಗಿದೆ.
ಸಾಂಸ್ಥಿಕ ನಿರಂತರತೆ
ಇಂದು, ಹಲವಾರು ಮುಸ್ಲಿಂ ಮಹಿಳೆಯರು ಹಿಜಾಬ್ ಅನ್ನು ಧರಿಸುತ್ತಿದ್ದಾರೆ. ಕೆಲವೊಮ್ಮೆ ಸಹಿಷ್ಣುತೆಯ ರಾಜಕೀಯ ಕಾಲದಲ್ಲಿ ಬದುಕಿದ್ದ ತಮ್ಮ ಹೆತ್ತವರ ವಿರೋಧದ ಮಧ್ಯೆಯೂ ಸಾರ್ವಜನಿಕವಾಗಿ ಸ್ಕಾರ್ಫ್ ಧರಿಸುತ್ತಿದ್ದಾರೆ. ಧರ್ಮನಿಷ್ಠತೆ, ಜಾತ್ಯತೀತ ಸಂವಿಧಾನಕ್ಕೆ ಅಂಟಿಕೊಳ್ಳುವುದು, ಭಿನ್ನಾಭಿಪ್ರಾಯದ ಪ್ರಜಾಸತ್ತಾತ್ಮಕ ಅಭಿವ್ಯಕ್ತಿ ಮತ್ತು ಸಾರ್ವಜನಿಕ ಸ್ಥಳಗಳ ಪುನಶ್ಚೇತನ ಇವೆಲ್ಲವೂ ಭಾರತೀಯ ನಾಗರಿಕರು ಮತ್ತು ಮುಸ್ಲಿಮರಾಗಿ ಅವರ ಅಸ್ತಿತ್ವದ ನಿರಂತರತೆಯಾಗಿದೆ. ಅಂತಹ ಸಹವರ್ತಿ ಅಸ್ತಿತ್ವದಲ್ಲಿ, ಒಬ್ಬರು ಇನ್ನೊಬ್ಬರಿಗೆ ಸಾಮಾನ್ಯವಾಗಿ ಸವಾಲು ಹಾಕುವುದಿಲ್ಲ. ಹಾಗಾದರೆ, ಈಗ ಹಿಜಾಬ್ ಏಕೆ ಸಮಸ್ಯೆಯಾಗಿದೆ?
ಇದು ಬಹುಸಂಖ್ಯಾತ ಸಾಂಸ್ಕೃತಿಕ ರಾಷ್ಟ್ರೀಯತೆಯು ಅಲ್ಪಸಂಖ್ಯಾತರ ಸಾರ್ಟೋರಿಯಾಲಿಟಿ ಮತ್ತು ಸಾಂಸ್ಥಿಕತೆಯನ್ನು ಹೇಗೆ ನೋಡುತ್ತದೆ ಎಂಬ ದೊಡ್ಡ ಪ್ರಶ್ನೆಗೆ ನಮ್ಮನ್ನು ಕರೆದೊಯ್ಯುತ್ತದೆ. ಬಹುಸಂಖ್ಯಾತ ಪರ ಸರ್ಕಾರ ಇರುವ ದೇಶದಲ್ಲಿ ಬಹುಸಂಖ್ಯಾತರ ಸಂಸ್ಕೃತಿಯನ್ನೇ ಒಪ್ಪಬೇಕು ಎನ್ನುವ ಮೆಜಾರಿಟಿಯ ಈಗೋ ಇರುವಾಗಲೇ ಹಿಜಾಬ್ನಂತಹ ಸಾಂಸ್ಕೃತಿಕ ಅಸ್ಮಿತೆಯನ್ನು ನಿಷೇಧಿಸಬೇಕು ಎನ್ನುವ ಕೂಗು ಏಳುವುದು. ಅಮೆರಿಕದಲ್ಲಾದದ್ದೂ ಅಷ್ಟೇ, ಈಗ ಭಾರತದಲ್ಲಿ ಆಗುತ್ತಿರುವುದೂ ಅಷ್ಟೇ.
ಯಾವುದೇ ಸಂದರ್ಭದಲ್ಲಿ ತಮ್ಮದೇ ಆದ ಸಾರ್ಟೋರಿಯಲ್ ಆಯ್ಕೆಗಳೊಂದಿಗೆ ಅಲ್ಪಸಂಖ್ಯಾತ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಮಿಂಚುವುದನ್ನು, ಅವಕಾಶ ಪಡೆದುಕೊಳ್ಳುವುದನ್ನು ವಿಧೇಯತೆ, ಮೌನ ಮತ್ತು ಸಮ್ಮತಿಯಂತಹ ಸ್ಥಿತಿಗಳನ್ನು ಮಾತ್ರ ಅಲ್ಪಸಂಖ್ಯಾತರಿಂದ ಬಯಸುತ್ತಿರುವ ಬಹುಸಂಖ್ಯಾತ ಮೂಲಭೂತವಾದಕ್ಕೆ, ಮಸ್ಕ್ಯುಲಾನಿಟಿಗೆ ಒಪ್ಪಿಕೊಳ್ಳಲಾಗುವುದಿಲ್ಲ. ಕರ್ನಾಟಕದ ಹಿಜಾಬ್ ವಿವಾದದ ಹಿಂದಿರುವುದೂ ಇದೇ ಜನಾಂಗ ದ್ವೇಷ ಮತ್ತು ಮೆಜಾರಿಟಿಯ ಅಹಂಕಾರ.
ಮೂಲ: ಪಿಕೆ ಯಾಸರ್ ಅರಾಫತ್, ಸ್ಕ್ರೋಲ್.ಇನ್
(ಪಿಕೆ ಯಾಸರ್ ಅರಾಫತ್ ದೆಹಲಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.)