ರಾಜ್ಯದಲ್ಲಿ ಬಿಜೆಪಿ ಸ್ಥಿತಿಯನ್ನು ನೋಡಿದರೆ ಎಂಥವರಿಗು ಅಯ್ಯೋ ಪಾಪ ಎನಿಸುತ್ತದೆ. ಮಾಧ್ಯಮಗಳ ಎದುರು ಬಿಜೆಪಿ ನಾಯಕರು ಎಷ್ಟೇ ಗತ್ತಾಗಿ ಮಾತನಾಡಿದರೂ ಬಿಜೆಪಿ ಒಳಗೆ ಒಳಬೇಗುದಿ ಶುರುವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ಬಿಜೆಪಿ ಹೈಕಮಾಂಡ್ ನಾಯರು ಇಡೀ ರಾಜ್ಯ ಅಷ್ಟೇ ಅಲ್ಲ, ಇಡೀ ಭಾರತೀಯ ಜನತಾ ಪಾರ್ಟಿಯನ್ನೇ ನಿರ್ಲಕ್ಷ್ಯ ಮಾಡಿತಾ ಅನ್ನೋ ರೀತಿ ಆಗಿದೆ. ಸೋಲುಂಡು ಮುದುರಿಕೊಂಡಿರುವ ಭಾರತೀಯ ಜನತಾ ಪಾರ್ಟಿಗೆ ಹೊಸ ಚೈತನ್ಯ ನೀಡಬೇಕಿದ್ದ ಹೈಕಮಾಂಡ್, ರಾಜ್ಯಾಧ್ಯಕ್ಷ ಹಾಗು ಪ್ರಬಲ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದನ್ನು ಧೈರ್ಯದಿಂದ ಎದುರಿಸಬೇಕಿತ್ತು. ಆದರೆ ವಿರೋಧ ಪಕ್ಷದ ನಾಯಕನಿಲ್ಲದೆ ವಿಧಾನಸಭೆಯಲ್ಲೂ ಬಿಜೆಪಿ ಪರದಾಡುವಂತಾಗಿದೆ. ಆದರೆ ಈ ವಿಚಾರದಲ್ಲಿ ಮಲತಾಯಿ ಧೋರಣೆ ಯಾಕೆ ಅನ್ನೋ ಪ್ರಶ್ನೆ ಎದುರಾಗಿದೆ.
ಇತಿಹಾಸದಲ್ಲಿ ಮೊದಲ ಬಾರಿಗೆ ವಿಪಕ್ಷ ನಾಯಕನಿಲ್ಲದೆ ಬಜೆಟ್..!

ರಾಜ್ಯ ಸರ್ಕಾರದ ಇತಿಹಾಸದಲ್ಲೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನ ಉಪಸ್ಥಿತಿ ಇಲ್ಲದೆ ಬಜೆಟ್ ಮಂಡನೆ ಆಗಿದೆ. ಸರ್ಕಾರ ಮಂಡಿಸಿದ ಬಜೆಟ್ ಬಗ್ಗೆ ಯಾರು ಮಾತನಾಡಬೇಕು ಅನ್ನೋ ಗೊಂದಲಕ್ಕೆ ಸಿಲುಕಿದ್ದರು. ಅಂತಿಮವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡುವುದಕ್ಕೆ ನಿರ್ಧಾರ ಮಾಡಿದರು. ಬಜೆಟ್ ಬಗ್ಗೆ ಬಸವರಾಜ ಬೊಮ್ಮಾಯಿ ಮಾತನಾಡಿದರು. ಇದರಿಂದ ಬಿಜೆಪಿ ಎಷ್ಟರ ಮಟ್ಟಿಗೆ ಮುಜುಗರ ಅನುಭವಿಸಿದೆ ಎಂದರೆ, ಸದನದಲ್ಲಿ ಏನನ್ನೇ ಪ್ರಸ್ತಾಪ ಮಾಡಿದರು ಸರ್ಕಾರ ರಚನೆ ಆಗಿ 2 ತಿಂಗಳಾದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನೀವು ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಬರ್ತೀರಲ್ಲ ಎಂದು ಸ್ವತಃ ಸಿದ್ದರಾಮಯ್ಯ ನೇರವಾಗಿಯೇ ಕಿಚಾಯಿಸುತ್ತಾರೆ. ಇಷ್ಟೆಲ್ಲಾ ಆಗುತ್ತಿದ್ದರೂ ಹೈಕಮಾಂಡ್ ಮಾತ್ರ ಡೋಂಟ್ ಕೇರ್ ಮಾಸ್ಟರ್ ಆಗಿದೆ.
ಯಡಿಯೂರಪ್ಪರನ್ನು ಕರೆಸಿಕೊಂಡು ಚರ್ಚಿಸಿದ್ದ ಹೈಕಮಾಂಡ್..!

ಅಧಿವೇಶನ ಆರಂಭಕ್ಕೂ ಮುನ್ನವೇ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿದ್ದ ಬಿಜೆಪಿ ಹೈಕಮಾಂಡ್ ನಾಯಕರು ವಿರೋಧ ಪಕ್ಷದ ನಾಯಕನನ್ನಾಗಿ ಯಾರನ್ನು ನೇಮಿಸಬೇಕು ಅನ್ನೋ ಬಗ್ಗೆ ಚರ್ಚೆ ನಡೆಸಿದ್ದರು. ಒಂದೆರಡು ದಿನದಲ್ಲಿ ವಿಪಕ್ಷ ನಾಯಕನ ನೇಮಕ ಆಗಲಿದೆ ಎಂದು ರಾಜ್ಯ ನಾಯಕರು ಹೇಳಿದ್ದರು. ಆ ಬಳಿಕ ದೆಹಲಿಯಿಂದ ರಾಜ್ಯಕ್ಕೆ ವೀಕ್ಷಕರು ಬರಲಿದ್ದು, ವಿಪಕ್ಷ ನಾಯಕ ಹಾಗು ರಾಜ್ಯ ಬಿಜೆಪಿ ಅಧ್ಯಕ್ಷ ಯಾರಾಗಬೇಕು ಅನ್ನೋ ಬಗ್ಗೆ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಆ ಬಳಿಕ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಮನಸ್ಸಿಗೆ ನೆಮ್ಮದಿ ತಂದುಕೊಂಡಿದ್ದರು. ಆದರೆ ಆ ನಿರೀಕ್ಷೆ ಕೂಡ ಹುಸಿಯಾಯ್ತು ಅನ್ನೋದು ಬಿಜೆಪಿ ನಾಯಕರಿಗೆ ನುಂಗಲಾರದ ಬಿಸಿ ತುಪ್ಪ ಆಗಿಬಿಡ್ತು..
ತಿಂಗಳಾರಂಭದಲ್ಲಿ ರಾಜ್ಯಾಧ್ಯಕ್ಷರ ನೇಮಕ ಮಾಡಿದ್ದ ಹೈಕಮಾಂಡ್..!

ಜುಲೈ ಆರಂಭದಲ್ಲಿ ಆಂಧ್ರ, ತೆಲಂಗಾಣ, ರಾಜಸ್ಥಾನ, ಒಡಿಶಾ ಸೇರಿದಂತೆ 5 ರಾಜ್ಯಗಳಿಗೆ ಬಿಜೆಪಿ ಹೈಕಮಾಂಡ್ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಇದೇ ಸಮಯದಲ್ಲಿ ಕರ್ನಾಟಕಕ್ಕೂ ನೂತನ ರಾಜ್ಯಾಧ್ಯಕ್ಷರ ಜೊತೆಗೆ ವಿಪಕ್ಷ ನಾಯಕನ ಆಯ್ಕೆ ಆಗಬಹುದು ಎಂದು ನಿರೀಕ್ಷೆ ಮಾಡಲಾಯ್ತು. ಆದರೆ ಅದೂ ಕೂಡ ಹುಸಿಯಾಯ್ತು. ಇದೀಗ ಹೈಕಮಾಂಡ್‌ಗೆ ಸಡ್ಡು ಹೊಡೆದು ವಿಪಕ್ಷ ನಾಯಕನ ಆಯ್ಕೆ ಮಾಡುವ ಬಗ್ಗೆ ಕೆಲವು ನಾಯಕರು ತೆರೆ ಮರೆಯಲ್ಲಿ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋಲುವುದಕ್ಕೂ ಬಿಜೆಪಿ ಹೈಕಮಾಂಡ್ ನಾಯಕರೇ ಕಾರಣರಾದರು. ಇದೀಗ ವಿರೋಧ ಪಕ್ಷದ ನಾಯಕ ಹಾಗು ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲೂ ಕರ್ನಾಟಕವನ್ನು ಮಲತಾಯಿ ಮಕ್ಕಳು ಎನ್ನುವಂತೆ ನೋಡಿತ್ತಿದ್ದಾರೆ. ಇದೇ ರೀತಿ ಆದರೆ ನಾವು ಕಾಂಗ್ರೆಸ್ ಎದುರಿಸಲು ಸಾಧ್ಯವಿಲ್ಲ. ನಾವೇ ಆಯ್ಕೆ ಮಾಡಿಕೊಳ್ಳೋಣ ಎಂದಿದ್ದಾರೆ. ಅದು ಸಾಧ್ಯವಾ..? ಕಾದು ನೋಡ್ಬೇಕು ಅಷ್ಟೆ..
ಕೃಷ್ಣಮಣಿ